ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ

ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ

ಬರಹ

 (ಇ-ಲೋಕ-70)(14/4/2008)

 ವಿಂಡೋಸ್ ವಿಸ್ಟ, ವಿಂಡೋಸ್ ಎಕ್ಸ್‍ಪಿ ಅಂತಹ ಹಣ ನೀಡಿ ಬಳಸಬೇಕಾದ ಕಾರ್ಯನಿರ್ವಾಹಣಾ ತಂತ್ರಾಂಶಗಳ ಬದಲಿಗೆ ಮುಕ್ತವಾಗಿ ಲಭ್ಯವಿರುವ ತಂತ್ರಾಂಶವನ್ನು ಬಳಸಲು ಸಾಧ್ಯ.ಇವು ಉಚಿತವಾಗಿಯೂ ಲಭ್ಯವಿವೆ. ಬೇಕೆಂದರೆ,ಇವನ್ನು ಮಾರ್ಪಡಿಸಲೂ ಬಳಕೆದಾರನಿಗೆ ಸಾಧ್ಯ.ಲಿನಕ್ಸ್ ಅಂತಹ ತಂತ್ರಾಂಶಗಳನ್ನು ಜನಪ್ರಿಯಗೊಳಿಸಲು ಪಣ ತೊಟ್ಟಿರುವ ಮಾಹಿತಿ ತಂತ್ರಜ್ಞರ ದೊಡ್ದ ಪಡೆಯೇ ಇದೆ.ಲಿನಕ್ಸ್ ಬಳಸಲು ಕಷ್ಟ,ಇದರಲ್ಲಿ ಕನ್ನಡದ ಬಳಕೆ ಅಸಾಧ್ಯ ಎಂಬ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಇಂತಹವರ ಬಯಕೆ.ಇದಕ್ಕಾಗಿ ಬೆಂಗಳೂರಿನಲ್ಲಿ ಗ್ನು/ಲಿನಕ್ಸ್ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ.ಎಪ್ರಿಲ್ ಇಪ್ಪತ್ತಾರು ಶನಿವಾರ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸಯನ್ಸ್-SERCವಿಭಾಗದಲ್ಲಿ ಹಬ್ಬವನ್ನು ಆಯೋಜಿಸಲಾಗಿದೆ.ಲಿನಕ್ಸ್ ಬಳಕೆ ಎಷ್ಟು ಸುಲಭ ಎಂದು ತೋರಿಸುವುದು,ಕಂಪ್ಯೂಟರ್ ಅಥವ ಲ್ಯಾಪ್‍ಟಾಪ್ ತಂದವರಿಗೆ ಲಿನಕ್ಸ್ ಹಾಕಿ ಕೊಡುವುದು,ಕನ್ನಡದಲ್ಲಿ ಪದಸಂಸ್ಕರಣ ಮಾಡಲು ಅನುವಾಗುವಂತೆ ಲಿನಕ್ಸ್‍ನ್ನು ಹೊಂದಿಸಿಕೊಡುವುದು,ಕನ್ನಡ ಬಳಕೆಯನ್ನು ಸುಲಲಿತಗೊಳಿಸಲು ಯಂತ್ರವನ್ನು ಸಜ್ಜುಗೊಳಿಸುವುದು,ಸಿಡಿ/ಡಿವಿಡಿ ತಂದವರಿಗೆ ಲಿನಕ್ಸ್‍ನ ಉಚಿತ ಪ್ರತಿ ನಕಲಿ ಮಾಡಿಕೊಡುವುದು ಮತ್ತು ಲಿನಕ್ಸ್ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆ ಕೊಡುವುದೇ ಮೊದಲಾದ ಗುರಿಗಳನ್ನು ಹೊಂದಿ ಲಿನಕ್ಸ್ ಹಬ್ಬವನ್ನು ಏರ್ಪಡಿಸಿದ್ದಾರೆ.ಸಂಪದ ಫೌಂಡೇಶನ್ ವತಿಯಿಂದ ಹಬ್ಬ ಆಚರಿಸಲಾಗುತ್ತದೆ.ನೋಂದಾಯಿಸಿಕೊಳ್ಳಲು http://sampada.net/event/GNU-Linux-Habba# ಕೊಂಡಿ ಬಳಸಿ.
