ಬ್ರೆಡ್ ರಸಮಲಾಯಿ
ಹಾಲು ೪ ಕಪ್, ಮಿಲ್ಕ್ ಮೇಡ್ ೧ ಕಪ್, ಕೇಸರಿ ೨ ಚಮಚ, ಏಲಕ್ಕಿ ಹುಡಿ ಅರ್ಧ ಚಮಚ, ಡ್ರೈಫ್ರುಟ್ಸ್ ಚೂರುಗಳು ೨ ಚಮಚ, ಬಿಳಿ ಸ್ಯಾಂಡ್ವಿಚ್ ಬ್ರೆಡ್ ೫ ಸ್ಲೈಸ್ ಗಳು
ಮೊದಲು ನಾನ್ ಸ್ಟಿಕ್ ಪ್ಯಾನಿನಲ್ಲಿ ಹಾಲು ಹಾಕಿ ಮಂದ ಉರಿಯಲ್ಲಿ ಕುದಿಸಿ. ಮಧ್ಯೆ ಮಧ್ಯೆ ಸೌಟಿನಿಂದ ಬುಡ ಹಿಡಿಯದಂತೆ ಕೈಯಾಡಿಸುತ್ತಿರಿ. ಇದಕ್ಕೆ ಮಿಲ್ಕ್ ಮೇಡ್ (ಕಂಡೆನ್ಸಡ್ ಮಿಲ್ಕ್) ಹಾಕಿ ಕದಡುತ್ತಿರಿ. ಹಾಲು ಹದಿ ಕಟ್ಟಿದ ಹಾಗಿ ಆದಾಗ ಆ ಹದಿಯನ್ನು ಬದಿಗೆ ಸರಿಸುತ್ತಿರಿ. ಹೀಗೆ ಹಾಲು ಮೂರನೇ ಒಂದು ಭಾಗದಷ್ಟು ಆಗುವವರೆಗೂ ಮಾಡುತ್ತಿರಿ. ಇದಕ್ಕೀಗ ಕೇಸರಿ, ಏಲಕ್ಕಿ ಹುಡಿ ಹಾಕಿ ಕದಡಿ. ಸಿಹಿ ಇಷ್ಟಪಡುವವರು ಒಂದೆರಡು ಚಮಚ ಸಕ್ಕರೆ ಹಾಕಬಹುದು. ಈಗ ಬದಿಗೆ ಸರಿಸಿದ ಹದಿಯನ್ನೂ ಸೇರಿಸಿ ಸರಿಯಾಗಿ ಕದಡಿ ೨ ನಿಮಿಷ ಹಾಗೇ ಕುದಿಯಲಿ, ನಂತರ ಇಳಿಸಿ ತಣಿಯಲು ಬಿಡಿ. ೨ ತಾಸು ಪ್ರಿಡ್ಜಿನಲ್ಲಿಟ್ಟು ತಂಪು ಮಾಡಿ.
ಈಗ ಬ್ರೆಡ್ ಪೀಸ್ ತೆಗೆದುಕೊಂಡು ಬದಿಗಳನ್ನು ತುಂಡರಿಸಿ. ನಂತರ ನಿಮಗೆ ಬೇಕಾದ ಹಾಗೆ ತ್ರಿಕೋನ ಅಥವಾ ವೃತ್ತಾಕಾರದಲ್ಲಿ ಕತ್ತರಿಸಿ. ಬೇಕಾದಷ್ಟು ತುಂಡುಗಳನ್ನು ಪ್ಲೇಟಿನಲ್ಲಿ ತೆಗೆದುಕೊಂಡು ಅದರ ಮೇಲೆ ತಂಪಾದ ದಪ್ಪ ಹಾಲಿನ ಮಿಶ್ರಣ (ಮೊದಲೇ ಮಾಡಿಟ್ಟ) ಜೊತೆಗೇ ಡ್ರೈ ಫ್ರುಟ್ಸ್ ಚೂರುಗಳನ್ನು ಹಾಕಿ ಸವಿಯಿರಿ.