ಭಗತ್ ಸಿಂಗ್ ಅಮರವಾಗಲಿ…!

ಭಗತ್ ಸಿಂಗ್ ಅಮರವಾಗಲಿ…!

ಭಗತ್ ಸಿಂಗ್.. ಸೆಪ್ಟೆಂಬರ್ 28… ಇನ್ಕ್ವಿಲಾಬ್ ಜಿಂದಾಬಾದ್. ಬದುಕುವ ಮಾರ್ಗ ತಿಳಿಯದೆ ದೇಶದ ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥದಿಂದ ಚಿಕ್ಕ ವಯಸ್ಸಿನಲ್ಲಿಯೇ ನೇಣುಗಂಬವೇರಿದ ದೇಶಪ್ರೇಮಿ ಹುತಾತ್ಮ. ಬದುಕುವುದು ಹೇಗೆ ಎಂದು ಅರ್ಥಮಾಡಿಕೊಂಡು ನಮ್ಮದೇ ಜನರ ನಮ್ಮದೇ ಸರ್ಕಾರದ ‌ಹಣವನ್ನು ಲೂಟಿ ಮಾಡಿ ಕಾರು ಬಂಗಲೆ ಸಮೇತ ಮಜಾ ಉಡಾಯಿಸುತ್ತಿರುವ ಮಹಾತ್ಮರ ನಡುವೆ...

ನಿನ್ನೆ ಬೆಳಗಿನಿಂದ ಸಂಜೆಯವರೆಗೂ ಬೇಕಾದರೆ ಗಮನಿಸಿ. ಯಾವುದೇ ಮುಖ್ಯ ವಾಹಿನಿಯ ಟಿವಿ ಮಾಧ್ಯಮಗಳಲ್ಲಿ ಒಂದೆರಡು ನಿಮಿಷಗಳಷ್ಟು ಸಹ ಈ ಸ್ವಾತಂತ್ರ್ಯ ಹುತಾತ್ಮರ ಬಗ್ಗೆ ತೋರಿಸಿರುವ ಸಾಧ್ಯತೆ ಕಡಿಮೆ. ಅದೇ ದಿನಗಟ್ಟಲೆ ಆ ಭ್ರಷ್ಟಾಚಾರಿ ಮಹಾತ್ಮರನ್ನ ಸಂದರ್ಶನ ಸಮೇತ ತೋರಿಸುತ್ತಾರೆ. ದಿನವಿಡೀ ಅವರದೇ ಸುದ್ದಿಗಳು...ಬ್ರೇಕಿಂಗ್ ನ್ಯೂಸ್. ಇದೇ 1931 ಮತ್ತು 2023 ರ ನಡುವಿನ ಸಾಮಾಜಿಕ ಬದಲಾವಣೆ. ಕೆಟ್ಟದ್ದಕ್ಕೆ ಸಮಾಜದಲ್ಲಿ ಪ್ರಚಾರ ಮತ್ತು ಮಾನ್ಯತೆ, ಒಳ್ಳೆಯದರ ಬಗ್ಗೆ ನಿರ್ಲಕ್ಷ್ಯ ಮತ್ತು ತಿರಸ್ಕಾರ.

ಇಂದು ನಾವು ಅನುಭವಿಸುತ್ತಿರುವ ಸಂವಿಧಾನಾತ್ಮಕ ಸ್ವಾತಂತ್ರ್ಯ ಎಷ್ಟೋ ಜನರ ತ್ಯಾಗ ಬಲಿದಾನಗಳಿಂದ ದೊರೆತಿದೆ. ಅದರ ಮಹತ್ವ ಏನು, ಅದನ್ನು ಹೇಗೆ ಉಳಿಸಿಕೊಳ್ಳಬೇಕು, ಮುಂದಿನ ಪೀಳಿಗೆಗೆ ಅದನ್ನು ಹೇಗೆ ವರ್ಗಾಯಿಸಬೇಕು ಎಂಬ ಚರ್ಚೆ ಇಂದು ಆಗಬೇಕಾಗಿದೆ. ಚಿಕ್ಕ ವಯಸ್ಸಿನಲ್ಲಿ ಊಟಕ್ಕೆ ಬಟ್ಟೆಗೆ ಪರದಾಡುತ್ತಿದ್ದವರು ನಾವು, ಮಳೆ ಚಳಿ ಗಾಳಿಗೆ ತತ್ತರಿಸುತ್ತಿದ್ದವರು ನಾವು, 

