ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಜಟಕಾ ನಿಲುಗಡೆಗೆ ನಿರಾಕರಣೆ
“ವಿಮಾನ ನಿಲ್ದಾಣದ ಗುಣಮಟ್ಟ ಸಮರ್ಪಕವಾಗಿಲ್ಲ”
ಬೆಂಗಳೂರು,ಫೆ.೧೬: ದೇವನಹಳ್ಳಿಯ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಟಕಾ ಬಂಡಿ ನಿಲುಗಡೆ ಸಾಧ್ಯವಿಲ್ಲ ಎಂದು ಅಖಿಲ ಭಾರತ ಟಾಂಗಾ ಚಾಲಕರ ಸಂಘದ ಅಧ್ಯಕ್ಷ ಟಾಂಗಪ್ಪ ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಪಾರ್ಕಿಂಗ್ ಲಾಟ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. “ಬೆಂಗಳೂರು ವಿಮಾನ ನಿಲ್ದಾಣದ ಗುಣಪಟ್ಟ ತೀರಾ ಕಳಪೆಯಾಗಿದೆ. ಇದು ಜಟಕಾ ಗಾಡಿ ನಿಲ್ದಾಣದ ಹಾಗಿದೆ. ಕಟ್ಟಡಗಳು ಬೆಂಕಿಪೊಟ್ಟಣದ ಹಾಗಿವೆ ಎಂದು ಉಚ್ಛ ನ್ಯಾಯಾಲಯವೇ ಮಂಗಳಾರತಿ ಎತ್ತಿದೆ. ಭಾರತದ ಎಲ್ಲಾ ಟಾಂಗಾ ಗಾಡಿ ಚಾಲಕರ ಪರವಾಗಿ ನಾವು ಉಚ್ಛ ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳುವುದೇನೆಂದರೆ, ಈ ವಿಮಾನ ನಿಲ್ದಾಣ ಜಟಕಾ ನಿಲ್ದಾಣವಾಗುವುದಕ್ಕೂ ತಕ್ಕ ಗುಣ ಮಟ್ಟವನ್ನು ಹೊಂದಿಲ್ಲ. ಹೀಗಾಗಿ ಮಾನ್ಯ ನ್ಯಾಯಾಧೀಶರು ಜಟಕಾ ಬಂಡಿ ನಿಲ್ದಾಣದ ಹೋಲಿಕೆಯನ್ನು ಕೈಬಿಡಬೇಕು.”
ಹೈಕೋರ್ಟಿನ ನ್ಯಾಯಾಧೀಶರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯದರ್ಶಿ ಅನುಮಾನ್ ಸಿಂಗ್ ವಿಮಾನ ನಿಲ್ದಾಣವನ್ನು ಜಟಕಾ ಬಂಡಿ ನಿಲ್ದಾಣವಾಗಿಯೂ ಬಳಸಬಹುದು ಎಂಬುದು ಇದರ ವೈವಿಧ್ಯಮಯ ಉಪಯುಕ್ತತೆಯನ್ನು ಸಾರುತ್ತದೆ. ನಮ್ಮ ವಿಮಾನ ನಿಲ್ದಾಣವನ್ನು ದೇಶ, ವಿದೇಶಗಳ ವಿಮಾನಗಳ ಓಡಾಟವನ್ನು ಹೊರತು ಪಡಿಸಿ ಅನೇಕ ಕೆಲಸಗಳಿಗೆ ಬಳಸಬಹುದು. ಹೈಟಿಯಲ್ಲಿ ಆದಂತೆ ಭೂಕಂಪವಾದರೆ ರಾಜ್ಯದ ಮುಖ್ಯಮಂತ್ರಿ ರನ್ ವೇ ಮೇಲೆ ಟೆಂಟ್ ಹಾಕಿಕೊಂಡು ಜೀವ ಉಳಿಸಿಕೊಳ್ಳಬಹುದು. ಬಿಲ್ಡರುಗಳ ಹಾವಳಿಯಿಂದ ಆಟದ ಮೈದಾನ ಕಳೆದುಕೊಂಡ ಶಾಲಾ ಮಕ್ಕಳು ಬೇಕಾದ ಆಟವನ್ನು ಆಡಬಹುದು. ಸಾರ್ವಜನಿಕ ಮೂತ್ರಿಗಳ ವೆಚ್ಚ ಭರಿಸಲಾಗದ ಶ್ರೀಸಾಮಾನ್ಯರು ಬಯಲನ್ನು ಸದುಪಯೋಗ ಪಡಿಸಿಕೊಳ್ಳಬಹುದು.
