ಬೀಜ ಮೊಳೆಯದ ಒಣಜಮೀನಿನಲ್ಲಿ ಹಣ್ಣಿನ ತೋಟ
“ಬಾ, ಬೇಗ ಬಾ, ಒಮ್ಮೆ ಈ ಮಣ್ಣು ನೋಡು” ಎಂದು ಮಡದಿ ಎರ್ರಮ್ಮನನ್ನು ಕೂಗಿ ಕರೆದ ಎನಿಮಲ ಗೋಪಾಲ. ಉರಿಬಿಸಿಲನ್ನೂ ಲೆಕ್ಕಿಸದೆ, ಇನ್ನೊಂದು ಮಾವಿನ ಗಿಡದ ಹತ್ತಿರ ಓಡಿ ಹೋಗಿ, ಅದರ ಬುಡದಿಂದ ಒಂದು ಮುಷ್ಠಿ ಒದ್ದೆ ಮಣ್ಣನ್ನೆತ್ತಿ ಎರ್ರಮ್ಮನಿಗೆ ತೋರಿಸಿದ. ಅವನ ಕಣ್ಣುಗಳಲ್ಲಿ ಅಚ್ಚರಿ, ಧ್ವನಿಯಲ್ಲಿ ರೋಮಾಂಚನ. ಯಾಕೆಂದರೆ ತಾನೊಂದು ಹಣ್ಣಿನ ತೋಟ ಮಾಡಿ, ಸಸಿಗಳಿಗೆ ನೀರು ಹಾಯಿಸುತ್ತೇನೆಂದು ಕನಸಿನಲ್ಲೂ ಕಲ್ಪಿಸಿರದ ಗೋಪಾಲನ ಬರಡು ಜಮೀನಿನಲ್ಲಿ ಇಂದು ನಳನಳಿಸುತ್ತಿವೆ ೧೬೦ ಮಾವಿನ ಸಸಿಗಳು.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿದೆ ಗೋಪಾಲನ ಹಳ್ಳಿ ಮಾದಿಗುಬ. ಮಳೆಗಾಲ ಕಂಡರಿಯದ, ಸರಕಾರದ ನೀರಾವರಿ ಯೋಜನೆಗಳ ಹೆಸರನ್ನೇ ಕೇಳದ ಹಳ್ಳಿ ಅದು. ಸರಕಾರಿ ದಾಖಲೆಗಳ ಪ್ರಕಾರ ಆ ಹಳ್ಳಿ ಮರುಭೂಮಿ. ಅಲ್ಲಿ ಇತರರು ಮಾಡಿದಂತೆ ಗೋಪಾಲನೂ ತನ್ನ ಜಮೀನನ್ನು ಪಾಳು ಬಿಟ್ಟಿದ್ದ. ಸದ್ಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾರ್ಯಕ್ರಮದಲ್ಲಿ ದಿನಗೂಲಿಯಾಗಿ ದುಡಿದು ಹೇಗೋ ದಿನ ತಳ್ಳುತ್ತಿದ್ದ. “ಈ ವರುಷ ಶುರು ಆಗ್ತಿದ್ದಂಗೆ ಒಂದು ಟನ್ ಟೊಮೆಟೋ ಕೊಯ್ಲು ಮಾಡಿದ್ವಿ. ಅಂಥಾ ಬೆಳೆ ಅದಕ್ ಮುಂಚೆ ನೋಡಿದ್ದೇ ಇಲ್ಲ. ಈಗ ನೆಟ್ಟಿರೋ ಮಾವಿನ ಸಸಿಗಳು ಬೆಳೆದು ಮರಗಳಾದ್ರೆ, ನಮ್ಮ ಕಷ್ಟಗಳೆಲ್ಲ ಮುಗಿದಂಗೆ” ಎನ್ನುತ್ತಾಳೆ ಎರ್ರಮ್ಮ.
