ಬೆಳ್ಳಿ ಪರದೆಗೆ ಮಸಿ ಖಂಡನೀಯ
ಸದಭಿರುಚಿಯ ಕಥೆಗಳ ಸಿನೆಮಾಗಳೊಂದಿಗೆ ಜನಮಾನಸವನ್ನು ಗೆದ್ದಿದ್ದ ಮಲಯಾಳಂ ಚಿತ್ರರಂಗ ‘ಮಾಲಿವುಡ್' ಈಗ ಇಡೀ ಕೇರಳವೇ ಮುಜುಗರಪಡುವಂಥ ವಿವಾದಕ್ಕೆ ಸಾಕ್ಷಿಯಾಗಿರುವುದು ಅಘಾತಕಾರಿ ಸಂಗತಿ. ಮಾಲಿವುಡ್ ನಲ್ಲಿ ಕೆಲಸ ಮಾಡುವ ಕಲಾವಿದೆಯರು, ಮಹಿಳಾ ಸಿಬ್ಬಂದಿ ಇತರೆ ಯಾವುದೇ ವ್ಯಕ್ತಿಗಳಿಗಿಂತಲೂ ಹೆಚ್ಚಿನ ಪ್ರಮಾಣದ ಲೈಂಗಿಕ ಶೋಷಣೆಯನ್ನು ಎದುರಿಸುತ್ತಿದ್ದಾರೆ. ಅಲ್ಲದೆ, ಸ್ವಾಭಿಮಾನವನ್ನು ಅಡವಿಟ್ಟು ಚಿತ್ರರಂಗದಲ್ಲಿ ದುಡಿಯುತ್ತಿದ್ದಾರೆ ಎಂದು ನ್ಯಾ. ಕೆ.ಹೇಮಾ ಸಮಿತಿಯ ವರದಿ ಹೇಳಿರುವುದು ಕೇರಳದ ಸಾಂಸ್ಕೃತಿಕ ಮೌಲ್ಯಗಳನ್ನೇ ಅಪಹಾಸ್ಯಕ್ಕೆ ದೂಡಿದೆ.
ಒಟ್ಟು ೨೯೫ ಪುಟಗಳ ವಿಸ್ತ್ರತ ವರದಿಯಲ್ಲಿ ಸೂಕ್ಷ್ಮ ಸಂಗತಿಗಳಿರುವ ಕಾರಣಕ್ಕಾಗಿ ೬೩ ಪುಟಗಳಿಗೆ ಹಾಗೂ ಹಲವು ಪ್ಯಾರಾಗಳಿಗೆ ಕತ್ತರಿ ಹಾಕಿದ ಬಳಿಕವೂ ಉಲ್ಲೇಖಗೊಂಡಿರುವ ಆರೋಪಗಳು ನಿಜಕ್ಕೂ ರೇಜಿಗೆ ಹುಟ್ಟಿಸಿವೆ. ಸಿನೆಮಾದಲ್ಲಿ ಅವಕಾಶ ಪಡೆಯುವುದಕ್ಕಾಗಿ ಯುವತಿಯರು ತಮ್ಮ ದೇಹ ಮತ್ತು ಸ್ವಾಭಿಮಾನದಲ್ಲಿ ರಾಜಿ ಮಾಡಿಕೊಳ್ಳುವಂತಹ ಈ ದುಃಸ್ಥಿತಿ ಸೃಷ್ಟಿಯಾಗಿರುವುದೇ ನಾಚಿಕೆಗೇಡು. ಚಿತ್ರರಂಗದಲ್ಲಿನ ಪುರುಷ ಪ್ರಧಾನ ವ್ಯವಸ್ಥೆಯ ಕರಾಳಮುಖಕ್ಕೂ ಈ ವರದಿ ಕಪಾಳಮೋಕ್ಷ ಮಾಡಿದಂತಿದೆ.
