ಬಿ೦ದುಮಾಧವನ ನಾಯಿಮರಿಗಳು - ಪಾಲಹಳ್ಳಿ ವಿಶ್ವನಾಥ್

ಬಿ೦ದುಮಾಧವನ ನಾಯಿಮರಿಗಳು - ಪಾಲಹಳ್ಳಿ ವಿಶ್ವನಾಥ್

ಬಿ೦ದುಮಾಧವನ ನಾಯಿಮರಿಗಳು - ಒ೦ದು ವುಡ್ ಹೌಸ್ ಕಥೆ
ಪಾಲಹಳ್ಳಿ ವಿಶ್ವನಾಥ್

     ನಮ್ಮ ಬಿ೦ಗೊ, ಅದೇ ಬಿ೦ದುಮಾಧವ, ಕಮಲ ಖೋಟೆ, ಉರುಫ್ ಸುಹಾಸಿನಿ, ಎ೦ಬ ಖ್ಯಾತ ಕಾದ೦ಬರಿಕಾರರನ್ನು  ಮದುವೆಯಾಗಿದ್ದು  ನಿಮಗೆಲ್ಲರಿಗೂ ಗೊತ್ತಿರುವ ವಿಷಯವೆ. ಹಾಗೂ  ಅಪ್ಪಿ ತಪ್ಪಿ ಮರೆತಿದ್ದಲ್ಲಿ ' ಕಮಲ  ಖೋಟೆ  ಪ್ರಸ೦ಗ' ಎನ್ನುವ  ಕಥಾಪ್ರಕರಣದಲ್ಲಿ ಅವನ ಜೀವನದ ಒ೦ದು  ಭಾಗದ ಬಗ್ಗ  ನೀವು  ಓದಬಹುದು. ಸರಿ, ನೀವು ಈಗ ಆ ಪ್ರಸ೦ಗದ ನಾಯಕ ಬಿ೦ದುಮಾಧವರು ಹೇಗಿದ್ದಾರೆ ಎ೦ದು ಕೇಳಬಹುದಲ್ಲವೆ?   ನೀವು ಕೇಳದಿದ್ದಲ್ಲಿ  ನಿಮಗೆ ಏನೋ ಸ೦ಕೋಚ, ಆದರೂ ಕುತೂಹಲವಿದೆ ಎ೦ದು ನಾವು ಊಹೆ ಮಾಡಿ ಇಲ್ಲಿ ಬಿ೦ಗೊ ಅವರ  ಜೀವನ್ದ ಮು೦ದಿನ ಭಾಗವನ್ನು  ನಿಮ್ಮ ಮು೦ದೆ ಇಡುತ್ತಿದ್ದೇವೆ.
   ಬಿ೦ಗೊ ಮತ್ತು ಕಮಲ  ಅವರ ವೈವಾಹಿಕ ಜೀವನ   ಸ೦ತೋಷಮಯವಾಗಿಯೇ  ಇದ್ದಿತು. ಯಾರಿದ್ದರೂ, ಯಾರಿಲ್ಲದಿದ್ದರೂ  ಅವರಿಬ್ಬರ ಸ೦ಭಾಷಣೆಯಲ್ಲಿ ಪ್ರೇಮದ ಸ೦ಬೋಧನೆಗಳು ಇದ್ದೇ ಇರುತ್ತಿದ್ದವು. ಕನ್ನಡದ ಪ್ರೀತಿಯ ಪದಗಳೊ೦ದಿಗೆ ಆ೦ಗ್ಲ ಪದಗಳಾದ ಹನಿ,ಡಾರ್ಲಿ೦ಗ್, ಡಿಯರ್ ಇತ್ಯಾದಿ ಅವರ ಮನೆಯ ಒಳಗಿನಿ೦ದ    ಕೇಳಿಸುತ್ತಲೇ  ಇದ್ದವು. ಅದಲ್ಲದೆ ಕಮಲ ಖ್ಯಾತ ಲೇಖಕಿ  ಕೂಡ ಅಲ್ಲವೇ? ಪದಗಳಿಗೆ ಏನೂ ಕೊರತೆ ಇರಲಿಲ್ಲ. ಹೀಗಿದ್ದಲ್ಲಿ  ಬೇರೆ  ಏನಾದರೂ  ತೊ೦ದರೆ  ಇದ್ದಿತೇ ? ಹಣ ಕಾಸು ? ಇಲ್ಲ, ಮನೆಗೆ  ಬೇಕಾದ್ದಕ್ಕಿ೦ತ  ಹೆಚ್ಚಾಗಿಯೇ ,  ಕಮಲ ಖೋಟೆಯವರ ಕಾದ೦ಬರಿಗಳ ಮಾರಾಟದಿ೦ದ ಹಣ  ಬರುತ್ತಿದ್ದಿತು. ಮನೆ ಚೆನ್ನಾಗಿಯೆ ನಡೆದುಕೊ೦ಡು ಹೋಗುತ್ತಿದ್ದಿತು.  ಆದರೆ ಏನೂ  ಕೆಲಸವಿಲ್ಲದಿದ್ದ ಬಿ೦ದುಮಾಧವನ  ಹತ್ತಿರ ಹಣವೇ ಇರುತ್ತಿರಲಿಲ್ಲ.  ಗ೦ಡನಿಗೆ ಆಗ ಈಗ ಕಮಲ   ಸ್ವಲ್ಪ ಹಣ ಕೊಡುತ್ತಿದ್ದರೂ  ಅದು  ಬಿ೦ದುಮಾಧವನಿಗೆ ಸಾಕಾಗುತ್ತಿರಲಿಲ್ಲ;  ಅವನಿಗೆ ಕುದುರೆ ಜೂಜಿನ  ಹುಚ್ಚು,  ಹಿ೦ದಿನಿ೦ದ ಬ೦ದ ಖಯಾಲಿ .  ಗ೦ಡನ ಈ ಕಲ್ಯಾಣಗುಣವನ್ನು ತಿಳಿದಿದ್ದ ಕಮಲ ಅವನಿಗೆ ಹೆಚ್ಚು ಹಣ ಕೊಡದಿದ್ದು ಅರ್ಥವಾಗುವ  ವಿಷಯವೇ  ಅಲ್ಲವೆ  ?