ಅನಂತಪುರದ ರೈತರ ಬದುಕಿನಲ್ಲಿ ಇಂತಹ ಭರವಸೆ ಮೂಡಿಸಿರುವ ತಂತ್ರಜ್ನಾನದ ಹೆಸರು ಸ್ವಾರ್ (ಎಸ್ ಡಬ್ಲ್ಯೂ ಎ ಆರ್). ಅಂದರೆ ಕೃಷಿಯ ಪುನರುಜ್ಜೀವನಕ್ಕಾಗಿ ನೀರಿನ ವ್ಯವಸ್ಥೆ. “ನೀರು ಮತ್ತು ವಿದ್ಯುತ್ತಿನ ಕೊರತೆಯಿಂದಾಗಿ ತಮ್ಮ ಒಣಜಮೀನಿನಲ್ಲಿ ಯಾವ ಬೆಳೆಯನ್ನೂ ಬೆಳೆಯಲಿಕ್ಕಾಗದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಹಾಯ ಮಾಡಲಿಕ್ಕಾಗಿ ನಾವು ಸ್ವಾರ್ ತಂತ್ರಜ್ನಾನ ಅಭಿವೃದ್ಧಿ ಪಡಿಸಿದೆವು” ಎನ್ನುತ್ತಾರೆ ಕೆ. ಎಸ್. ಗೋಪಾಲ್. ಅವರು ಹೈದರಾಬಾದಿನ ಸೆಂಟರ್ ಫಾರ್ ಎನ್ವೈರನ್ಮೆಂ ಟ್ ಕನ್ಸರ್ನ್ಸ್ (ಸಿಇಸಿ) ಸಂಸ್ಥೆಯ ನಿರ್ದೇಶಕರು.
ತೋಡುಗಳಲ್ಲಿ ನೀರು ಹಾಯಿಸುವುದಕ್ಕೆ ಹೋಲಿಸಿದಾಗ, ಸಾಂಪ್ರದಾಯಿಕ ಸೂಕ್ಷ್ಮ ನೀರಾವರಿ ವ್ಯವಸ್ಥೆಯು ಕೃಷಿಯಲ್ಲಿ ನೀರಿನ ಅವಶ್ಯಕತೆಯನ್ನು ಮುಕ್ಕಾಲುಭಾಗ ಕಡಿಮೆ ಮಾಡಿದೆ. (ಅಂದರೆ ಬೋರ್ವೆಲ್ಲಿನಿಂದ ನೀರೆತ್ತಿ, ಡ್ರಿಪ್ ಪೈಪುಗಳ ಮೂಲಕ ಗಿಡಗಳಿಗೆ ಹಾಯಿಸುವುದು.) ಆದರೆ, ನೀರಿನ ಕೊರತೆ ತೀವ್ರವಾಗಿರುವ ಮತ್ತು ವಿದ್ಯುತ್ ಸರಬರಾಜು ಅನಿಶ್ಚಿತವಾಗಿರುವ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಸೂಕ್ಷ್ಮ ನೀರಾವರಿಯಿಂದ ಪ್ರಯೋಜನವಿಲ್ಲ ಎಂದು ಅವರು ವಿವರಿಸುತ್ತಾರೆ.
“ಸ್ವಾರ ಒಂದು ಪರಿಪೂರ್ಣ ವಿಧಾನ” ಎನ್ನುತಾರೆ ಸಿಇಸಿ ಸಂಸ್ಥೆಯ ಸಂಶೋಧಕರಾದ ಬಾಲಾಜಿ ಉಟ್ಲಾ. ಮಳೆಕೊಯ್ಲಿನಿಂದ ಸಂಗ್ರಹಿಸಿದ ನೀರನ್ನು ಸಸಿಗಳಿಗೆ ಒದಗಿಸುವುದು ಇದರ ಉದ್ದೇಶ. ಮಳೆನೀರ ಹೊಂಡದ ತಳ ಮತ್ತು ಬದಿಗಳಿಂದ ನೀರು ಸೋರಿ ಹೋಗದಂತೆ ಅಲ್ಲಿಗೆ ಜೇಡಿಮಣ್ಣು ಮೆತ್ತಬೇಕು. ಅದರಲ್ಲಿ ಸಂಗ್ರಹಿಸಿದ ನೀರು ಆವಿಯಾಗಿ ನಷ್ಟವಾಗುವುದನ್ನು ತಡೆಗಟ್ಟಲಿಕ್ಕಾಗಿ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಬೇಕು. ಈ ನೀರನ್ನು ಪೆಡಲ್ ಪಂಪಿನಿಂದ ಓವರ್ಹೆಡ್ ಟ್ಯಾಂಕಿಗೆ ಪಂಪ್ ಮಾಡಬೇಕು (ಇದಕ್ಕೆ ವಿದ್ಯುತ್ ಬೇಕಾಗಿಲ್ಲ.) ಅಲ್ಲಿಂದ ಗುರುತ್ವಾಕರ್ಷಣ ಶಕ್ತಿಯಿಂದ ಪ್ರತಿಯೊಂದು ಗಿಡಕ್ಕೆ ನೀರು ಹರಿದು ಬರಲು ವ್ಯವಸ್ಥೆ ಮಾಡಬೇಕು.
