ಬಿಳಿ ಒಂಟೆಮರಿಯಿಂದ ತಾಯಿ ಒಂಟೆಯ ಹುಡುಕಾಟ
ಒಂದಾನೊಂದು ಕಾಲದಲ್ಲಿ ಒಬ್ಬ ರಾಜಕುಮಾರ ಮತ್ತೊಬ್ಬ ಶ್ರೀಮಂತ ಒಂದೂರಿನಲ್ಲಿ ವಾಸ ಮಾಡುತ್ತಿದ್ದರು. ರಾಜಕುಮಾರನ ಕುಟುಂಬದೊಂದಿಗೆ ವೈವಾಹಿಕ ಸಂಬಂಧ ಬೆಳೆಸಬೇಕೆಂಬುದು ಶ್ರೀಮಂತನ ಆಶೆ.
ಅದಕ್ಕಾಗಿ ರಾಜಕುಮಾರನಿಗೆ ಒಂದು ನೂರು ಬಿಳಿ ಒಂಟೆಗಳನ್ನು ಉಡುಗೊರೆ ನೀಡಲು ನಿರ್ಧರಿಸಿದ ಶ್ರೀಮಂತ. ಆದರೆ, ಕೊನೆಗೆ ಎಣಿಸುವಾಗ ಅವನಲ್ಲಿದ್ದದ್ದು ತೊಂಬತ್ತೊಂಬತ್ತು ಬಿಳಿ ಒಂಟೆಗಳು. ಹಾಗಾಗಿ, ತನ್ನದೇ ಹೆಣ್ಣು ಬಿಳಿ ಒಂಟೆಯನ್ನು ಸೇರಿಸಿ, ಭರ್ತಿ ಒಂದು ನೂರು ಬಿಳಿ ಒಂಟೆಗಳನ್ನು ಉಡುಗೊರೆಯಾಗಿತ್ತ. ತನ್ನ ಬಿಳಿ ಒಂಟೆಯ ಮರಿಯನ್ನು ತನ್ನ ಮನೆಯಲ್ಲೇ ಉಳಿಸಿಕೊಂಡ.
ಈ ಬಿಳಿ ಒಂಟೆಮರಿ ತನ್ನ ತಾಯಿಯನ್ನು ಹುಡುಕುತ್ತಾ, ಅತ್ತ-ಇತ್ತ ಸುಳಿದಾಡುತ್ತಾ ಹಗಲೂರಾತ್ರಿ ಕಿರಿಚತೊಡಗಿತು. ಗುಮ್ಮಟಾಕಾರದ ದೊಡ್ಡ ಡೇರಿಯನ್ನು ಹೂಗಳಿಂದ ಅಲಂಕರಿಸಬೇಕೆಂದು ಸೇವಕರಿಗೆ ಆದೇಶಿಸಿದ ಶ್ರೀಮಂತ. ಅನಂತರ ಬಿಳಿ ಒಂಟೆಮರಿಯನ್ನು ಅದರೊಳಗೆ ಬಿಟ್ಟ. ಆದರೆ ಬಿಳಿ ಒಂಟೆಮರಿ ಸುಮ್ಮನಾಗಲಿಲ್ಲ. ಅದು ಹಗಲೂರಾತ್ರಿ ಇನ್ನೂ ಜೋರಾಗಿ ಕಿರಿಚುತ್ತಾ ಸುಳಿದಾಡಿತು. ಕೊನೆಗೆ ಆ ಡೇರೆಯೇ ಕುಸಿದು ಬಿತ್ತು. ಅದರಿಂದ ಹೊರಗೆ ಓಡಿ ಬಂದ ಬಿಳಿ ಒಂಟೆಮರಿ ಕ್ಷೀಣ ಧ್ವನಿಯಲ್ಲಿ ಕಿರುಚುತ್ತ ದಾರಿಗಳಲ್ಲೆಲ್ಲ ಅಲೆದಾಡಿತು.