ಅಷ್ಟೇ ಅಲ್ಲದೆ ಫೇಣಿಗಳು ನೈಸಾದ ರಸ್ತೆಯನ್ನು ಹಾಕಬಹುದು. ಅದರ ಮೇಲೆ ವೇದೇಗೌಡರು ಧರಣಿಯನ್ನು ಹಮ್ಮಿಕೊಳ್ಳಬಹುದು. ಮಾಧ್ಯಮದ ಮಂದಿ ಇಲ್ಲೇ ಕುಳಿತು ಅಂತರರಾಷ್ಟ್ರೀಯ ಸುದ್ದಿಗಳನ್ನು ಸೃಷ್ಟಿಸಬಹುದು. ಗಾಂಧಿನಗರದಲ್ಲಿ ಕತೆ ಖಾಲಿಯಾದ ನಿರ್ದೇಶಕರು, ಪರೀಕ್ಷೆಯಲ್ಲಿ ತಲೆ ಖಾಲಿಯಾದ ವಿದ್ಯಾರ್ಥಿಗಳು ಇಲ್ಲಿನ ನಿರ್ಜನ ಬಯಲುಗಳಲ್ಲಿ ಸ್ಪೂರ್ತಿ ಗಳಿಸಿಕೊಳ್ಳಬಹುದು. ಇಂತಹ ಬಹುಪಯೋಗಿ ವಿಮಾನ ನಿಲ್ದಾಣವನ್ನು ಕಟ್ಟಿರುವ ನಮ್ಮ ಸಾಧನೆಯನ್ನು ಗುರುತಿಸುವ ಕೆಲಸವಾಗುತ್ತಿಲ್ಲ. ವಿಮಾನ ಓಡಾಟಕ್ಕೆ ತಕ್ಕ ಗುಣಮಟ್ಟವಿಲ್ಲ ಎಂಬ ಒಂದೇ ಕಾರಣಕ್ಕೆ ಟೀಕಿಸುವುದು ಸರಿಯಲ್ಲ.
ವಿಮಾನ ನಿಲ್ದಾಣದ ಸುತ್ತ ಹರಡಿಕೊಂಡ ವಿವಾದಗಳು, ಎದ್ದಿರುವ ಅಡ್ಡಿ ಆತಂಕಗಳಿಗೆ ಕಾರಣ ವಾಸ್ತು ದೋಷ ಎಂದು ಗುರುತಿಸಿದ್ದಾರೆ ಖ್ಯಾತ ವಾಸ್ತು ತಜ್ಞ ದೋಷಾನಂದ ಸ್ವಾಮಿಯವರು. “ನೂರಾರು ದಿಕ್ಕುಗಳಿಂದ ಗಾಳಿಯನ್ನು ಒದ್ದುಕೊಂಡು ಚಲಿಸುವ, ಸಾವಿರಾರು ವಿಮಾನಗಳು ಹತ್ತಿ ಇಳಿಯುವ ಜಾಗಕ್ಕೆ ಮೇಲ್ಛಾವಣೆಯನ್ನೇ ಹಾಕಲು ಮರೆತಿದ್ದಾರೆ. ಈ ಲೋಪದಿಂದ ವಿಮಾನ ನಿಲ್ದಾಣದ ಪ್ರಭೆಯು ಬಿಸಿಲಿಗೆ ಆವಿಯಾಗಿ ಆಕಾಶಕ್ಕೆ ಹಾರುತ್ತಿದೆ. ವಿಮಾನಗಳು ಸಮುದ್ರೋಲ್ಲಂಘನ ನಡೆಸುವ ಉಕ್ಕಿನ ಹಕ್ಕಿಗಳಾಗಿರುವುದರಿಂದ ನಿಲ್ದಾಣದ ಗ್ರಹಚಾರ ಯಾವಾಗಲೂ ಕೆಟ್ಟದಾಗೇ ಇರುತ್ತದೆ ಎಂದು ಸಮಯಸಂಹಾರ ಶಾಸ್ತ್ರವು ತಿಳಿಸುತ್ತದೆ. ಈ ದೋಷ ಪರಿಹಾರಕ್ಕಾಗಿ ವಿಮಾನ ನಿಲ್ದಾಣದಲ್ಲಿಯೇ ಸರ್ವಧ್ವಂಸ ಯಾಗವನ್ನು ಮಾಡಿ ವರ್ಷಕ್ಕೊಂದು ವಿಮಾನವನ್ನು ಆಹುತಿಯಾಗಿ ಅರ್ಪಿಸಬೇಕು.” ಎಂದಿದ್ದಾರೆ.