ಬಿಲಿಯನ್ನುಗಟ್ಟಲೆ ಡಾಲರುಗಳ ಎಡವಟ್ಟು
ಒಂದು ಕಾಲದಲ್ಲಿ ಜಗತ್ತಿನ ಬಹುಭಾಗ ಕಂಪ್ಯೂಟರುಗಳಲ್ಲಿ ಅಳವಡಿಸಲಾಗಿದ್ದ ಆಪರೇಟಿಂಗ್ ಸಿಸ್ಟಮ್ (ಕಾರ್ಯಾಚರಣ ವ್ಯವಸ್ಥೆ) ಮೈಕ್ರೊಸಾಫ್ಟ್ ಕಂಪೆನಿಯದ್ದಾಗಿತ್ತು. ಈ ಕಂಪೆನಿಯನ್ನು ಸ್ಥಾಪಿಸಿದ ಬಿಲ್ ಗೇಟ್ಸ್ ಇದರಲ್ಲಿ ಮಾಡಿದ ಹಣದಿಂದಾಗಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯೆಂಬ ಖ್ಯಾತಿ ಪಡೆದುಕೊಂಡ. ಮೈಕ್ರೊಸಾಫ್ಟ್ ಕಂಪೆನಿಯ ವ್ಯಾಪಾರವಿದ್ದುದು 'ಪರ್ಸನಲ್ ಕಂಪ್ಯೂಟರ್' ಅಥವ 'ಪಿ ಸಿ' - ಇದರ ಸುತ್ತ. ವಿಶ್ವದಲ್ಲಿ ಎಲ್ಲೆಡೆ ಡೆಸ್ಕ್ ಟಾಪ್ ಅಥವ ಪರ್ಸನಲ್ ಕಂಪ್ಯೂಟರುಗಳಿಗೆ ಮೈಕ್ರೊಸಾಫ್ಟ್ ಕಂಪೆನಿಯ ಜನಪ್ರಿಯ "ವಿಂಡೋಸ್" ತಂತ್ರಾಂಶವೇ ಹೆಚ್ಚಿನಂತೆ ಬಳಕೆಯಾಗುತ್ತಿದ್ದುದು.
ಆದರೆ ಕಾಲಕ್ರಮೇಣ ಕಂಪ್ಯೂಟರು ಬಳಸುವವರಿಗಿಂತ ಮೊಬೈಲ್, ಟ್ಯಾಬ್ಲೆಟ್ ಬಳಸುವವರ ಸಂಖ್ಯೆ ಹೆಚ್ಚುತ್ತ ಹೋಯಿತು. ಮೈಕ್ರೊಸಾಫ್ಟಿನ 'ವಿಂಡೋಸ್' ಅಳವಡಿಸಿದ ಮೊಬೈಲುಗಳು ಹೊರಬಂದವಾದರೂ ಮಾರುಕಟ್ಟೆಯಲ್ಲಿ ಹೆಚ್ಚು ದಿನ ಉಳಿಯಲಿಲ್ಲ. ಮಾರುಕಟ್ಟೆಯಲ್ಲಿ ಬೇರೆ ಕಂಪೆನಿಗಳ 'ಸ್ಮಾರ್ಟ್ ಫೋನು'ಗಳು ಮತ್ತು ಟ್ಯಾಬ್ಲೆಟ್ಟುಗಳು ಬಂದವು. ಕೈಯಲ್ಲಿ ಹಿಡಿದು ಸುಲಭದಲ್ಲಿ ಜೊತೆಗೆ ತೆಗೆದುಕೊಂಡು ಹೋಗಬಹುದಾದ ಪುಟ್ಟ ಕಂಪ್ಯೂಟರುಗಳಂತಿರುವ 'ಸ್ಮಾರ್ಟ್ ಫೋನು' ಹಾಗು ಟ್ಯಾಬ್ಲೆಟ್ಟುಗಳಿಂದಾಗಿ ವಿಂಡೋಸ್ ಅಳವಡಿಸಿದ 'ಪರ್ಸನಲ್ ಕಂಪ್ಯೂಟರ್' ಬಳಸುವವರ ಸಂಖ್ಯೆ ಕಡಿಮೆಯಾಗುತ್ತ ಹೋಯಿತು. ಸ್ಯಾಮ್ಸಂಗ್, ಆಪಲ್, ಎಚ್ ಟಿ ಸಿ ಮುಂತಾದ ಕಂಪೆನಿಗಳು ಹೊರತಂದ ಸ್ಮಾರ್ಟ್ ಫೋನುಗಳು ಹಾಗೂ ಟ್ಯಾಬ್ಲೆಟ್ಟುಗಳು ಮಿಲಿಯನ್ನುಗಟ್ಟಲೆ ಸಂಖ್ಯೆಯಲ್ಲಿ ಖರ್ಚಾದವು. ಹೀಗೆ ಖರ್ಚಾದ ಉಪಕರಣಗಳಲ್ಲಿ ಗೂಗಲ್ ಕಂಪೆನಿಯವರ 'ಆಂಡ್ರಾಯ್ಡ್' ಅಥವ ಆಪಲ್ ಕಂಪೆನಿಯವರ 'ಐ ಓ ಎಸ್' ಕಾರ್ಯಾಚರಣ ವ್ಯವಸ್ಥೆಯನ್ನು ಅಳವಡಿಸಿದ ಉಪಕರಣಗಳು ಹೆಚ್ಚಿನ ಪಾಲಿನವು.
ಒಂದು ಕಾಲದಲ್ಲಿ ಎಲ್ಲೆಡೆ ಕಂಪ್ಯೂಟರುಗಳಿಗೆ ಕಾರ್ಯಚರಣ ವ್ಯವಸ್ಥೆ ಒದಗಿಸಿ ಹಣ ಮಾಡುತ್ತಿದ್ದ ಮೈಕ್ರೊಸಾಫ್ಟಿಗೆ ಇದೊಂದು ಸಂದಿಗ್ಧ ಪರಿಸ್ಥಿತಿಯಾಗಿತ್ತು. ಇದೇ ಸಮಯದಲ್ಲಿ ಈ ಕಂಪೆನಿ ಹೊರತಂದಿದ್ದ 'ವಿಂಡೋಸ್ ವಿಸ್ತ' ಹಾಗು 'ವಿಂಡೋಸ್ ೭' ಮುಂಚಿನ ವಿಂಡೋಸ್ ಆವೃತ್ತಿಗಳಷ್ಟು ಜನಪ್ರಿಯವಾಗದೇ ಈ ಬೃಹತ್ ಕಂಪೆನಿಗೆ ಅತಿದೊಡ್ಡ ಸವಾಲನ್ನು ಸೃಷ್ಟಿಸಿತ್ತು. ಆಗ ಪರ್ಸನಲ್ ಕಂಪ್ಯೂಟರುಗಳಿಗೆ ಹೊರತಂದ ವಿಂಡೋಸ್ ಎಂಟನೇ ಆವೃತ್ತಿಯೊಂದಿಗೆ 'ಸ್ಮಾರ್ಟ್ ಫೋನ್' ಮಾರುಕಟ್ಟೆಯಲ್ಲೂ ಮತ್ತೊಮ್ಮೆ ಬೇರೂರಲು ಪ್ರಯತ್ನ ನಡೆಸಿದ ಮೈಕ್ರೊಸಾಫ್ಟ್ 'ನೊಕಿಯ' ಕಂಪೆನಿಯೊಡನೆ ಒಪ್ಪಂದ ಮಾಡಿಕೊಂಡು 'ವಿಂಡೋಸ್ ಫೋನ್' ಎಂಬ ಕಾರ್ಯಾಚರಣ ವ್ಯವಸ್ಥೆಯನ್ನು ಹೊರತಂದು ನೊಕಿಯ ಉಪಕರಣಗಳಲ್ಲಿ ಅಳವಡಿಸಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಇದು ನೊಕಿಯ ಒಪ್ಪಂದದಿಂದಾಗಿ ಭಾಗಶಃ ಯಶಸ್ವಿಯಾಯಿತು.