ಅದರಲ್ಲಿ ಬಹಳಷ್ಟು ಜನ ಇಂದು ಊಟ ಬಟ್ಟೆ ವಸತಿ ಮೀರಿ ಕಾರು ಬಂಗಲೆ ಎಸಿ ಸುಗಂಧ ದ್ರವ್ಯ ಎಲ್ಲವನ್ನೂ ಪಡೆದಿದ್ದಾರೆ. ಆದರೂ ಇನ್ನೂ ಇನ್ನೂ ಇನ್ನೂ ಹಣ ಹಣ ಹಣ ಎಂದು ಮನೆಯ ಸಿಕ್ಕ ಸಿಕ್ಕ ಜಾಗದಲ್ಲಿ ತುಂಬಿಡುತ್ತಿದ್ದಾರೆ. ಚಿನ್ನ ಬೆಳ್ಳಿ ವಜ್ರ ವೈಡೂರ್ಯಗಳು ಕೆಜಿಗಟ್ಟಲೆ ಮನೆಯಲ್ಲಿ ಸಿಗುತ್ತಿವೆ. ಸರ್ಕಾರಿ ಉದ್ಯೋಗ ದೊರೆಯುವ ಮೊದಲು ಹಳೆ ಬಟ್ಟೆ ಹಳೆ ಮನೆ ಹಳೆ ಚಾಪೆ ಕಡಿಮೆ ಊಟದಲ್ಲೇ ತೃಪ್ತಿ ಹೊಂದುತ್ತಿದ್ದ ಜನ ಸರ್ಕಾರಿ ಉದ್ಯೋಗ ದೊರೆತು ಸುಮಾರು 50,000 ಸಾವಿರ ಸಂಬಳ ಪಡೆಯತೊಡಗಿದಾಗ ಮತ್ತಷ್ಟು ಭ್ರಷ್ಟ ಹಣಕ್ಕೆ ಕೈಚಾಚುವುದು ತುಂಬಾ ಸೋಜಿಗವೆನಿಸುತ್ತದೆ.

ಚುನಾವಣೆಯಲ್ಲಿ ಗೆಲ್ಲುವವರೆಗೆ ಕಂಡ ಕಂಡ ಜನರಿಗೆ ಕೈ ಮುಗಿಯುವ, ಎಲ್ಲೆಂದರಲ್ಲಿ ಯಾರೆಂದರೆ ಅವರನ್ನು ಮಾತನಾಡಿಸುವ ಜನ ಪ್ರತಿನಿಧಿಗಳು ಆಯ್ಕೆಯಾದ ನಂತರ ದೇವರಾಗುವುದು ಒಂದು ವಿಪರ್ಯಾಸ. ಭಾರತದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳಲ್ಲಿ ಭಗತ್ ಸಿಂಗ್ ಬಹುಮುಖ್ಯರಾಗುತ್ತಾರೆ. 

ಭಗತ್ ಸಿಂಗ್… ಸ್ಪೂರ್ತಿಯೇ ? ಉದಾಹರಣೆಯೇ ? ಎಚ್ಚರಿಕೆಯೇ ? ಜವಾಬ್ದಾರಿಯೇ ? ಕೇವಲ  24 ವಯಸ್ಸು ಆತನನ್ನು ನೇಣುಗಂಬಕ್ಕೆ ಏರಿಸಿದಾಗ… ಸಾಮಾನ್ಯ ಪರಿಸ್ಥಿತಿಯಲ್ಲಿ 24 ವಯಸ್ಸು ತುಂಬಾ ಭೌದ್ಧಿಕತೆಯ, ಪ್ರಬುದ್ದತೆಯ, ಸಮಷ್ಟಿ ದೃಷ್ಟಿಕೋನದ, ಆಳ ಅರಿವಿನ, ದೀರ್ಘ ಅನುಭವದ, ಸಾಮಾಜಿಕ ಹೊಣೆಗಾರಿಕೆಯ ವಯಸ್ಸು ಅಲ್ಲವೇ ಅಲ್ಲ. 

