ಬೆಸ್ಟ್ ಆಫ್ ಕಸ್ತೂರಿ
ನಾ. ಕಸ್ತೂರಿ ಅವರು ಕನ್ನಡದ ಸುಪ್ರಸಿದ್ಧ ಹಾಸ್ಯ ಲೇಖಕರು. ಅವರ ಪೂರ್ಣ ಹೆಸರು ಕಸ್ತೂರಿ ರಂಗನಾಥ ನಾರಾಯಣ ಶರ್ಮ. ಅವರ ಹಾಸ್ಯ ಬರಹಗಳು ಸುಲಭಲಭ್ಯವಿಲ್ಲದ ಸಮಯದಲ್ಲಿ, ಅವರ ಉತ್ತಮ ಹಾಸ್ಯಬರಹಗಳನ್ನು ವೈ. ಎನ್. ಗುಂಡೂರಾಯರು ಆಯ್ದು “ಬೆಸ್ಟ್ ಆಫ್ ಕಸ್ತೂರಿ” ಎಂಬ ಪುಸ್ತಕವಾಗಿ ಹಾಸ್ಯಪ್ರಿಯರ ಕೈಗಿತ್ತಿದ್ದಾರೆ.
ಇದರಲ್ಲಿವೆ ನಾ. ಕಸ್ತೂರಿಯವರ ಹಾಸ್ಯ ಬರಹಗಳು, ಕವನಗಳು, ಅನರ್ಥಕೋಶ, ನಗೆ ಚಟಾಕಿಗಳು ಮತ್ತು ಒಂದು ನಾಟಕ.
ಉದ್ಯೋಗ ಹುಡುಕಿ, ಕರ್ನಾಟಕಕ್ಕೆ ಬಂದ ನಾ. ಕಸ್ತೂರಿಯವರು ಕನ್ನಡ ಕಲಿತು, ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಮೋಘ. ಯಾರಿಗೂ ನೋವಾಗದಂತೆ ಹಾಸ್ಯ ಬರಹಗಳನ್ನು ಹೇಗೆ ಬರೆಯಬೇಕು ಎಂಬುದಕ್ಕೆ ಅವರ ಒಂದೊಂದು ಬರಹವೂ ಮಾದರಿ.
ಡೊಂಕುಬಾಲ, ಅಲ್ಲೋಲಕಲ್ಲೋಲ, ಉಪಾಯ ವೇದಾಂತ, ಗಾಳಿಗೋಪುರ, ಶಂಖವಾದ್ಯ ಇತ್ಯಾದಿ ಕೃತಿಗಳು ಮತ್ತು ಗಗ್ಗಯ್ಯನ ಗಡಿಬಿಡಿ, ವರಪರೀಕ್ಷೆ, ಕಾಡಾನೆ, ತಾಪತ್ರಯ ತಪ್ಪಿತು, ಬ್ಯಾಂಕಿನ ದಿವಾಳಿ, ರಾಮಕೃಷ್ಣಯ್ಯನ ದರ್ಬಾರು ಮುಂತಾದ ನಾಟಕಗಳನ್ನು ರಚಿಸಿರುವ ನಾ. ಕಸ್ತೂರಿ ಅವರು ವಿಡಂಬನಾಚಾರ್ಯ ಎಂದೇ ಹೆಸರಾಗಿದ್ದಾರೆ.
