ಬುದ್ಧಿಜೀವಿಗಳಿದ್ದಾರೆ ಎಚ್ಚರ!

ಬುದ್ಧಿಜೀವಿಗಳಿದ್ದಾರೆ ಎಚ್ಚರ!

ಬರಹ

(ನಗೆ ನಗಾರಿ ಅಲರ್ಟ್)

ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕರು, ಸಮಾಜ ಘಾತುಕರು, ಕಳ್ಳರು, ಖದೀಮರು, ಭ್ರಷ್ಟರು ಹಾಗೂ ರಾಜಕಾರಣಿಗಳ ಬಗ್ಗೆ ಎಚ್ಚರಿಕೆಯನ್ನು, ಮುನ್ನೆಚ್ಚರಿಕೆಯನ್ನೂ ತಮ್ಮ ಅನಿಯಮಿತವಾದ ಜಾಹೀರಾತುಗಳ ಮಧ್ಯದಲ್ಲಿ ಪ್ರಸಾರ ಮಾಡಿ ಮಾಡಿ ದಣಿಯುತ್ತಿವೆ ಮಾಧ್ಯಮಗಳು. ಈ ಮೂಲಕ ದೇಶದ ಜನರ ಬಗೆಗೆ, ಅವರ ಒಳಿತಿನ, ಕ್ಷೇಮದ ಬಗೆಗೆ ಇರುವ ಕಾಳಜಿಯನ್ನು ವ್ಯಕ್ತಪಡಿಸುತ್ತಿವೆ. ಕೆಲವು ಮಾಧ್ಯಮಗಳು ಜನರ ಕ್ಷೇಮದ ಜೊತೆಗೆ ತಮ್ಮ ಟಿಆರ್‌ಪಿಯ ಕ್ಷೇಮವನ್ನೂ ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಆದರೆ ಜನತೆಯ ಬಗ್ಗೆ, ದೇಶದ ಜನ ಸಾಮಾನ್ಯರ ಬಗ್ಗೆ ನೈಜ ಕಾಳಜಿಯುಳ್ಳ ಮಾಧ್ಯಮ ಮಾಡಬೇಕಾದ ಕೆಲಸವೊಂದನ್ನು ಮಾಡದೆ ಮೌನಕ್ಕೆ ಶರಣಾಗಿರುವುದನ್ನು ನಮ್ಮ ಸಂಪಾದಕರು ಪತ್ತೆ ಹಚ್ಚಿದ್ದಾರೆ. ಸಮಾಜದ ಬಗೆಗಿನ ಕಾಳಜಿಯನ್ನು ಕ್ಷಣ ಕ್ಷಣಕ್ಕೂ ಜನತೆಯೆದುರು ಬಿಚ್ಚಿಟ್ಟು ಆಮೂಲಕ ಜನತೆಯ ಮನದಾಳದಲ್ಲಿ ವಿಶ್ವಾಸವನ್ನು ಸಂಪಾದಿಸಿಕೊಂಡಿರುವ ನಮ್ಮ ಸಂಪಾದಕರು ಜನತೆ ಸದಾ ಎಚ್ಚರದಿಂದ ಇರಬೇಕಾದ ಸಂಗತಿಯ ಬಗ್ಗೆ ಯಾರೂ ಗಮನ ಹರಿಸದಿರುವುದನ್ನು ಗಂಭೀರವಾಗಿ ಪರಿಗಣಿಸುತ್ತಾ ಅದಕ್ಕಿಂತ ಹೆಚ್ಚಿನ ಗಾಂಭೀರ್ಯದಲ್ಲಿ ಈ ಎಚ್ಚರಿಕೆಯನ್ನು ನೀಡುತ್ತಿದೆ.

