'ಬೈತುಲ್ ಹಿಕ್ಮಾಹ್' : ಆ ವಿದ್ಯಾ ಪ್ರತಿಷ್ಠಾಪನೆಯ ವ್ಯಾಪ್ತಿಯಲ್ಲಿ…

'ಬೈತುಲ್ ಹಿಕ್ಮಾಹ್' : ಆ ವಿದ್ಯಾ ಪ್ರತಿಷ್ಠಾಪನೆಯ ವ್ಯಾಪ್ತಿಯಲ್ಲಿ…

ಇಸ್ಲಾಮಿನ ಸುವರ್ಣ ಯುಗದಲ್ಲಿ ಅಬ್ಬಾಸಿದ್ ಖಲೀಫರು ಸ್ಥಾಪಿಸಿದ "ಗ್ರ್ಯಾಂಡ್ ಲೈಬ್ರರಿ ಆಫ್ ಬಗ್ದಾದ್" ಎಂದೂ ಕರೆಯಲ್ಪಡುವ "ಬೈತುಲ್ ಹಿಕ್ಮಾಹ್" ಬಾಗ್ದಾದ್‌ನಲ್ಲಿದ್ದ ಒಂದು ಪ್ರಮುಖ ಸಾರ್ವಜನಿಕ ಗ್ರಂಥಾಲಯ ಮತ್ತು ಸುಪ್ರಸಿದ್ಧ ಸಂಶೋಧನಾ ಕೇಂದ್ರವಾಗಿತ್ತು. ಐರೋಪ್ಯ ಖಂಡಾದ್ಯಂತ "ಹೌಸ್ ಆಫ್ ವಿಸ್ಡಮ್" ಎಂದು ಗುರುತಿಸಲ್ಪಡುವ ಆ ವಿದ್ಯಾ ಪ್ರತಿಷ್ಠಾಪನೆಯು 8ನೇ ಶತಮಾನದ ಉತ್ತರಾರ್ಧದಲ್ಲಿ ಖಲೀಫಾ ಹಾರುನ್ ಅಲ್-ರಶೀದ್ ಅವರ ಸಂಶೋಧನೆಗಳ ಸಂಗ್ರಹಗಳಿಗಾಗಿ ಸ್ಥಾಪಿಸಲಾಗಿತ್ತು. ತರುವಾಯ, ಖಲೀಫಾ ಅಲ್-ಮಾಮುನ್ ಅವರ ಆಡಳಿತದಲ್ಲಿ ಸಾರ್ವಜನಿಕ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರವಾಗಿ ಪರಿವರ್ತಿಸಲಾಯಿತು. ನುಡಿದ ಗ್ರಂಥಾಲಯದಲ್ಲಿ ಅಪರೂಪದ ಅರೇಬಿಕ್ ಗ್ರಂಥಗಳೊಂದಿಗೆ ಅನುವಾದಿಸಲ್ಪಟ್ಟ ಜಗತ್ತಿನಾದ್ಯಂತ ಜ್ಞಾನಕೋಶಗಳು ಉಪಲಬ್ಧವಾಗುತಿತ್ತು.   