ನಾ. ಕಸ್ತೂರಿ ಅವರ “ಅನರ್ಥ ಕೋಶ”ವಂತೂ ಕನ್ನಡ ಸಾಹಿತ್ಯಕ್ಕೆ ಅಪರೂಪದ ಕೊಡುಗೆ. ಹಲವಾರು ಸಾಮಾನ್ಯ ಪದಗಳಿಗೆ ವಕ್ರಾರ್ಥ ಅಥವಾ ವ್ಯಂಗ್ಯಾರ್ಥ ಕಲ್ಪಿಸಿ, ಈ ಕೋಶ ರಚಿಸಿದ್ದಾರೆ ಅವರು. ಕೆಲವು ಉದಾಹರಣೆಗಳು:
ಅಂಧರ್ವರು: ಕುರುಡು ಸಂಗೀತಗಾರರು
ಅಂಬೆಗೋಲು: ಮುದಿತನದಲ್ಲಿ ಹಿಡಿಯಬೇಕಾದ ಊರುಗೋಲು
ಕಜ್ಜಿ: ಲಜ್ಜೆಯನ್ನು ಹೋಗಲಾಡಿಸಲು ಒಂದು ಉಪಾಯ
ಕಡಲೆ: ಹಲ್ಲಿದ್ದಾಗ ಸಿಗದ ಪದಾರ್ಥ
ಮುನ್ನುಡಿಯಲ್ಲಿ ವೈ. ಎನ್. ಗುಂಡೂರಾಯರು ಬರೆದಿರುವ ಮಾತುಗಳು ಕನ್ನಡ ಸಾಹಿತ್ಯಕ್ಕೆ ನಾ. ಕಸ್ತೂರಿ ಅವರ ಕೊಡುಗೆಯ ಚಿತ್ರಣ ನೀಡುತ್ತವೆ: “ನಾ. ಕಸ್ತೂರಿ ಎಂದರೆ ಬಹುಶ ಪರಿಚಯವಿಲ್ಲದವರು ಕನ್ನಡ ಸಾಹಿತ್ಯ ಲೋಕದಲ್ಲಿರಲಾರರು. ಹಲವಾರು ಮಂದಿ ಅನ್ಯಭಾಷಿಕರಂತೆ ನಾ. ಕಸ್ತೂರಿಯವರು ದೊರೆತದ್ದು ಕನ್ನಡ ಲೋಕದ ಅದೃಷ್ಟ. ತಾರುಣ್ಯದಲ್ಲಿ ಉದ್ಯೋಗವನ್ನರಸಿ ಬಂದವರು ಕರ್ನಾಟಕದಲ್ಲಿ ನೆಲೆಯೂರಿ ನಿಂತು ಕನ್ನಡ ಕಲಿತು, ಕನ್ನಡ ಕಲಿಸಿ, ಕನ್ನಡ ಬೆಳೆಸಿದರು….
ಮಾತೃಭಾಷೆ ತಮಿಳು, ಹುಟ್ಟಿ ಬೆಳೆದು ಶಿಕ್ಷಣ ಪಡೆದದ್ದು ಕೇರಳದಲ್ಲಿ. ಆದರೆ ಕಾಲೇಜು ಪ್ರಾಧ್ಯಾಪಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದು ಕರ್ನಾಟಕದಲ್ಲಿ. ಅದರೆ ಬದುಕಿನ ಕೊನೆಯ ಮೂರು ದಶಕಗಳನ್ನು ಕಳೆದದ್ದು ಆಂಧ್ರದ ಪುಟ್ಟಪರ್ತಿಯಲ್ಲಿ…. ತಾವು ಸ್ವಭಾವತಃ ಸೋಮಾರಿ ಎಂದು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡಿದ್ದರೂ ಅವರ ಬರಹದ ರೀತಿ ಯಾವ ಕನ್ನಡ ಬರಹಗಾರನಿಗೂ ಅಚ್ಚರಿ ಹುಟ್ಟುಸುವಂತಿದೆ. ಅವರ ಲೇಖನ “ನೀವೂ ಕವಿ” ಓದಿದರೆ ಅರ್ಥವಾಗುತ್ತದೆ.