ನಮ್ಮ ದೇಶದಲ್ಲಿ ಒಂದು ಬಗೆಯ ಆತಂಕವಾದಿ ಮನುಷ್ಯರು ಹುಟ್ಟುತ್ತಿದ್ದಾರೆ. ಇವರನ್ನು ‘ಬುದ್ಧಿ ಜೀವಿ’ ಎನ್ನಲಾಗುತ್ತದೆ.ತಮ್ಮ ಬುದ್ಧಿವಂತಿಯಲ್ಲೇ ತಮ್ಮ ಜೀವವಿದೆ ಎಂಬಂತೆ ವರ್ತಿಸುವುದು ಇವರ ಪ್ರಾಥಮಿಕ ಲಕ್ಷಣ. ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗಿ (ಕೆಲವು ಹುಣ್ಣಿಮೆ, ಅಮವಾಸ್ಯೆಯ ಸಮಯದಲ್ಲಿ) ತಮ್ಮ ಬುದ್ಧಿಯಲ್ಲೇ ಇಡೀ ಸಮಾಜದ ಜನಸಾಮಾನ್ಯರ ಜೀವ ಇದೆ ಎಂದು ವರ್ತಿಸಲು ಶುರುಮಾಡುತ್ತಾರೆ. ಇವರು ದೇಶದ ಯಾವ ಮೂಲೆಯಲ್ಲಾದರೂ ಇರಬಹುದು. ಹುದುಗಿಕೊಳ್ಳುವುದು, ಅಡಗಿಕೊಳ್ಳುವುದು, ಬಚ್ಚಿಟ್ಟುಕೊಳ್ಳುವುದು ಇವೆಲ್ಲಾ ಇವರಿಗೆ ಆಗಬರದ ಸಂಗತಿಗಳು. ಇವರು ಸದಾ ಎಲ್ಲರ ಕಣ್ಣೆದುರೇ ಓಡಾಡಿಕೊಂಡಿರಲು ಬಯಸುತ್ತಾರೆ. ಜನರ ಕಣ್ಣೆದುರು ಅಲ್ಲದಿದ್ದರೂ ಕೆಮಾರದ ಕಣ್ಣೆದುರು ಓಡಾಡಲು ಪ್ರಾಶಸ್ತ್ಯ ನೀಡುತ್ತಾರೆ. ಇವರು ತತ್ವ, ಸಿದ್ಧಾಂತ, ಮೂಲಭೂತ ನಂಬಿಕೆಗಳು, ಇವರ ಕಾರ್ಯಕ್ಷೇತ್ರ, ಕಾರ್ಯಾಚರಣೆಯ ವೈಖರಿ, ಇವರಿಂದ ಜನಸಾಮಾನ್ಯರಿಗೆ ಉಂಟಾಗುವ ಅಪಾಯಗಳು, ಇವರನ್ನು ನಿಭಾಯಿಸಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಮುಂತಾದವುಗಳ ಬಗ್ಗೆ ನಮ್ಮ ಅಧಿಕೃತ ಹಾಗೂ ಅನಧಿಕೃತ ಸುದ್ದಿಮೂಲಗಳು ಮಾಹಿತಿ ಕಲೆಹಾಕುತ್ತಿವೆ. ಆದರೆ ತತ್ ಕ್ಷಣದಲ್ಲಿ ಈ ‘ಜೀವಿ’ಗಳ ಮುಖಚರ್ಯೆ ಹಾಗೂ ತೋರುವಿಕೆಯ ಬಗ್ಗೆ ಎಲ್ಲರೂ ತಿಳಿದಿರಲೇ ಬೇಕಾದ ಅಗತ್ಯವಿದೆ.

