ಬೆಂಗಳೂರು ಮಳೆ : ತಲೆಬರಹಗಳ ಸೊಗಸು

ಬೆಂಗಳೂರು ಮಳೆ : ತಲೆಬರಹಗಳ ಸೊಗಸು

ಬರಹ

 
  ಇಲಿಗೆ ಪ್ರಾಣಸಂಕಟವಾಗಿರುವಾಗ ಬೆಕ್ಕಿಗೆ ಚೆಲ್ಲಾಟವಂತೆ. ಕರ್ನಾಟಕದ ಹಲವು ಪ್ರದೇಶಗಳು ಮಳೆಯ ಹೊಡೆತಕ್ಕೆ ಬಕ್ಕಬೋರಲಾಗಿ ಬಿದ್ದಿರುವಾಗ ನಾನಿಲ್ಲಿ ತಲೆಬರಹ ಕುರಿತ ತಲೆಹರಟೆ ಮಾಡಹೊರಟಿದ್ದೇನೆ, ಕ್ಷಮೆಯಿರಲಿ.
  ಬೆಂಗಳೂರು ನಗರವು ನಿನ್ನೆ (ಶುಕ್ರವಾರ) ಕಂಡ ಕಲಶ-ದೊನ್ನೆ ಮಳೆ(!) ಅರ್ಥಾತ್ ಕುಂಭದ್ರೋಣ ಮಳೆಯ ವರದಿಯನ್ನು ಇಂದು (ಶನಿವಾರ) ಮುಖಪುಟದ ಪ್ರಧಾನ ಸುದ್ದಿಯಾಗಿ ಪ್ರಕಟಿಸಿರುವ ಕನ್ನಡ ದಿನಪತ್ರಿಕೆಗಳು ಈ ವರದಿಗೆ ನೀಡಿದ ತಲೆಬರಹಗಳ ಸೊಗಸನ್ನು ತಿಳಿಸುವುದು ನನ್ನೀ ತಲೆಹರಟೆಯ ಉದ್ದೇಶ. ಪೈಪೋಟಿಯಿಂದೆಂಬಂತೆ ನಮ್ಮ ದಿನಪತ್ರಿಕೆಗಳು ಪ್ರತಿದಿನ ಸುದ್ದಿಗಳಿಗೆ ಅರ್ಥಗರ್ಭಿತವೂ ಆಕರ್ಷಕವೂ ಅದ ತಲೆಬರಹಗಳನ್ನು ನೀಡುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಬೆಂಗಳೂರಿನ ಮಳೆಯ ಸುದ್ದಿಗೆ ಇಂದು ಪತ್ರಿಕೆಗಳು ನೀಡಿರುವ ಮುಖಪುಟ ಶೀರ್ಷಿಕೆಗಳೂ ಈ ಪೈಪೋಟಿಯಿಂದ ಹೊರತಾಗಿಲ್ಲ.
  "ಸಂಯುಕ್ತ ಕರ್ನಾಟಕ"ವು ರಾಜ್ಯದ ಹಲವೆಡೆಯ ಮಳೆಸುದ್ದಿಗೆ, ಒಟ್ಟಾಗಿ, "ಎಲ್ಲೆಲ್ಲೂ ಮಳೆ ಆರ್ಭಟ" ಎಂದು ಸಾಮಾನ್ಯ ತಲೆಬರಹ ನೀಡಿ, ಬೆಂಗಳೂರಿನ ಬಗ್ಗೆ, "ರಾಜಧಾನಿಯಲ್ಲೂ ವರುಣನ ರೌದ್ರಾವತಾರ" ಎಂಬ ಚರ್ವಿತಚರ್ವಣ ಉಪಶೀರ್ಷಿಕೆ ಕೊಟ್ಟು (ಮಳೆನೀರಿನಲ್ಲಿ) ಕೈತೊಳೆದುಕೊಂಡಿದೆ.