ಇಸ್ಲಾಮಿನ ಸ್ವರ್ಣ ಯುಗದಲ್ಲಿ ನಡೆದ ಮತ್ತು ಜಗತ್ತು ಕಂಡ ಅತ್ಯಂತ ಅಪರೂಪದ ಕ್ರಾಂತಿಯಾದ 'ವೈಜ್ಞಾನಿಕ ಸಂಶೋಧನೆ ಕ್ರಾಂತಿ'ಯ ಭಾಗವಾದ 'ಭಾಷಾಂತರ ಅಭಿಯಾನ'ದಲ್ಲಿ ಬೈತುಲ್ ಹಿಕ್ಮಾಹ್ ಅತ್ಯವಶ್ಯ ಪಾತ್ರ ವಹಿಸಿತು. ಬಾಗ್ದಾದಿನಲ್ಲಿ ನೆರೆದ ಭಾಷಾಂತರಕಾರರು 'ಬೈತುಲ್ ಹಿಕ್ಮಾಹ್'ದಲ್ಲೇ ತಮ್ಮ ವಾಸ ಮಾಡಿ ಗ್ರೀಕ್, ಲ್ಯಾಟಿನ್, ಚೀನಿ, ಮತ್ತು ಸಂಸ್ಕೃತ ಜ್ಞಾನಕೋಶಗಳನ್ನು ಅರೇಬಿಕ್‌ ಭಾಷೆಗೆ ಅನುವಾದಿಸಿ ಪ್ರಕಟಿಸಲು ಪ್ರಾರಂಭಿಸಿದರು. ಇಬ್ನ್ ಹೈಥಮ್ ನಂತಹ ಗಣ್ಯ ವಿಜ್ಞಾನಿಯರು ಬೈತುಲ್ ಹಿಕ್ಮಾಹ್ ದಲ್ಲಿ ತಮ್ಮ ಸಂಶೋಧನೆಗಳನ್ನು ಪ್ರಕಟಿಸಿದರು. ಉಡ್ಡಯನಶಾಸ್ತ್ರದ ಪಿತಾಮಹ ಎಂದೇ ಹೆಸರುಗಳಿಸಿದ ಅಬ್ಬಾಸ್ ಇಬ್ನ್ ಫಿರ್ನಾಸ್ ಅವರು ತಾವು ಆವಿಷ್ಕರಿಸಿದ ವಿಮಾನದ ಒಂದು ಪರಿಚಯಾತ್ಮಕ ಹಾರಾಟವನ್ನು 'ಬೈತುಲ್ ಹಿಕ್ಮಾಹ್'ದಲ್ಲಿ ಪ್ರದರ್ಶಿಸಿ, ನೆರೆದ ಗೌರವಾನ್ವಿತ ಜ್ಞಾನ ರಸಿಕರಿಗೆ ಚಕಿತಗೊಳಿಸಿದ್ದರು.

ಪ್ರಾರಂಭಿಕ ಇಸ್ಲಾಮಿನ ಮತ್ತು ಮುಸ್ಲಿಮರ  ಅಸ್ತಿತ್ವವು ಕಾಲದುದ್ದಕ್ಕೂ ಗ್ರಂಥಾಲಯಗಳ ಮತ್ತು ವಿದ್ಯಾ ಸಂಸ್ಥೆಗಳೊಂದಿಗೆ ಅಬೇಧ್ಯ ಸಂಬಂಧವಿದೆ. ಕಾರಣ: ಇಸ್ಲಾಮಿನ ಪ್ರಪ್ರಥಮ ದಿವ್ಯವಾಣಿಯೇ 'ಇಕ್ರಾ' ಅರ್ಥಾತ್ 'ಪಠಿಸಿ' ಆಗಿತ್ತು. ಬೈತುಲ್ ಹಿಕ್ಮಾಹ್ ಕೇವಲ ಸಂಶೋಧನೆ ಕಾರ್ಯವಿಧಾನದ ತಾಣವಾಗದೆ, ಜಗತ್ತಿನಾದ್ಯಂತ ವಾಣಿಜ್ಯ ಸಂಬಂಧಗಳ ಮತ್ತು ಇಸ್ಲಾಮಿನ ಬುನಾದಿಯಾದ ಸಮಾಜ ಸೇವೆ ಪರಂಪರೆಯ ಡೇರೆಯಾಗಿತ್ತು. 

ಗಣಿತಶಾಸ್ತ್ರ, ಖಗೋಳಶಾಸ್ತ್ರ, ತತ್ವಶಾಸ್ತ್ರ, ಭೌತಶಾಸ್ತ್ರ ಮತ್ತು ವೈದ್ಯಕೀಯದಲ್ಲಿ ಮುಂದುವರಿದ ಸಂಶೋಧನೆಗಳ ಉತ್ಕರ್ಷವು ಅರಬ್ ವಿಜ್ಞಾನದ ಅನ್ವೇಷಣೆಯನ್ನು ಉತ್ತುಂಗಕ್ಕೇರಿಸಿತು. ಈ ವೈಜ್ಞಾನಿಕ ಜಿಗಿತವು ಇನ್ನೂ ನವೀಕರಿಸಿದ ಅನುವಾದಗಳ  ಬೇಡಿಕೆಯನ್ನು ಸ್ಥಾಪಿಸಿತು. ಅರಬ್, ಫಾರ್ಸಿ ಮತ್ತು ಇತರ ಇಸ್ಲಾಮಿ ಜಗತ್ತಿನ ವಿದ್ವಾಂಸರ ಬಗ್ದಾದಿಗೆ ಸುಸಂಗತ ಆಗಮನದಿಂದ ಈ ಬೇಡಿಕೆಯೂ ತೀರಿಸಲು ಸಾಧ್ಯವಾಯಿತಲ್ಲದೇ, ಅಬ್ಬಾಸಿದ್ ಖಲೀಫರು ಬಗ್ದಾದನ್ನು ತಮ್ಮ ಆಧಿಪತ್ಯದ ರಾಜಧಾನಿಯಾಗಿ ಸ್ಥಾಪಿಸಲು ಸಾಧ್ಯವಾಯಿತು; ಮತ್ತು ವಿದ್ವಾಂಸರ ಮುಂದುವರಿದ ಶೋಧನೆಗಳಿಂದ ಬೈತುಲ್ ಹಿಕ್ಮಾಹ್ ದ ಧ್ಯೇಯಗಳು ಸಫಲವಾದವು.

