ಬಿಸಿಲಿನ ತಾಪಕ್ಕೆ ಕೂಲ್ ಕೂಲ್ ಪಾನೀಯಗಳು

ಬಿಸಿಲಿನ ತಾಪಕ್ಕೆ ಕೂಲ್ ಕೂಲ್ ಪಾನೀಯಗಳು

ಈ ವರ್ಷ ಮುಂಗಾರು ತಡವಾಗಿದೆ. ಈಗಷ್ಟೇ ಕೇರಳಕ್ಕೆ ಮುಂಗಾರು ಮಾರುತಗಳು ಪ್ರವೇಶವಾಗಿರುವುದರಿಂದ ಇನ್ನೂ ನಾಲ್ಕೈದು ದಿನ ಕರ್ನಾಟಕಕ್ಕೆ ಬಿಸಿಲೇ ಗತಿ. ಈಗಾಗಲೇ ಜಾಗತಿಕ ತಾಪಮಾನ ಈ ವರ್ಷ ೦.೨ ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆಯಂತೆ. ಇದು ನಿರಂತರವಾಗಿ ಏರುತ್ತಲೇ ಇರುವುದು ನಮಗೆ ಎಚ್ಚರಿಕೆಯ ಕರೆಗಂಟೆಯಾಗಬೇಕು. ಏಕೆಂದರೆ ಧ್ರುವ ಪ್ರದೇಶಗಳಲ್ಲಿ ಹಿಮ ಬಂಡೆಗಳು ನಿರಂತರವಾಗಿ ಕರಗುತ್ತಿರುವುದು ಉತ್ತಮ ಸಂಗತಿಯಲ್ಲ. ನಾವೇ ಗಮನಿಸುತ್ತಿರುವಂತೆ ಅಕಾಲಕ್ಕೆ ಮಳೆಯಾಗುವುದು, ತಡವಾಗಿ ಮುಂಗಾರು ಮಾರುತಗಳು ಪ್ರವೇಶ ಮಾಡುವುದು, ಬಿಸಿಲಿನ ಝಳ ಪ್ರತೀ ವರ್ಷ ಅಧಿಕಗೊಳ್ಳುತ್ತಿರುವುದು ಇವೆಲ್ಲಾ ಮುಂದಿನ ದಿನಗಳಲ್ಲಿ ಭೂಮಿಯ ಮೇಲೆ ಬದುಕು ಅಸಹನೀಯವನ್ನಾಗಿಸುವುದರಲ್ಲಿ ಸಂಶಯವಿಲ್ಲ. 

ಆದರೆ ಈಗ ತಕ್ಷಣಕ್ಕೆ ನಾವು ಈ ಸೆಖೆಯಿಂದ ಹೊರ ಬರಲು ಏನು ಮಾಡಬಹುದು? ಈ ಸೆಖೆಗೆ ಬೆವರು ಇಳಿದು ಹೋಗುವುದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಈ ಕಾರಣದಿಂದ ಈ ಸಮಯದಲ್ಲಿ ಯಥೇಚ್ಛವಾಗಿ ನೀರನ್ನು ಕುಡಿಯಿರಿ. ತಂಪು ನೀರು ಕುಡಿಯುವುದರ ಬದಲು, ಬಿಸಿ ಮಾಡಿ ಆರಿಸಿದ ಅಥವಾ ಉಗುರು ಬೆಚ್ಚನೆಯ ನೀರನ್ನು ನಿರಂತರವಾಗಿ ಕುಡಿಯಿರಿ. ನಿರ್ಜಲೀಕರಣದ ಸಮಸ್ಯೆಯಿಂದ ಹೊರ ಬರಲು ತಾಜಾ ಹಣ್ಣಿನ ರಸ, ನಿಂಬೆ ರಸ, ಎಳನೀರು ಹಾಗೂ ಕೆಲವು ತರಕಾರಿಗಳ ಜ್ಯೂಸ್ ಪ್ರಯೋಜನಕಾರಿಯಾಗುತ್ತದೆ. ಅಂತಹ ಕೆಲವು ಸುಲಭ ತಯಾರಿಗಳ ವಿವರ ಇಲ್ಲಿ ನೀಡಲಾಗಿದೆ