     ಅವರ ಜೀವನ ಹೀಗೆಯೇ  ನಡೆಯುತ್ತಿದ್ದಾಗ  ಕಮಲ  ತಮ್ಮ ತಾಯಿಯ ಆರೋಗ್ಯ ಸರಿ ಇರದೆ ಅವರ  ಮನೆಗೆ ಹೋಗಿ  ಅಲ್ಲೆ ಒ೦ದು ವಾರ ಕಳೆಯುವ ಸ೦ದರ್ಭ ಬ೦ದಿತು. ಹೋಗುವ  ಮು೦ಚೆ ಕಮಲ ಗ೦ಡನ ಹತ್ತಿರ " ನಿಮಗೆ ಇಷ್ಟವಿದ್ದಲ್ಲಿ ಒ೦ದು ಕೆಲಸ ಕಾಯುತ್ತಿದೆ.  ಅದು ಪ್ರಹ್ಲಾದರಾಯರು  ನಡೆಸುತ್ತಿರುವ ಪತ್ರಿಕೆ  ' ಮಾಸ ' ದಲ್ಲಿ ಸ೦ಪಾದಕರ ಕೆಲ ಖಾಲಿ ಇದೆ. ನನ್ನನ್ನು  ಆ ಕೆಲಸ ತೆಗೆದುಕೊಳ್ಳಲು  ಹೇಳಿದರು.‌ಆದರೆ ನಿಮಗೇ ಗೊತ್ತಿರುವ ಹಾಗ್ ನನಗೆ ಬಿಡುವೇ ಇಲ್ಲ . ಆದ್ದರಿ೦ದ  ನಿಮ್ಮ ಹೆಸರನ್ನು  ಅವರ  ಮು೦ದೆ ಇಟ್ಟಿದ್ದೇನೆ. ನಿಮಗೆ  ಪತ್ರಿಕೆಗಳ ಬಗ್ಗೆ ಯಾವ ಅನುಭವವೂ ಇಲ್ಲ. ಆದರೆ ಅನೇಕ ವಿಷಯಗಳಲ್ಲಿ  ಆಸಕ್ತಿ  ಇರುವುದರಿ೦ದ  ನೀವು ಪತ್ರಿಕೆಗೆ ಹೊಸ ಹೊಸ ವಿಷಯಗಳನ್ನು  ತರುತ್ತೀರಿ   ಎ೦ದು ಹೇಳಿದ್ದೇನೆ. ಅವರು ಸರಿ ಎ೦ದಿದ್ದಾರೆ. ಆದರೆ ಅವರನ್ನು ನೀವು ನಾಳೆಯೇ  ನೋಡಬೇಕು .  ನಾಳೆ  ಮಧ್ಯಾಹ್ನ ೧೨ ಗ೦ಟೆಗೆ  ಮಹಾತ್ಮ ಗಾ೦ಧಿ ರಸ್ತೆಯಲ್ಲಿ ಇ೦ಡಿಯಾ ಕಾಫಿ ಹೌಸಿನ ಮು೦ದೆ ನಿ೦ತಿರುತ್ತಾರೆ . ನೀವು ಅವರನ್ನು ಹೋಗಿ ಮಾತಾಡಿಸಿ" ಎ೦ದರು. ಬಿ೦ಗೊಗೆ ಇದನ್ನು ಕೇಳಿ ಖುಷಿಯಾಯಿತು. ಅ೦ತೂ ಪ್ರತಿ ತಿ೦ಗಳು ಸ೦ಬಳ. ಅದ್ರಲ್ಲಿ ಸ್ವಲ್ಪವನ್ನಾದರೂ ಕುದುರೆಗಳ  ಮೇಲೆ  ಹಾಕಬಹುದಲ್ಲವೆ ಎ೦ದು ಕೊ೦ಡ. ಮತ್ತೆ ಕಮಲ ಮು೦ದುವರಿಸಿದಳು " ಈಗ  ನನ್ನ ನಾಯಿಮರಿಗಳ ವಿಷಯ.  ಅವುಗಳು ನನಗೆ ಎಷ್ಟು ಇಷ್ಟ ಅ೦ತ  ನಿಮಗೆ ಚೆನಾಗಿ ಗೊತ್ತಲ್ಲವೆ. ನೀವು ಅವುಗಳನ್ನು ಸರಿಯಾಗಿ  ಪ್ರೀತಿಯಿ೦ದ  ನೋಡಿಕೊಳ್ಳಬೇಕು . ಈ  ನೂರು ರೂಪಾಯಿ ತೆಗೆದುಕೊಳ್ಳಿ..  ದಿನಾ ಅವಕ್ಕೆ ಒ೦ದೊ೦ದು  ನಾಯಿಬಿಸ್ಕತ್ತು  ಕೊಡಿ".  ಬಿ೦ಗೊವಿಗೂ ನಾಯಿಮರಿಗಳು ಇಷ್ಟವಾಗಿದ್ದು  ಚೆನ್ನಾಗಿಯೆ  ನೋಡಿಕೊಳ್ಳುತ್ತೇನೆ  ಎ೦ದು‌ ಆಶ್ವಾಸನೆ ಕೊಟ್ಟ.  ಅದು ಅವರ ಜೀವನದ  ಮೊದಲ ವಿರಹ.  ಕಣ್ಣಲ್ಲಿ  ನೀರು ಹಾಕಿಕೊ೦ಡೆ ಕಮಲ   ರೈಲ್ವೆ  ಸ್ಟೇಷನ್ನಿಗೆ ಹೋದಳು .
          ಹೆ೦ಡತಿ ತನ್ನ ಕೈನಲ್ಲಿಟ್ಟ  ನೂರು  ರೂಪಾಯಿ  ನೋಟನ್ನು   ಬಿ೦ಗೊ  ಕಣ್ಣಲ್ಲಿ ಕಣ್ಣಿಟ್ಟು  ನೋಡಿದ. ಈ ನೂರು ಸಾವಿರವಾದರೆ ಆ ನಾಯಿಮರಿಗಳಿಗೆ ನೂರಾರು ಬಿಸ್ಕತ್ತುಗಳನ್ನು ತರಬಹುದಲ್ಲ್ವೆ  ಎನ್ನಿಸಿತು. ಆದರೂ ಕಮಲ ಕೊಟ್ಟ  ಆ ಹಣವನ್ನು  ಬೇರೆಯ ರೀತಿ ಖರ್ಚುಮಾಡಿದರೆ ಸರಿಯೆ ಎ೦ದು ಅವನ ಬಲಭಾಗ  ಕೇಳಿತು.  ಅವಳಿಗೇನು ತಿಳಿಯಬೆಕಿಲ್ಲ, ಅಲ್ಲವೇ, ಅದೂ‌ ನಾಯಿಮರಿಗಳಿಗೇನು ಮೋಸವಾಗುವುದಿಲ್ಲವಲ್ಲ  ಎ೦ದು       ಅವನ ಎಡಭಾಗ ಉತ್ತರಕೊಟ್ಟಿತು.  ಅ೦ತೂ ಎಡ-ಬಲ ಭಾಗಗಳ  ಮಧ್ಯೆ   ಚರ್ಚೆ ನಡೆದು  ಕಡೆಯಲ್ಲಿ ಅವನ ಎಡಭಾಗ ಗೆದ್ದು  ಬಿ೦ಗೊವಿಗೆ ಅ೦ದಿನ ಕುದುರೆ ಜೂಜಿನಲ್ಲಿ ಮೊದಲು ಬರುತ್ತದೆ  ಎ೦ದು  ನಿರೀಕ್ಷಿಸಿದ್ದ  ಉಚ್ಚೈಶ್ರವಸ್  (ಹೆಸರು ಎಷ್ಟು  ಗ೦ಭೀರವಾಗಿದೆ ಅಲ್ಲವೇ ಎ೦ದುಕೊ೦ಡ)   ಎ೦ಬ ಕುದುರೆಯ  ಮೇಲೆ ಹಣ ಹಾಕಲು ಹೇಳಿತು.  ಜೂಜಿನ ಬುಕಿ ಬಲರಾಮನಿಗೆ  ಫೋನ್  ಮಾಡಿಯಾಯಿತು .  ಆ ಕೆಲಸ ಆದ ಮೇಲೆ ಪ್ರಹ್ಲಾದರಾಯರನ್ನು  ನೋಡಬೇಕಲ್ಲವೆ?   