ಹೆಚ್ಚೆಂದರೆ, ಆಕ್ರೋಶದ, ಧೈರ್ಯದ, ದೇಶಭಕ್ತಿಯ, ಸ್ವಾಭಿಮಾನದ, ಮುಂದಿನ ಭವಿಷ್ಯ ಯೋಚಿಸದೆ ಸಾಹಸಮಯ ಕೆಲಸಗಳಿಗೆ ಕೈಹಾಕುವ ವಯಸ್ಸು. ಸರಳವಾಗಿ ಹೇಳುವುದಾದರೆ, ಅಂದು ತನ್ನ ನೆಲವನ್ನು ಬೇರೆ ಯಾರೋ ವಿದೇಶೀಯರು ಆಕ್ರಮಿಸಿಕೊಂಡು ನಮ್ಮ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿರುವಾಗ ಅದನ್ನು ಅರಿತ ಯುವಕ ಯಾರದೋ ಅಥವಾ ಯಾವುದೋ ಪ್ರಭಾವಕ್ಕೆ ಒಳಗಾಗಿ ಅವರ ವಿರುದ್ಧ ತನ್ನದೇ ರೀತಿಯಲ್ಲಿ ತಿರುಗಿ ಬಿದ್ದು,  ಅಂದಿನ ಪರಕೀಯ ಆಡಳಿತದ ದೃಷ್ಟಿಯಲ್ಲಿ ಹಿಂಸಾತ್ಮಕ ಚಟುವಟಿಕೆ ಎಂದು ಆರೋಪಕ್ಕೆ ಒಳಗಾಗಿ ದೇಶ ದ್ರೋಹದ ಅಡಿಯಲ್ಲಿ ಗಲ್ಲಿಗೇರಿಸಲ್ಪಟ್ಟ ಯುವಕ  ಭಗತ್ ಸಿಂಗ್.

ಈ ರೀತಿಯ ಅನೇಕ ತ್ಯಾಗ ಬಲಿದಾನಗಳು ಅಂದಿನ ಸ್ವಾತಂತ್ರ್ಯ ಹೋರಾಟದಲ್ಲಿ ಅಖಂಡ ಭಾರತದ ಬಹಳಷ್ಟು ಪ್ರದೇಶದಲ್ಲಿ ನಡೆದಿವೆ. ಆ ಎಲ್ಲದರ ಸಂಕೇತವಾಗಿ ಭಗತ್ ಸಿಂಗ್ ದೇಶದ ಜನರಲ್ಲಿ ಇಂದಿಗೂ ಧೈರ್ಯ ತ್ಯಾಗದ ಚಿಲುಮೆಯಾಗಿ ಉಳಿದಿದ್ದಾರೆ. ಭಗತ್ ಸಿಂಗ್ ಒಂದು ವಿಚಾರಧಾರೆಯ, ಒಂದು ಚಳವಳಿಯ, ಒಂದು ಸಂಘಟನೆಯ, ಸಾರ್ವತ್ರಿಕ ದೊಡ್ಡ ಹೋರಾಟದ ವ್ಯಕ್ತಿಯಾಗಿರಲಿಲ್ಲ. ದುರದೃಷ್ಟವಶಾತ್ ಅದಕ್ಕೆ ಅವರ ಆಯಸ್ಸು ಸಹಕರಿಸಲಿಲ್ಲ. 

ಹಾಗಾದರೆ ಭಗತ್ ಸಿಂಗ್ ನಮಗೆ ಏನು ?  ಯುವ ಮನಸ್ಸುಗಳ ಅಗಾಧ ಶಕ್ತಿಯ, ಕ್ಷಿಪ್ರ ಕ್ರಾಂತಿಯ ಬೆಳಕಿನ ಆಶಾ ಕಿರಣ ಭಗತ್ ಸಿಂಗ್. ಅಕ್ಷರ ಜ್ಞಾನವಿದ್ದರೆ ಆತನ ಬಗ್ಗೆ ಕಥೆ ಕವಿತೆ ಕಾದಂಬರಿ ಬರೆಯಬಹುದು, ಸಂಗೀತ ಜ್ಞಾನವಿದ್ದರೆ ಹಾಡು ಹಾಡಬಹುದು, ಹಣವಿದ್ದರೆ ಸಿನಿಮಾ ನಾಟಕ ಮಾಡಬಹುದು, ಸಂಘ ಸಂಸ್ಥೆಗಳಿದ್ದರೆ ವಿಚಾರ ಸಂಕಿರಣ ಮಾಡಬಹುದು, ಮೆರವಣಿಗೆ ಮಾಡಿ ಘೋಷಣೆ ಕೂಗಬಹುದು.

