ಬೂಸ್ಟರ್ ಡೋಸ್ ಮುನಿಯಮ್ಮ

ಸಂತೆಕಸಲಗೆರೆ ಪ್ರಕಾಶ್ ಎಬವರು ‘ಬೂಸ್ಟರ್ ಡೋಸ್ ಮುನಿಯಪ್ಪ’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಕೇಶವ ಮಳಗಿ. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ…
“ಎರಡು-ಮೂರು ವರ್ಷಗಳ ಕಾಲ ಕಾಡಿದ ಸೋಂಕಿನ ಕರಾಳಛಾಯೆ ನಮ್ಮ ಸಮಾಜವನ್ನು ಇನ್ನೂ ಸಂಪೂರ್ಣವಾಗಿ ತೊರೆದುಹೋಗಿಲ್ಲ. ಸಮಾಜವೊಂದರಲ್ಲಿ ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುವ ಸಾಂಕ್ರಾಮಿಕ ಜಾಡ್ಯವೊಂದು ಏನನ್ನು ಸೂಚಿಸುತ್ತದೆ ಎಂಬ ಪ್ರಶ್ನೆ ಕೇಳಿಕೊಂಡು ಸಮಾಧಾನಚಿತ್ತದಿಂದ ಉತ್ತರವನ್ನು ಹುಡುಕುಲು ಪ್ರಯತ್ನಿಸಿದಾಗ ನಮಗೆ ಚಕಿತಗೊಳ್ಳುವ ಅಂಶಗಳು ಗೋಚರಿಸಬಹುದು.
ಸೋಂಕಿನಿಂದ ನರಳುತ್ತಿರುವ ಸಮಾಜದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹದಗೆಟ್ಟಿದೆ. ಸಹಜ ಜೀವನಶೈಲಿಯು ಕೃತಕವಾಗಿ ಶೋಕಿಯಾಗಿ ಬದಲಾಗಿದೆ. ಜನ ಸಾರ್ವತ್ರಿಕ ಸ್ವಾಸ್ಥ್ಯಕ್ಕೆ ಅಗತ್ಯವಾದ ನೀತಿನಿಯಮವನ್ನು ಅನುಸರಿಸದೆ ಸ್ಟೇಚ್ಛಾಚಾರಿಗಳಾಗಿದ್ದಾರೆ.
ಈ ಎಲ್ಲ ಹೊಣೆಗಾರಿಕೆಗಳಿಂದ ತ್ಯಕ್ತರಾಗಿ ಅವನತಿಯನ್ನಷ್ಟೇ ತಂದುಕೊಡಬಲ್ಲ ಸ್ವಾರ್ಥಮಯ ಬದುಕಿನಲ್ಲಿ ನಿರತರಾಗಿ ಮಾನವೀಯತೆ ಅಂತಃಕರಣ, ಉದಾರತೆ, ಒಬ್ಬರಿಗೊಬ್ಬರು ಸ್ಪಂದಿಸುವ ಗುಣವನ್ನು ಕಳೆದುಕೊಂಡು ರಾಕ್ಷಸರಾಗುತ್ತಿದ್ದಾರೆ.
ಈ ಎಲ್ಲ ದುರ್ಗುಣಗಳ ಸಂಚಯಿತ ಪರಿಣಾಮವಾಗಿ ಮನುಷ್ಯನಿಗೆ ತಕ್ಕ ಪಾಠವನ್ನು ಕಲಿಸಲೆಂಬಂತೆ ಸಾಂಕ್ರಾಮಿಕವು ಸ್ಫೋಟಗೊಂಡು ವ್ಯಾಪಿಸುತ್ತದೆ.
ಇಪ್ಪತ್ತನೆಯ ಶತಮಾನದ ನಲ್ವತ್ತರ ದಶಕದಲ್ಲಿ ಅಲ್ಲಿ ಕಮೂ ಬರೆದ ಆಧುನಿಕ ಕ್ಲಾಸಿಕ್ ಎಂದು ಪರಿಗಣಿಸಲಾಗುವ 'ದಿ ಪ್ಲೇಗ್ ಮನುಷ್ಯರ ಅಸಹಾಯಕತೆ, ದಾರುಣತೆ, ದುಷ್ಟತನ ಮತ್ತು ಕರುಣೆಯನ್ನು ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪರಿಶೀಲಿಸುತ್ತದೆ. ಕಾಯಿಲೆಯೊಂದು ರೂಪಕವಾಗಿ ಕೊಳೆತ ಸಮಾಜದ ಅಸ್ವಾಸ್ಥ್ಯವನ್ನು ಬೆಳಕಿಗೆ ತರುವುದೇ ಈ ಕೃತಿಯ ಮುಖ್ಯ ಆಶಯ.
