ಬೆಪ್ಪು ಹಣ
ಕವನ
ಆಗೊಮ್ಮೆ ರಾಷ್ಟ್ರೀಕರಣ
ಮತ್ತೊಮ್ಮೆ ಖಾಸಗೀಕರಣ
ಜೊತೆಜೊತೆಗೆ ಜಾಗತೀಕರಣ
ಉದರಿ ಸಿಗುವಲ್ಲೆಲ್ಲಾ ಉದಾರೀಕರಣ
ಕೆಲಸವಿಲ್ಲದ ಕೈಗೆ ಯಾಂತ್ರೀಕರಣ
ಪರಿಸರ ಹಾನಿಗೊಂದಿಷ್ಟು ಕೈಗಾರಿಕೀಕರಣ
ಕೊಳಚೆ ಸೃಷ್ಠಿಸುವ ನಗರೀಕರಣ
ಅಕ್ಷರ ಆರೋಗ್ಯಗಳಿಗೂ ವಾಣಿಜ್ಯೀಕರಣ
ಗೊತ್ತುಗುರಿಯಿಲ್ಲದ ಶಿಕ್ಷಣ
ದೇಶದ ಒಳಗೂ ಹೊರಗೂ ಬಚ್ಚಿಟ್ಟ ಕಪ್ಪು ಹಣ
ಅಭಿವೃದ್ದಿಯ ಹೋಳಿಗೆಯೊಳಗೆ ಬ್ರಷ್ಟಾಚಾರದ ಹೂರಣ
ಟಿ ವಿ ಯಲಿ ಕೆಟ್ಟ ಚಿತ್ರೀಕರಣ
ಶುದ್ದವಿಲ್ಲದೆ ತ್ರಿಕರಣ
ಎಲ್ಲದಕ್ಕೂ ರಾಜಕಾರಣ
ಜೊತೆಗಿಷ್ಟು ಭರವಸೆಯ ಭಾಷಣ
ಸದಾ ಸುದ್ದಿಯಲಿ
ಹಣ
ಹರಣ
ಹಗರಣ
ಅಪಹರಣ
ಹೀಗಿದ್ದರೂ ಸಹ ಆಶಾವಾದಿಯಾಗೋಣ
ಆಗದಿರಲಿ ಬಡತನದ ಸಾರ್ವತ್ರೀಕರಣ
ಹರಡದಿರಲಿ ವಿದೇಶೀ ವಿಕಿರಣ
ಇಷ್ಟಾದರೂ ಉಳಿಯಲಿ ನಮ್ಮ ವಾತಾವರಣ
ಹರಿಯದಿರಲಿ ಓಝೋನ್ ಆವರಣ
ಸುರಿಸದಿರಲಿ ಆಮ್ಲ ವರುಣ
ಕೊಂಡುಕೊಳ್ಳದಿರಲಿ ಸ್ವಾತಂತ್ರ್ಯವ ಬೆಪ್ಪು ಹಣ