ಕೊನೆಗೆ, ಶ್ರೀಮಂತನ ಕುದುರೆ ಹಿಂಡು ಕಾಯುವಾತ ಬಿಳಿ ಒಂಟೆಮರಿಯನ್ನು ನೋಡಿದ. ಆತ ಹುಲಿಚರ್ಮ ಬಿಗಿದ ಹತ್ತಡಿ ಉದ್ದದ ಕಬ್ಬಿಣದ ಚಾಟಿ ಕೈಯಲ್ಲಿ ಸೆಳೆದು, ತನ್ನ ಕುದುರೆಯನ್ನೇರಿ ಬಿಳಿ ಒಂಟೆಮರಿಯ ಬೆನ್ನಟ್ಟಿದ. ಒಂಟೆಮರಿಯನ್ನು ಸಮೀಪಿಸಿದ ಆತ, ತನ್ನೆಲ್ಲ ಬಲದಿಂದ ಒಂಟೆಮರಿಗೆ ಒಂದೇಟು ಬಾರಿಸಿ ಕೂಗಾಡಿದ, “ನಿನ್ನ ದರಿದ್ರ ಚರ್ಮ ಸುಲಿದು ನನ್ನ ನಾಯಿಗಳ ಕೆಳಗೆ ಹಾಸುತ್ತೇನೆ ಮತ್ತು ನಿನ್ನ ಅನಿಷ್ಟ ಮಾಂಸವನ್ನು ಬೇಯಿಸಿ ಕುದುರೆ ಹಿಂಡು ಕಾಯುವ ಹುಡುಗನಿಗೆ ಕೊಡುತ್ತೇನೆ. ಅದುವೇ ನಿನಗೆ ತಕ್ಕ ಶಾಸ್ತಿ.”
ಬಿಳಿ ಒಂಟೆಮರಿಯನ್ನು ಪುನಃ ಒಡೆಯನ ಮನೆಗೆ ಆತ ಕರೆ ತಂದ. ದೊಡ್ಡ ಕಪ್ಪು ಗಂಡುಒಂಟೆಯ ಕುತ್ತಿಗೆಗೆ ಬಿಳಿ ಒಂಟೆಮರಿಯನ್ನು ಹಗ್ಗದಿಂದ ಬಿಗಿದ. ಒಂಟೆಮರಿ ಆ ಹಗ್ಗ ಜಗ್ಗುತ್ತಾ ಹಿಂದೆಮುಂದೆ ಎಳೆದಾಡುತ್ತಾ ಹಗಲೂರಾತ್ರಿ ಹೃದಯವಿದ್ರಾವಕ ಸ್ವರದಲ್ಲಿ ಕಿರಿಚಿತು.
“ಮತ್ತೆಮತ್ತೆ ಕಿರಿಚುವುದನ್ನು ನೀನ್ಯಾಕೆ ನಿಲ್ಲಿಸುವುದಿಲ್ಲ? ಎಂದು ಕೇಳಿತು ದೊಡ್ಡ ಕಪ್ಪುಒಂಟೆ. ಆಗ ಬಿಳಿ ಒಂಟೆಮರಿ ತನ್ನ ಕತೆಯನ್ನೆಲ್ಲ ಹೇಳಿತು. ಬಿಳಿ ಒಂಟೆಮರಿಯ ಬಗ್ಗೆ ಕರುಣೆದೋರಿದ ದೊಡ್ಡ ಕಪ್ಪುಒಂಟೆ ಹೇಳಿತು, “ಇವತ್ತು ರಾತ್ರಿ ನಾನು ನಿದ್ದೆ ಮಾಡುತ್ತೇನೆ. ನೀನು ಕಿರಿಚಬೇಡ. ಸೂರ್ಯ ಮೂಡುವ ಮುನ್ನ, ಈ ಹಗ್ಗವನ್ನು ನನ್ನ ಹಲ್ಲುಗಳಿಂದ ಹಿಡಿದು, ಕಲ್ಲಿಗೆ ಉಜ್ಜಿ ತುಂಡರಿಸಿ ನಿನ್ನನ್ನು ಬಿಡುಗಡೆ ಮಾಡುತ್ತೇನೆ.”