ಅದಾಗಿ ಏಳು ದಶಕಗಳ ಬಳಿಕ ಇಂದು ನಾವು ಬದುಕುತ್ತಿರುವ ವಿಶ್ವವು ಒಂದು ಜಾಗತಿಕ ಸಾಂಕ್ರಾಮಿಕವನ್ನು ಎದುರಿಸಿತು. ಇಂದು ಬದುಕುಳಿದಿರುವ ನಾವೆಲ್ಲ ಅದಕ್ಕೆ ಸಾಕ್ಷಿಯಾದೆವು.
ಅಳಿದವರು ಮನುಷ್ಯರ ಇತಿಮಿತಿ ನರಳುವಿಕೆ, ಎಲ್ಲವನ್ನೂ ತೊರೆದುಹೋಗಬೇಕಾದ ಅನಿವಾರ್ಯತೆ ಮತ್ತು ಮನುಷ್ಯ ಬದುಕು ಸೂಚಿಸುವ ಅಸಂಗತತೆ, ಕ್ಷಣಿಕತೆಗಳಿಗೆ ರೂಪಕಗಳಾದರು. ಎರಡು-ಮೂರು ವರ್ಷಗಳ ಕಾಲ ಕಾಡಿದ ಸೋಂಕಿನ ಕರಾಳಛಾಯೆ ನಮ್ಮ ಸಮಾಜವನ್ನು ಇನ್ನೂ ಸಂಪೂರ್ಣವಾಗಿ ತೊರೆದುಹೋಗಿಲ್ಲ. ಆ ಕ್ಷಣಕ್ಕೆ ಆತಂಕಿತನಾಗಿದ್ದ ಮನುಷ್ಯ ಮತ್ತೆ ತನ್ನೆಲ್ಲ ವಿರಾಟ್ ಸ್ವರೂಪದೊಂದಿಗೆ ಗರಿಬಿಚ್ಚುತ್ತಲೇ ಇದ್ದಾನೆ. ಕ್ಷಣಿಕ ನೋವು, ಸತ್ಯವೇ ಆಗಿದ್ದ ಸಾವನ್ನು ಮರೆತು ಸುಖದ ಬೆನ್ನು ಹತ್ತಿದ್ದಾನೆ.
ಜಾಗತಿಕ ಸಾಂಕ್ರಾಮಿಕದಿಂದ ದಿಗ್ಧಮೆಗೊಂಡಿದ್ದ ಕಲಾವಿದರು, ಸಾಮಾನ್ಯರು, ಸೂಕ್ಷ್ಮಜ್ಞರು, ಹಾಡುಗಾರರು ತಮ್ಮ ನೋವಿನ ಅಭಿವ್ಯಕ್ತಿಗಾಗಿ ಹುಡುಕಾಡುತ್ತ ಆ ಭಯಾನಕ ಕ್ಷಣಗಳ ರುದ್ರತೆಯನ್ನು ಹಿಡಿದಿಡಲು ಅಂದಿನಿಂದಲೂ ಪ್ರಯತ್ನಶೀಲರಾಗಿದ್ದಾರೆ. ಆ ನೋವಿನ ಅಭಿವ್ಯಕ್ತಿಯಾಗಿ ಹಾಡುಗಳು ಹುಟ್ಟಿವೆ. ಚಿತ್ರಗಳು ಅರಳಿವೆ. ಕವಿತೆ-ಕಥೆ-ಕಾದಂಬರಿಗಳು ಮೈದಳೆದಿವೆ. ಚಲನಚಿತ್ರಗಳು ಮೂಡಿವೆ. ಮೌಖಿಕವೋ ಲಿಖಿತವೋ ರುಜಿನದ ರೂಕ್ಷತೆಯನ್ನು ಜನ ಹೇಳತೊಡಗಿದ್ದಾರೆ. ಪತ್ರಕರ್ತರಾದ ಸಂತೆಕಸಲಗೆರೆ ಪ್ರಕಾಶ್ ಅವರು ಕೂಡ ಆ ಕಾಲಘಟ್ಟದ ಅನುಭವವನ್ನು ಕಥೆಗಳ ರೂಪದಲ್ಲಿ 'ಬೂಸ್ಟರ್ ಡೋಸ್ ಮುನಿಯಮ್ಮ' ಎಂಬ ಸಂಕಲನದ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ.