ಇದು ಕಷ್ಟವೇನಲ್ಲ. ಆದರೆ ಪ್ರಯೋಜನ. ಇಲ್ಲಿಯೇ ನಮಗೆ ನಮ್ಮ ಆತ್ಮಾವಲೋಕನದ ಅವಶ್ಯಕತೆ ಇರುವುದು. ಒಂದು ಕ್ಷಣ ನಮ್ಮ ಭಾವನೆಗಳನ್ನು ಪಕ್ಕಕ್ಕಿಡೋಣ. ನೀವು ಭಗತ್ ಸಿಂಗ್ ಅವರನ್ನು ಅವರ ದೇಶಪ್ರೇಮದ ತ್ಯಾಗ ಬಲಿದಾನದ ಮಹಾನ್ ವ್ಯಕ್ತಿ ಎಂದು ಪರಿಗಣಿಸುವವರೇ ಆದರೆ ಭಗತ್ ಸಿಂಗ್ " " ಆತ್ಮ " ನಿಮ್ಮಿಂದ ಇದನ್ನು ಖಂಡಿತ ಅಪೇಕ್ಷಿಸುತ್ತದೆ ಎಂದು ಭಾವಿಸುತ್ತೇನೆ.

ಆತ ಚಿರ ಯೌವ್ವನದ ತನ್ನ ಪ್ರಾಣವನ್ನು ತ್ಯಾಗ ಮಾಡಿದ್ದು ಈ ನೆಲದ ಸ್ವಾತಂತ್ರ್ಯಕ್ಕಾಗಿ, ಐಕ್ಯತೆಗಾಗಿ. ಆದರೆ ಇಂದು ವಿಭಜಕ ಶಕ್ತಿಗಳು ಜಾತಿ ಭಾಷೆ ಧರ್ಮ ಪಂಥ ಪ್ರದೇಶಗಳ ‌ಆಧಾರದಲ್ಲಿ ಈ ದೇಶವನ್ನು ಒಳಗೊಳಗೆ ವಿಭಜಿಸುತ್ತಿದ್ದಾರೆ.  ವೈವಿಧ್ಯಮಯ ದೇಶದ ಭಿನ್ನತೆಯಲ್ಲಿ ಐಕ್ಯತೆಯನ್ನು ಉಳಿಸುವುದು ಬಿಟ್ಟು, ಐಕ್ಯತೆಗಾಗಿ ವಿಭಜನೆಯ ಪರೋಕ್ಷ ಮಾರ್ಗ ರಾಜಕೀಯ ಶಕ್ತಿಗಳಿಂದ ನಡೆಯುತ್ತಿದೆ. ಇಂದಿನ ಭಗತ್ ಸಿಂಗ್ ಅಭಿಮಾನಿಗಳು ಎಷ್ಟು ಸಾಧ್ಯವೋ ಅಷ್ಟು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇಲ್ಲಿ ಯುವ ಮನಸ್ಸುಗಳ ವಿವೇಚನೆ ಬಹಳ ಮುಖ್ಯ. ಕೇವಲ ಭಾವನಾತ್ಮಕ ಚಿಂತನೆ ಅಪಾಯಕಾರಿ.

ಸಾಮಾಜಿಕ ಜಾಲತಾಣಗಳೇ ಇರಲಿ, ವೇದಿಕೆಯ ಭಾಷಣಗಳೇ ಇರಲಿ ಅಥವಾ ಇನ್ಯಾವುದೇ ಮಾಧ್ಯಮ ಇರಲಿ ನಮ್ಮ ಮಾತುಗಳು ಎಲ್ಲಿಯೂ ಸೌಜನ್ಯದ ಗೆರೆ ದಾಟದಂತೆ ಇರಬೇಕು. ಅಭಿಪ್ರಾಯ ಭೇದ ಇರಬಹುದು, ಬೇರೆ ಪಕ್ಷ ಇರಬಹುದು. ಗಂಜಿ ಗಿರಾಕಿ, ಮುಭಕ್ತ, ಗುಲಾಮ, ಲದ್ದಿಜೀವಿ, ಪಾಕಿಸ್ತಾನಕ್ಕೆ ಹೋಗು ಮುಂತಾದ ಪದಗಳನ್ನು ನಮ್ಮದೇ ಜನರ ವಿರುದ್ಧ ಪ್ರಯೋಗಿಸಿ ಅವರು ಕೋಪಗೊಳ್ಳುವಂತೆ ಮಾಡಿ ಸಮಾಜದ ಮತ್ತಷ್ಟು ಅಸಹನೆಗೆ ದಾರಿ ಮಾಡಿ ಕೊಡಬಾರದು. ಧರ್ಮದ ಹೆಸರಿನಲ್ಲಿ ಹಿಂಸೆಗೆ ಅವಕಾಶ ಇರಬಾರದು. ನಮ್ಮೊಳಗಿನ ಭಿನ್ನಾಭಿಪ್ರಾಯ ಚರ್ಚೆಗಳಿಗೆ ಮಾತ್ರ ಸೀಮಿತವಾಗಿರಬೇಕು. ದ್ವೇಷ ಕಾರುವ, ವಿಷ ಬೀಜ ಬಿತ್ತುವ ಪ್ರಕ್ರಿಯೆಗೆ ದಾರಿ ಮಾಡಿ ಕೊಡಬಾರದು. ಹಾಗೆ ಮಾಡಿದರೆ ನಾವು ಭಗತ್ ಸಿಂಗ್ ಅವರ ತ್ಯಾಗಕ್ಕೆ ದ್ರೋಹ ಮಾಡಿದಂತೆ ಎಂಬುದನ್ನು ನೆನಪಿಟ್ಟುಕೊಳ್ಳಿ.