ನೊಕಿಯ ಫಿನ್ನಿಶ್ ಮೂಲದ ಕಂಪೆನಿ. ನೊಕಿಯ ಒಂದು ಕಾಲದಲ್ಲಿ ರಬ್ಬರ್ ಉತ್ಪನ್ನಗಳನ್ನು ಮಾರುತ್ತಿದ್ದ ಕಂಪೆನಿ. ಕಳೆದ ಒಂದೂವರೆ ದಶಕದಲ್ಲಿ ತನ್ನ ಮೊಬೈಲ್ ಉಪಕರಣಗಳ ವ್ಯಾಪಾರದಿಂದಾಗಿ ಮನೆಮಾತಾಗಿದ್ದ ನೊಕಿಯ ಕಂಪೆನಿಗೆ ಯೂರೋಪ್ ಭದ್ರ ನೆಲೆ. ಯೂರೋಪಿನಲ್ಲಿ ಸಹಜವಾಗಿ ವಿಂಡೋಸ್ ಅಳವಡಿಸಿದ್ದ ನೊಕಿಯ ಹೆಚ್ಚು ಮಾರಾಟವಾದವು. 'ನೊಕಿಯ ಲುಮಿಯ' ಎಂಬ ಹೆಸರಿನಲ್ಲಿ ಹೊರಬಂದ ಉಪಕರಣಗಳ ಪಾಲು ಜಗತ್ತಿನಾದ್ಯಂತ ಸ್ಮಾರ್ಟ್ ಫೋನು ಮಾರುಕಟ್ಟೆಯಲ್ಲಿ ಸುಮಾರು ೮% ಕ್ಕೇರಿತು. ಹೀಗಿದ್ದೂ ನೊಕಿಯ ತೀರ ನಷ್ಟಗಳಲ್ಲಿ ಮುಳುಗಿತ್ತು. ಇನ್ನು ಈ ಕಂಪೆನಿಗೆ ಜೀವ ತುಂಬುವುದು ಯಾವುದಾದರೂ ದೊಡ್ಡ ಕಂಪೆನಿಯೊಂದರ ಖರೀದಿಯಿಂದಲೇ ಸಾಧ್ಯ ಎನ್ನುವಂತಿರುವಾಗ ಕಳೆದ ವಾರ ಮೈಕ್ರೊಸಾಫ್ಟ್ ಸುಮಾರು ಏಳು ಬಿಲಿಯನ್ ಡಾಲುರುಗಳ ವೆಚ್ಚದಲ್ಲಿ ನೊಕಿಯ ಕಂಪೆನಿಯ ಮೊಬೈಲ್ ವ್ಯಾಪಾರವನ್ನು ಖರೀದಿಸಿಬಿಟ್ಟಿತು! "ಮೈಕ್ರೊಸಾಫ್ಟಿನ ಏಳು ಬಿಲಿಯನ್ ಡಾಲರ್ ಮಿಸ್ಟೇಕ್" ಎಂದು ಹಲವು ಮಾಧ್ಯಮಗಳು ಇದನ್ನು ವರದಿ ಮಾಡಿದವು!