…. ಅವರು ಬರೆದ ಹಾಸ್ಯಲೇಖನಗಳಿಗೆ ಕೊರತೆಯಿಲ್ಲ. ಇದರ ಜೊತೆಗೆ “ಅಂಬ್ರೂಸಿ ಬಿಯರ್ಸ್”ನ ಡೆವಿಲ್ಸ್ ಡಿಕ್ಷನರಿ ಮತ್ತು ಕಾಮಿಕ್ ಡಿಕ್ಷನರಿಯಂತೆ ಇವರು ರಚಿಸಿದ “ಅನರ್ಥಕೋಶ”ವನ್ನು ಕೊಟ್ಟರು…. ಹೀಗೆ ಕಸ್ತೂರಿ ಎಂಬ ಹೆಸರಿನಲ್ಲೇ ವಿಶೇಷವಾದ ಕಂಪು ತುಂಬಿರುವಂತೆ ಪ್ರತಿ ಶಬ್ದಗಳಿಗೂ ವಕ್ರಾರ್ಥ, ವ್ಯಂಗ್ಯಾರ್ಥ ಕಲ್ಪಿಸಿ, ಸೃಷ್ಟಿಸಿ, ಹುಟ್ಟಾ ಕನ್ನಡಿಗರನ್ನು ಮೀರಿಸುವಂತೆ ಕನ್ನಡ ಕೈವಶ ಮಾಡಿಕೊಂಡು ಸಾಹಿತ್ಯ ಸೃಷ್ಟಿ ಮಾಡಿದವರೇ ನಾ. ಕಸ್ತೂರಿಯವರು.”
ಮೊದಲ ಬರಹ “ಸಾರ್!” ಮಧ್ಯಾಹ್ನ ೨.೩೦ಕ್ಕೆ ಯಾರೋ ಲೇಖಕರ ಮನೆಯ ಹೊರಬಾಗಿಲ ಹತ್ತಿರ ಬಂದು, “ಸಾರ್” ಎಂದು ಕರೆಯುತ್ತಾನೆ. ಮತ್ತೆಮತ್ತೆ “ಸಾರ್” ಎಂದು ಕರೆಯುತ್ತಲೇ ಇರುತ್ತಾನೆ. ಊಟ ಮುಗಿಸಿ, ಹಾಯಾಗಿ ಸ್ವಲ್ಪ ಹೊತ್ತು ವಿರಮಿಸೋಣ ಎಂದಿದ್ದ ಲೇಖಕರಿಗೆ ಕ್ಷಣವೂ ನೆಮ್ಮದಿಯಿಲ್ಲದಂತೆ ಜೋರಾಗಿ ಕರೆಯುತ್ತಲೇ ಇರುತ್ತಾನೆ ಆಸಾಮಿ. ಅನಂತರ “ಢಬ್, ಢಬ್, ಢಬ್” ಎಂದು ಮನೆಯ ಬಾಗಿಲು ಬಡಿಯಲು ಶುರು ಮಾಡುತ್ತಾನೆ. ಈ ಅವಾಂತರಗಳನ್ನೆಲ್ಲ ಸ್ವಾರಸ್ಯವಾಗಿ ಬರೆದಿದ್ದಾರೆ ಲೇಖಕರು. ಅಂತಿಮವಾಗಿ, ಅವನ ಕಾಟ ತಾಳಲಾಗದೆ ಲೇಖಕರು ಬಾಗಿಲು ತೆರೆದು, “ಏನಯ್ಯಾ!” ಎಂದು ಕೇಳಿದಾಗ ಅವನ ಉತ್ತರ: ”ಏನೂ ಇಲ್ಲ! ಈ ಮನೆಯಲ್ಲಿ ಹಿಂದೆ ನಾರಣಪ್ಪನವರು ಅಂತ ಒಬ್ಬರಿದ್ದರು; ಈಗಲೂ ಅವರೇ ಇದ್ದಾರೆ ಅಂತ ನಾನು, ಅವರಲ್ಲ, ನೀವೇ ಇರೋದು ಅಂತ ಅವಳು; ಹೀಗೆ ವಾದ ಬೆಳೆಯಿತು, ನೋಡೇ ಬಿಡೋಣ ಅಂತ ಬಂದೆ… ಹೋರಡುತ್ತೇನೆ, ಸಾರ್.” ಬದುಕಿನ ಆಗುಹೋಗುಗಳಲ್ಲಿ ತಾನು ಕಂಡ ಹಾಸ್ಯವನ್ನು ನಾ. ಕಸ್ತೂರಿಯವರು ಓದುಗರಿಗೆ ಉಣಬಡಿಸಿದ ಇಂತಹ ಹಲವು ಬರಹಗಳು ಈ ಪುಸ್ತಕದಲ್ಲಿವೆ.
