ಭಯದ ನಾವಿಕ ಮತ್ತು ಕಮನ ಕನ್ನಿಕೆ ಎಂಬ ಎರಡು ಕವನಗಳು
(ಮಾತ್ರಾ ಚೌಪದಿ)
ಢಾವಣಿಯ ಮಾರುತದಿ ಭಯದಲ್ಲಿ ನಡುಗಿ
ನಾವಿಕನು ಹೊರಟಿಹನು ಕಡಲಲ್ಲಿ ತಾನು
ಹಾವನ್ನು ನೋಡಿದಂತೆಯೆ ತಾ ಭಯದಲಿ
ಭಾವಿಸುತ ನಿಂತಿರಲು ಮಾರುತದ ಹಾದಿ||
ರಭಸದಲಿ ತೆರೆಯುಕ್ಕಿ ಭೋರ್ಗರೆದು ಬಂತು
ನಭದಲ್ಲಿ ತಾರೆಯದು ಹರ್ಷದಲಿ ನಿಂತು
ಸಭೆಯಲ್ಲಿ ಕುಳಿತಿರುವ ರಾಯನಾ ಠೀವಿ
ಶುಭವಲ್ಲ ನನಗಿಂದು ಮಾರುತದ ಪಥವು||
ನಡುಗುತ್ತ ನಿಂತಿಹನು ಕಳವಳದ ಮನದಿ
ಗುಡುಗೊಂದು ಬಾನಿನಲಿ ಗಡಗಡವೆನುತಲಿ
ತಡಮಾಡದೆಯೆ ಹೊರಟಿಹನು ಜೋರಿನಲ್ಲಿ
ಸಿಡಿಲ ಹೊಡೆತವು ಬಡಿದು ನಾವಿಕನಡಗಿಗೆ||
ನುತಿಸಿದನು ಮೊರೆಯಿಟ್ಟು ದೇವನನು ಚಣದಿ
ಹತನಾಗಿ ಹೋಗುವೆನು ಕಡಲಲ್ಲಿ ನಾನು
ಸುತನನ್ನು ಕೈಹಿಡಿದು ಕಾಪಾಡುಯೆಂದ
ರಥವೇರಿ ಗಗನದಲಿ ದೇವ ತಾ ಬಂದ||
ಕೂಡದಿರು ಚಿಂತಿಸುತ ನೌಕೆಯಲಿ ನೀನು
ಮಾಡದಿರು ದಡವನ್ನು ತಲುಪುವಾ ಚಿಂತೆ
ನೋಡುತಲೆದುರಿನಲ್ಲಿ ಕಾಣುತಿದೆ ದಡವು
ಬಾಡಿರುವ ಮೊಗದಲ್ಲಿ ಹಾಸವದು ಮೂಡಿ||
ತೋಷದಲಿ ನಲಿದಿಹನು ನಾವಿಕನು ಮನದಿ
ಪೋಷಕನ ನೆನೆಯುತ್ತ ಮನದಲ್ಲಿ ಮುದದಿ
ಬೇಸರವಿಲದೆ ತಲುಪಿ ಕುಣಿಯುತ್ತ ದಡದಿ
ಮೋಸಮಾಡದ ಭಕುತಿ ದೇವನಾ ಹಾದಿ||
***
*ಕಮನ ಕನ್ನಿಕೆ( ಭಾ ಷ)*
ಕಮನ ಕನ್ನಿಕೆ ತಾನು ಹೋದಳು
ನಮನ ಸಲಿಸಲು ಮಿತ್ರರೊಂದಿಗೆ
ಗಮನವಿಡುತಲಿ ಬೆನ್ನು ಹತ್ತುತ ಕಣ್ಣು
ಹಾಯಿಸಿದ|
ವಿಮಲ ಮನಸಿನ ಕಮನ ಕನ್ನಿಕೆ
ಕಮಲ ಲೋಚನ ಭಾವ ದೀಪಿಕೆ
ಶಮನ ಮಾಡಲು ಹೃದಯದೊಲವಿನ ರಾಣಿಯಾಗಿರಲು||
ಇನ್ನು ಬಿಡದೆಯೆ ಪಡೆದೆ ತೀರುವೆ
ನನ್ನ ಹೃದಯದ ರಾಣಿಯಾಗಿಸಿ
ರನ್ನದಂತೆಯೆ ನೋಡಿಕೊಳ್ಳುವೆ ಕನಸ
ಲೋಕದಲಿ|
ಚಿನ್ನ ನಿನ್ನಲಿ ಮನಸನಿಟ್ಟೆನು
ಮೊನ್ನೆ ತಾನೆಯೆ ನೋಡಿ ಬಿಟ್ಟೆನು
ನಿನ್ನೆಯಿಂದಲಿ ನನ್ನಕಣ್ಣಲಿ ನಿದಿರೆ
ಬರದಂತೆ||
ಒಲ್ಲೆಯನ್ನದೆ ಬಯಸಿ ಬರುತಲಿ
ನಲ್ಲೆನಿನ್ನನು ಮದುವೆಯಾಗುವೆ
ನಲ್ಲನಾಗಿಯೆ ನಿನ್ನ ಬಯಕೆಯ ಕೇಳಿ
ವರಿಸುವೆನು|
ಕಲ್ಲ ಹೃದಯವು ಕರಗಿ ಹೋಗಿದೆ
ಬಿಲ್ಲ ತೆರದಲಿ ಬಾಗಿಬಿಟ್ಟಿದೆ
ಚೆಲ್ಲಿ ನಗೆಯನು ತೋರಿ ಮೊಗದಲಿ ವಧುವು ನೀನಾಗಿ||
ಕಮನ- ಚೆಲುವಾದ
*ಶಂಕರಾನಂದ ಹೆಬ್ಬಾಳ*