ಬೇರು-ಚಿಗುರು

ಬೇರು-ಚಿಗುರು

ಕವನ

ನವ್ಯಕಾವ್ಯದ ಗಾಳಿ ಭರಭರನೆ ಬೀಸುತಿರೆ

ರಮ್ಯ ಸೌಧದ ಮಹಡಿ ನೆಲ ಸೇರಿದೆ

ಹಿಂದೊಮ್ಮೆ ಮೆರೆದಿರುವ ಕಾವ್ಯಧರ್ಮವದೊಂದು

ಇಂದೀಗ ಮರೆಯಾಗಿ ಮಸುಕಾಗಿದೆ              [೧]

ವಿವಿಧತೆಯ ಹೆಸರಿನಲಿ ವಿವಿಧ ವೇಷವ ತಳೆದು

ಸಾಹಿತ್ಯ ಪಡೆಯುತಿದೆ ಹಸಿರು-ಕುಸುರು

ಬೆಳೆದಿರುವ ಹಸುರು ಬೆಳೆಗಳ ನಡುವೆ ಇಳಿಯುತ್ತ

ಹುಡುಕಬೇಕೆನಗೆ ನಿಜಸಿರಿಯ ಬೇರು             [೨]

ಹಳೆಯ ವಸ್ತುಗಳೆಲ್ಲ ನಿಸ್ಸಾರವಲ್ಲಲ್ಲ

ಪಳೆಯುಳಿಕೆಗಳೇ ಶಾಸ್ತ್ರಕೆಲ್ಲ ಮೂಲ

ಈ ದಿನದ ಕಾರ್ಯಗಳ ಸುಗಮಗೊಳಿಸಲು ಮೊದಲು

ಮಾಡಿರುವ ಕೆಲಸದನುಭವವೇ ಮೂಲ          [೩]

ಕಾನನದಿ ಬೆಳೆದಿರುವ ಭೂಜಗಳಿಗಾಧಾರ

ಪ್ರುಥಿವಿಯಲಿ ಪಸರಿಸಿದ ಹಲವು ಬೇರು

ಬೇರುಗಳ ಹರಡದೆಯೇ ವೃಕ್ಷ ಬಾಳದ ತೆರದಿ

ಬೇರಿರದೆ ಚಿಗುರುವುದೇ ಕಾವ್ಯಚಿಗುರು?         [೪]

ಬೇರೂರಿ ಚಿಗಿಯುತಿಹ ಬೀಜಗಳ ತೆರನಾಗಿ

ನನ್ನ ಕಾವ್ಯವು ಕೂಡ ಚಿಗುರಬೇಕು

ಹಳೆ ನೆಲದಿ ಬೇರುಗಳು ಹೀರಿರುವ ಸಾರಗಳು

ಚಿಗುರುಗಳ ರೂಪದಲಿ ಬೆಳೆಯಬೇಕು            [೫]

Comments