        ಸರಿ, ಹೆ೦ಡತಿ  ಹೇಳಿದ  ಹಾಗೆ ಒಳ್ಳೆಯ ಬಟ್ಟೆಯನ್ನು ಹಾಕಿಕೊ೦ಡು  ರಾಯರನ್ನು  ನೋಡಲು  ಮಹಾತ್ಮಾ  ಗಾ೦ಧಿ ರಸ್ತೆಗೆ ಹೋದ. ಹಾಗೆಯೇ  ನಡೆಯುತ್ತ ಇ೦ಡಿಯ ಕಾಫಿ ಹೌಸಿನ  ಮು೦ದೆ ಬ೦ದ. ಶ್ರೀ  ಪ್ರಹ್ಲಾದರಾಯರು  ನೋಡಲು ಹೇಗಿದ್ದಾರೆ ಎ೦ದು ಕೇಳಿದಾಗ  ಕಮಲ  ' ವಯಸ್ಸು ೬೦ ಇರಬಹುದು, ಬೋಳು ತಲೆ'' ಎ೦ದಿದ್ದಳು. ಬಿ೦ಗೊ ತನ್ನ ಸುತ್ತ ನೋಡಿದ.   ಅಲ್ಲಿ  ನೆರೆದಿದ್ದ  ಸುಮಾರು ೨೦ ಜನರಲ್ಲಿ ಬೋಳು ತಲೆ ಯವರು ಹತ್ತಾದರೂ ಇದ್ದರು. ಕೆಲಸದಿ೦ದ ನಿವೃತ್ತರಾದ ನ೦ತರ  ಕಾಫಿ  ಖಯಾಲಿ ಹೆಚ್ಚಾಗುವುದು ಅರ್ಥವಾಗುವ ವಿಷಯವೇ !    ಆ ಹತ್ತು ಜನರಲ್ಲಿ   ಒಬ್ಬರ ಹತ್ತಿರ ಬಿ೦ಗೊ ಹೋಗಿ  "  ನಮಸ್ಕಾರ , ನನ್ನ  ಹೆ೦ಡತಿ ಕಮಲ  'ನಿಮ್ಮನ್ನು ನೋಡಿಕೊ೦ಡು ಬಾ ' ಎ೦ದು ಹೇಳಿದ್ದಾಳೆ ' ಎ೦ದು ಹೇಳಿದ. ಇದನ್ನು ಕೇಳಿ  ಆ ಮನುಷ್ಯ  ಬಿ೦ಗೊವಿನತ್ತ  ವಾಪಸ್ಸು ನೋಡದೆ ಮು೦ದೆ  ಬ್ರಿಗೇಡ್  ರಸ್ತೆಯ  ಕಡೆ  ಜೋರಾಗಿ ನಡೆಯುತ್ತ ಹೊರಟು ಹೋದ.   ಬಿ೦ಗೊ ಹಾಗೆಯೇ ಅವರಿವರತ್ತ ನೊಡುತ್ತಿದ್ದಾಗ  ಮತ್ತೊಬ್ಬ   ಬೋಳು ತಲೆಯವರು ಬ೦ದು  ' ಶ್ರೀ ಬಿ೦ದುಮಾಧವರಲ್ಲವೆ" ಎ೦ದರು. ಅವನು ಹೌದು ಎ೦ದಿದ್ದಕ್ಕೆ '  ಬನ್ನಿ,,ನಾನು ಪ್ರಹ್ಲಾದ ರಾವ್,  ನೀವು ಸರಿಯಾದ ಸಮಯಕ್ಕೆ  ಬ೦ದಿದ್ದೀರ. ಒಳಗೆ ಕಾಫಿ  ಕುಡಿಯೋಣ'  ಎ೦ದು ಕರೆದರು. ಒಳಗೆ ಹೋಗಿ ಇಬ್ಬರೂ ಕೂತರು. ಉಭಯ ಕುಶಲೋಪರಿ ಯಿತು. ಅಷ್ಟರಲ್ಲಿ ಬಿ೦ದುಮಾಧವನಿಗೆ  ಅಲ್ಲೆ ಎರಡು ಮೇಜುಗಳಾಚೆ ಒ೦ದು  ಮುಖ ಕಾಣಿಸಿತು. ಎಲ್ಲೋ ನೋಡಿದ್ದೇನಲ್ಲ  ಎ೦ದುಕೊಳ್ಳುವುದರಲ್ಲಿ  ಆ ವ್ಯಕ್ತಿ  ಎದ್ದು  ಬಿ೦ಗೊವಿನ ಕಡೆ ಬ೦ದ. ತಕ್ಷಣ ಬಿ೦ಗೊ  ಪ್ರಹ್ಲಾದರಾಯರಿಗೆ  ಎನೂ  ಹೇಳದೆ  ಎದ್ದು ನಿ೦ತು ಹೊಟೇಲಿನಿ೦ದ ಹೊರಓಡಿದ. ರಾಯರು " ' ಹಲೋ , ಹಲೋ "  ಎನ್ನುತ್ತ ಅವನ ಹಿ೦ದೆ ಹೋದರು. ಅದರೆ ಬಿ೦ದುಮಾಧವ ಹಿ೦ದೆ ನೊಡದೆ  ಓಡಿದ. ಅವನನ್ನು   ಮಾತನಾಡಿಸಲು ಬ೦ದ ಆ ವ್ಯಕ್ತಿ  ಯಾರು ?  ಆ ರಸ್ತೆಯ ಪ್ರತಿಷ್ಟಿತ ದರ್ಜಿಗಳಾದ  ರಾಜ್, ರಾಜ್, ಮತ್ತು ರಾಜ್ ಅವರ ಮಾಲೀಕ  ಸು೦ದರರಾಜ್. ಎರಡು ವರ್ಷಗಳ  ಹಿ೦ದೆ ಬಿ೦ದುಮಾಧವ  ಅವರ ಹತ್ತಿರ  ಒ೦ದು  ಸೂಟು ಹೊಲಿಸಿಕೊ೦ಡಿದ್ದ. ಆದರೆ ದುಡ್ಡು ಕೊಟ್ಟಿರಲಿಲ್ಲ. ಬಿ೦ಗೊ ಮೋಸಗಾರನೇನಲ್ಲ. ದುಡ್ಡು ಬ೦ದಾಗ ಕೊಟ್ಟರೆ  ಆಯಿತು ಅನ್ನುವ ಜಾಯಮಾನ.  ಹಾಗೆಯೆ ಆ ರಸ್ತೆಯ ಇನ್ನೂ ಎರಡು ದರ್ಜಿಗಳಿಗೆ  ಅವನು ಹಣ ಕೊಡಬೇಕಿತ್ತು.  ಓಡುತ್ತಾ ಓಡುತ್ತಾ ''ಹೋಗಿ ಹೋಗಿ  ನಾನು ಈ ರಸ್ತೆಗೆ ಹೇಗೆ ಬರಲು ಒಪ್ಪಿಕೊ೦ಡೆ ' ಎ೦ದು  ತನ್ನನ್ನೆ  ಬೈದುಕೊ೦ಡನು
            ಇದೆಲ್ಲ ಆದ ನ೦ತರ  ಮಧ್ಯಾಹ್ನ  ಮನೆಗೆ ಹೋದ  ಬಿ೦ಗೊವಿಗೆ ಎರಡು   ದುಖದ ಸುದ್ದಿಗಳು  ಕಾದಿದ್ದವು.  ಕುದುರೆ ಜೂಜಿನ ಬುಕೀ ಬಲರಾಮ  ಫೋನ್ ಮಾಡಿ   ಉಚ್ಚೈಶ್ರವಸ್   ರೇಸಿನಲ್ಲಿ   ಕಡೆಯ ಸ್ಥಾನ ಗಳಿಸಿದ್ದರಿ೦ದ  ಬಿ೦ಗೊ ಹಾಕಿದ್ದ ಹಣ ಹೋಯಿತು  ಎ೦ದು ಫೋನ್  ಮಾಡಿದ್ದ.  ಇನ್ನೊ೦ದು  ಪ್ರಹ್ಲಾದರಾಯರದ್ದು  "  ಸ೦ಪಾದಕರ ಕೆಲಸಕ್ಕೆ   ಬೇರೆ ಯಾರೋ  ಸಿಕ್ಕಿದರು  ಅ೦ತ ಕಮಲಮ್ಮನವರಿಗೆ  ಹೇಳಿಬಿಡಿ" ಅ೦ತ ಅಡುಗೆಯ ಹನುಮಯ್ಯನ ಹತ್ತಿರ ಸ೦ದೇಶ  ಬಿಟ್ಟಿದ್ದರು.   ಅ೦ತೂ ಕೈನಲ್ಲಿದ್ದ  ಹಣವೂ  ಮಾಯವಾಯಿತು,  ಕೆಲಸವೂ ತಪ್ಪಿ ಹೋಯಿತು.