ಬೈತುಲ್ ಹಿಕ್ಮಾಹ್ ದಲ್ಲಿ, ಬರಹಗಾರರ, ಅನುವಾದಕರ, ಸಂಶೋಧಕರ, ವಿಜ್ಞಾನಿಗಳ, ಖಗೋಳತಜ್ಞರ ಮತ್ತು ಇತರರ ಪರಾಕಾಷ್ಠೆಯೇ ಇತ್ತು; ಅವರು ಪ್ರತಿದಿನ ಭೇಟಿಯಾಗಿ ಅನುವಾದದ, ಬರವಣಿಗೆಯ, ಓದುವಿಕೆಯ ಮತ್ತು ಸಂಶೋಧನೆಯ ಕುರಿತು ಚರ್ಚಿಸುತ್ತಿದ್ದರು. ಅಗಣಿತ ವೈಜ್ಞಾನಿಕ ಪರಿಕಲ್ಪನೆಗಳು, ತಾತ್ವಿಕ ವಿಷಯಗಳು ಮತ್ತು ವಿವಿಧ ಭಾಷೆಗಳಲ್ಲಿರುವ ಪ್ರಸ್ತಾಪಗಳ ಕುರಿತು ಹಲವಾರು ಬ್ರಹತ್ಗ್ರಂಥಗಳು ಬೈತುಲ್ ಹಿಕ್ಮಾಹ್ ದಲ್ಲಿ ಅನುವಾದಿಸಲಾಗಿತ್ತು. ಬೈತುಲ್ ಹಿಕ್ಮಾಹ್ ದಲ್ಲಿ ವಿಜ್ಞಾನಿಗಳ ಮತ್ತು ಶಿಕ್ಷಣ ತಜ್ಞರ ಒಂದು ಸಕ್ರಿಯ ಸಂಘವಿತ್ತು; ಅನುವಾದದ ಘಟಕ ಮತ್ತು ಶತಮಾನಗಳಿಂದ ಅಬ್ಬಾಸಿದರು ಸಂಪಾದಿಸಿದ ಜ್ಞಾನವನ್ನು ಸಂರಕ್ಷಿಸುವ ಗ್ರಂಥಾಲಯವನ್ನು ಒಳಗೊಂಡಿತ್ತು. ಆಧುನಿಕ ರಸಾಯನಶಾಸ್ತ್ರದ ರಚನೆಗಳನ್ನು ರೂಪಿಸಲು, ಮತ್ತು ನಂತರ ಬಳಸಲಾದ ರಸವಿದ್ಯೆಯ ಸಂಶೋಧನೆ ಮತ್ತು ಅಧ್ಯಯನವನ್ನು ಸಹ ಅಲ್ಲಿ ನಡೆಸಲಾಗಿತ್ತು. ಇದಲ್ಲದೇ, ಇದು ಖಗೋಳ ಅವಲೋಕನಗಳ ಮತ್ತು ಇತರ ಪ್ರಮುಖ ಪ್ರಾಯೋಗಿಕ ಪ್ರಯತ್ನಗಳಿಗೂ ಹೆಸರುವಾಸಿಯಾಗಿದೆ.