ಇಡೀ ರಾತ್ರಿ ಬಿಳಿ ಒಂಟೆಮರಿ ಕಿರಿಚಾಡಲಿಲ್ಲ. ಮರುದಿನ ಮುಂಜಾವದ ಹೊತ್ತಿಗೆ, ಒಂಟೆಮರಿಗೆ ಬಿಗಿದ ಹಗ್ಗವನ್ನು ತನ್ನ ಹಲ್ಲುಗಳಿಂದ ಹಿಡಿದು, ಕಲ್ಲಿಗೆ ಬಲವಾಗಿ ಉಜ್ಜಿ, ತುಂಡರಿಸಿ, ಬಿಳಿ ಒಂಟೆಮರಿಯನ್ನು ಬಿಡುಗಡೆ ಮಾಡಿತು ದೊಡ್ಡ ಕಪ್ಪುಒಂಟೆ.
ಒಡನೆಯೇ ಜಿಗಿದು ಹೊರಗೋಡಿತು ಬಿಳಿ ಒಂಟೆಮರಿ. ಕ್ಷೀಣಸ್ವರದಲ್ಲಿ ಕೂಗುತ್ತಾ ದಾರಿಯಲ್ಲೆಲ್ಲ ಸುತ್ತಾಡಿತು. ಅದರೆ ಕೂಗು ಕೇಳಿದ ಕುದುರೆ ಹಿಂಡು ಕಾಯುವಾತ ಪುನಃ ಅದರೆ ಹಿಂದೆ ಧಾವಿಸಿದ. ಇನ್ನೇನು, ಅವನ ಕುದುರೆ ಬಿಳಿ ಒಂಟೆಮರಿಯನ್ನು ದಾಟುತ್ತದೆ ಅನ್ನುವಾಗ, ಅವನ ಕುದುರೆ ಹಠಾತ್ ಓಟ ನಿಲ್ಲಿಸಿ, ಹೇಳಿತು, “ಈ ಜಗತ್ತಿನಲ್ಲಿ ಹಲವಾರು ಅನಾಥ ಪ್ರಾಣಿಗಳನ್ನು ನಾನು ಕಂಡಿದ್ದೇನೆ. ಆದರೆ ಇಂತಹ ದರಿದ್ರ ಪ್ರಾಣಿಯನ್ನು ಕಂಡಿಲ್ಲ.”
ಅಷ್ಟು ಹೇಳುತ್ತಲೇ ಆ ಕುದುರೆ ನೆಲಕ್ಕೆ ಕುಸಿದು ಸತ್ತು ಹೋಯಿತು. ಮುಂದಕ್ಕೋಡಿದ ಬಿಳಿ ಒಂಟೆಮರಿಗೆ, ಎರಡು ಮರಿಗಳೊಂದಿಗಿದ್ದ ತೋಳವೊಂದು ಎದುರಾಯಿತು.