ನೊಕಿಯ ಕಂಪೆನಿಯ ಅವನತಿ
೨೦೧೦ರಲ್ಲಿ ಮೈಕ್ರೊಸಾಫ್ಟ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೊದಲು ಸ್ಮಾರ್ಟ್ ಫೋನುಗಳ ಮಾರುಕಟ್ಟೆಯಲ್ಲಿ ನೊಕಿಯ ಕಂಪೆನಿಯ ಪಾಲು ಸುಮಾರು ೪೦% ರಷ್ಟಿತ್ತು. ಜೊತೆಗೆ ಆ ಸಮಯದಲ್ಲಿ ತಾನು ಹೊರತರುತ್ತಿದ್ದ 'ಸಿಂಬಯನ್' ಹಾಗು 'ಲಿನಕ್ಸ್' ಆಧರಿಸಿದ ಕಾರ್ಯಾಚರಣ ವ್ಯವಸ್ಥೆಗಳನ್ನು ನೊಕಿಯ ಉತ್ತಮಪಡಿಸದೆ ಸಂಪೂರ್ಣ ಸ್ಥಗಿತಗೊಳಿಸಿಬಿಟ್ಟಿತು. ವರ್ಷ ಕಳೆದಂತೆ ಸ್ಮಾರ್ಟ್ ಫೋನು ಮಾರುಕಟ್ಟೆಯಲ್ಲಿ ಅದರ ಪಾಲು ಕ್ಷೀಣಿಸುತ್ತ ಹೋಯಿತು. ಒಂದು ಕಾಲದಲ್ಲಿ ಮೊಬೈಲ್ ಫೋನು ಮಾರುಕಟ್ಟೆಯ ಸಿಂಹಪಾಲು ಹೊಂದಿದ್ದ ನೊಕಿಯ ಹತ್ತು ವರ್ಷಗಳಲ್ಲಿಯೇ ಹರಾಜಿಗೆ ಬಂದದ್ದು ಜಗತ್ತಿನಾದ್ಯಂತ ವಿಸ್ಮಯ ಮೂಡಿಸಿದ ಸಂಗತಿ.
೯೦೦ ಮಿಲಿಯನ್ ಡಾಲರುಗಳ ಎಡವಟ್ಟು
ಇತ್ತೀಚೆಗೆ ಅತಿ ಹೆಚ್ಚು ಜನಪ್ರಿಯವಾಗುತ್ತಿರುವ ಟ್ಯಾಬ್ಲೆಟ್ಟುಗಳ ಮಾರುಕಟ್ಟೆಯಲ್ಲಿ ಗೂಗಲ್ ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುವ ಟ್ಯಾಬ್ಲೆಟ್ಟುಗಳ ಪಾಲು ಸಿಂಗಪುರದ ಕಂಪೆನಿಯೊಂದರ ವರದಿಯಂತೆ ೫೩%. ಆಪಲ್ ಕಂಪೆನಿಯ ಪ್ರಸಿದ್ಧ ಐ-ಡ್, ಐ-ಪಾಡ್ ಮಿನಿ ಉಪಕರಣಗಳ ಪಾಲು ಮಾರುಕಟ್ಟೆಯಲ್ಲಿ ೪೨.೯%. ೨೦೧೩ ಎರಡನೇ ಕ್ವಾರ್ಟರ್ ಒಂದರಲ್ಲೇ ಮಾರಾಟವಾದ ಒಟ್ಟು ಟ್ಯಾಬ್ಲೆಟ್ಟುಗಳ ಸಂಖ್ಯೆ ವರದಿಯಂತೆ ೩೪.೨ ಮಿಲಿಯನ್. ಮೈಕ್ರೊಸಾಫ್ಟ್ ಕಂಪೆನಿ ಈ ಮಾರುಕಟ್ಟೆಯಲ್ಲೂ ಬೇರೂರುವ ಪ್ರಯತ್ನದಲ್ಲಿ 'ಸರ್ಫೇಸ್' ಹಾಗೂ 'ಸರ್ಫೇಸ್ ಆರ್ ಟಿ' ಎಂಬ ಉಪಕರಣಗಳನ್ನು ಹೊರತಂದಿದೆ. ಈಗಿನಂತೆ ವರದಿಗಳ ಪ್ರಕಾರ ಮೈಕ್ರೊಸಾಫ್ಟಿನ ಪಾಲು ಈ ಮಾರುಕಟ್ಟೆಯಲ್ಲಿ ೪% ರಿಂದ ೪.