ಬೆದರಿಕೆ ರಾಜತಾಂತ್ರಿಕತೆ ಬೇಡ

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ೨ನೇ ಇನ್ನಿಂಗ್ಸ್ ಜಗತ್ತಿನ ರಾಷ್ಟ್ರಗಳನ್ನು ಬಿಸಿ ಚರ್ಚೆಗಳ ಕಾವಲಿ ಮೇಲೆ ಕೂರಿಸಿದೆ. ಅಮೇರಿಕವೇ ಮೊದಲು, ಅಮೆರಿಕನ್ನರನ್ನು ಶ್ರೀಮಂತವಾಗಿಸುವ ಅವರ ಶಪಥಗಳೆಲ್ಲವೂ ಇತರೆ ರಾಷ್ಟ್ರಗಳನ್ನು ತನ್ನ ಬೆದರಿಕೆಯ ರಾಜತಾಂತ್ರಿಕ ಜಾಲದೊಳಕ್ಕೆ ಸಿಲುಕಿಸುವ ಅಪಾಯವನ್ನು ಒಳಗೊಂಡಿರುವಂತೆ ತೋರುತ್ತಿರುವುದು ಸ್ಪಷ್ಟ. ಆ ಪೈಕಿ ಬ್ರಿಕ್ಸ್ ರಾಷ್ಟ್ರಗಳಿಗೆ ಶೇ. ೧೦೦ ಆಮದು ಸುಂಕ ಹೇರುವ ಎಚ್ಚರಿಕೆಯೂ ‘ಬೆದರಿಕೆ ರಾಜತಾಂತ್ರಿಕತೆ’ ಯ ಒಂದು ಭಾಗವಷ್ಟೇ.
ಡಾಲರ್ ಗೆ ಪರ್ಯಾಯವಾಗಿ ಬ್ರಿಕ್ಸ್ ರಾಷ್ಟ್ರಗಳು ಕರೆನ್ಸಿ ಪರಿಚಯಿಸಿದರೆ, ಅದು ಅಮೇರಿಕದ ಆರ್ಥಿಕ ವಹಿವಾಟಿಗೆ ದೊಡ್ಡ ಕೊಡಲಿಪೆಟ್ಟು ಎನ್ನುವುದು ಟ್ರಂಪ್ ಗೆ ಈಗಾಗಲೇ ಮನವರಿಕೆಯಾದಂತಿದೆ. ರಷ್ಯಾ ಹಾಗೂ ಚೀನಾ ಈ ಹಿಂದಿನ ಬ್ರಿಕ್ಸ್ ಸಭೆಗಳಲ್ಲಿ ಪರ್ಯಾಯ ಜಾಗತಿಕ ಕರೆನ್ಸಿ ಬಗ್ಗೆ ಒಲವು ವ್ಯಕ್ತಪಡಿಸಿರುವುದು ಅಮೇರಿಕದ ಬೇಗುದಿಗೆ ಕಾರಣ. ಈಗಾಗಲೇ ವಿಶ್ವದಲ್ಲಿ ಬ್ರಿಕ್ಸ್ ಗುಂಪಿನ ಪ್ರಭಾವ ವಿಸ್ತಾರಗೊಳ್ಳುತ್ತಿದೆ. ಹೂಡಿಕೆ ಕಲ್ಪನೆಯೊಂದಿಗೆ ಬ್ರೆಜಿಲ್, ರಷ್ಯಾ, ಭಾರತ, ಚೀನಾದಿಂದ ಆರಂಭವಾದ ಈ ಗುಂಪಿನ ವಿಸ್ತಾರ ಈಗಾಗಲೇ ೧೦ ದೇಶಗಳನ್ನು ಒಳಗೊಂಡಿದೆ. ಇಲ್ಲಿನ ರಾಷ್ಟ್ರಗಳು ದೊಡ್ಡ ಪ್ರಮಾಣದ ಉತ್ಪಾದಕರು ಅಲ್ಲದೆ, ವಿಶ್ವ ಮಾರುಕಟ್ಟೆಯ ದೊಡ್ಡ ಗ್ರಾಹಕರೂ ಹೌದು. ಅಮೆರಿಕದ ಪ್ರಾಬಲ್ಯವಿರುವ ಜಗತ್ತಿನಲ್ಲಿ ಬ್ರಿಕ್ಸ್ ತನ್ನ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವುದು ವಿಶ್ವ ಮಾರುಕಟ್ಟೆಯ ವಿಭಜನೆಯನ್ನೂ ಸೂಚಿಸುತ್ತಿದೆ.