“ಈ ರೀತಿಯಲ್ಲಿ ಕಿರಿಚಾಡುವ ನೀನೆಂತಹ ಪ್ರಾಣಿ? ನಿನ್ನನ್ನು ತಿಂದೇ ಬಿಡುತ್ತೇನೆ” ಎಂದಿತು ತೋಳ. ಆಗ ಬಿಳಿ ಒಂಟೆಮರಿ ತನ್ನನ್ನು ತನ್ನ ತಾಯಿಯಿಂದ ಬೇರ್ಪಡಿಸಿದ ಕರುಣಾಜನಕ ಕತೆಯನ್ನು ಹೇಳಿತು. “ನನ್ನನ್ನು ತಿನ್ನುತ್ತಿಯಾದರೆ ತಿನ್ನು. ನನ್ನನ್ನು ಮುಂಭಾಗದಿಂದ ತಿನ್ನುತ್ತಿಯಾದರೆ, ನನ್ನ ಚಂದದ ಕುತ್ತಿಗೆ ಇಲ್ಲಿದೆ ನೋಡು. ನನ್ನನ್ನು ಕೆಳಭಾಗದಿಂದ ತಿನ್ನುತ್ತಿಯಾದರೆ, ನನ್ನ ರುಚಿಯಾದ ಕಾಲುಗಳಿಲ್ಲಿವೆ ನೋಡು. ನನ್ನನ್ನು ಮೇಲ್ಭಾಗದಿಂದ ತಿನ್ನುತ್ತಿಯಾದರೆ, ನನ್ನ ದುಂಡಗಿನ ಪುಟ್ಟ ಡುಬ್ಬ ಇಲ್ಲಿದೆ ನೋಡು. ನನ್ನನ್ನು ಪಕ್ಕದಿಂದ ತಿನ್ನುತ್ತಿಯಾದರೆ, ನನ್ನ ಎದೆಗೂಡಿನ ಎಲುಬುಗಳಿಲ್ಲಿವೆ ನೋಡು. ನನ್ನನ್ನು ಹಿಂಭಾಗದಿಂದ ತಿನ್ನುತ್ತಿಯಾದರೆ, ನನ್ನ ಎರಡು ಅಂದದ ಮಣಿಕಟ್ಟುಗಳು ಇಲ್ಲಿವೆ ನೋಡು.”
ಇದನ್ನು ಕೇಳಿದ ತೋಳ ಹೀಗೆಂದಿತು, “ಈ ವರೆಗೆ ಹಲವು ಅನಾಥ ಪ್ರಾಣಿಗಳನ್ನು ಕಂಡಿದ್ದೇನೆ. ಆದರೆ ನಿನ್ನಂತಹ ಅನಾಥಪ್ರಾಣಿಯನ್ನು ಕಂಡಿಲ್ಲ. ಹಸಿದಿದ್ದ ತಾಯಿ ತೋಳ, ತನ್ನೊಂದು ಮರಿಯನ್ನೇ ಕೊಂದು ತಿಂದಿತು. ಬಿಳಿ ಒಂಟೆಮರಿಯನ್ನು ಮುಟ್ಟಲಿಲ್ಲ.
ಮುಂದೋಡಿದ ಬಿಳಿ ಒಂಟೆಮರಿಗೆ ದಟ್ಟ ಕಪ್ಪು ಕಾಡೊಂದು ಎದುರಾಯಿತು. ಒಂಟೆಮರಿಗೆ ಅದರೊಳಗೆ ಹೋಗಲಿಕ್ಕೂ ಆಗಲಿಲ್ಲ, ಅದನ್ನು ಸುತ್ತಿ ಬಳಸಿ ಹೋಗಲಿಕ್ಕೂ ಆಗಲಿಲ್ಲ. ಇನ್ನಷ್ಟು ಜೋರಾಗಿ ಕಿರಿಚಾಡಿತು ಬಿಳಿ ಒಂಟೆಮರಿ. ಆಗ ಅದಕ್ಕೆ ಕಾಡಿನ ನಡುವೆ ದಾರಿಯೊಂದು ಕಾಣಿಸಿತು. ಅದರೊಳಕ್ಕೆ ಓಡಿದ ಬಿಳಿ ಒಂಟೆಮರಿ, ಕಾಡಿನಿಂದ ಹೊರಕ್ಕೆ ಬಂದು ಮುಂದಕ್ಕೋಡಿತು. ಓಡುತ್ತಾ ಓಡುತ್ತಾ ಕುದಿಯುವ ನೀರಿನ ಸಮುದ್ರದ ದಡಕ್ಕೆ ಬಂದು ದಢಕ್ಕನೆ ನಿಂತಿತು.