ಇಸ್ತ್ರಿ ಕಾಣದ ಕಾಟನ್ ಇಲ್ಲವೇ ಖಾದಿಯ ಮಂಡಿ ಮುಚ್ಚುವಷ್ಟು ಉದ್ದನೆಯ ಜುಬ್ಬ, ಜೀನ್ಸ್ ಪ್ಯಾಂಟು, ಹೆಗಲ ಮೇಲೊಂದು ಜೋಳಿಗೆಯಂಥ ಬ್ಯಾಗು ಇವು ಈ ಜೀವಿಗಳ ವೇಷ ಭೂಷಣ. ಇದನ್ನು ನೆನಪಿಟ್ಟುಕೊಂಡರೆ ನೀವು ಒಂದು ಮೈಲು ದೂರದಿಂದಲೇ ಇವರನ್ನು ಗುರುತು ಹಿಡಿದು ರಸ್ತೆ ಬದಲಾಯಿಸಿ ತಪ್ಪಿಸಿಕೊಳ್ಳಬಹುದು.ಆದರೆ ಈಗ ತಪ್ಪಿಸಿಕೊಳ್ಳುವ ಅಗತ್ಯವಿಲ್ಲ, ಸ್ವಲ್ಪ ಸಮೀಪ ಹೋಗಿ.

ಇನ್ನು ಸ್ವಲ್ಪ ಹತ್ತಿರಕ್ಕೆ ಬನ್ನಿ, ಹ್ಹ! ಮುಖ ಕಾಣುವಷ್ಟು ಹತ್ತಿರವಾದರೆ ಸಾಕು. ಈಗಲೇ ತುಂಬಾ ಹತ್ತಿರ ಹೋಗಿಬಿಡಬೇಡಿ. ಕೆದರಿದ ಕೂದಲು, ಕೆಲವೊಮ್ಮೆ ಕತ್ತಿನ ಹಿಂಭಾಗವನ್ನು ತುಂಬಿಸುತ್ತಾ ಬೆನ್ನ ಮೇಲೆ ಹರಿಯುವಷ್ಟು ಉದ್ದನೆಯ ಕೂದಲು, ತುಂಬಾ ಸೀನಿಯರ್ ‘ಜೀವಿ’ಯಾದರೆ ಆ ಅಲ್ಲಿ ಕೂದಲಿನ್ನು ಹುಡುಕಲು ಹೋಗಬೇಡಿ, ಆ ಬಯಲು ಪ್ರದೇಶದ ಮೇಲಿಂದ ಕಣ್ಣನ್ನು ಜಾರಿಸಿ ಮುಖಕ್ಕೆ ತನ್ನಿ! ಕುರುಚಲು, ಕುರುಚಲಾಗಿ ಪೊದೆಯಂತಹ ಗಡ್ಡ ಇದೇ ಅಲ್ಲವಾ, ಇದನ್ನು ಮೊದಲು ಕನ್ ಫರ್ಮ್ ಮಾಡಿಕೊಳ್ಳಿ. ಇದು ಬಹುಮುಖ್ಯವಾದ ಚರ್ಯೆ. ಕೆಲವು ಇನ್ ಸೈಡರ್ ಇನ್‌ಫಾರ್ಮೇಶನ್ ಪ್ರಕಾರ ಈ ‘ಜೀವಿ’ಗಳ ಗುಂಪಿನಲ್ಲಿ ಹೆಚ್ಚು ಹುಲುಸಾದ ಗಡ್ಡವಿರುವವರಿಗೆ ಪ್ರಾಮುಖ್ಯತೆ ಹೆಚ್ಚು ಎಂಬ ಅಲಿಖಿತ ನಿಯಮವಿದೆಯಂತೆ. ಈ ಬಗ್ಗೆ ಎಚ್ಚರವಹಿಸಿ. ಹ್ಹ! ಸರಿಯಾಗಿ ಊಹಿಸಿದಿರಿ, ಮೂಗಿನ ಮೇಲೆ ಆಗಲೋ ಈಗಲೋ ಜಾರಿ ಬೀಳುವಂತೆ ಒಂದು ಕನ್ನಡಕ ಕುಳಿತಿದೆಯಲ್ಲವೇ? ನಿಮ್ದೂ ಒಳ್ಳೇ ಅಬ್ಸರ್ವೇಶನ್ನು ಬಿಡಿ :)