ದಶಲಕ್ಷ ದಾಟಿದ ಕಂಪ್ಯೂಟರ್ ವೈರಸ್ ಸಂಖ್ಯೆ
 ಸಿಮ್ಯಾಂಟೆಕ್ ಒಂದು ಏಂಟಿವೈರಸ್ ಕಂಪೆನಿ.ಕಂಪ್ಯೂಟರ್ ವೈರಸ್ ಎನ್ನುವುದು ಕಂಪ್ಯೂಟರನ್ನು ಕಾಡುವ ತಂತ್ರಾಂಶಗಳು.ಕೆಲವರು ಗಮ್ಮತ್ತಿಗಾಗಿ ಇವನ್ನು ಬರೆದರೆ,ಇನ್ನು ಕೆಲವರು ಪಾಸ್‍ವರ್ಡ್ ಕದಿಯುವಂತಹ ಕೆಟ್ಟ ಕೆಲಸಗಳಿಗೆ ಕಂಪ್ಯೂಟರ್ ವೈರಸ್‍ಗಳನ್ನು ಬರೆಯುವುದಿದೆ.ಇವುಗಳು ಮಿಂಚಂಚೆಯ ಮೂಲಕ ಇಲ್ಲವೇ ಫ್ಲಾಪಿ-ತಂಬ್ ಡ್ರೈವ್ ಇಂತಹ ಬಾಹ್ಯ ಸ್ಮರಣಕೋಶಗಳ ಮೂಲಕ ಒಂದು ಕಂಪ್ಯೂಟರಿನಿಂದ ಇನ್ನೊಂದಕ್ಕೆ ಹರಡುತ್ತವೆ.ಇವನ್ನು ಕಂಪ್ಯೂಟರಿನಿಂದ ಕಿತ್ತು ಹಾಕಲು ಆಂಟಿವೈರಸ್ ಎನ್ನುವ ಲಸಿಕೆ ತಂತ್ರಾಂಶಗಳನ್ನು ಬರೆಯುವ ಕಂಪೆನಿಗಳೂ ಇವೆ.ಸಿಮ್ಯಾಂಟೆಕ್ ಈ ವರ್ಷದ ದ್ವಿತಿಯಾರ್ಧದಲ್ಲೇ ಏಳು ಲಕ್ಷ ಹೊಸ ಬಗೆಯ ವೈರಸ್‍ಗಳನ್ನು ಕಂಪೆನಿಯು ಪತ್ತೆ ಹಚ್ಚಿ ಲಸಿಕೆ ಅಭಿವೃದ್ಧಿ ಪಡಿಸಿದೆ.ಹಳೆಯ ವೈರಸ್‍ಗಳಿನ್ನೂ ಚಾಲ್ತಿಯಲ್ಲಿವೆ. ಕಂಪೆನಿಯ ಲಸಿಕೆ ತಂತ್ರಾಂಶವು ಒಂದು ದಶಲಕ್ಷಕ್ಕೂ ಅಧಿಕ ವೈರಸ್‍ಗಳನ್ನು ಪತ್ತೆ ಹಚ್ಚಿ ನಾಶಪಡಿಸುವ ಸಾಮರ್ಥ್ಯ ಹೊಂದಿದೆ.ಹೆಚ್ಚಿನ ವೈರಸ್‍ಗಳು ವಿಂಡೋಸ್ ಕಾರ್ಯನಿರ್ವಹಣಾ ತಂತ್ರಾಂಶವನ್ನು ಹೊಂದಿದ ಕಂಪ್ಯೂಟರುಗಳನ್ನು ಬಾಧಿಸುವಂತವು.ಇದಕ್ಕೆ ಒಂದು ಕಾರಣ ವಿಂಡೋಸ್‍ನ ಜನಪ್ರಿಯತೆಯೂ ಆಗಿರಬಹುದು.ವೈರಸ್ ಬಾಧೆಯಿಂದ ಮುಕ್ತರಾಗಲು ಸುಲಭ ಮಾರ್ಗ ವಿಂಡೋಸ್ ತೊರೆದು ಲಿನಕ್ಸ್‍ನಂತಹ ಸುಭದ್ರ ತಂತ್ರಾಂಶಗಳಿಗೆ ಶರಣು ಹೋಗುವುದುದಾಗಿದೆ.ವೈರಸ್ ತಂತ್ರಾಂಶಗಳು ಪಾಸ್‍ವರ್ಡ್ ಕದಿಯಲು ಬಳಕೆಯಾಗುವುದೇ ಹೆಚ್ಚು ಎಂದು ಸಿಮ್ಯಾಂಟೆಕ್ ಕಂಪೆನಿಯ ಅನುಭವವಂತೆ.
