ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ

ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ

ನಮಗೆ ಸಣ್ಣವರಿರುವಾಗ ಸಂಭ್ರಮ ತರುತ್ತಿದ್ದ ದೊಡ್ಡ ಹಬ್ಬ ಎಂದರೆ ದೀಪಾವಳಿ. ಏಕೆಂದರೆ ದೀಪಾವಳಿ ಬಂತು ಎನ್ನುವಾಗಲೇ ಹೊಸ ಬಟ್ಟೆ, ಸಿಹಿ ತಿಂಡಿಗಳು, ಪಟಾಕಿ ಎಲ್ಲವೂ ನೆನಪಿಗೆ ಬರುತ್ತಿದ್ದವು. ದೀಪಾವಳಿ ಹಬ್ಬವೇ ಹಾಗೆ. ಹೆಸರೇ ಹೇಳುವಂತೆ ದೀಪಗಳ ಹಬ್ಬ. ಈಗಿನಂತೆ ಆಗ ಪಟಾಕಿ ಸಿಡಿಸುವಲ್ಲಿ ನಿರ್ಬಂಧಗಳಿರಲಿಲ್ಲ. ಅಪ್ಪನ ಬಳಿ ಪಟಾಕಿಗೆ ಹಣ ತೆಗೆದು ಕೊಂಡು ಬಗೆ ಬಗೆಯ ಪಟಾಕಿಗಳನ್ನು ತಂದು ದೀಪಾವಳಿಯ ಮೂರೂ ದಿನ ಅದನ್ನು ಸಿಡಿಸಿ, ಹೊತ್ತಿಸಿ ಮಜಾ ಮಾಡುತ್ತಿದ್ದೆವು. ಇದರ ನಡುವೆ ಎಣ್ಣೆ ಸ್ನಾನ, ಸಿಹಿ ತಿಂಡಿ, ನೆಂಟರ ಆಗಮನ ಎಲ್ಲವೂ ನಡೆಯುತ್ತಿದ್ದವು.  

ಅತ್ಯಂತ ಪವಿತ್ರವಾದ, ಸಂಭ್ರಮದ ಹಬ್ಬ ದೀಪಾವಳಿ. ದೀಪಾವಳಿ ದೀಪಗಳನ್ನು ಬೆಳಗಿಸುವ, ಅಂಧಕಾರವನ್ನು ತೊಲಗಿಸುವ ಹಬ್ಬ. ಮನದ ಕತ್ತಲೆ, ಕಲ್ಮಶಗಳನ್ನು ಹೊರದೂಡುವ ಹಬ್ಬವೆಂದರೂ ತಪ್ಪಾಗಲಾರದು. ಕತ್ತಲೆ ಕಳೆದಾಗ ಬೆಳಕು ಬರಲೇ ಬೇಕು, ಇದು ಪ್ರಕೃತಿ ನಿಯಮ. ಅಜ್ಞಾನವೆಂಬ ಕತ್ತಲೆಯನ್ನು ಹೊರದೂಡಲು ಜ್ಞಾನವೆಂಬ ಬೆಳಕಿನ ಅರಿವು ಮತ್ತು ಹರಿವು ಎರಡೂ ಬೇಕು. ಮಂಗಳಕರವಾದ ದೀಪಾವಳಿಯನ್ನು ಸಂತಸ, ಸಡಗರ, ಸಂಭ್ರಮದಿಂದ ಎಲ್ಲರೂ ಒಗ್ಗೂಡಿ ಆಚರಿಸೋಣ.

ಹಬ್ಬಗಳ ಆಚರಣೆಯ ಹಿಂದೆ ಸಂಸ್ಕೃತಿ, ಸಂಪ್ರದಾಯಗಳ ಹೆಜ್ಜೆಗುರುತುಗಳಿವೆ. ನಾಲ್ಕಾರು ಜನರನ್ನು ಸೇರಿಸಿ, ಆಡಂಬರಕ್ಕಾಗಿ, ನಮ್ಮ ಐಶ್ವರ್ಯವನ್ನು ತೋರಿಸುವುದಕ್ಕಾಗಿ ಹಬ್ಬ ಆಚರಿಸಿದರೆ ಏನೂ ಪ್ರಯೋಜನವಿಲ್ಲ. ಪ್ರತಿಯೊಂದು ಆಚರಣೆಯ ಹಿಂದೆ ಒಂದು ಕಥೆಯಿದೆ, ಮೌಲ್ಯವಿದೆ ,ಉದ್ದೇಶವಿದೆ. ದೀಪದಿಂದ ದೀಪ ಹಚ್ಚೋಣ, ತಮಸೋಮ ಜ್ಯೋತಿರ್ಗಮಯ, ದೀಪದ ಬೆಳಕು ಪರಿಸರದಿ ಪಸರಿಸಿ ತನ್ನಿರವ ಹೇಳುತ್ತಾ ಕಾರ್ಗತ್ತಲೆಯ ಕಳೆಯಲಿ. ಭರವಸೆಯ ನೀಡಲಿ. ವಿಜಯದ ಸಂಕೇತವನ್ನು ವ್ಯಕ್ತಪಡಿಸಲಿ. ದುಷ್ಟತನದ ನಿರ್ಮೂಲನವಾಗಲಿ. ಒಳ್ಳೆಯತನ ಪ್ರಜ್ವಲಿಸಲಿ. ಹತಾಶೆ, ನೋವು, ಬೇಸರ ಎಲ್ಲವೂ ಕಳೆಯಲಿ. ಇದೇ ದೀಪಗಳ ಹಬ್ಬ ದೀಪಾವಳಿಯ ಒಳಗುಟ್ಟು.