ಹಾಗೆ ಸ್ವಲ್ಪ ಹತ್ತಿರಕ್ಕೆ ಬನ್ನಿ, ಆಗಲೇ ಕೆಮ್ಮಲು ಶುರು ಮಾಡಿಬಿಟ್ರಾ? ಹೌದು ಕಣ್ರೀ, ಈ ಬುದ್ಧಿ ಜೀವಿಗಳು ಸದಾ ಎಷ್ಟು equipped ಆಗಿರುತ್ತಾರೆ ಅಂತೀರಿ, ಅವರ ಕೈಲಿ ಸದಾ ಹರಿತವಾದ ಮೊನೆಯ ಲೇಖನಿ ಇದ್ದೇ ಇರುತ್ತದೆ. ಕೆಲವರು ಆಗಾಗ ತಮ್ಮ ಬಾಯೊಳಗಿನ ಹರಿತವಾದ ಉಪಕರಣದಿಂದ ಲೇಖನಿಯ ಹಿಂಭಾಗವನ್ನೂ ಸಹ ಹರಿತಗೊಳಿಸುತ್ತಿರುವುದು ಕಂಡು ಬರುತ್ತದೆ. ಗಾಬರಿಯಾಗಬೇಡಿ. ಕೈಯಲ್ಲಿ ಲೇಖನಿ ಇಲ್ಲದ ಸಂದರ್ಭದಲ್ಲಿ ಮತ್ತಷ್ಟು ಅಪಾಯಕಾರಿಯಾದ ಆಯುಧವಿರುತ್ತದೆ. ಅದರ ತುದಿ ನಿಗಿ ನಿಗಿ ಕೆಂಡದ ಹಾಗೆ ಕಂಗೊಳಿಸುತ್ತಿರುತ್ತದೆ. ಮತ್ತೊಂದು ತುದಿ ನೇರವಾಗಿ ಬುದ್ಧಿಜೀವಿಯ ಬಾಯೊಳಕ್ಕೆ ಚಾಚಿಕೊಂಡಿರುತ್ತದೆ. ಅಯ್ಯೋ, ಅರ್ಥವಾಗಿ ಹೋಯ್ತಾ? ಹೌದು ಕಣ್ರೀ ಅದು ಸಿಗರೇಟು! ಇದನ್ನು ಅಪಾಯಕಾರಿ ಅಂದದ್ದು ಅದು ನೀವು ಮಾರುದ್ದ ದೂರವಿದ್ದರೂ ನಿಮ್ಮನ್ನು ತನ್ನ ‘ಕಂಪಿ’ನಿಂದ ಕಂಗೆಡಿಸಿ ಒದ್ದಾಡಿಸುವುದರಿಂದ. ಆದರೆ ಮೊದಲನೆಯ ಉಪಕರಣದ ಪ್ರಭಾವ ಹಾಗೂ ಪರಿಣಾಮವನ್ನು ಗಮನಿಸಿದರೆ ಎರಡನೆಯದು ಅಷ್ಟೇನು ಅಪಾಯಕಾರಿ ಅಲ್ಲ ಎಂದೇ ಹೇಳಬಹುದು.

ನಮಗೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ನಮ್ಮ ಓದುಗರನ್ನು ಹಾಗೂ ಹಿತೈಷಿಗಳನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದೇವೆ. ಮುಂದೆ ಎಂದಾದರೂ ಈ ಮುಖಚರ್ಯೆಯ ವ್ಯಕ್ತಿಗಳು ಕಂಡುಬಂದರೆ ಎಚ್ಚರದಿಂದಿರಿ. ಇವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿರುವ ನಗೆಸಾಮ್ರಾಟರು ಉಪಯುಕ್ತ ಮಾಹಿತಿ ಸಿಕ್ಕೊಡನೆ ನಗೆ ನಗಾರಿಯಲ್ಲಿ ಪ್ರಕಟಿಸುತ್ತಾರೆ. ಅಷ್ಟರಲ್ಲಿ ನಿಮಗೇನಾದರೂ ಹೆಚ್ಚಿನ ಮಾಹಿತಿ ಸಿಕ್ಕಲ್ಲಿ ದಯವಿಟ್ಟು ನಗೆ ನಗಾರಿಗೆ ತಿಳಿಸಿ..