ಇನ್ ಪ್ಯೂಸ್ಡ್ ವಾಟರ್: ಈ ನೀರು ಈಗ ಅತ್ಯಧಿಕ ಸುದ್ದಿಯಲ್ಲಿರುವ ಪಾನೀಯವಾಗಿದೆ. ಈ ನೀರಿನಲ್ಲಿ ಲಿಂಬೆಕಾಯಿ, ಸೌತೆಕಾಯಿ, ಯಾವುದೇ ಹಣ್ಣು, ಪುದೀನಾ, ಮಿಂಟ್ ಎಲೆಗಳು ಅಥವಾ ದಾಲ್ಚಿನ್ನಿಯಂತಹ ಸಾಂಬಾರು ಪದಾರ್ಥಗಳು ಸೇರಿಸಿ ನೆನೆಸಿ, ಸ್ವಲ್ಪ ಸಮಯ ನೆನೆ ಬಿಟ್ಟು ನಂತರ ಅದನ್ನು ಸೇವಿಸಿದರೆ ಅತ್ಯಂತ ಪೋಷಕಾಂಶ ಭರಿತ ನೀರು ಕುಡಿದಂತಾಗುತ್ತದೆ. ಈ ನೀರು ನಿರ್ಜಲೀಕರಣ ಸಮಸ್ಯೆಯ ನಿವಾರಣೆಯ ಜೊತೆಗೆ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನೂ ಪೂರೈಸುತ್ತದೆ. ಬರೇ ನೀರನ್ನು ಕುಡಿಯುವುದು ಬೋರ್ ಆಗುವುದಾದರೆ ನೀರಿಗೆ ಈ ರೀತಿಯ ಸಾಮಾಗ್ರಿಗಳನ್ನು ಸೇರಿಸಿ ಅದನ್ನು ಮತ್ತಷ್ಟು ಆರೋಗ್ಯಕಾರಿಯಾಗಿ ಮಾಡಿ ಕುಡಿಯಬಹುದು.

ನಿಂಬೆ ರಸ: ಇದು ಶತಶತಮಾನಗಳಿಂದ ಜಾರಿಯಲ್ಲಿರುವ ಉತ್ತಮ ಪಾನೀಯ. ನಿಂಬೆಯ ಹಣ್ಣಿನ ರಸವನ್ನು ನೀರಿಗೆ ಬೆರೆಸಿ ಅದಕ್ಕೆ ಸ್ವಲ್ಪ ಸಕ್ಕರೆ, ಉಪ್ಪು, ಕಾಳು ಮೆಣಸಿನ ಹುಡಿ (ಬೇಕಿದ್ದಲ್ಲಿ) ಸೇರಿಸಿ ಕುಡಿದರೆ ಅದೇ ಅಮೃತ. ಇದು ದೇಹದಲ್ಲಿನ ಸುಸ್ತನ್ನು ಹೊಡೆದೋಡಿಸುತ್ತದೆ.

ಎಳನೀರು ಮತ್ತು ಮಜ್ಜಿಗೆ: ಪ್ರತೀ ದಿನ ಒಂದು ಲೋಟ ಎಳನೀರು ಅಥವಾ ಮಜ್ಜಿಗೆ ಸೇವಿಸುವ ಅಭ್ಯಾಸ ಮಾಡಿಕೊಂಡರೆ ನಿಮ್ಮ ಆರೋಗ್ಯವು ಬಹಳಷ್ಟು ಸುಧಾರಣೆ ಕಾಣುತ್ತದೆ. ಮಜ್ಜಿಗೆಯಂತೂ ಅಜೀರ್ಣದಂತಹ ಸಮಸ್ಯೆಗಳಿಗೆ ರಾಮಬಾಣ. ಸಕ್ಕರೆ ಕಾಯಿಲೆ (ಡಯಾಬಿಟಿಸ್) ಇರುವವರೂ ಮಜ್ಜಿಗೆಯನ್ನು ಧಾರಾಳವಾಗಿ ಸೇವಿಸಬಹುದು.