ಪೌರಾಣಿಕ ಹಿನ್ನೆಲೆಯತ್ತ ತಿರುಗಿದರೆ ನರಕಾಸುರನೆಂಬ ದೈತ್ಯ ಪ್ರಾಗ್ಜೋತಿಷಪುರವನ್ನಾಳುತ್ತಿದ್ದನು. ದಿಗ್ವಿಜಯಕ್ಕೆ ಹೋದವನು ೧೬,೦೦೦ ನಾರಿಯರನ್ನು ತಂದು ಗೃಹಬಂಧನದಲ್ಲಿರಿಸಿ, ಏಕಕಾಲದಲ್ಲಿ ವಿವಾಹವಾಗುವ ಕನಸು ಕಾಣುತ್ತಿದ್ದನಂತೆ. ಮುಂದೆ ಮಹರ್ಷಿ ನಾರದರ ಸಲಹೆಯಂತೆ, ಸುರಪನ ಪತ್ನಿ ಶಚಿಯನ್ನು ಬಯಸಿ, ಯುದ್ಧ ಸಾರಿದನಂತೆ. ದೇವತೆಗಳನ್ನು ಹೊಡೆದೋಡಿಸಿ, ಅದಿತಿ ದೇವಿಯ ಕರ್ಣಕುಂಡಲಕ್ಕೆ ಕೈಯಿಕ್ಕಿದ ಪಾಪಿಯಾಗಿ, ದೇವಲೋಕದ ಸಂಪತ್ತನ್ನು ದೋಚಿದ ಪರಿಣಾಮವಾಗಿ, ಭಗವಾನ್ ಮಹಾವಿಷ್ಣುವಿನ ಅವತಾರವಾದ, ಭಕ್ತಜನ, ಅಸುರಾರಿ, ಮುರಹರಿ, ಮುಕುಂದನಾದ ದೇವ ಶ್ರೀಕೃಷ್ಣ ಸತ್ಯಭಾಮೆಯರಿಂದ ಮೋಕ್ಷವನ್ನು ಪಡೆಯುತ್ತಾನೆ. ನರಕನನ್ನು ಕೊಂದ ಬಳಿಕ ಶ್ರೀಕೃಷ್ಣ ಎಣ್ಣೆ ಹಚ್ಚಿ ಮಿಂದನೆಂಬ ನಂಬಿಕೆ. ಅದರ ಪ್ರತೀಕವಾಗಿ ವರ್ಷದ ಒಂದು ದಿನ ತಮವ ಕಳೆಯುವ ಬೆಳಕಿನ ಹಬ್ಬ. ತೈಲಾಭ್ಯಂಗ, ನರಕ ಚತುರ್ದಶಿ ಆಚರಣೆ. ಪಾಪಕಾರ್ಯಕ್ಕೆ ಪ್ರಾಯಶ್ಚಿತ್ತ. ಅಂಧಕಾರ ಅಳಿಯಲಿ. ಮಹತ್ವಾಕಾಂಕ್ಷೆ ಬೇಕು, ಆದರೆ ಇತಿಮಿತಿ ಇರಬೇಕು. ಧರ್ಮ ವಿಜಯದ ಸಂಕೇತ. ಭಗವಂತನಿಗೆ ನೈವೇದ್ಯ ನೀಡಿ ಪ್ರಾರ್ಥನೆಯ ಮೂಲಕ ಒಳ್ಳೆಯದಾಗಲೆಂದು ಬೇಡುವುದು. ಶರಣು ಹೋಗುವುದು.

ಎರಡನೇ ದಿನ ಅಮಾವಾಸ್ಯೆ ಆಚರಣೆ. ಹೊಸದಾಗಿ ಮದುವೆಯಾದ ಜೋಡಿಗಳಿಗೆ ತವರು ಮನೆಯಲ್ಲಿ ಸಿಹಿಯೂಟ, ಉಡುಗೊರೆ ನೀಡಿ ಆಶೀರ್ವದಿಸುವುದು ಪದ್ಧತಿ ಹಾಗೆ ಕಛೇರಿ, ಅಂಗಡಿಗಳಲ್ಲಿ ಐಶ್ವರ್ಯ ದೇವತೆ ಲಕ್ಷ್ಮಿಯ ಪೂಜೆ. ಧನಲಕ್ಷ್ಮಿ ಪೂಜೆ ಮುಸ್ಸಂಜೆ ಹೊತ್ತಿನಲ್ಲಿ ವಿಜೃಂಭಣೆಯಿಂದ ಮಾಡುವರು. ತಮ್ಮ ವ್ಯಾಪಾರ ವಹಿವಾಟುವಿಗೆ ವಿಘ್ನ ಬಾರದಿರಲೆಂದು ಪ್ರಾರ್ಥಿಸುವರು.