ಇಡೀ ದೇಶದ ಎಲ್ಲಾ ವ್ಯವಸ್ಥೆ ಬಹುತೇಕ ಭ್ರಷ್ಟಗೊಂಡಿದೆ. ನಾವು ಸದ್ಯ ಎಲ್ಲವನ್ನೂ ಸರಿ ಮಾಡಲು ಆಗುವುದಿಲ್ಲ. ಆದರೆ ನಮ್ಮ ಮಟ್ಟಿಗೆ ಕನಿಷ್ಠ ಮಟ್ಟದ ಪ್ರಾಮಾಣಿಕತೆಯನ್ನು ಎಲ್ಲಾ ಹಂತದಲ್ಲಿಯೂ ಉಳಿಸಿಕೊಳ್ಳೋಣ. ವರದಕ್ಷಿಣೆ ಇರಬಹುದು, ಮದುವೆಯ ಸರಳತೆ ಇರಬಹುದು, ಲಂಚಗುಳಿತನ ಇರಬಹುದು, ಮಹಿಳೆಯರ ಸ್ವಾತಂತ್ರ್ಯ ಸಮಾನತೆಯ ಗೌರವ ಇರಬಹುದು, ಪ್ರತಿಭಟನೆಗಳಲ್ಲಿ ಶಾಂತಿ ಕಾಪಾಡುವ ಮನಸ್ಥಿತಿ ಇರಬಹುದು... ಹೀಗೆ ದಿನನಿತ್ಯದ ಚಟುವಟಿಕೆಗಳಲ್ಲಿ ಒಂದಷ್ಟು ಸಂಯಮ ಪ್ರದರ್ಶಿಸಿದರೆ  ಆಗ ಸ್ವಲ್ಪ ಬದಲಾವಣೆ ಸಾಧ್ಯ. ಭಗತ್ ಸಿಂಗ್ ಬಲಿದಾನಕ್ಕೆ ನಮ್ಮ ಕೃತಜ್ಞತೆ ಸಲ್ಲಿಸಿದಂತಾಗುತ್ತದೆ. 

ಇದಲ್ಲದೆ ನಮ್ಮ ಸ್ವಂತ ವಿವೇಚನೆ ಬಳಸಿ ಯಾವುದು ಒಳ್ಳೆಯದು, ಯಾವುದು ದೇಶದ ಹಿತದೃಷ್ಟಿಯಿಂದ ಸರಿಯಾದ ಕ್ರಮ ಎಂದು ಅರಿತು ಹಾಗೆ ನಮ್ಮ ನಡವಳಿಕೆ ರೂಪಿಸಿಕೊಂಡರೆ ಅದೇ ಭಗತ್ ಸಿಂಗ್ ಅವರಿಗೆ ನಾವು ಸಲ್ಲಿಸಬಹುದಾದ ಬಹುದೊಡ್ಡ ನೆನಪಿನ ಕಾಣಿಕೆ. ಇದನ್ನು ಹೊರತುಪಡಿಸಿದ ಎಲ್ಲವೂ ನನ್ನ ದೃಷ್ಟಿಯಲ್ಲಿ ಕೇವಲ ಬೂಟಾಟಿಕೆ. ಭಗತ್ ಸಿಂಗ್ ಅಮರವಾಗಲಿ...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