ಬೇವಿನೆಲೆಯ ಸ್ನಾನ ಆರೋಗ್ಯಕ್ಕೆ ಹಿತಕಾರಿ

ಬೇವಿನೆಲೆಯ ಸ್ನಾನ ಆರೋಗ್ಯಕ್ಕೆ ಹಿತಕಾರಿ

ಕಹಿ ಬೇವಿನ ಎಲೆಯ ಪ್ರಯೋಜನಗಳು ನಿಮಗೆ ಗೊತ್ತೇ ಇದೆ. ಅದರ ಎಲೆ, ಕಡ್ಡಿ, ಎಣ್ಣೆ ಎಲ್ಲವೂ ಮಾನವನಿಗೆ ಬಹು ಉಪಕಾರಿ ಎಂದು ಸಬೀತಾಗಿದೆ. ಹಿಂದೆ ನಮ್ಮ ಪೂರ್ವಜರು ಸಾಬೂನಿನ ಅನ್ವೇಷಣೆ ಆಗದೇ ಇದ್ದ ಸಂದರ್ಭದಲ್ಲಿ ಸ್ನಾನಕ್ಕೆ ಬೇವಿನ ಎಲೆ, ಕಡಲೆ ಹಿಟ್ಟು, ನೊರೆ ಕಾಯಿಗಳನ್ನು ಬಳಕೆ ಮಾಡುತ್ತಿದ್ದರು. ಬೇವಿನ ಎಲೆಯ ಸ್ನಾನ ಆರೋಗ್ಯಕ್ಕೆ ಬಹಳ ಹಿತಕಾರಿ ಎನ್ನುವುದು ನಮ್ಮ ಹಿರಿಯರ ಮಾತು. 

ಬೇವಿನ ಮರವು ಔಷಧಗಳ ಆಗರ. ಇದರ ಎಲೆ, ತೊಗಟೆ, ಹೂವು, ಕಾಂಡ ಮತ್ತು ಹಣ್ಣು ಎಲ್ಲವೂ ಆರೋಗ್ಯದಾಯಕ. ಈ ಎಲ್ಲಾ ಭಾಗಗಳು ಆಯುರ್ವೇದ ಔಷಧಗಳ ತಯಾರಿಕೆ ಅಗ್ರ ಪಾಲು ಹೊಂದಿದೆ. ನಮ್ಮ ದೇಹವನ್ನು ಈ ಕಹಿ ಬೇವಿನ ಸೊಪ್ಪನ್ನು ಬಳಸಿ ಹೇಗೆ ಆರೋಗ್ಯಕರವಾಗಿರಿಸಬಹುದು ಎಂಬುದನ್ನು ತಿಳಿಯೋಣ.

ಬೇವಿನ ಎಲೆಯನ್ನು ಹಾಕಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ಮೊಡವೆಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮುಖದಲ್ಲಿ ಕಾಂತಿ ಮಿನುಗುತ್ತದೆ. ಮೊಡವೆಯಿಂದ ಆಗುವ ಕಲೆಗಳೂ ನಿವಾರಣೆಯಾಗುತ್ತವೆ. ಬೇವಿನ ಎಲೆಯನ್ನು ಬಳಸಿದ ನೀರಿನಿಂದ ಮುಖವನ್ನು ತೊಳೆಯುವುದರಿಂದ ನಿಮ್ಮ ಮುಖಕ್ಕೆ ನೈಸರ್ಗಿಕವಾದ ಹೊಳಪು ಬರುತ್ತದೆ. ಈ ಕಾರಣಕ್ಕೇ ಈಗ ಮಾರುಕಟ್ಟೆಯಲ್ಲಿ ನೂರಾರು ಬಗೆಯ ಬೇವಿನ ಅಂಶವನ್ನು ಹೊಂದಿದ ಫೇಸ್ ವಾಶ್ ಗಳು, ಕ್ರೀಮುಗಳು ಲಭ್ಯವಿದೆ.

ಬೇವಿನ ಎಲೆಗಳು ಮುಖದಲ್ಲಾಗುವ ಕಪ್ಪು ಕಲೆಗಳನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಎಲೆಗಳನ್ನು ಪೇಸ್ಟ್ ಮಾಡಿ, ಅದಕ್ಕೆ ಎರಡು ಚಮಚ ಮೊಸರನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ಕಪ್ಪು ಕಲೆಗಳು ಮಾಯವಾಗುತ್ತವೆ. ನಿಮ್ಮ ಮುಖದಲ್ಲಿ ಕಪ್ಪು ಕಲೆಗಳು ಇದ್ದರೆ ನೀವು ಈ ಮೇಲೆ ಹೇಳಿದ ಪೇಸ್ಟ್ ಅನ್ನು ತಯಾರಿಸಿ ನಿಮ್ಮ ಮುಖಕ್ಕೆ ಹಚ್ಚಿರಿ. ಬೇವಿನ ಎಲೆಯ ನೀರು ಕಣ್ಣಿನಲ್ಲಿ ಯಾವುದೇ ಸೋಂಕು ಅಥವಾ ಉರಿ ಇದ್ದಲ್ಲಿ ಈ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ನೀರಿನಲ್ಲಿ ಸ್ನಾನ ಮಾಡಿ ಕಣ್ಣು ತೊಳೆದುಕೊಂಡರೆ ಸೋಂಕು, ಕಣ್ಣು ಕೆಂಪಾಗುವುದು, ಕಣ್ಣು ಊತ ಮುಂತಾದ ಸಮಸ್ಯೆಗಳು ಪರಿಹಾರವಾಗಬಲ್ಲವು.