ಈ ವರ್ಷ ದೀಪಾವಳಿಯ ಅಮವಾಸ್ಯೆಯ ದಿನದಂದು ಸೂರ್ಯ ಗ್ರಹಣ ಬಂದಿರುವುದರಿಂದ ಆಸ್ತಿಕರಿಗೆ ಬೇಸರ ತಂದಿದೆ. ಆ ದಿನ ದೇವಾಲಯಗಳಲ್ಲೂ ಪೂಜೆ ಪುನಸ್ಕಾರಗಳು ಇರುವುದಿಲ್ಲ. ವಿಜ್ಞಾನ ಆಸಕ್ತರಿಗೆ ಇದೊಂದು ಸಹಜ ಪ್ರಕ್ರಿಯೆ. ಸೂರ್ಯನ ಸುತ್ತ ಭೂಮಿ, ಭೂಮಿಯ ಸುತ್ತ ಚಂದ್ರ ಸುತ್ತುತ್ತಿರುವಾಗ ಒಂದಲ್ಲಾ ಒಂದು ದಿನ ನೇರ ರೇಖೆಯಲ್ಲಿ ಬರಲೇ ಬೇಕಲ್ಲವೇ? ವಿಜ್ಞಾನಿಗಳ ವಾದ ಇದು. ಗ್ರಹಣ ಬರುವುದು ಹಾಳು ಎಂಬುವುದು ಆಸ್ತಿಕರ ವಾದ. ಏನೇ ಇರಲಿ, ಇದೊಂದು ಸೌರಮಂಡಲದಲ್ಲಿ ನಡೆಯುವ ಕೌತುಕವಾದ ಘಟನೆ.

ಬಲಿಪಾಡ್ಯದಂದು ಗೋಪೂಜೆ, ಗೋವುಗಳಿಗೆ ಅಲಂಕಾರ ತಿಂಡಿಗಳನ್ನು, ಬಾಳೆಹಣ್ಣು ನೀಡುವುದು, ಆರತಿ ಬೆಳಗುವುದು, ಬಲಿಯೇಂದ್ರ ಪೂಜೆ ಸಂಪ್ರದಾಯ .ದೇವ ವಿಷ್ಣು ವಾಮನನಾಗಿ ಮೂರು ಹೆಜ್ಜೆಯೂರುವ ಜಾಗವನ್ನು ದಾನಕ್ಕೆ ಹೆಸರಾದ ಬಲಿ ಚಕ್ರವರ್ತಿಯಲ್ಲಿ ಕೇಳಿ, ಆತನನ್ನು ಪಾತಾಳಕ್ಕೆ ತಳ್ಳಿದನೆಂಬ ಪೌರಾಣಿಕ ಹಿನ್ನೆಲೆ.

ಒಟ್ಟಿನಲ್ಲಿ ದುಷ್ಟತನದ ನಾಶ, ಕತ್ತಲನ್ನು ಹೋಗಲಾಡಿಸುವುದು, ಧರ್ಮದ ಸಂಕೇತ, ಜೀವನದ ಹಾದಿಯಲ್ಲಿ ಬರುವ ನರಕವನ್ನು, ಕಷ್ಟವನ್ನು ಕಳೆಯುವುದು, ಮನೆಮಂದಿಯೆಲ್ಲ ಒಂದಾಗಿ ಆಚರಿಸುವುದು, ಸಮೃದ್ಧಿ ,ಶಾಂತಿ, ನೆಮ್ಮದಿಯ ಆಶಯ ದೀಪಾವಳಿಯ ಆಚರಣೆಯ ಮೂಲತತ್ವ. ದೀಪದಿಂದ ದೀಪವನ್ನು ಹಚ್ಚೋಣ, ತಮವು ಕಳೆದು ಎಲ್ಲೆಲ್ಲೂ ಬೆಳಕಿನ ಕಿರಣಗಳು ಪಸರಿಸಲೆಂದು ಆಶಿಸೋಣ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಪೂರಕ ಮಾಹಿತಿ: ರತ್ನಾ ಕೆ.ಭಟ್,ತಲಂಜೇರಿ, ನಿವೃತ್ತ ಸ.ಪ್ರಾ.ಶಾ.ಮುಖ್ಯಶಿಕ್ಷಕಿ.

ಚಿತ್ರ ಕೃಪೆ:  ಅಂತರ್ಜಾಲ ತಾಣ