ಬೇಡಿಕೆಗಳಿಗೆ ಒಪ್ಪಿದರೂ ಹೋರಾಟ ಮುಂದುವರಿಸುವ ಉದ್ದೇಶವೇನು?

ಬೇಡಿಕೆಗಳಿಗೆ ಒಪ್ಪಿದರೂ ಹೋರಾಟ ಮುಂದುವರಿಸುವ ಉದ್ದೇಶವೇನು?

ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಹೋರಾಟ ಮಾಡುವುದು ರೈತರ ಹಕ್ಕು ಎಂಬುದೇನೋ ನಿಜ. ಆದರೆ, ಹೋರಾಟದ ಪ್ತಮುಖ ಉದ್ದೇಶವೇ ಪ್ರಭುತ್ವದ ಗಮನ ಸೆಳೆಯುವುದು, ಸ್ಪಂದನೆ ದೊರೆತು, ಸಮಸ್ಯೆಗೆ ಪರಿಹಾರದ ಮಾರ್ಗ ಕಂಡುಕೊಳ್ಳಬೇಕು ಎಂಬುದು. ಕಳೆದ ಬಾರಿ ರೈತರು ನಡೆಸಿದ ಹೋರಾಟ ಹಲವು ಅಹಿತಕರ ಘಟನೆಗಳಿಗೆ ಕಾರಣವಾಗಿತ್ತು ಮತ್ತು ಕ್ರಮೇಣ ಹೋರಾಟದಲ್ಲಿ ರೈತರಲ್ಲದ ಇತರ ಶಕ್ತಿಗಳು ಪ್ರವೇಶ ಮಾಡಿ, ದಿಕ್ಕು ತಪ್ಪಿಸಲು ಯತ್ನಿಸಿದ್ದವು. ಇದರಿಂದ ಸಾಕಷ್ಟು ಆತಂಕ ಕೂಡ ಸೃಷ್ಟಿಯಾಗಿತ್ತು. ರೈತರು ಹಲವು ಬೇಡಿಕೆಗಳನ್ನು ಇರಿಸಿಕೊಂಡು ಮತ್ತೆ ಹೋರಾಟಕ್ಕೆ ಇಳಿದಿದ್ದಾರೆ. ರಾಜಧಾನಿ ದೆಹಲಿಯತ್ತ ಹೊರಟಿದ್ದ ರೈತರನ್ನು ಪಂಜಾಬ್-ಹರಿಯಾಣದ ಶಂಭು ಮತ್ತು ಖನೌರಿ ಗಡಿ ಪ್ರದೇಶದಲ್ಲೇ ತಡೆಯಲಾಗಿದೆ. ಈ ಪ್ರದೇಶದಲ್ಲೇ ರೈತರ ಹೋರಾಟ ಒಂದು ವಾರ ಪೂರ್ಣಗೊಳಿಸಿದೆ.