೫%. ೨೦೧೩ರ ನಾಲ್ಕನೇ ಕ್ವಾರ್ಟರಿನ ಆದಾಯದ ವರದಿಯಲ್ಲಿ ಮೈಕ್ರೊಸಾಫ್ಟ್ ತನ್ನ 'ಸರ್ಫೇಸ್ ಆರ್ ಟಿ' ಉಪಕರಣಗಳನ್ನು ಹೊರತರುವ ಖರ್ಚಿನಲ್ಲಿ ಸುಮಾರು ೯೦೦ ಮಿಲಿಯನ್ ಡಾಲರುಗಳನ್ನು ಸೇರಿಸಿತು. 'ಇಷ್ಟೊಂದು ಹಣ ಹೇಗೆ ಖರ್ಚಾಯಿತು?' ಎನ್ನುತ್ತ ಮಾಧ್ಯಮಗಳು ಈ ಎಡವಟ್ಟನ್ನು ಅವಲೋಕಿಸಿದವು. ಜುಲೈ ೧೯ರಂದು ಮೈಕ್ರೊಸಾಫ್ಟ್ ಕಂಪೆನಿಯ ಶೇರುಗಳು ಕುಸಿದು ಒಂದೇ ದಿನದ ಅವಧಿಯಲ್ಲಿ ಸುಮಾರು ೩೨ ಬಿಲಿಯನ್ ಡಾಲರುಗಳಷ್ಟು ಶೇರು ಮಾರುಕಟ್ಟೆಯಲ್ಲಿ
ಕಳೆದುಕೊಂಡಿತು!
ಬರುವ ದಿನಗಳಲ್ಲಿ ನೊಕಿಯ ಹೆಸರಿನಡಿ ಬರುವ ಮೊಬೈಲ್ ಫೋನುಗಳನ್ನು ಮಾರುಕಟ್ಟೆ, ಮಾಧ್ಯಮ ಹಾಗೂ ಗ್ರಾಹಕ - ಎಲ್ಲರೂ ಜಾಗರೂಕತೆಯಿಂದ ವೀಕ್ಷಿಸುವಂತಾಗಬಹುದು. ಏಕೆಂದರೆ, ಬಿಲಿಯನ್ನುಗಟ್ಟಲೆ ಬೆಲೆ ಬಾಳುವ ಮೈಕ್ರೊಸಾಫ್ಟ್ ಕಂಪೆನಿಗೆ ನೊಕಿಯ ಹೊರತರುತ್ತಿರುವ ಸಾಮಾನ್ಯ ಬಳಕೆಯ ಮೊಬೈಲ್ ಫೋನುಗಳಲ್ಲಿ ಇರುವ ಆಸಕ್ತಿ ಅಷ್ಟಕ್ಕಷ್ಟೇ. ತನ್ನ ಸ್ಮಾರ್ಟ್ ಫೋನ್ ಮಾರುಕಟ್ಟೆಯನ್ನು ಬಲಪಡಿಸಿಕೊಳ್ಳಲು ಮೈಕ್ರೊಸಾಫ್ಟ್ ನೊಕಿಯದ ಹಲವು ಉಪಕರಣಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲೂಬಹುದು.
ಚಿತ್ರ ಕೃಪೆ: geek.com
Comments
ಉ: ಬಿಲಿಯನ್ನುಗಟ್ಟಲೆ ಡಾಲರುಗಳ ಎಡವಟ್ಟು
In reply to ಉ: ಬಿಲಿಯನ್ನುಗಟ್ಟಲೆ ಡಾಲರುಗಳ ಎಡವಟ್ಟು by spr03bt
ಉ: ಬಿಲಿಯನ್ನುಗಟ್ಟಲೆ ಡಾಲರುಗಳ ಎಡವಟ್ಟು
ಉ: ಬಿಲಿಯನ್ನುಗಟ್ಟಲೆ ಡಾಲರುಗಳ ಎಡವಟ್ಟು
ಉ: ಬಿಲಿಯನ್ನುಗಟ್ಟಲೆ ಡಾಲರುಗಳ ಎಡವಟ್ಟು
ಉ: ಬಿಲಿಯನ್ನುಗಟ್ಟಲೆ ಡಾಲರುಗಳ ಎಡವಟ್ಟು