ನಿಮ್ಮ ತಲೆಯಲ್ಲಿ ತಲೆಹೊಟ್ಟು ಇದ್ದು ಅದರಿಂದ ವಿಪರೀತ ತುರಿಕೆ, ಕೂದಲು ಉದುರುವಿಕೆಯ ಸಮಸ್ಯೆ ಇದ್ದಲ್ಲಿ ಬೇವಿನ ನೀರಿನಿಂದ ತಲೆಗೆ ಸ್ನಾನ ಮಾಡಿ. ವಾರಕ್ಕೆರಡು ಬಾರಿ ನಿಯಮಿತವಾಗಿ ಬೇವಿನ ಎಲೆಯನ್ನು ಹಾಕಿದ ನೀರಿನಿಂದ ತಲೆಗೆ ಸ್ನಾನ ಮಾಡುವುದರಿಂದ ಹೇನುಗಳು ನಾಶವಾಗುತ್ತವೆ. ಬೇವಿನ ನೀರನ್ನು ಬಳಸುವಾಗ ಶ್ಯಾಂಪೂಗಳನ್ನು ಬಳಸದಿರುವುದು ಉತ್ತಮ.

ಬೇಸಿಗೆ ಕಾಲದಲ್ಲಿ ನಾವು ವಿಪರೀತವಾಗಿ ಬೆವರುವುದರಿಂದ ನಮ್ಮ ದೇಹದಲ್ಲಿ ಬ್ಯಾಕ್ಟೀರಿಯಾಗಳ ಉತ್ಪತ್ತಿ ಅಧಿಕವಾಗುತ್ತದೆ. ಇದರಿಂದ ತುರಿಕೆ, ದುರ್ವಾಸನೆ ಸಮಸ್ಯೆ ಶುರುವಾಗುತ್ತದೆ. ಇದರ ನಿವಾರಣೆಗೆ ಬೇವಿನ ಸೊಪ್ಪಿನ ನೀರಿನ ಸ್ನಾನ ಉತ್ತಮ ಆಯ್ಕೆ. ಇದರಿಂದ ಸ್ನಾನ ಮಾಡಿದಾಗ ಮೈಮೇಲೆ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳು ನಾಶವಾಗಿ ಬೆವರಿನ ದುರ್ಗಂಧ ಮಾಯವಾಗುತ್ತದೆ. ನಿಮ್ಮ ಚರ್ಮದ ಮೇಲೆ ಆಗುವ ಗುಳ್ಳೆಗಳು ಅಥವಾ ಹುಣ್ಣುಗಳ ನಿವಾರಣೆಗೂ ಬೇವಿನ ಎಲೆ ರಾಮಬಾಣ. ಬೇವಿನ ಎಲೆಗಳು ನೈಸರ್ಗಿಕವಾಗಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣಗಳನ್ನು ಹೊಂದಿರುವುದರಿಂದ ಇದು ದೇಹದ ಮೇಲಿನ ಗುಳ್ಳೆಗಳನ್ನು ನಿವಾರಣೆ ಮಾಡುತ್ತದೆ.

ಬೇವಿನ ಎಲೆಗಳ ಸ್ನಾನದ ನೀರು ತಯಾರಿಕೆ ಹೇಗೆ?: ಮೊದಲು ಹಸಿರು ಕಹಿ ಬೇವಿನ ಎಲೆಗಳನ್ನು ತೆಗೆದುಕೊಂಡು ಎಲೆಗಳ ಬಣ್ಣ ಹೋಗುವವರೆಗೂ, ನೀರಿನ ಬಣ್ಣ ಹಸಿರಾಗುವವರೆಗೂ ಕುದಿಸಿ. ಆ ಮೇಲೆ ಅದನ್ನು ಹತ್ತಿ ಬಟ್ಟೆಯಿಂದ ಚೆನ್ನಾಗಿ ಶೋಧಿಸಿ. ಸ್ನಾನದ ನೀರಿನಲ್ಲಿ ಮಿಶ್ರ ಮಾಡಿ. ವಾರಕ್ಕೆ ಕನಿಷ್ಟ ಎರಡು ಬಾರಿಯಾದರೂ ಈ ರೀತಿ ತಯಾರಿಸಿದ ಬೇವಿನ ಎಲೆಯ ನೀರಿನಿಂದ ಸ್ನಾನ ಮಾಡಿ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿರಿ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