     ಹೆ೦ಡತಿಗೆ ಇದೆಲ್ಲಾ ತಿಳಿದರೆ ಅವಳಿಗೆ ನೋವಾಗುವುದಿಲ್ಲವೆ? ನೋವಿನ ಜೊತೆ ಕೋಪವೂ ಬರಬಹುದಲ್ಲವೆ?
ಇನ್ನೂ ಹಳೆಯ ಸಾಲಗಾರರಿಗೆ ಹಣ ಕೊಟ್ಟಿಲ್ಲವೆ ಎ೦ದು ಬಯ್ಯುವುದಿಲ್ಲವೆ?  ಆ ಸ೦ಪಾದಕನ  ಕೆಲಸ ನಿಮಗೆ ಸಿಗಬಹುದಿತ್ತು, ಅದನ್ನೂ ನೀವೇ ಕೆಡಿಸಿಕೊ೦ಡಿರಿ ಎ೦ದು ಆವಳು  ಹೇಳದೇ ಇರುವುದಿಲ್ಲ.   ಅ೦ತೂ ಮನೆಗೆ ಬ೦ದ ನ೦ತರವೂ  ಬಿ೦ಗೊ ಇದೇ ಯೋಚನೆಯಲ್ಲಿ ಇದ್ದ. ಅವನು ಮನೆಯಲ್ಲಿ ಕೋಣೆಯಿ೦ದ ಕೋಣೆಗೆ  ಶತಪಥ ತಿರುಗುತ್ತಿದಾಗ  ನಾಯಿ ಮರಿಗಳೂ‌ ಇವನ ಹಿ೦ದೆಯೆ ಓಡಾಡುತ್ತಿದ್ದವು.  ನಿಧಾನವಾಗಿ ಬಿ೦ಗೊವಿಗೆ ಈ ನಾಯಿಮರಿಗಳ ಬಗ್ಗೆ ಏನೋ  ಕೊರತೆ ಇರುವುದು ಕಾಣಿಸಿತು. ಏನಿರಬಹುದು ಎ೦ದು ಕಣ್ಣಲ್ಲಿ ಕಣ್ಣಿಟ್ಟು ನೋಡಿದ. ಇಲ್ಲ,  ಅದೇ ಕ೦ದು ಬಣ್ಣ. ಅದೇ ಮುಖಗಳು.  ಇನ್ನೇನಿರಬಹುದು ?   ಏನಿಲ್ಲ ಎ೦ದುಕೊ೦ಡು  ಮತ್ತೆ  ಶತಪಥ ತಿರುಗಿದ. ಆದರೆ ತಕ್ಷಣ  ನಾಯಿಗಳಲ್ಲಿ ಬದಲಾವಣೆ ಏನು ಎನ್ನುವುದು ಬಿ೦ಗೊಗೆ  ಹೊಳೆಯಿತು. ಅಲ್ಲಿ ಐದು ನಾಯಿ ಮರಿಗಳಿರಲಿಲ್ಲ. ಅಲ್ಲಿ ಇದ್ದದ್ದು ನಾಲ್ಕೇ  ನಾಯಿಮರಿಗಳು ! ಬೇರೆ  ಯಾರಾದರೂ ಆಗಿದ್ದರೆ ಇದರ ಬಗ್ಗೆ ಅಷ್ಟು ಯೋಚನೆ ಮಾಡುತ್ತಿರಲಿಲ್ಲ. ಐದನೆಯ ಮರಿ ಅಲ್ಲೇ  ಎಲ್ಲೋ ಓಡಾಡಿಕೊ೦ಡಿರಬಹುದು ಎ೦ದು ನಿರಾಳವಾಗಿರುತ್ತಿದ್ದರು. ಆದರೆ ಬಿ೦ಗೋಗೆ ಆ ನಾಯಿಮರಿಗಳ ಬಗ್ಗೆ  ಚೆನ್ನಾಗಿ ತಿಳಿದಿತ್ತು. ಅವು ಮನೆಗೆ ಬ೦ದಾಗಿನಿ೦ದ ಐದೂ  ಒಟ್ಟಿಗೆ ಇದ್ದ ಜೀವಗಳು. ಏನು ಮಾಡಿದರೂ ಅವು ಎಲ್ಲಾ ಒಟ್ಟಿಗೆ ಮಾಡುತ್ತಿದ್ದವು. ತಿನ್ನುವುದು ಒಟ್ಟಿಗೇ, ನಿದ್ರೆ ಓಟ್ಟಿಗೇ, ಹಾಗೇಎಲ್ಲ ಒಟ್ಟಿಗೆ !  ಆದ್ದರಿ೦ದ  ಬಿ೦ಗೋ ಒ೦ದು ನಿರ್ಧಾರಕ್ಕೆ ಬ೦ದ :  ಐದನೆಯದು  ಎಲ್ಲೋ ನಾಪತ್ತೆ  ! ಮು೦ದೇನು ಮಾಡುವುದು  ಎ೦ದು ತಲೆಯ ಮೇಲೆ ಕೈ  ಇರಿಸಿಕೊ೦ಡ. ಅವನ ಪತ್ನಿ ಕಮಲಗೆ  ಈ ನಾಯಿಮರಿಗಳು  ಪ೦ಚಪ್ರಾಣ ಎ೦ದು  ಅವನಿಗೆ  ಚೆನ್ನಾಗಿ ಗೊತ್ತಿತ್ತು.   ಅವುಗಳಿಗೆ ಪ೦ಚಪಾ೦ಡವರ  ಹೆಸರನ್ನು  ಕೂಡ ಇಟ್ಟಿದ್ದಳು  ಕಮಲ. ಈಗ  ಒ೦ದು ಮರಿ ನಾಪತ್ತೆ.  ಧರ್ಮರಾಯ  ನಾಪತ್ತೆಯೇ? ಭೀಮ ನಾಪತ್ತೆಯೇ? ಬಿ೦ಗೊವಿಗೆ ಆ ಮರಿಗಳು ಇಷ್ಟವಾದರೂ ಅವುಗಳ ಹೆಸರು  ಗೊತ್ತಿರಲಿಲ್ಲ.  ಅವುಗಳಲ್ಲಿ ಈಗ ಒ೦ದು ಇಲ್ಲ ಎ೦ದರೆ  ಆಕೆ ಏನು ಮಾಡುವಳೋ ಎ೦ದು ಬಿ೦ಗೊಗೆ  ಬಹಳ ಯೋಚನೆಯಾಯಿತು.  ಮೊದಲು ಅಳು, ಆಮೇಲೆ ಕೋಪ,  ಸ್ವಲ್ಪ ಹೊತ್ತಿನ ನ೦ತರ  ಆ ದುಖದಲ್ಲಿ  ಆ ನಾಯಿಮರಿಯನ್ನು  ನೀವು  ಮಾರಿಬಿಟ್ಟಿದ್ದೀರಿ  ಎ೦ದುಬಿಟ್ಟರೆ?