ಹನ್ನೆರಡು ಕಥೆಗಳ ಈ ಸಂಕಲನವು ಜಾಗತಿಕ ಮಹಾಮಾರಿಯ ರುದ್ರಭಯಾನಕತೆಯ ವಿವಿಧ ರೂಪವನ್ನು ಕಥೆಗಳಲ್ಲಿ ಹಿಡಿದಿರಲು ಯತ್ನಿಸುತ್ತದೆ. ಜಾಗತಿಕ ಕಾಯಿಲೆಯ ಸ್ವರೂಪ ಮನೆ-ಕುಟುಂಬ-ಗ್ರಾಮ- ನಗರದ ಬೀದಿಗಳಲ್ಲಿ ಹೇಗೆ ಕಾಣಿಸಿಕೊಂಡಿತು. ಯಾವ ಪರಿಣಾಮವನ್ನುಂಟು ಮಾಡಿತು ಎಂದು ಇಲ್ಲಿನ ಕಥೆಗಳು ಅರಿಯಲು ಪ್ರಯತ್ನಿಸುತ್ತವೆ.
ಸಂಕಲನದ ಶೀರ್ಷಿಕೆಯ ಕಥೆ 'ಬೂಸ್ಟರ್ ಡೋಸ್ ಮುನಿಯಮ್ಮ ಕಥೆಯನ್ನೇ ಪರಿಶೀಲಿಸುವುದಾದರೆ ಆಕೆಯ ಗಂಡ ಬೊಕ್ಕಣನ ಮೂಲಕ ನಾಟಿ ವೈದ್ಯವನ್ನು ಕಲಿತು ಜನೋಪಕಾರಿಯಾಗಿ ಬದುಕುತ್ತಿರುವವಳಿಗೆ ಸಮಾಜ ನೀಡುವ ಕಿರುಕುಳ ಅಷ್ಟಿಷ್ಟಲ್ಲ. ಆಕೆಯ ಮೇಲೆ ಪೊಲೀಸು ಫಿರ್ಯಾದು ನೀಡಲಾಗುತ್ತದೆ. ದರ್ಪದ ಪೊಲೀಸರ ದಬ್ಬಾಳಿಕೆಗೆ ಆಕೆ ಗುರಿಯಾಗಬೇಕಾಗುತ್ತದೆ. ಆದರೂ ಹಳ್ಳಿ ಪೂರ್ಣ ಕೆಟ್ಟಿಲ್ಲವೆಂಬಂತೆ ಮರಿಕಾಳಪ್ಪನವರು ಮುನಿಯಮ್ಮಳನ್ನು ಮುಕ್ತಗೊಳಿಸುತ್ತಾರೆ.
ಪೊಲೀಸರ ಕಾಟದಿಂದ ತನಗೊದಗಿ ಬಂದ ಸಂಕಟವನ್ನು ಸಮಾಧಾನದಿಂದಲೇ ಎದುರಿಸುವ ಮುನಿಯಮ್ಮ, ಒಂದು ಹಂತದಲ್ಲಿ ಕಾಯಿಲೆ ಬರುವುದು ದೇಹಕ್ಕಲ್ಲಪ್ಪ, ಮನುಷ್ಯನ ಮನಸ್ಸಿಗೆ ಅನ್ನೋದು ಈಗ ಅರ್ಥ ಆಯ್ತು, ನಾನು ಇಷ್ಟು ದಿವಸ ದೇಹಕ್ಕಾದ ಕಾಯಿಲೆ ಕಸಾಲೆಗೆ ಮದ್ದು ಕೊಟ್ಟಿದ್ದು ವ್ಯರ್ಥವಾಗಿ ಹೋಯ್ತು. ಹೊಳೇಲಿ ಹುಣಸೆಹಣ್ಣು ತೇದಂಗಾಯ್ತು ಎಂಬಷ್ಟು ರೋಸಿ ಹೋಗುವಂತೆ ಆಗುತ್ತದೆ. ಆದರೂ ಆಕೆಯದು ಜನೋಪಕಾರಿ ಬದುಕು. ಮಹಾಮಾರಿಯಂತ ಸಾಂಕ್ರಾಮಿಕ ಮತ್ತೊಮ್ಮೆ ಅಪ್ಪಳಿಸಿದಾಗ ಉಂಟಾಗುವ ಅನಾಹುತ ತಡೆಗಾಗಿ ಶಾಶ್ವತ ಹಸಿರು ತಾಣದ ಮದ್ದು ಹುಡುಕಲು ಮೊಮ್ಮಕ್ಕಳೊಂದಿಗೆ ಕಾಡಿಗೆ ನಡೆಯುತ್ತಾಳೆ.