ತರಕಾರಿಗಳ ಸೂಪ್: ಮಾರುಕಟ್ಟೆಯಲ್ಲಿ ಲಭ್ಯವಿರುವ ತರಕಾರಿಗಳನ್ನು ಬೇಯಿಸಿ ಅದರಿಂದ ಸೂಪ್ ತಯಾರಿಸಿಕೊಂಡು ಕುಡಿಯಬಹುದು. ಇದು ಅತ್ಯಂತ ಪೌಷ್ಟಿದಾಯಕವಾಗಿರುತ್ತದೆ. ಇದರಿಂದ ದೇಹಕ್ಕೆ ಶಕ್ತಿ ಹಾಗೂ ಲವಲವಿಕೆ ದೊರೆಯುತ್ತದೆ.

ಆರೆಂಜ್ ರಸ: ಕಿತ್ತಳೆ ಹಣ್ಣಿನ ಸಮಯದಲ್ಲಿ ಈ ಹಣ್ಣಿನ ರಸವನ್ನು ನಾವು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಕಿತ್ತಳೆ ಹಣ್ಣನ್ನು ನೇರ ತಿನ್ನುವುದು ಅತ್ಯಂತ ಉತ್ತಮ ವಿಧಾನ. ಆದರೂ ರಸವನ್ನು ಹಿಂಡಿ ಸೇವಿಸಿದರೆ ಅದರಿಂದ ವಿಟಮಿನ್ ಸಿ ದೇಹಕ್ಕೆ ಲಭಿಸುತ್ತದೆ.

ಲೆಮನೇಡ್ ರಸ: ಲಿಂಬೆಯಿಂದ ತಯಾರಿಸಿದ ಲೆಮನೇಡ್ ರಸವನ್ನು ಸೇವಿಸುವುದೂ ಒಂದು ಉತ್ತಮ ಕ್ರಮ. ಸೋಡ (ಕಾರ್ಬನೇಟಡ್ ವಾಟರ್) ತುಂಬಿದ ಬಾಟಲಿ ಪಾನೀಯವನ್ನು ಸೇವಿಸುವುದರ ಬದಲು ನೈಜ ಲಿಂಬೆಗಳಿಂದ ತಯಾರಿಸಿದ ಲೆಮನೇಡ್ ರಸವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದು ಆರೋಗ್ಯದಾಯಕ.

ಹರ್ಬಲ್ ಟೀ/ ಗ್ರೀನ್ ಟೀ: ಹಾಲು ಸಕ್ಕರೆ ಬೆರೆಸಿದ ಚಹಾ ಅಥವಾ ಕಾಫಿ ಕುಡಿಯುವುದಕ್ಕಿಂತಲೂ ಹರ್ಬಲ್ ಟೀ ಇಲ್ಲವೇ ಗ್ರೀನ್ ಟೀ ಸೇವನೆ ಹಿತಕರ. ಸಕ್ಕರೆ ಬೆರೆಸದೇ ಇರುವ ಗ್ರೀನ್ ಟೀಗೆ ಸ್ವಲ್ಪ ಜೇನು ತುಪ್ಪ ಬೆರೆಸಿ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಬೇಕಿದ್ದಲ್ಲಿ ಸ್ವಲ್ಪ ಲಿಂಬೆ ರಸವನ್ನು ಬೆರೆಸಿ.