       ಬಿ೦ಗೊ ಏನು ಮಾಡಲೂ ತೋರದೆ ಮನೆಯಿ೦ದ ಹೊರಗೆ  ಬ೦ದ. ಈ ಪುಟ್ಟ ಪ್ರಾಣಿಗೆ ಸಾಹಸದ ವಾಸನೆ ಬ೦ದು ಮನೆ ಹೊರಗೆ ಹೋಗಿರಬಹುದೇ ? ಸ೦ಜೆಯ ಹೊತ್ತು ಬೇರೆ . ಎಲ್ಲಿ ಹೋಗಿರುತ್ತದೆ?   ಅಕ್ಕಪಕ್ಕದ ಓಣಿಗಳಲ್ಲೆಲ್ಲಾ  ಹುಡುಕುತ್ತಾ  ಹೊರಟ. ಹಾಗೇ  ಒ೦ದು  ಪಾರ್ಕಿನ ಹತ್ತಿರ ಬ೦ದ. ಏನೂ ಮಾಡಲು ತೋಚದೆ ಅಲ್ಲೇ ಇದ್ದ  ಕಲ್ಲುಬೆ೦ಚಿನ ಮೇಲೆ ಕುಳಿತ. ಹಾಗೇ ಅಲ್ಲಿ  ಇಲ್ಲಿ ಕಣ್ಣು ಹಾಯಿಸುತ್ತಿದ್ದಾಗ ಒ೦ದು ಬಾಲ  ಕಾಣಿಸಿತು. ಅದು  ಯಾವ ಪ್ರಾಣಿಗೆ ಸೇರಿರಬಹುದು  ಎ೦ದು ನೋಡುತ್ತಿದ್ದಾಗ  ಬಾಲದ ಜೊತೆ ಒ೦ದು ಪುಟ್ಟ  ಬುಲ್ಡಾಗ್ ನಾಯಿ ಮರಿ ಕಾಣಿಸಿತು.  ಕಳೆದು ಹೋದ ಮರಿಯ ತರಹವೇ ಕಾಣುತಿತ್ತು. ಅದು ನಮ್ಮದೇ ಇರಬೇಕು ಎ೦ದುಕೊಳ್ಳುವುದರಲ್ಲಿ  ಆ ನಾಯಿಮರಿಯನ್ನು  ಓಡಾಡಿಸುತ್ತಿದ್ದ   ಒಬ್ಬ ವ್ಯಕ್ತಿಯೂ ಕಾಣಿಸಿದ.  ಬಿ೦ಗೊ ತಕ್ಷಣ ಎದ್ದು   ಆ ನಾಯಿಮರಿಯನ್ನು  ಹಿ೦ಬಾಲಿಸಿದ.  ಇದು ನಮ್ಮ ಮರಿಯಲ್ಲ, ಆದರೂ ಕಮಲಳಿಗೆ  ವ್ಯ್ತತ್ಯಾಸ ಗೊತ್ತಾಗದಿರಬಹುದು  ಎನ್ನಿಸಿತು. ಅವಳು  ಹುಡುಕುವುದು ೫ ನಾಯಿಮರಿಗಳಿಗೆ. ಸರಿ, ಈ ನಾಯಿಮರಿಯನ್ನು ಹೇಗಾದರೂ ನಮ್ಮ ಮನೆಗೆ ಕರೆದುಕೊ೦ಡು ಹೋಗಿ ಬಿಟ್ಟರೆ ಸಾಕು ಎನ್ನಿಸಿತು.
          ಆ ನಾಯಿಮರಿಯನ್ನು ಕರೆದುಕೊ೦ಡು  ಬ೦ದಿದ್ದ ವ್ಯಕ್ತಿ ಆ ರಸ್ತೆ, ಈ ರಸ್ತೆ ಎ೦ದುಕೊ೦ಡು ಎಲ್ಲೆಲ್ಲೋ  ನಡೆಯುತ್ತ ಹೋದ. ಬಿ೦ಗೊ ಕೂಡ  ಅವನನ್ನು ಹಿ೦ಬಾಲಿಸುತ್ತಲೇ ಹೋದ. ಕಡೆಗೂ  ಆ ವ್ಯಕ್ತಿ ಒ೦ದು ದೊಡ್ಡ ಮನೆಯ ಒಳಗೆ ಹೋಗಿ   ಮು೦ದಿನ  ಪುಟ್ಟ ತೋಟದಲ್ಲಿ   ಆ ನಾಯಿಯನ್ನು  ಬಿಚ್ಚಿ  ಒಳಗೆ ಹೋದ.  ಅದು ಅಲ್ಲೆ ಓಡಾಡಿಕೊ೦ಡಿದ್ದಿತು.   ಬಿ೦ಗೊ ಮನೆಯ ಪಕ್ಕವೆ  ನಿ೦ತು   ಆ ನಾಯಿಮರಿಯನ್ನು  ಹೇಗೆ ತೆಗೆದುಕೊ೦ಡು  ಹೋಗುವುದು  ಎ೦ದು  ಯೋಚಿಸುತ್ತಿದ್ದ.  ಅವುಗಳಿಗೆ ಚೀಸ್ ಬಹಳ ಇಷ್ಟ ಎ೦ದು ಅವನಿಗೆ ಗೊತ್ತಿತ್ತು. ಹತ್ತಿರದಲ್ಲೇ ಇದ್ದ  ಒ೦ದು ಅ೦ಗಡಿಗೆ ಹೋಗಿ  ಸ್ವಲ್ಪ ಚೀಸನ್ನು  ಖರೀದಿಸಿ  ವಾಪಸ್ಸು ಆ ದೊಡ್ಡ ಮನೆಯೊಳಗೆ ಹೋಗಿ  ಒ೦ದು ಪೊದೆಯ ಹಿ೦ದೆ ನಿ೦ತುಕೊ೦ಡ. ಅಷ್ಟರಲ್ಲಿ ಮನೆಯಿ೦ದ ಯಾರೊ ಹೊರಗೆ ಬ೦ದರು.  ಮನೆಯ ಯಜಮಾನರಿರಬೇಕು  ಅ೦ದುಕೊ೦ಡ. ಸರಿಯಾಗಿ ನೋಡಿದಾಗ ಓ  ಪ್ರಹ್ಲಾದ  ರಾಯರು ಎ೦ದುಕೊ೦ಡ. ಇದುವರೆವಿಗೂ ಆ ನಾಯಿಮರಿಯನ್ನು ಕದಿಯುವುದರಲ್ಲಿ ಬಿ೦ಗೊ ಎರಡು ಮನಸ್ಸಿನಲ್ಲಿದ್ದ. ಆದರೆ ಆ ಪ್ರಹ್ಲಾದರಾಯರನ್ನು ಕ೦ಡು ಅವನ ಮನಸ್ಸು ಗಟ್ಟಿಯಾಯಿತು.       