೨೦೧೭ರಲ್ಲಿ ಕೊಚ್ಚಿಯಲ್ಲಿ ಖ್ಯಾತ ನಟಿಯೊಬ್ಬರ ಮೇಲೆ ಸ್ಟಾರ್ ನಟ ಹಾಗೂ ಆತನ ಸಹಚರರು ನಡೆಸಿದ ಅಪಹರಣ ಲೈಂಗಿಕ ದೌರ್ಜನ್ಯದ ಬಳಿಕ, ಸರಕಾರವು ನೇಮಿಸಿದ್ದ ಹೈಕೋರ್ಟ್ ನ ನಿವೃತ್ತ ನ್ಯಾ. ಹೇಮಾ ನೇತೃತ್ವದ ಸಮಿತಿಯು ಕೇರಳ ಚಿತ್ರರಂಗದಲ್ಲಿನ ಮಹಿಳೆಯರ ಸಮಸ್ಯೆ, ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸಿತ್ತು. ಸಮಿತಿಯು ತನ್ನ ವರದಿಯನ್ನು ೨೦೧೯ರಲ್ಲಿ ಸರಕಾರಕ್ಕೆ ಸಲ್ಲಿಸಿದ್ದರೂ ವರದಿ ಬಹಿರಂಗಗೊಂಡಿರಲಿಲ್ಲ. ಬಳಿಕ ಹಲವು ಆರ್ ಟಿ ಐ ಅರ್ಜಿಗಳು ಹಾಗೂ ನ್ಯಾಯಾಲಯದ ಸೂಚನೆ ಮೇರೆಗೆ ಇದು ಬಹಿರಂಗವಾಗಿದೆಯಾದರೂ, ಇದನ್ನು ತಡೆಹಿಡಿಯಲು ತೆರೆಮರೆಯಲ್ಲಿ ನಡೆಸಿರುವ ಪ್ರಯತ್ನಗಳು ಎಲ್ಲೋ ಒಂದು ಕಡೆ ಆಡಳಿತ ವ್ಯವಸ್ಥೆಯೂ ಈ ಅಪರಾಧದಲ್ಲಿ ಶಾಮೀಲಾಗಿದೆಯೇನೋ ಎನ್ನುವ ಅನುಮಾನ ಹುಟ್ಟಿಸಿರುವುದು ನಿಜ. ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ದೌರ್ಜನ್ಯಗಳು ಈ ಪರಿ ಎದ್ದು ಕಾಣುತ್ತಿದ್ದಾಗ್ಯೂ ಸಮಿತಿಯ ಶಿಫಾರಸ್ಸುಗಳನ್ನು ಸರಕಾರ ಬಹುಕಾಲ ಮುಚ್ಚಿಟ್ಟದ್ದೇಕೆ? ಈ ೫ ವರ್ಷಗಳಲ್ಲಿ ಇನ್ನೆಷ್ಟು ಯುವತಿಯರು ದೌರ್ಜನ್ಯಕ್ಕೆ ಗುರಿಯಾಗಿದ್ದಾರೆ? ಇಡೀ ಚಿತ್ರರಂಗ ತಲೆತಗ್ಗಿಸುವಂತೆ ಮಾಡಲು ಕಾರಣಕರ್ತರಾದ ಪ್ರತಿಷ್ಟಿತ ೧೦ ರಿಂದ ೧೫ ‘ಕಲಾವಿದ'ರ ಗುಂಪನ್ನು ರಕ್ಷಿಸುವುದೇಕೆ? ಇಂಥ ಗಂಭೀರ ಪ್ರಶ್ನೆಗಳಿಗೂ ಪಿಣರಾಯಿ ವಿಜಯನ್ ಸರಕಾರ ಉತ್ತರಿಸಬೇಕಾಗಿದೆ.
ಇಷ್ಟಲ್ಲದೆ, ಸೆಟ್ ಗಳಲ್ಲಿ ಮದ್ಯಸೇವನೆ, ಮಾದಕ ವಸ್ತುಗಳ ಬಳಕೆ ವಿಚಾರವೂ ಮಾಲಿವುಡ್ ಗೆ ಮಸಿ ಬಳಿದಿದೆ. ಕೇವಲ ಮಾಲಿವುಡ್ ಮಾತ್ರವಲ್ಲ, ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಭಾರತದ ಹಲವು ಚಿತ್ರರಂಗಗಳ ಅಂತರ್ಯದಲ್ಲೂ ಇಂಥದ್ದೇ ಕಳಂಕಗಳಿವೆ. ಈ ಬಗ್ಗೆ ಆಗಾಗ್ಗೆ ಆರೋಪಗಳು ಕೇಳಿಬರುತ್ತಲೇ ಇದ್ದರೂ ಇಲ್ಲಿನ ಸಂತ್ರಸ್ತರಿಗೆ ಮಾತ್ರ ನ್ಯಾಯ ದೊರಕುತ್ತಲೇ ಇಲ್ಲ. ಕೋಲ್ಕತ್ತಾ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಹೊಗೆಯಾಡಿದ ಚಿತ್ರರಂಗದಲ್ಲಿನ ಲೈಂಗಿಕ ದೌರ್ಜನ್ಯವನ್ನು ಎಲ್ಲರೂ ಖಂಡಿಸಲೇಬೇಕಿದೆ. ಚಿತ್ರರಂಗದ ಸಂತ್ರಸ್ತೆಯರಿಗೆ ನ್ಯಾಯ ಸಿಗಬೇಕಿದೆ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೨-೦೮-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