ಇಪ್ಪತ್ತು ಸಾವಿರಕ್ಕೆ ಟೇಬಲ್ ಟಾಪ್ ಪಿಸಿ
 ಡೆಸ್ಕ್‍ಟಾಪ್ ಪಿಸಿಗಳಲ್ಲಿ ಸಿಪಿಯು ಮದರ್‌ಬೋರ್ಡ್ ಇತ್ಯಾದಿ ಪರಿಕರಗಳನ್ನು ಹೊತ್ತ "ಟವರ್" ಕ್ಯಾಬಿನೆಟ್ ಇರುತ್ತದೆ ತಾನೇ? ಈಗ ಹೊಸದಾಗಿ ಮಾರುಕಟ್ಟೆಗೆ ಬಂದಿರುವ ಜೆನಿತ್ ಕಂಪೆನಿಯ ಸ್ಮಾರ್ಟ್ ಸ್ಟೈಲ್  ಪಿಸಿಯಲ್ಲಿ ಇದಿಲ್ಲ.ಬದಲಾಗಿ ಹದಿನೇಳು ಇಂಚಿನ ಮಾನಿಟರಿನಲ್ಲೇ ಇದರಲ್ಲಿರುವುದನ್ನು ಇಡುವ ವ್ಯವಸ್ಥೆಯಿದೆ. ಹಾಗಾಗಿ ಇದು ಡೆಸ್ಕ್‍ಟಾಪ್ ಮತ್ತು ಲ್ಯಾಪ್‍ಟಾಪ್ ನಡುವಣ ಟೇಬಲ್ ಟಾಪ್ ಕಂಪ್ಯೂಟರ್ ಎನ್ನಲಡ್ದಿಯಿಲ್ಲ.ಇಂಟೆಲ್ ಕಂಪೆನಿಯ ಡುವಲ್ ಕೋರ್ ಸಂಸ್ಕಾರಕ,ಎಂಭತ್ತು ಜಿಬಿಯ ಹಾರ್ಡ್‌ಡಿಸ್ಕ್ ಇವೆಲ್ಲಾ ಇವೆ.ಇಲ್ಲದ್ದು ಡಿವಿಡಿ ಡ್ರೈವ್.
ಹೊಸ ಬಗೆಯ ಸ್ಮರಣಕೋಶ ತಯಾರಿಸಲು ಐಬಿಎಂ ಸಜ್ಜು
 ಸದ್ಯ ಲಭ್ಯವಿರುವ ಎಂಪಿತ್ರೀ ಪ್ಲೇಯರ್‌ಗಳ ಸಾಮರ್ಥ್ಯವನ್ನು ನೂರು ಪಟ್ಟು ಹೆಚ್ಚಿಸಲಿರುವ ರೇಸ್‌ಟ್ರಾಕ್ ಎನ್ನುವ ತಂತ್ರಜ್ಞಾನವನ್ನು ಐಬಿಎಂ ಕಂಪೆನಿಯ ಸಂಶೋಧಕರು ಕಂಡು ಹಿಡಿದಿದ್ದಾರೆ.ನ್ಯಾನೋತಂತಿಯ ಹೊರಾವರಣದ ಕಾಂತೀಯ ವಲಯದಲ್ಲಿ ಮಾಹಿತಿ ಹಿಡಿದಿಡುವ ಈ ತಂತ್ರಜ್ಞಾನದ ರೂಪುರೇಷೆಗಳು ಈಗಾಗಲೇ ಸಿದ್ಧವಾಗಿದ್ದರೂ,ಇಂತಹ ಸ್ಮರಣಕೋಶವನ್ನಿನ್ನೂ ತಯಾರಿಸಲಾಗಿಲ್ಲ.ಕಂಪ್ಯೂಟರುಗಳಲ್ಲಿ ಹಾರ್ಡ್‌ಡಿಸ್ಕ್ ಮತ್ತು ಫ್ಲಾಶ್‍ಡ್ರೈವ್‌ಗಳ ಸ್ಥಾನವನ್ನು ಇಂತಹ ಸ್ಮರಣಕೋಶಗಳು ಹಿಡಿಯುವ ಸಾಧ್ಯತೆಯು ಉಜ್ವಲವಾಗಿದೆ.ಹಾರ್ಡ್‍ಡಿಸ್ಕ್ ತಿರುಗುವ ಭಾಗಗಳನ್ನು ಹೊಂದಿದ್ದು ನಿಧಾನಗತಿಯಲ್ಲಿ ಕೆಲಸ ಮಾಡುತ್ತದೆ.ಫ್ಲಾಶ್ ಡ್ರೈವ್ ದುಬಾರಿ ಮತ್ತು ಸೀಮಿತ ಸಮಯದ ಜೀವಿತಾವಧಿ ಹೊಂದಿದ್ದರೂ ಹಾರ್ಡ್ ಡಿಸ್ಕ್‌ಗೆ ಹೋಲಿಸಿದರೆ ಚುರುಕಿನ ಗತಿಯಲ್ಲಿ ಕೆಲಸ ಮಾಡುತ್ತದೆ.