ಕಲ್ಲಂಗಡಿ ಹಣ್ಣಿನ ರಸ: ಈ ಹಣ್ಣಿನಲ್ಲಿ ಶೇ.೮೦ ಭಾಗ ನೀರಿನ ಅಂಶವೇ ಇರುವುದರಿಂದ ಇದರ ಸೇವನೆ (ನೇರ ಅಥವಾ ಜ್ಯೂಸ್ ಮೂಲಕ) ದೇಹಕ್ಕೆ ಅಗತ್ಯವಾದ ನೀರಿನಂಶವನ್ನು ಪೂರೈಸುತ್ತದೆ. ಕಲ್ಲಂಗಡಿ ಹಣ್ಣಿನ ಜೊತೆ ಕರಬೂಜ (Muskmelon) ಹಣ್ಣಿನ ರಸವನ್ನೂ ಸೇವಿಸಬಹುದಾಗಿದೆ.

ಸೌತೇಕಾಯಿ: ಸೌತೇಕಾಯಿ ಬಾಯಾರಿಕೆಯನ್ನು ತಣಿಸಲು ಅತ್ಯಂತ ಉತ್ತಮ ತರಕಾರಿ. ಸೌತೇಕಾಯಿಯನ್ನು ಹೀಗೇ ಕತ್ತರಿಸಿ ತಿನ್ನಬಹುದು ಅಥವಾ ರಸವನ್ನು ತೆಗೆದೂ ಸೇವಿಸಬಹುದು. ಈ ತರಕಾರಿಯಲ್ಲಿ ನೀರಿನ ಅಂಶ ಅಧಿಕವಾಗಿರುವುದರಿಂದ ನೇರವಾಗಿ ತಿನ್ನುವುದೇ ಸ್ವಾದಿಷ್ಟಕರ ಮಾರ್ಗ.
ಇವೆಲ್ಲಾ ಬೇಸಿಗೆಯನ್ನು ತಣಿಸಲು ಇರುವ ಪರ್ಯಾಯ ಮಾರ್ಗೋಪಾಯಗಳು. ಎಲ್ಲದಕ್ಕೂ ಉತ್ತಮ ನೀರು ಮತ್ತು ನೀರು ಮಾತ್ರ. ನೀರನ್ನು ಬಿಸಿ ಮಾಡುವಾಗ ಲಾವಂಚ ಬೇರು ಹಾಕಿದರೆ ನೀರಿಗೆ ಸುಗಂಧದ ಜೊತೆ ಆರೋಗ್ಯಕಾರಿ ಅಂಶವೂ ಸಿಗುತ್ತದೆ. ಜೀರಿಗೆಯನ್ನೂ ಹಾಕಿ ನೀರನ್ನು ಬಿಸಿ ಮಾಡಬಹುದು. ಬೇಸಿಗೆಯಲ್ಲಿ ದಿನವೊಂದನ್ನೆ ೪-೫ ಲೀಟರ್ ನೀರು ಕುಡಿಯುವುದು ಅಗತ್ಯ. ಏಕೆಂದರೆ ಬಿಸಿಲಿನ ತಾಪಕ್ಕೆ ನಿಮ್ಮ ದೇಹದಲ್ಲಿರುವ ನೀರಿನ ಅಂಶ ಬೆವರು ಮುಖಾಂತರ ಹರಿದುಹೋಗಿ ದೇಹದಲ್ಲಿ ನೀರಿನ ಕೊರತೆಯುಂಟಾಗುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ಮೂತ್ರಪಿಂಡದ (ಕಿಡ್ನಿ) ಸಮಸ್ಯೆ ಪ್ರಾರಂಭವಾಗುತ್ತದೆ. ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಲು ನೀರನ್ನು ಕುಡಿಯುವುದರ ಜೊತೆಗೆ ಮೇಲೆ ತಿಳಿಸಿದ ದ್ರವ ರಸಗಳನ್ನು ಸೇವನೆ ಮಾಡಬಹುದು. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