  "ಪ್ರಜಾವಾಣಿ"ಯು, "ಅಬ್ಬರದ ಮಳೆಗೆ ನಗರ ತತ್ತರ" ಎಂದು ತನ್ನ ಸಾಂಪ್ರದಾಯಿಕ ಶೈಲಿಯಲ್ಲಿ ತಲೆಬರಹ ನೀಡಿದರೆ "ಕನ್ನಡಪ್ರಭ"ವು, "ಉತ್ತರೆಗೆ ಬಿಬಿಎಂಪಿ ನಿರುತ್ತರ" ಎಂಬ ಶೀರ್ಷಿಕೆ ನೀಡುವ ಮೂಲಕ "ಪ್ರಜಾವಾಣಿ"ಯ ತಲೆಬರಹದ ಲಯ ಮತ್ತು ಪ್ರಾಸದಲ್ಲೇ ದಾಳ ಉದುರಿಸಿರುವುದು ಆಕಸ್ಮಿಕ ಸಂಯೋಗ! "ಕನ್ನಡಪ್ರಭ"ದ ಶೀರ್ಷಿಕೆ ಹೆಚ್ಚು ಆಕರ್ಷಕ ಮತ್ತು ಹೆಚ್ಚು ಅರ್ಥಪೂರ್ಣವೆಂಬುದಿಲ್ಲಿ ಗಮನಾರ್ಹ. ಇವೆರಡೂ ಪತ್ರಿಕೆಗಳ ತಲೆಬರಹಗಳ ಸಮ್ಮಿಶ್ರಣವೆಂಬಂತೆ "ಉದಯವಾಣಿ"ಯು, "ಉತ್ತರೆಗೆ ಜನ ತತ್ತರ" ಎಂಬ ಶೀರ್ಷಿಕೆ ನೀಡಿರುವುದೂ ಕಾಕತಾಳೀಯ!
  ಪದಪ್ರಾಸ ಮತ್ತು ಅಕ್ಷರಚಾತುರ್ಯಗಳಿಗೆ ಹೆಸರಾಗಿರುವ "ವಿಜಯ ಕರ್ನಾಟಕ"ವು ಕೇವಲ ಪದಪ್ರಾಸದ ಮೊರೆಹೊಕ್ಕು, "ಮುನಿದ ವರುಣ, ನಗರ ದಾರುಣ" ಎಂಬ ತಲೆಬರಹ ನೀಡಿ, ಜೊತೆಗೆ, "ಎರಡು ಗಂಟೆಯಲ್ಲಿ ದಶಕದ ದಾಖಲೆ ಮಳೆ, ಇನ್ನೂ ಇದೆ ನಾಲ್ಕು ದಿನ ರಗಳೆ" ಎಂದು ಉಪಶೀರ್ಷಿಕೆಯಲ್ಲೂ ಅಂತ್ಯಪ್ರಾಸ ಮೆರೆದು ವಿಜಯ ತನ್ನದೆಂದು ಬಹುಶಃ ಭ್ರಮಿಸಿದೆ. ("ಸುರಿದ ಉತ್ತರಾ, ರಾಜ್ಯ ತತ್ತರ" ಎಂಬ ವಿ.ಕ.ದ ತಲೆಬರಹ ಕೂಡ ಆಕಸ್ಮಿಕ ಸಂಯೋಗ.) ಆದರೆ ವಿಜಯಿ ಮಾತ್ರ "ಹೊಸ ದಿಗಂತ".
  "ಮರಣ ಮೃದಂಗ" ಎಂಬ ಜನಪ್ರಿಯ ನುಡಿಗಟ್ಟಿಗೆ ಸಂವಾದಿಯೆಂಬಂತೆ, "ಬೆಂಗಳೂರಿನಲ್ಲಿ ವರುಣ ಮೃದಂಗ" ಎಂಬ ಅರ್ಥಗರ್ಭಿತ ಉಪಶೀರ್ಷಿಕೆ ನೀಡಿರುವುದಲ್ಲದೆ, ಪ್ರಸ್ತುತ ಪ್ರತಿಯೊಬ್ಬರ ಬಾಯಲ್ಲೂ ಧ್ವನಿಸುತ್ತಿರುವ, "ಲೈಫು ಇಷ್ಟೇನೆ!" ಎಂಬ ("ಪಂಚರಂಗಿ" ಚಲನಚಿತ್ರದ) ಉಪಶೀರ್ಷಿಕೆ ಕಂ ಹಾಡಿನ ಸಾಲನ್ನು ಬಳಸಿಕೊಂಡು, "ಸಿಟಿ ಲೈಫು ಇಷ್ಟೇನೇ!!" ಎಂಬ ಅದ್ಭುತ, ಅರ್ಥಪೂರ್ಣ ತಲೆಬರಹ ನೀಡಿದೆ "ಹೊಸ ದಿಗಂತ".
  ಇಲ್ಲಿಗೆ ತಲೆಹರಟೆ ಸಮಾಪ್ತಂ.