ಬಿಳಿ ಒಂಟೆಮರಿಗೆ ಆ ಸಮುದ್ರವನ್ನು ಈಜಿ ದಾಟಲಿಕ್ಕೂ ಆಗಲಿಲ್ಲ, ಅದನ್ನು ಸುತ್ತಿ ಬಳಸಿ ಹೋಗಲಿಕ್ಕೂ ಆಗಲಿಲ್ಲ. ಆಗ ಅದು ಮತ್ತಷ್ಟು ಜೋರಾಗಿ ಕಿರಿಚಾಡಿತು. ಹಠಾತ್ತಾಗಿ. ದೊಡ್ಡ ಡೇರೆ ಗಾತ್ರದ ಆಮೆಯೊಂದು ಅಲ್ಲಿ ಕಾಣಿಸಿ ಕೊಂಡಿತು. ಆಮೆ ಹೇಳಿತು, “ಎಂತಹ ದರಿದ್ರ ಪ್ರಾಣಿ ನೀನು! ಬದುಕಲಿಕ್ಕಾಗಿ ಶ್ರಮ ಪಡುವ ಜೀವಿಗಳನ್ನು ನೀನ್ಯಾಕೆ ಅವರ ಪಾಡಿಗೆ ಬಿಡುವುದಿಲ್ಲ?” ಆಗ ಬಿಳಿ ಒಂಟೆಮರಿ ತನ್ನ ಕತೆಯನ್ನು ಆಮೆಗೆ ಹೇಳಿತು. ಬಿಳಿ ಒಂಟೆಮರಿಯ ಬಗ್ಗೆ ಮರುಕ ಪಟ್ಟ ಆಮೆ, ಅದನ್ನು ತನ್ನ ಬೆನ್ನಿಗೇರಿಸಿ ಸಮುದ್ರ ದಾಟಿಸಿತು.
ಬಿಳಿ ಒಂಟೆಮರಿ ಕ್ಷೀಣಧ್ವನಿಯಲ್ಲಿ ಕಿರಿಚುತ್ತಾ ಮುಂದಕ್ಕೋಡಿತು. ಕೊನೆಗೊಮ್ಮೆ ಅದಕ್ಕೆ ದೂರದಿಂದ ತನ್ನ ತಾಯಿಯ ಧ್ವನಿ ಕೇಳಿಸಿತು. ತಾಯಿ ಒಂಟೆಗೂ ತನ್ನ ಮರಿಯ ಧ್ವನಿ ಕೇಳಿತು; ಅದು ಮರಿಯನ್ನು ಮಮತೆಯಿಂದ ಕರೆಯಿತು. ಇದನ್ನು ಕಂಡ ಶ್ರೀಮಂತ ತಾಯಿ ಒಂಟೆಯನ್ನು ಕಬ್ಬಿಣದ ಕೋಣೆಯಲ್ಲಿ ಬಂಧಿಸಿ, ಮೂರು ಸಾವಿರ ಸೈನಿಕರನ್ನು ಕಾವಲಿಗಿಟ್ಟ. ಆದರೆ ತಾಯಿ ಒಂಟೆ ಕಬ್ಬಿಣದ ಕೋಣೆಯ ಗೋಡೆ ಒಡೆದು, ಮೂರು ಸಾವಿರ ಸೈನಿಕರನ್ನು ಕೊಂದು, ತನ್ನ ಮರಿಯ ಬಳಿಗೋಡಿತು.
ಅಮ್ಮನ ಮಡಿಲಿಗೋಡಿದ ಮರಿಒಂಟೆ, ಅಮ್ಮನ ಅಮೃತಸಮಾನ ಹಾಲು ಕುಡಿಯಿತು. ಆಗ ಒಳ್ಳೆಯ ಮನುಷ್ಯನೊಬ್ಬ ತಾಯಿಒಂಟೆಯನ್ನು ಕರೆದೊಯ್ದ. ಅನಂತರ ಅವು ಸಂತೋಷದಿಂದ ಬಾಳಿದವು.
ಆಧಾರ: ಮಂಗೋಲಿಯನ್ ಜಾನಪದ ಕತೆ
ಚಿತ್ರ ಕೃಪೆ: ನ್ಯಾಷನಲ್ ಬುಕ್ ಟ್ರಸ್ಟ್ “ರೀಡ್ ಮಿ ಎ ಸ್ಟೋರಿ” ಪುಸ್ತಕ
ಚಿತ್ರಕಾರ: ಬಡ್ಮಾರಗಿನ್ ತ್ಸೊಗ್