“ಒಂಟಿ ಚಪ್ಪಲಿ” ಎಂಬ ಅವರ ಲೇಖನ ಶುರುವಾಗೋದು ಹೀಗೆ: “ಮಠದಿಂದ ಹೊರಕ್ಕೆ ಬಂದೆ… ಒಂಟಿ ಚಪ್ಪಲಿ ಇದೆ, ಬಲಗಾಲಿನದು, ಎಡಗಾಲಿನದು ಪತ್ತೆಯೇ ಇಲ್ಲ. ನಾಯಿಯ ಹಾಗೆ ಮೂಲೆಮೂಲೆಯನ್ನೂ ಮೂಸಿ ನೋಡಿದೆ. ಸಿಗಲಿಲ್ಲ. ಬಲಗಾಲಿಗೆ ಅದನ್ನ ತಗುಲಿಸಿ, ಎಡಗಾಲನ್ನು ಖಾಲಿ ತುಳಿಯುತ್ತಾ, ಕಂಬದ ಮರೆಯಲ್ಲಿ, ಮೆಟ್ಟಿಲ ಕೆಳಗೆ, ಹೂಗಿಡಗಳ ಬುಡದಲ್ಲಿ, ಗೇಟಿನ ಹತ್ತಿರ - ಎಲ್ಲ ಹುಡುಕಿದೆ….”
ಕಾಣೆಯಾದ ಎಡಗಾಲಿನ ಚಪ್ಪಲಿ ಹುಡುಕುವ ಪರಿಯನ್ನು ತಮ್ಮದೇ ಶೈಲಿಯಲ್ಲಿ ಬಗೆಬಗೆಯಾಗಿ ಬಣ್ಣಿಸುವ ಲೇಖಕರು ಈ ಲೇಖನವನ್ನು ಹೀಗೆ ಮುಕ್ತಾಯಗೊಳಿಸಿದ್ದಾರೆ: “ಇಲ್ಲೇ ಇನ್ನು ನಾಲ್ಕಾರು ಜೊತೆಗಳು, ಒಳಗಿರುವವರದು ಬಿದ್ದಿವೆಯಲ್ಲಾ! ಓ! ಇದು ನನ್ನ ಅಳತೆಗೇ ಮಾಡಿದ ಹಾಗಿದೆ. ಎಡಗಾಲಿಗೆ ಇದನ್ನು ತಗುಲಿಸಿ, ಬಲಗಾಲಿಗೆ ನನ್ನದನ್ನೇ ಹಾಕಿಕೊಂಡು, ಹೊರಟೇ ಬಿಡುತ್ತೇನೆ. ಆತನೇ ಪೇಚಾಡಲಿ.”
ನಮ್ಮ ಡಾಂಭಿಕತನವನ್ನು ಬಿಚ್ಚಿ ತೋರಿಸುವ ಇಂತಹ ಹಲವು ಬರಹಗಳ ಮೂಲಕ ಸಾಹಿತಿಯೊಬ್ಬನು ಮಾಡಬಹುದಾದ ಕಣ್ಣು ತೆರೆಸುವ ಕೆಲಸವನ್ನೂ ಸಮರ್ಥವಾಗಿ ಮಾಡಿದ್ದಾರೆ ನಾ. ಕಸ್ತೂರಿಯವರು. ಹೀಗೆ, ಹಾಸ್ಯ, ವ್ಯಂಗ್ಯ, ವಿಡಂಬನೆಗಳ ರಸಗವಳ ಈ ಪುಸ್ತಕ.