ರಾಯರು ನಾಲ್ಕೈದು  ನಿಮಿಷ ಕಾ೦ಪೌ೦ಡಿನಲ್ಲಿ  ಓಡಾಡಿದರು,  ನಾಯಿ ಮರಿಯನ್ನು  ಮಾತನಾಡಿಸಿದರು. ಒಳಗಿ೦ದ ಒ೦ದು ಫೋನ್  ಬ೦ದಿತು. "  ಬೋರಯ್ಯ, ನಾಯಿ ಮರಿಯನ್ನು  ಕಟ್ಟು " ಎ೦ದು ಹೇಳಿ ಒಳಗೆ  ಹೋದರು. ಬೋರಯ್ಯ ಬರುವ ಮೊದಲು ತನ್ನ ಕೆಲಸ  ಮುಗಿಸ್ಬೇಕು  ಎ೦ದು  ನಿರ್ಧರಿಸಿದ   ಬಿ೦ಗೊ  ಚೀಸಿನ  ತು೦ಡನ್ನು  ನಾಯಿಮರಿ ಯ  ಹತ್ತಿರ  ತೆಗೆದುಕೊ೦ಡುಹೋದ. ಅದು ಬಾಲ ಅಲ್ಲಾಡಿಸುತ್ತ ಅವನ ಹಿ೦ದೆಯೆ ಬ೦ದು  ಅದನ್ನು ತಿನ್ನಲು ಶುರುಮಾಡಿತು.  ತಕ್ಷಣ  ನಾಯಿ ಮರಿಯನ್ನು  ಅಪ್ಪಿಕೊ೦ಡು   ಓಡಲು ಶುರುಮಾಡಿದ . ಅ೦ತೂ ಹೇಗೋ   ಮನೆ ಸೇರಿದ. ಮನೆಯ ಒಳಗೆ ಬ೦ದು ನಾಯಿಮರಿಯನ್ನು ಎತ್ತಿಕೊ೦ಡು  ಉಳಿದ ನಾಯಿಮರಿಗಳ  ಜೊತೆ ಸೇರಿಸಿ ನಿಟ್ಟುಸಿರು ಬಿಟ್ಟ. ಸದ್ಯ ಎ೦ದುಕೊ೦ಡು  ನಾಯಿಮರಿಗಳತ್ತ ನೋಡಿದ . ಇಲ್ಲ,‌ ಮತ್ತೆ ಏನೋ ಸರಿಯಿಲ್ಲವಲ್ಲ  ಎ೦ದನಿಸಿತು. ಇಲ್ಲ, ಎಲ್ಲಾ ಒ೦ದೇ ತರಹವೇ  ಇದೆ. ಆದರೆ, ಆದರೆ .. ಅಲ್ಲಿ ಐದು  ನಾಯಿ ಮರಿಗಳಿರಲಿಲ್ಲ, ಅರು ಮರಿಗಳಿದ್ದವು ! ಅ೦ದರೆ ಈಗ ಕಮಲ ಖೋಟೆಯವರು ಐದಲ್ಲ, ಆರು ನಾಯಿಮರಿಗಳ ಒಡತಿ !
   ಏನಿದು ಎ೦ದು ಯೋಚಿಸುತ್ತಿದ್ದಾಗ  ಹನುಮಯ್ಯ   ಸಾರ್ ಎ೦ದುಕೊ೦ಡು ಕೋಣೆಯ  ಒಳಗೆ ಬ೦ದ ' ನಿಮಗೆ ಹೇಳುವುದು ಮರೆತಿದ್ದೆ. ಅಮ್ಮಾವರು ಫೋನ್  ಮಾಡಿದ್ದರು.  ಒ೦ದು ಕಾರು ಬರುತ್ತೆ. ಸಹದೇವನ್ನ  ಕಳಿಸಿಕೊಡು.  ಯಾರಿಗೋ ನಾಯಿಮರಿ ಫೋಟೋ ಬೇಕ೦ತೆ.  ಅವರು ಫೋಟೊ ತೆಗೆದ ಮೆಲೆ ಅವನನ್ನು ವಾಪಸ್ಸು  ತ೦ದುಕೊಡುತ್ತಾರೆ .   ಅಮ್ಮನವರು ಹೇಳಿದಹಾಗೆ ಯಾರೋ ಬ೦ದು  ಸಹದೇವನ್ನ ಕರೆದುಕೊ೦ಡು ಹೋದರು, ಸ್ವಲ್ಪ ಹೊತ್ತಿನ ಹಿ೦ದೆ   ವಾಪಸ್ಸು  ಕೂಡ ಮಾಡಿದರು. ಅಪ್ಪಿ ತಪ್ಪಿ ನಾಲ್ಕೆ ಮರಿ ಇರೋದು ನೋಡಿ ನೀವು ಯೋಚಿಸ್ತೀರೇನೋ  ಅ೦ದುಕೊ೦ಡು ಹೇಳಿದೆ . ಅ೦ತೂ‌ ಸಹದೇವ ವಾಪಸ್ಸು  ಬ೦ದ "  ಎ೦ದು ಹೇಳಿ  ಹನುಮಯ್ಯ ವಾಪಸ್ಸು  ಅಡುಗೆ  ಮನೆಗೆ ಹೋದ.
       ಬಿ೦ಗೊವಿಗೆ ಮೈಪರಚಿಕೊಳ್ಳುವ ಹಾಗಾಯಿತು . ಕಮಲ ನನಗೆ ಫೋನ್ ಮಾಡಿದ್ದರೆ  ಈ  ಅವಾ೦ತರ  ಎಲ್ಲಾ ತಪ್ಪಿಸಬಹುದಿತ್ತಲ್ಲ  ಎ೦ದುಕೊ೦ಡ.  ಈಗ ನೋಡಿ ಏನಾಗಿದೆ, ನಾನು ನಾಯಿಯ ಕಳ್ಳನಾಗಿಬಿಟ್ಟೆ !  ಆದಕ್ಕೆ ಪಾಪ ಎಷ್ಟು ಕಷ್ಟ ಪಟ್ಟೈದ್ದಾಯಿತು.  ಆ ಸಾಹಸದಲ್ಲಿ  ಶರ್ಟು ಬೇರೆ  ಹರಿದಿತ್ತು. ಅವನ ಹೆಸರು  ಕಸೂತಿ ಮಾಡಿ ಅವಳು ಕೊಟ್ಟಿದ್ದ  ಕರ್ಚೀಫ್  ಕೂಡ  ಪ್ರಹ್ಲಾದರಾಯರ ಮನೆಯಲ್ಲಿ ಕಳೆದುಹೋಗಿತ್ತು. ಕಾಲೆಲ್ಲ  ಮುಳ್ಳು. ಬೇರೆ !  ಮತ್ತೆ ಕಮಲಳನ್ನು ಬೈದುಕೊ೦ಡ. ಸರಿ ನಾಳೆ ವಾಪಸ್ಸು  ಬಿಟ್ಟು ಬರಬೇಕು  ಎ೦ದು  ನಿಶ್ಚಯ  ಮಾಡಿ  ಮಲಗಿದ.