ಆತ್ಮಹತ್ಯೆಗೆ ಪ್ರಚೋದನೆ ನೀಡುವ ಅಂತರ್ಜಾಲ ತಾಣಗಳೂ ಇವೆ!
 ಆತ್ಮಹತ್ಯೆಗೆ ಸಂಬಂಧಿಸಿದ ಅಂತರ್ಜಾಲ ತಾಣಗಳು ಅಂತರ್ಜಾಲದಲ್ಲಿ ಹೇರ್‍ಅಳವಾಗಿವೆಯಂತೆ.ಇವುಗಳಲ್ಲಿ ಕೆಲವಾದರೂ ಆತ್ಮಹತ್ಯೆಯ ಯೋಚನೆ ಬಂದವರಿಗೆ ನೈತಿಕ ಸ್ಥೈರ್ಯ ತುಂಬಿ ಅವರನ್ನು ಆತ್ಮಹತ್ಯೆಗೆ ಪ್ರಯತ್ನಿಸದಂತೆ ಸೇವೆ ನೀಡುವ ತಾಣಗಳೂ ಇವೆಯೆನ್ನುವುದು ಸಮಾಧಾನದ ವಿಷಯ.ವಿಷಯಕ್ಕೆ ಸಂಬಂಧಿಸಿದ ತಾಣಗಳ ಸಂಖ್ಯೆ ಇನ್ನೂರೈವತ್ತರ ಸಮೀಪವಿವೆ.ಅವುಗಳ ಪೈಕಿ ಆತ್ಮಹತ್ಯೆ ತಡೆಯಲು ಪ್ರಯತ್ನಿಸುವ ತಾಣಗಳು ಶೇಕಡಾ ಹದಿಮೂರು. ಬಹುತೇಕ ತಾಣಗಳು ಆತ್ಮಹತ್ಯೆಗೆ ಲಭ್ಯವಿರುವ ಸುಲಭ ಮಾರ್ಗಗಳೇ ಮುಂತಾದ ವಿವರಗಳನ್ನು ಒದಗಿಸುವುದು ಅಧ್ಯಯನದಿಂದ ತಿಳಿದು ಬಂದಿದೆ.ಆಕ್ಸ್‍ಫರ್ಡ್,ಬ್ರಿಸ್ಟಲ್ ಮತ್ತು ಮ್ಯಾಂಚೆಸ್ಟರ್ ಅಂತಹ ವಿಶ್ವವಿದ್ಯಾಲಯಗಳು ಈ ಅಧ್ಯಯನವನ್ನು ನಡೆಸಿವೆ.

udayavani

ashokworld
*ಅಶೋಕ್‍ಕುಮಾರ್ ಎ