ಓವರ್ ಹೆಡ್ ಟ್ಯಾಂಕಿನಿಂದ ಪಿವಿಸಿ ಪೈಪುಗಳ ಮೂಲಕ ಹರಿದು ಬರುವ ನೀರು ಐದು-ಲೀಟರಿನ ಅತಿನೇರಳೆಕಿರಣ ಪ್ರತಿರೋಧ ಪ್ಲಾಸ್ಟಿಕ್ ಜಾರುಗಳಲ್ಲಿ ಸಂಗ್ರಹವಾಗುತ್ತದೆ.ಈ ಜಾರುಗಳನ್ನು ಸಸ್ಯಗಳ ಬುಡದಲ್ಲಿ ಹುಗಿದಿರುವ ಎರಡೂವರೆ ಲೀಟರ್ ಅಳತೆಯ ಮಣ್ಣಿನ ಮಡಕೆಗಳಲ್ಲಿ ಇಡಬೇಕು. ಪ್ಲಾಸ್ಟಿಕ್ ಜಾರಿನ ತಳದಲ್ಲಿರುವ ಸಣ್ಣ ತೂತಿನಿಂದ ಹನಿಹನಿಯಾಗಿ ಇಳಿಯುವ ನೀರು ಅಲ್ಲಿಂದ ಮಣ್ಣಿಗೆ ಜಿನುಗುತ್ತದೆ.
ನೀರಿನಲ್ಲಿರುವ ಕಸಕಡ್ಡಿ ಸೋಸಲಿಕ್ಕಾಗಿ ಪ್ಲಾಸ್ಟಿಕ್ ಜಾರಿನ ಮುಚ್ಚಳಕ್ಕೆ ಒಂದು ಸೋಸಕ ಜೋಡಿಸಲಾಗಿದೆ; ನೀರಿನ ಹರಿವು ನಿಯಂತ್ರಣಕ್ಕಾಗಿ ಟಿ –ತಿರುಗಣೆ ಅಳವಡಿಸಲಾಗಿದೆ. “ಸ್ವಾರ್ ವಿಧಾನದಲ್ಲಿ ವಾರಕ್ಕೊಂದು ಸಲ ೧೫ – ೨೦ ನಿಮಿಷಗಳ ಅವಧಿ ನೀರು ಬಿಟ್ಟರೆ ಸಾಕು” ಎನ್ನುತ್ತಾರೆ
ಅನಂತಪುರದ ಗರುಡೆಂಪಲ್ಲಿಯ ರೈತ ಸಕ್ಕೆ ನಾರಾಯಣ. ತನ್ನ ಒಂದು ಹೆಕ್ಟೇರ್ ಜಮೀನಿನಲ್ಲಿ ಮಾವು, ಪೇರಲೆ, ಲಿಂಬೆ, ಸೀತಾಫಲದ ೧೮೦ ಸಸಿಗಳನ್ನು ಅವರು ನೆಟ್ಟಿದ್ದಾರೆ. “ಸಸಿಗಳಿಗೆ ನೀರು ಹಾಕಲಿಕ್ಕಾಗಿ ನಾವೀಗ ಗಂಟೆಗಟ್ಟಲೆ ಕೆಲಸ ಮಾಡಬೇಕಾಗಿಲ್ಲ” ಎಂಬ ಸಮಾಧಾನ ಅವರ ಪತ್ನಿ ರಾಮಾಂಜನಮ್ಮನಿಗೆ.