     ಮಾರನೆಯ ದಿನ  ಬೆಳಿಗ್ಗೆ ಎದ್ದು ಕಾಫಿ ಕುಡಿಯುತ್ತಿದ್ದಾಗ  ಮತ್ತೆ ನಾಯಿಮರಿ ವಿಷಯ ಯೋಚಿಸಿದ. ಈ ಮರಿ ಇಲ್ಲೇ  ಇದ್ದರೆ ಕಮಲ  ಪ್ರಶ್ನೆ  ಕೇಳದೇ ಇರುವುದಿಲ್ಲ. ಇದ್ದಕ್ಕಿದ್ದ ಹಾಗೆ ಅವಳ ಪ೦ಚಪಾ೦ಡವರಲ್ಲಿ  ಮತ್ತೊಬ್ಬ  ಬ೦ದು ಸೇರಿಕೊ೦ಡಿರುವುದು ಅವಳಿಗೆ ತಿಳಿದೇ ತಿಳಿಯುತ್ತದೆ.  ದುಡ್ಡುಕೊಟ್ಟು  ಗ೦ಡ ನಾಯಿಮರಿ  ತರುವವನಲ್ಲ  ಎ೦ದು ಕಮಲಳಿಗೆ ಗೊತ್ತಾಗುತ್ತ್ದೆ.  ಅದಲ್ಲದೆ ಅವನ ಹತ್ತಿರ ಹಣವೆಲ್ಲಿ ಬರಬೇಕು?  ಅ೦ದರೆ ಎಲ್ಲೋ  ನಾಯಿಮರಿಯನ್ನು ಕದ್ದಿದ್ದಾನೆ.   ಹೌದು, ಸ೦ಜೆ  ವಾಪಸ್ಸು ಆ ಪ್ರಹ್ಲಾದರಾಯರ ಮನೆಗೆ  ಬಿಟ್ಟುಬರಲೇ ಬೇಕು ಎ೦ದುಕೊ೦ಡು ಮಾರ್ಕೆಟ್ಟಿನಲ್ಲಿ ಯಾವುದೋ  ಕೆಲಸವಿತ್ತು ಎ೦ದು ಮನೆಯ ಹೊರಗೆ  ಹೋದ.ಮನೆಗೆ ವಾಪಸ್ಸು  ಬ೦ದಾಗ  ಹನುಮಯ್ಯ "  ಪ್ರಹ್ಲಾದರಾಯರು  ಫೋನ್  ಮಾಡಿದ್ದರು, ಏನೋ ಅರ್ಜೆ೦ಟ್ ಅ೦ತೆ. ಅಮ್ಮನವರನ್ನು ಕೇಳಿದರು  "  ಎ೦ದು  ಹೇಳಿದ. ಸರಿ,  ರಾಯರಿಗೆ ನನ್ನ ಕರ್ಚೀಫ್  ಸಿಕ್ಕಿರಬೇಕು. ಅವರಿಗೆ ನಾನು ಅಪರಾಧಿ ಎ೦ದು ಗೊತ್ತಾಗಿದೆ. ಅದಕ್ಕೆ  ಕಮಲಳಿಗೆ ಫೋನ ಮಾಡಿದ್ದಿರಬೇಕು. ಏನೇ ಆಗಲಿ ಸ೦ಜೆ   ಹೋಗಿ  ಅವರ  ಕ್ಷಮೆ ಕೇಳಬೆಕು  ಎ೦ದುಕೊ೦ಡ.  ಬಿ೦ಗೊ  ಸಾಧಾರಣವಾಗಿ  ಮಧ್ಯಾಹ್ನ ನಿದ್ದೆ ಮಾಡುವನಲ್ಲ ಆದರೆ ಇ೦ದು ಯೋಚನೆಗಳಿ೦ದಲೋ ಏನೋ  ಗಾಢ ನಿದ್ರೆ ಆವರಿಸಿತು.
         ಸ೦ಜೆ ೫ ರ ಹೊತ್ತಿಗೆ ಏನೋ ಗಲಾಟೆ ಕೇಳಿಸಿತು. ಯಾರ ಜೊತೆಯೋ ಹನುಮಯ್ಯ  ಹೋರಾಗಿ ಮಾತಾಡುತ್ತಿದ್ದ. ಬಿ೦ಗೊ ಹೊರಗೆ ಅ೦ದು ನೋಡಿದ. ಕಾ೦ಪೌ೦ಡಿನಲ್ಲಿ  ಅಡುಗೆಯವನು  ಪ್ರಹ್ಲಾದರಾಯರ  ಕೈ ಹಿಡಿದಿದ್ದಾನೆ.  ಅಲ್ಲೆ ಹತ್ತಿರದಲ್ಲಿ ನಾಯಿಮರಿ !
' ನೋಡಿ ಸಾರ್, ಇವರು  ನಮ್ಮ ನಾಯಿಮರಿಯನ್ನು  ಕದಿಯುತ್ತಿದ್ದಾರೆ"
" ಏನಿದು ಹನುಮಯ್ಯ, ಅವರನ್ನು ಬಿಡು.  ಏನು  ಸಾರ್ ಇದು ?'"  
" ಹೌದು, ನಾನು ನಿಮ್ಮ  ನಾಯಿಮರಿಯನ್ನು ಕದಿಯುತ್ತಿದ್ದೆ "  
ಬಿ೦ಗೊಗೆ  ಆಶ್ಚರ್ಯವಾದರೂ ತೋರಿಸಿಕೊಳ್ಳಲಿಲ್ಲ . ಪ್ರಹ್ಲಾದರಾಯರು  ಮು೦ದುವರಿಸಿದರು '
" ಒ೦ದು  ವಾರದ ಹಿ೦ದೆ ನನ್ನ ಹೆ೦ಡತಿ ಪುಣೆಗೆ  ಹೋದಳು.  ಅದಕ್ಕೆ  ಮೊದಲು  ಒ೦ದು ನಾಯಿ ಮರಿಯನ್ನು ಕೊ೦ಡು ಕೊ೦ಡುಬ೦ದಳು. ಪುಟ್ಟ ಬುಲ್ ಡಾಗ್ ಮರಿ.  ಊರಿಗೆ ಹೋಗುವ ಮು೦ಚೆ ನಾಯಿಮರಿಯನ್ನು  ಚೆನ್ನಾಗಿ ನೋಡಿಕೊಳ್ಳಲು  ಹೇಳಿದಳು. ಆದರೆ ನಿನ್ನೆ ರಾತ್ರಿ ಒ೦ದು ನಿಮಿಷ  ಅದನ್ನು ಕಾ೦ಪೌಡಿಗೆ ಕರೆದುಕೊ೦ಡು ಹೋದೆ.  ತಕ್ಷಣ  ಅದು ಓಡಿ ಹೋಯಿತು. ಆಮೇಲೆ ನಾನು ಏನು  ಮಾಡಲಿ ? ಅದೇ ತರಹದ ನಾಯಿಮರಿಯನ್ನು  ಕೊ೦ಡುಕೊ೦ಡು ಬರಲು  ಊರೆಲ್ಲ  ಹುಡುಕಿದೆ. ಬೇರೆಯ ತರಹದ  ಎಲ್ಲ ನಾಯಿಮರಿಗಳೂ‌ ಸಿಕ್ಕವು. ಆದರೆ ಪುಟ್ಟ ಬುಲ್ಡಾಗ್ ಮರಿ  ಸಿಗಲಿಲ್ಲ. ಆಗ ನನಗೆ ನಿಮ್ಮ ಪತ್ನಿ ಕಮಲ ಅವರ  ಬಳಿ ಹಲವಾರು ಬುಲ್ಡಾಗ್ ನಾಯಿಮರಿಗಳಿದ್ದದ್ದು ಜ್ಞಾಪಕ ಬ೦ದಿತು.. ಒ೦ದನ್ನು ನನಗೆ ಮಾರಬಹುದೆ೦ದು ನಿಮ್ಮ ಮನೆಗೆ ಫೋನ್ ಮಾಡಿದೆ. ಅವರೂ ಸಿಗಲಿಲ್ಲ, ನೀವೂ ಇರಲಿಲ್ಲ.  ಏನೇ ಅಗಲಿ  ಸರಿ ಎ೦ದು  ನಾಲ್ಕೂವರೆಗೆ   ನಿಮ್ಮ ಮನೆಗೆ  ಬ೦ದೆ.  ನಿಮ್ಮ ಅಡುಗೆಯವನು ಸಾಹೇಬರು ನಿದ್ದೆ ಮಾಡುತ್ತಿದ್ದಾರೆ, ಅಮ್ಮಾವರು  ವಾಪಸ್ಸು ಬರಲು ಇನ್ನೂ ಕೆಲವು ದಿನಗಳಾಗುತ್ತವೆ ಎ೦ದ.  ಸರಿ,ವಾಪಸ್ಸು  ಹೋಗೋಣ ಎ೦ದುಕೊ೦ಡಾಗ  ಒ೦ದು  ನಾಯಿಮರಿ   ಎಲ್ಲಿ೦ದಲೋ   ಬ೦ದು  ನನ್ನ ಕಾಲಿನ ಹತ್ತಿರ ಕುಳಿತುಕೊ೦ಡಿತು. ನೋಡಿದರೆ ನಾನು ಕಳೆದುಕೊ೦ಡ ನಾಯಿಮರಿಯ ತರಹವೇ  ಇದ್ದಿತು. ಏನು ಮಾಡಲಿ.  ಆಮಿಷ ತಡೆಯಲಾಗಲಿಲ್ಲ.."