ಈ ಬಾರಿ ಕೇಂದ್ರ ಸರ್ಕಾರ ಆರಂಭಿಕ ಹಂತದಲ್ಲೇ ಸ್ಪಂದಿಸಿದ್ದು, ರೈತ ದನಿಗೆ ಕಿವಿಯಾಗಿದೆ. ಕಳೆದ ಒಂದೇ ವಾರದಲ್ಲಿ ಕೇಂದ್ರ ಸಚಿವರುಗಳ ತಂಡ ರೈತ ಸಂಘಟನೆಗಳ ಮುಖಂಡರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದೆ. ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್, ನಿತ್ಯಾನಂದ ರೈ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಭಾನುವಾರ ರಾತ್ರಿ ಚಂಡೀಘಡದಲ್ಲಿ ರೈತ ನಾಯಕರ ಜತೆ ನಡೆಸಿದ ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ಸಂಧಾನ ಸೂತ್ರವನ್ನು ಮುಂದಿರಿಸಿದ್ದರು. ರೈತರಿಂದ ಮುಂದಿನ ಐದು ವರ್ಷಗಳವರೆಗೆ ದ್ವಿದಳ ಧಾನ್ಯಗಳು, ಮೆಕ್ಕೆಜೋಳ, ಹತ್ತಿ ಬೆಳೆಗಳನ್ನು ಕನಿಷ್ಟ ಬೆಂಬಲ ಬೆಲೆ (ಎಂಎಸ್ ಪಿ) ಯಲ್ಲಿ ಖರೀದಿಸಲು ಸರ್ಕಾರ ಸಿದ್ಧವಿದೆ ಎಂಬ ಕೇಂದ್ರ ಸಚಿವ ಪಿಯೂಷ್ ಗೋಯಲ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದು, ರೈತರ ಪ್ರಮುಖ ಬೇಡಿಕೆಯನ್ನು ಒಪ್ಪಿಕೊಂಡಿದ್ದಾರೆ. ಪ್ರಸ್ತಾವಿತ ಖರೀದಿಗಾಗಿ ರೈತರೊಂದಿಗೆ ಎನ್ ಸಿ ಸಿ ಎಫ್, ಎನ್ ಎ ಎಫ್ ಡಿ ಮುಂತಾದ ಸರ್ಕಾರಿ ಸಂಸ್ಥೆಗಳು ಮುಂದಿನ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಲಿದ್ದು, ಖರೀದಿಯ ಪ್ರಮಾಣದಲ್ಲೂ ಯಾವುದೇ ಮಿತಿ ಇರುವುದಿಲ್ಲ ಎಂದೂ ಸರ್ಕಾರ ಸ್ಪಷ್ಟಪಡಿಸಿದೆ.

ಹೀಗಿರುವಾಗ ಪ್ರತಿಭಟನೆಯನ್ನು ಕೈಬಿಟ್ಟು , ರೈತರು ಕೃಷಿ ಚಟುವಟಿಕೆಗಳತ್ತ ಮರಳಬೇಕಿತ್ತು. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ, ಪ್ರಮುಖ ಬೇಡಿಕೆಗಳನ್ನು ಒಪ್ಪಿದರೂ ರೈತ ಸಂಘಟನೆಗಳು ಹೋರಾಟ ಮುಂದುವರಿಸಲು ನಿರ್ಧರಿಸಿರುವುದು ಸರಿಯಲ್ಲ. ಇನ್ನೂ ವಿಳಂಬ ಮಾಡದೆ ರೈತ ಸಂಘಟನೆಗಳು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಬೇಕು. ಕಳೆದ ಬಾರಿ ಮಾಡಿದಂತೆ ಹಲವು ತಿಂಗಳುಗಳ ಕಾಲ ಪ್ರತಿಭಟನೆಯನ್ನು ಮುಂದುವರೆಸುವುದರಲ್ಲಿ ಯಾವುದೇ ಅರ್ಥವಿಲ್ಲ. ಆದರಿಂದ ಸಾರ್ವಜನಿಕರಿಗೆ ವಿನಾಕಾರಣ ತೊಂದರೆಯಾಗುತ್ತದೆ ಮತ್ತು ಪ್ರತಿಭಟನೆ ದೀರ್ಘಾವಧಿ ಮುಂದುವರಿದರೆ ಅದರಿಂದ ರೈತರಿಗೂ ನಷ್ಟವೇ. ಹಾಗಾಗಿ, ವಾಸ್ತವವನ್ನು ಅರ್ಥ ಮಾಡಿಕೊಂಡು, ಕೇಂದ್ರದ ಪ್ರಾಮಾಣಿಕ ಪ್ರಯತ್ನವನ್ನು ಒಪ್ಪಿಕೊಂಡು ರೈತ ಸಂಘಟನೆಗಳು ಸೂಕ್ತ ನಿರ್ಧಾರಕ್ಕೆ ಬರಲಿ. ಹೋರಾಟದಲ್ಲಿ ರಾಜಕೀಯ ಪ್ರವೇಶಿಸಿದರೆ ಅದರಿಂದ ಅನರ್ಥವೇ ಜಾಸ್ತಿ ಎಂಬುದನ್ನು ಮರೆಯುವಂತಿಲ್ಲ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೦-೦೨-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