ಬೆಂಗ್ಳೂರಲ್ಲಿ ಬಾಂಬ್ ಸ್ಫೋಟ : ಜನರ ಬೆಚ್ಚಿ ಬೀಳಿಸಿದ ಘಟನೆ

ಬೆಂಗಳೂರಿನ ಹೋಟೇಲ್ ಒಂದರಲ್ಲಿ ಬಾಂಬ್ ಸ್ಫೋಟಿಸಿರುವ ಘಟನೆ ಉದ್ಯಾನನಗರಿಯ ಜನರನ್ನು ಬೆಚ್ಚಿ ಬೀಳಿಸಿದೆ. ಹೆಚ್ಚುಕಮ್ಮಿ ೧೦ ವರ್ಷಗಳ ಬಳಿಕ ರಾಜಧಾನಿಯಲ್ಲಿ ಬಾಂಬ್ ಸ್ಫೋಟಿಸಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದ ಸಮಯದಲ್ಲಿ ಬಾಂಬ್ ಸ್ಫೋಟಿಸಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. ಆದರೆ ಕೆಲವು ಗಾಯಗೊಂಡಿದ್ದಾರೆ. ಸಾವು ನೋವಿಗಿಂತ ಹೆಚ್ಚಾಗಿ, ಭಯೋತ್ಪಾದಕ ದಾಳಿಯೊಂದು ನಡೆದಿದೆ ಎಂಬುದೇ ಅಘಾತಕಾರಿ ಸಂಗತಿ. ಬೆಂಗಳೂರಿನಲ್ಲಿ ಉಗ್ರರ ಸ್ಲೀಪರ್ ಸೆಲ್ ಗಳು ಸಕ್ರಿಯವಾಗಿವೆ ಎಂಬುದಕ್ಕೆ ಇದು ಸಾಕ್ಷಿ. ಇತ್ತೀಚಿನ ಕೆಲ ತಿಂಗಳಲ್ಲಿ ಸಾಕಷ್ಟು ಶಂಕಿತ ಭಯೋತ್ಪಾದಕರನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದರು. ಪೋಲೀಸರ ನಿಗಾ ಹಾಗೂ ಕಟ್ಟೆಚ್ಚರದ ಹೊರತಾಗಿಯೂ ಉಗ್ರರು ಬಾಂಬ್ ಸ್ಫೋಟಿಸಿರುವುದು ಭದ್ರತಾ ವ್ಯವಸ್ಥೆ ಇನ್ನಷ್ಟು ಚುರುಕಾಗಿರಬೇಕಾದುದರ ಅಗತ್ಯವನ್ನು ತೋರಿಸುತ್ತದೆ.
ಎರಡು ವರ್ಷಗಳ ಹಿಂದಷ್ಟೇ ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟಿಸಿತ್ತು. ಬೆಂಗಳೂರಿನಲ್ಲಿ ಕಳೆದ ಬಾರಿ ಸ್ಪೋಟ ಸಂಭವಿಸಿದ್ದು ೨೦೧೪ರಲ್ಲಿ. ಹೊಸ ವರ್ಷಾಚರಣೆಗೂ ಮುನ್ನ ಚರ್ಚ್ ಸ್ಟ್ರೀಟ್ ನ ಜನನಿಬಿಡ ಸ್ಥಳದಲ್ಲಿ ಉಗ್ರರು ಬಾಂಬ್ ಸ್ಪೋಟಿಸಿದ್ದರು. ಅದಕ್ಕೂ ಮುನ್ನ ೨೦೧೩ರಲ್ಲಿ ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ಸ್ಪೋಟ ಸಂಭವಿಸಿತ್ತು. ೨೦೦೮ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ, ಅದೇ ವರ್ಷ ಮಡಿವಾಳ ಬಳಿ ಸರಣಿ ಸ್ಪೋಟ ಸಂಭವಿಸಿತ್ತು. ೨೦೦೫ರಲ್ಲಿ ಐಐಎಸ್ ಸಿ ಬಳಿ ವಿಜ್ಞಾನಿಯನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದರು. ಬಹುತೇಕ ಎಲ್ಲ ಪ್ರಕರಣಗಳಲ್ಲೂ ಆರೋಪಿಗಳನ್ನು ಬಂಧಿಸಲಾಗಿದೆ. ಕೆಲಪ್ರಕರಣಗಳು ಇತ್ಯರ್ಥಗೊಂಡು ಉಗ್ರರಿಗೆ ಶಿಕ್ಷೆಯಾಗಿದೆ. ಇನ್ನು ಕೆಲ ಪ್ರಕರಣಗಳು ಕೋರ್ಟ್ ಗಳಲ್ಲಿ ವಿಚಾರಣೆಯ ಹಂತದಲ್ಲೇ ಇವೆ. ಭಯೋತ್ಪಾದನಾ ಕೃತ್ಯಗಳಲ್ಲಿ ಆರೋಪಿಗಳನ್ನು ಬಂಧಿಸಿ ಶಿಕ್ಷೆಯಾಗುವಂತೆ ಮಾಡುವುದು ತನಿಖಾ ಸಂಸ್ಥೆಗಳಿಗೆ ಸುಲಭವಲ್ಲ. ಈಗ ಸಂಭವಿಸಿದ ಸ್ಫೋಟದ ಸಂಬಂಧ ಭಯೋತ್ಪಾದನಾ ಕೃತ್ಯಗಳನ್ನು ತನಿಖೆ ನಡೆಸುವ ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ವೇ ತನಿಖೆ ನಡೆಸುತ್ತದೆ. ಸ್ಥಳೀಯ ಪೋಲೀಸರು ಸಹಕಾರ ನೀಡಿ, ತಪ್ಪಿತಸ್ಥರನ್ನು ತ್ವರಿತವಾಗಿ ಪತ್ತೆಹಚ್ಚಿ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಿದೆ. ಭಯೋತ್ಪಾದಕರು ರಕ್ತಬೀಜಾಸುರರಿದ್ದಂತೆ. ಕೇವಲ ಅವರನ್ನು ಶಿಕ್ಷಿಸಿ ಭಯೋತ್ಪಾದನೆಯನ್ನು ಕೊನೆಗೊಳಿಸಲು ಸಾಧ್ಯವಿಲ್ಲ. ಉಗ್ರವಾದವನ್ನು ಮೂಲದಲ್ಲೇ ಚಿವುಟಿಹಾಕುವ ಕೆಲಸ ಆಗಬೇಕು. ಈ ವಿಷಯದಲ್ಲಿ ತನಿಖಾ ಸಂಸ್ಥೆಗಳಿಗೆ ಇರುವಷ್ಟೇ ಜವಾಬ್ದಾರಿ ಸಮಾಜದ ಮೇಲೂ ಇದೆ. ಹೋಟೇಲ್ ನಲ್ಲಿ ಸಂಭವಿಸಿದ ಸ್ಪೋಟದಿಂದಾಗಿ ಬೆಂಗಳೂರಿಗರು ಹೊರಗೆ ಓಡಾಡುವುದಕ್ಕೆ ಹಾಗೂ ಜನನಿಬಿಡ ಸ್ಥಳಗಳಿಗೆ ಹೋಗುವುದಕ್ಕೆ ಹೆದರುವಂತಾಗಿದೆ. ಹೀಗೆ ಭೀತಿ ಸೃಷ್ಟಿಸುವುದೇ ಭಯೋತ್ಪಾದಕರ ಉದ್ದೇಶ. ಸಾರ್ವಜನಿಕ ಸ್ಥಳಗಳನ್ನು ಇನ್ನಷ್ಟು ಸುರಕ್ಷಿತಗೊಳಿಸುವುದಕ್ಕೆ ಪೋಲೀಸರು ಕ್ರಮ ಕೈಗೊಳ್ಳಬೇಕಿದೆ.
ಕೃಪೆ: ಕನ್ನಡಪ್ರಭ, ಸಂಪಾದಕೀಯ, ದಿ: ೦೨-೦೩-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