ಬಗ್ದಾದಿನ 'ಬೈತುಲ್ ಹಿಕ್ಮಾಹ್'ದ ಅತ್ಯಂತ ಪ್ರಮುಖ ಕೊಡುಗೆಯೆಂದರೆ ಅದು ಇಸ್ಲಾಮಿ ಜಗತ್ತಿನ ಇತರ ಗ್ರಂಥಾಲಯಗಳ, ಪ್ರಯೋಗಾಲಯಗಳ ಮತ್ತು ಸಂಶೋಧನಾ ಕೇಂದ್ರಗಳ ಮೇಲೆ ಗಾಢ ಪ್ರಭಾವ ಬೀರಿತು. ಅದರ ಶೈಕ್ಷಣಿಕ ಮತ್ತು ಸಂಶೋಧನಾ ವಿಭಾಗಗಳ ಕಾರಣದಿಂದಾಗಿ ಇದು ವಿಭಿನ್ನ ಜನರನ್ನು ಮತ್ತು ಸಾಮ್ರಾಜ್ಯಗಳನ್ನು ಸಂಪರ್ಕಿಸಲು ಸಾಧ್ಯವಾಗಿತ್ತು. ಬೈತುಲ್ ಹಿಕ್ಮಾಹ್ ಇಸ್ಲಾಮಿನ ಇತಿಹಾಸದಾದ್ಯಂತ ಮಾನ್ಯತೆ ಪಡೆದಿದೆ ಮತ್ತು ಗೌರವಿಸಲ್ಪಟ್ಟಿದೆ; ಅದರ ಕಾರ್ಯದ ಕಾಲದಲ್ಲಿ ಮತ್ತು ನಂತರದ ಕಾಲದಲ್ಲಿ ಅನೇಕ ಗ್ರಂಥಾಲಯಗಳಿಗೆ ಮಾದರಿಯಾಗಿದೆ.

ಟಿಪ್ಪಣಿ :  ಇತರ ಕೆಲವು ಸಂಸ್ಥೆಗಳನ್ನು 'House of Wisdom' ಅಥವಾ 'ಬೈತುಲ್ ಹಿಕ್ಮಾಹ್' ಎಂದು ಕರೆಯಲಾಗುತ್ತದೆ; ಇದನ್ನು ಬಾಗ್ದಾದಿನ ಬೈತುಲ್ ಹಿಕ್ಮಾಹ್ ದೊಂದಿಗೆ ಗೊಂದಲಗೊಳಿಸಬಾರದು. ಉದಾ: ಕೈರೋದಲ್ಲಿರುವ ದಾರುಲ್ ಹಿಕ್ಮಾಹ್, ಅಂದಲುಸಿನ ಬೈತುಲ್ ಹಿಕ್ಮಾಹ್, ಇಸ್ಲಾಮಿಕ್ ಸ್ಪೈನಿನ ಬೈತುಲ್ ಹಿಕ್ಮಾಹ್ ಇತ್ಯಾದಿ.   

'ಬೈತುಲ್ ಹಿಕ್ಮಾಹ್'ದಿಂದ ವಿಸ್ತರಿಸಿದ 'ಖಗೋಳ' ದರ್ಶನದ ಉತ್ಸುಕತೆ : ಆಧುನಿಕ ಜಗತ್ತಿನಲ್ಲಿ ಮೊದಲ ಖಗೋಳ ವೀಕ್ಷಣಾ ಮಂದಿರದ ಕಲ್ಪನೆಯನ್ನು 828ರಲ್ಲಿ ಬಗ್ದಾದ್‌ನಲ್ಲಿ ಖಲೀಫಾ ಅಲ್-ಮಾಮುನ್ ಅವರು ನಿರ್ಮಿಸಿದರು. ಈ ನಿರ್ಮಾಣವನ್ನು 'ಬೈತುಲ್ ಹಿಕ್ಮಾಹ್'ದ ಹಿರಿಯ ಖಗೋಳಶಾಸ್ತ್ರಜ್ಞರಾದ ಯಾಹ್ಯಾ ಇಬ್ನ್ ಅಬಿ ಮನ್ಸೂರ್ ಮತ್ತು ಸನದ್ ಇಬ್ನ್ ಅಲಿ ಅವರು ನಿರ್ದೇಶಿಸಿದರು. 'ಬೈತುಲ್ ಹಿಕ್ಮಾಹ್'ದಿಂದ ಖಗೋಳ ದರ್ಶನದ ಮೊದಲ ಸುತ್ತಿನ ವೀಕ್ಷಣೆಯ ನಂತರ, ದಮಾಸ್ಕಸ್ ಬಳಿಯ ಮೌಂಟ್ ಕಾಸಿಯೋನ್‌ನಲ್ಲಿ ಎರಡನೇ ವೀಕ್ಷಣಾಲಯವನ್ನು ನಿರ್ಮಿಸಲಾಯಿತು. ಇದು ಇಂದು ಸಿರಿಯಾದ ಅಲ್-ಶಂಸಿಯಾದಲ್ಲಿ ನೆಲೆಗೊಂಡಿದೆ ಮತ್ತು ಇದನ್ನು ಮೌಮ್ತಹನ್ ವೀಕ್ಷಣಾಲಯ ಎಂದು ಕರೆಯಲಾಗುತ್ತಿದೆ.

-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