ದಿನಕಳೆದಂತೆ ಬ್ರಿಕ್ಸ್ ನ ಕಾಲುಗಳು ಗಟ್ಟಿಕೊಳ್ಳುತ್ತಿದ್ದು, ಈ ದೇಶಗಳು ೧೦೦ ಡಾಲರ್ ಶತಕೋಟಿ ವಿನಿಮಯ ಸಂಗ್ರಹಿಸುವ ತೀರ್ಮಾನಕ್ಕೂ ಬಂದಾಗಿದೆ. ಪರಸ್ಪರ ಸಾಲ ನೀಡಲು ತುರ್ತು ಸಂದರ್ಭಗಳಲ್ಲಿ ಈ ಹಣ ಬಳಕೆಯಾಗಲೂ ಬಹುದು. ವಿಶ್ವಬ್ಯಾಂಕ್ ಮಾದರಿಯಲ್ಲಿ ಸಾಲ ನೀಡುವ ನ್ಯೂ ಡೆವಲಪ್ ಮೆಂಟ್ ಬ್ಯಾಂಕ್ ಅನ್ನೂ ಇವು ಸ್ಥಾಪಿಸಿಕೊಂಡಿವೆ. ಇವೆಲ್ಲ ನಡೆಗಳು ಸಹಜವಾಗಿ ಡಾಲರಿನ ಅವಲಂಬನೆ ತಗ್ಗಿಸಲು ತೆಗೆದುಕೊಂಡಿರುವ ಉಪಕ್ರಮಗಳೂ ಆಗಿರಬಹುದು. ಗಮನಿಸಬೇಕಾದಂಥ ವಿಚಾರವೆಂದರೆ, ಪರ್ಯಾಯ ಕರೆನ್ಸಿ ಬಗೆಗಿನ ಬ್ರಿಕ್ಸ್ ಪ್ರಸ್ತಾಪಕ್ಕೆ ಭಾರತ ಈವರೆಗೂ ಯಾವುದೇ ಸಮ್ಮತಿ ಸೂಚಿಸಿಲ್ಲ. ರಷ್ಯಾ, ಚೀನಾ, ಇರಾನ್ ಈ ನಿಟ್ಟಿನಲ್ಲಿ ತುದಿಗಾಲಿನಲ್ಲಿ ನಿಂತಿರಬಹುದು. ಇದು ಅಮೇರಿಕಕ್ಕೆ ತಿಳಿಯದ ವಿಚಾರವೇನೂ ಅಲ್ಲ. ಅಮೇರಿಕದೊಂದಿಗೆ ಭಾರತ ಯಾವ ಆಪ್ತ ಬಾಂಧವ್ಯ ಇಟ್ಟುಕೊಂಡಿದೆಯೋ, ರಷ್ಯಾದೊಟ್ಟಿಗೂ ಅದೇ ಆತ್ಮೀಯತೆಯೊಂದಿಗೆ ಹೆಜ್ಜೆಯಿಡುತ್ತಿದೆ. ಈ ಭೌಗೋಳಿಕ ರಾಜಕೀಯ ಸೂತ್ರ ಅನುಸರಿಸುವುದು ಅಲಿಪ್ತ ನೀತಿಯ ಭಾರತಕ್ಕೆ ಅನಿವಾರ್ಯ ಕೂಡ.
ಅಮೇರಿಕ ಸಿಟ್ಟು ರಷ್ಯಾ, ಚೀನಾ ಮೇಲಿದ್ದಿರಬಹುದು. ಈ ಎರಡೂ ದೇಶಗಳಿಗೆ ಪಾಠ ಕಲಿಸಲು ಹೋಗಿ ಇಡೀ ಕೂಟಕ್ಕೇ ಸುಂಕದ ಬರೆ ಎಳೆಯುವುದರಲ್ಲಿ ಅರ್ಥವಿಲ್ಲ. ಡಾಲರನ್ನು ಮುಂದಿಟ್ಟುಕೊಂಡು ಇಡೀ ಜಗತ್ತನ್ನು ತನ್ನ ಮುಷ್ಟಿಯಲ್ಲಿಟ್ಟುಕೊಳ್ಳುವ ಹಪಾಹಪಿಯನ್ನು ಅಮೇರಿಕ ಮೊದಲು ಕೈಬಿಡಲಿ. ರಾಷ್ಟ್ರಗಳು ಆಮದು-ರಫ್ತಿನ ಉತ್ಪನ್ನಗಳಿಗೆ ಪರಸ್ಪರ ತೆರಿಗೆ ಹೊರೆ ಹೆಚ್ಚಿಸುತ್ತಾ ಹೋದರೆ ಅಂತಿಮವಾಗಿ ಎಟು ತಿನ್ನುವುದು ಆಯಾ ರಾಷ್ಟ್ರಗಳ ಸಾಮಾನ್ಯ ಪ್ರಜೆಗಳಷ್ಟೇ. ಆಗರ್ಭ ಶ್ರೀಮಂತ ಅಮೇರಿಕದ ಆಡಳಿತ ತಾಯ್ತನದ ಬುನಾದಿ ಮೇಲಿರಬೇಕೇ ಹೊರತು, ದರ್ಪದ ಮೇಲಲ್ಲ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೩-೦೧-೨೦೨೫
ಚಿತ್ರ ಕೃಪೆ: ಅಂತರ್ಜಾಲತಾಣ