ಇನ್ನುಳಿದ ಕಥೆಗಳು ರುಜಿನ ಕಾಲದಲ್ಲಿ ನಲುಗಿದ ಹಳ್ಳಿಯ ಮುಗ್ಧರು, ಅಸಹಾಯಕರು, ವೃದ್ಧರು ಬದುಕನ್ನು ಎದುರಿಸಲು ಪಟ್ಟ ಪಡಿಪಾಟಲನ್ನು ಅರುಹುತ್ತವೆ. ಎಲ್ಲರೂ ಮನುಷ್ಯರೇ! ಮಗ-ಸೊಸೆಯನ್ನು ಕಳೆದುಕೊಂಡ, ಹಾಸಿಗೆ ಹಿಡಿದ ಗಂಡನನ್ನು ಸಂಭಾಳಿಸುತ್ತಲೇ ಬದುಕುಳಿದಿರುವ ಮೊಮ್ಮಗನಿಗಾಗಿ ಕಣ್ಣೀರು ಹನಿಸುವ ಚೆನ್ನಮ್ಮ, ಜಾಜಿ-ಸಾವಣ್ಣ ಎಂಬ ಅಲೆಮಾರಿ ಆಟಗಾರರು, ಬೋರಣ್ಣ ಹೀಗೆ ಎಲ್ಲರೂ ಬದುಕಲೆಂದು ಸಾವಿನೊಂದಿಗೆ ಸೆಣೆಸುವ ಸಂಕಲ್ಪ ಮಾಡಿದರು. ಇನ್ನು ಓದಿ ಕೆಲಸದ ನಿಮಿತ್ತ ಪಟ್ಟಣ ಸೇರಿದ್ದರೂ ಸಾಂಕ್ರಾಮಿಕದಿಂದಾಗಿಯೇ ಮನೆಯಿಂದಲೇ ಕೆಲಸ ಮಾಡಿ ಎಂಬ ಸವಲತ್ತಿನ ದೆಸೆಯಿಂದ ಹಳ್ಳಿಮನೆ ಸೇರಿದ ರೋಹಿತರಂಥವರ ಪಾತ್ರಗಳೂ ಇಲ್ಲಿವೆ.
ಈ ಮೂಲಕವಾದರೂ ಮನೆ ಸೇರಿರುವ ಮಗನನ್ನು ಕಂಡು ಸಂತಸ ಪಡುವ ದೊಡ್ಡೆಗೌಡರಿಗೆ ಮಗನ ಕಲ್ಯಾಣದ ಚಿಂತೆ ವಾಸ್ತವವನ್ನೇ ಹೇಳುವ ಕಥೆಯ ವಿನೋದ ಧಾಟಿ ಸೋಂಕಿನ ಇನ್ನೊಂದು ಮುಖವನ್ನು ತೋರಿಸುತ್ತದೆ. ಆಕಾಶಕ್ಕೆ ಚುಕ್ಕೆಯಾದ ಅಜ್ಜಿ, ಊರಮ್ಮನ ಟಗರು, ಖಾಲಿ ಬಿದ್ದ ಮನೆಗಳಂತಹ ಕಥೆಗಳು ತಮ್ಮ ರೂಪಕ, ವಿವರ ಹಾಗೂ ಕಥಾ ಪರಿಸರದಿಂದಾಗಿ ಗಮನ ಸೆಳೆಯುವಂತಿವೆ.
ಈಗಾಗಲೇ ಅನೇಕ ಕೃತಿಗಳನ್ನು ಪ್ರಕಟಿಸಿ ಸಾಕಷ್ಟು ಪರಿಚಿತ ಲೇಖಕರಾಗಿರುವ ಸಂತೆಕಸಲಗೆರೆ ಪ್ರಕಾಶ್ ಅವರಿಗೆ ಭಾಷೆ ಸಹಜವಾಗಿ ಒಲಿದು ಬಂದಿದೆ. ನಿತ್ಯವೂ ವೃತ್ತಿಪರತೆಯನ್ನು ಪಣಕ್ಕಿರಿಸುವ ಪತ್ರಿಕಾರಂಗದಲ್ಲಿರುವುದರಿಂದ ಘಟನೆ-ಸಂಗತಿಗಳನ್ನು ಹೇಗೆ ಕಥೆಯನ್ನಾಗಿಸಬೇಕು ಎಂಬ ಸೂಕ್ಷ್ಮತೆಯನ್ನೂ ಒದಗಿಸಿದೆ. ಆ ಕಾರಣವಾಗಿಯೇ ಜಾಗತಿಕ ಸೋಂಕಿನ ಈ ಕಥೆಗಳು ರೂಪು ಪಡೆದು ಇದೀಗ ಸಂಕಲನವಾಗಿ ಓದುಗರ ಮುಂದಿದೆ. ಇನ್ನೀಗ ಸಹೃದಯರು ಈ ಕಥೆಗಳನ್ನು ಓದಿ ಲೇಖಕ ಬಯಸಿದ ಅನುಭವಕ್ಕೆ ಪಕ್ಕಾಗುವುದಷ್ಟೇ ಬಾಕಿ.”