ಮಳೆನೀರ ಕೊಯ್ಲು ಹಾಗೂ ಓವರ್ ಹೆಡ್ ಟ್ಯಾಂಕ್ ಸಹಿತ ಸ್ವಾರ್ ತಂತ್ರಜ್ನಾನವನ್ನು ಹೆಕ್ಟೇರಿನಲ್ಲಿ ೨೦೦ ಸಸಿಗಳಿರುವ ಜಮೀನಿಗೆ ಅಳವಡಿಸಲು ತಗಲುವ ವೆಚ್ಚ ಸಸಿಯೊಂದಕ್ಕೆ ರೂ.೩೦೦/-. ಈ ಲೆಕ್ಕಾಚಾರದಂತೆ, ಸಣ್ಣ ಹಾಗೂ ಅತಿಸಣ್ಣ ರೈತರು “ಸ್ವಾರ್” ತಂತ್ರಜ್ನಾನ ಅಳವಡಿಸಿಕೊಳ್ಳುವುದು ಕಷ್ಟಸಾಧ್ಯ. ಎನಿಮಲ ಗೋಪಾಲರ ಜಮೀನಿನಲ್ಲಿ ಪ್ರಾತ್ಯಕ್ಷಿಕೆ ಎಂಬ ನೆಲೆಯಲ್ಲಿ ಈ ವ್ಯವಸ್ಥೆಯನ್ನು ಸಿಇಸಿ ಪುಕ್ಕಟೆಯಾಗಿ ಅಳವಡಿಸಿದೆ.
ಅದೇನಿದ್ದರೂ, ಕಾಲುವೆ ಹಾಗೂ ತೋಡುಗಳ ಮೂಲಕ ನೀರಾವರಿ ಒದಗಿಸುವ ವೆಚ್ಚಕ್ಕಿಂತ ಈ ಹೊಸ ತಂತ್ರಜ್ನಾನ ಅಳವಡಿಸುವ ವೆಚ್ಚ ಕಡಿಮೆ. ಆಂಧ್ರಪ್ರದೇಶದ ಅನಂತಪುರ, ತೆಲಂಗಾಣದ ನಾಲ್ಗೊಂಡ, ಮಹಾರಾಷ್ಟ್ರದ ಒಸ್ಮಾನಾಬಾದ್ ಮತ್ತು ಮಧ್ಯಪ್ರದೇಶದ ಸೆಹೊರೆ ಜಿಲ್ಲೆಗಳಲ್ಲಿ ೪,೦೦೦ ಹಣ್ಣಿನ ಸಸಿಗಳನ್ನು ಈ ತಂತ್ರಜ್ನಾನದಿಂದ ಬೆಳೆಸಲಾಗುತ್ತಿದೆ. ಕರ್ನಾಟಕ ೨೦೧೬-೧೭ರಲ್ಲಿ ಕಳೆದ ೪೦ ವರುಷಗಳಲ್ಲೇ ಅತ್ಯಂತ ಭೀಕರ ಬರಗಾಲದಿಂದ ತತ್ತರಿಸಿದೆ. ೨೦೧೬ರ ಮುಂಗಾರು ಮಳೆಪ್ರಮಾಣ ಶೇಕಡಾ ೨೦ರಿಂದ ೪೦ರಷ್ಟು ಕಡಿಮೆಯಾದದ್ದೇ ಇದಕ್ಕೆ ಕಾರಣ. ಕುಡಿಯುವ ನೀರಿಗಾಗಿ ಎಲ್ಲೆಲ್ಲೂ ಹಾಹಾಕಾರ ಎದ್ದಿದೆ. ಕೃಷಿಗೆ ನೀರಿಲ್ಲದೆ ಸಾವಿರಾರು ಎಕರೆ ತೋಟಗಳ ಗಿಡಮರಗಳು ಒಣಗಿ ಹೋಗಿವೆ. ಕರ್ನಾಟಕದ ಒಟ್ಟು ೧೭೭ ತಾಲೂಕುಗಳಲ್ಲಿ ೧೩೯ ತಾಲೂಕುಗಳನ್ನು ಸರಕಾರ “ಬರಪೀಡಿತ" ಎಂದು ಘೋಷಿಸಿದೆ. ಈ ಪರಿಸ್ಥಿತಿಯಲ್ಲಿ, ಒಣಜಮೀನು ಹೊಂದಿರುವ ಕರ್ನಾಟಕದ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಈ ಸರಳ ತಂತ್ರಜ್ನಾನ ಒದಗಿಸಲು ನಮ್ಮ ಸರಕಾರ ನೆರವಾಗುತ್ತದೆಂದು ಹಾರೈಸೋಣ.
p.p1 {margin: 0.0px 0.0px 0.0px 0.0px; text-align: justify; font: 8.8px Kedage; -webkit-text-stroke: #000000}
p.p2 {margin: 0.0px 0.0px 0.0px 0.0px; text-align: right; font: 8.8px Kedage; -webkit-text-stroke: #000000}
span.s1 {font-kerning: none}