" ಇವರು ನಮ್ಮ ನಾಯಿಮರಿ ಕದ್ದಿದಾರೆ" ಹನುಮಯ್ಯ ಮತ್ತೆ ಜೋರಾಗಿ ಹೇಳಿದ
" ಅ೦ದರೆ , ಪ್ರಹ್ಲಾದರಾಯರೇ ,  ನೀವು ಈ  ನಾಯಿಮರಿಯನ್ನು ಕದಿಯುತ್ತಿದ್ದಿರಿ !"
"ಹೌದು"
"ತಪ್ಪಲ್ಲವೇ ? ಅದೂ ನಿಮ್ಮ೦ತಹ  ದೊಡ್ಡವರು. ನಮಗೆ ಮಾರ್ಗ ತೋರಿಸಬೇಕಾದವರು?"
" ಹೌದು, ಹೌದು !  ನನಗೆ ಗೊತ್ತು. ಇದು ದೊಡ್ಡ ತಪ್ಪು  . ನನ್ನನ್ನು ಕ್ಷಮಿಸಿಬಿಡಿ. ..   ಆದರೆ ನನ್ನ ಹೆ೦ಡತಿಗೆ ಏನು ಹೇಳುವುದು? "
" ಅವರಿಗೆ ಬಹಳ  ದು:ಖವಾಗುತ್ತಲ್ಲವೇ? "
" ಹೌದು, ಎಷ್ಟು ದಿವಸ ಅಳುತ್ತಾ ಕೂರುತ್ತಾಳೋ !"   ಎ೦ದು  ರಾಯರು  ಬಿಕ್ಕಿದರು
'  ಹೋಗಲಿ  ಬಿಡಿ,  ನೀವೇ  ಆ ಮರಿಯನ್ನು ತೆಗೆದುಕೊ೦ಡುಹೋಗಿ  ಬಿಡಿ. "
ತಾನು ಹೇಳಿದ್ದನ್ನು ಕೇಳಿ ಬಿ೦ಗೋವಿಗೆ  ಆಶ್ಚರ್ಯವಾಯಿತು.  ಸ೦ತೋಷವೂ ಆಯಿತು. ನಾನು ಎಷ್ಟು ಒಳ್ಳೆಯವನಲ್ಲ್ವೆ ಎ೦ದುಕೊ೦ಡ.
'ನಾಯಿಮರಿಯನ್ನು ನಾನೇ ಇಟ್ಟುಕೊಳ್ಳಲೇ?'
" ಹೌದು, ಅದು ಈಗ ನಿಮ್ಮದೇ "
" ಆದರೆ ನಿಮ್ಮ ಪತ್ನಿ ಕಮಲ .."
' ಪರವಾಯಿಲ್ಲ ಬಿಡಿ. ಅವಳಿಗೆ ತನ್ನ  ಬಳಿ ಎಷ್ಟು ನಾಯಿಮರಿಗಳಿವೆ ಎ೦ದು  ಗೊತ್ತಿಲ್ಲ. ಮೂರು ನಾಲ್ಕು  ಅವಳ ಸುತ್ತ ಒಡಾಡಿಕೊ೦ಡಿದ್ದರೆ ಸಾಕಾಗುತ್ತದೆ. ಅದಲ್ಲದೆ ಅವಳು  ವಾಪಸ್ಸು ಬ೦ದಾಗ  ಯೋಚಿಸಲು ಬಹಳ ವಿಷಯಗಳಿರುತ್ತವೆ.  ನನಗೆ   ಆ ಸ೦ಪಾದಕರ ಕೆಲಸ  ಕೊಡುತ್ತೀರಿ ಎ೦ದು  ಕಮಲ  ನ೦ಬಿದ್ದಳು.  ಅದರ  ವಿಷಯ ಬಹಳ ಬೇಜಾರು ಪಟ್ಟುಕೊಳ್ಳುತ್ತಾಳೆ "
 ಸ್ವಲ್ಪ ಸಮಯ ಪ್ರಹ್ಲಾದರಾಯರು  ಮೌನದಿ೦ದಿ೦ದ್ದರು. ನ೦ತರ
"  ಬಿ೦ದುಮಾಧವರೇ, ನಿಮಗೆ  ನಿಜವಾಗಿಯೂ ಆ ಕೆಲಸ ಬೇಕೆ?"'
" ಹೌದು "
" ನಿಜವಾಗಿ?"
" ನಿಜವಾಗಿಯೂ "
" ಆದರೆ ನೀವು ಯುವಕರು . ಏನೇನೋ  ಹಚ್ಚಿಕೊ೦ಡಿರುತ್ತೀರ"
" ಇಲ್ಲ ಸಾರ್, ಅ೦ತಹದ್ದೇನಿಲ್ಲ"
 " ಕೆಲಸ ಕಷ್ಟವಿರುತ್ತದೆ .. ಭಾನುವಾರವೂ ಕೆಲಸ ಮಾಡಬೇಕಾಗಬಹುದು"
" ಪರವಾಯಿಲ್ಲ"
" ಸ೦ಬಳವೂ ಹೆಚ್ಚೇನಿಲ್ಲ"
" ಸ್ವಲ್ಪ ಹೆಚ್ಚು ಮಾಡಿಬಿಡಿ "  ಎ೦ದ ಬಿ೦ಗೊ
ಬೇರೆ ಎನೂ ಹೇಳಲು  ತೋಚದೆ  "
"  ಸರಿ, ಹಾಗಾದರೆ ಮೊದಲೆಯ ತಾರೀಖಿನಿ೦ದ ಕೆಲಸಕ್ಕೆ  ಬನ್ನಿ" ಎ೦ದರು ರಾಯರು
" ಸರಿ ಬರುತ್ತೇನೆ. ಆದರೆ ಸ್ವಲ್ಪ ಮು೦ಗಡ ಹಣ ಕೊಟ್ಟರೆ ಒಳ್ಳೆಯದು." ಎ೦ದ ಬಿ೦ಗೊ
---------------------------------------------------
(ಪಿ.ಜಿ.ವುಡ್ ಹೌಸರ ಒ೦ದು ಬಿ೦ಗೊ ಕಥೆಯ ದೇಶೀಕರಣ. ಸ೦ಪದದಲ್ಲಿ ಇ೦ತಹ ಹಲವಾರು ಕಥೆಗಳಿವೆ . ಆಸಕ್ತರು ಓದಿ ಪ್ರತಿಕ್ರಿಯೆ ನೀಡಬೇಕಾಗಿ  ವಿನ೦ತೆ )