ಭರ್ತೃಹರಿಯ ಸುಭಾಷಿತತ್ರಿಶತಿ - ಒಂದು ಅವಲೋಕನ

ಭರ್ತೃಹರಿಯ ಸುಭಾಷಿತತ್ರಿಶತಿ - ಒಂದು ಅವಲೋಕನ

ಬರಹ

ಭಾರತೀಯ ಸಾಹಿತ್ಯದಲ್ಲಿ ಸಂಸ್ಕೃತ ಸಾಹಿತ್ಯ ಅತಿ ಪುರಾತನವಾದದ್ದು. ಅತಿ ಮುಂಚೆಯಿಂದಲೇ ಸಂಸ್ಕೃತ ಕಾವ್ಯದಲ್ಲಿ ಸುಭಾಷಿತ ಎಂಬ ಪ್ರಕಾರ ಬೆಳೆದು ಬಂದಿದೆ. ರಾಮಾಯಣ, ಮಹಾಭಾರತಗಳಲ್ಲೂ, ನಂತರ ಬಂದ ಭಾಸ-ಕಾಳಿದಾಸಾದಿಗಳ ನಾಟಕ ಹಾಗೂ ಮಹಾಕಾವ್ಯಗಳಲ್ಲಿಯೂ ಸುಭಾಷಿತಗಳ ಗುಂಪಿಗೆ ಸೇರಬಹುದಾದಂತಹ ಅನೇಕ ಶ್ಲೋಕಗಳು ಕಂಡು ಬರುತ್ತವೆ. ಸುಭಾಷಿತಕ್ಕೆ ಅಕ್ಷರಶಃ ಒಳ್ಳೆಯ ನುಡಿ ಎಂದು ಅರ್ಥ. ಎಷ್ಟೋ ಬಾರಿ ಒಗಟುಗಳು, ಚಮತ್ಕಾರೀ ಪದ್ಯಗಳು ಮುಂತಾದುವುಗಳನ್ನೂ ಸುಭಾಷಿತಗಳ ಗುಂಪಿಗೆ ಸೇರಿಸುವುದು ಉಂಟು. ಎಷ್ಟೋ ಸುಭಾಷಿತಗಳನ್ನು ಬರೆದವರು ಯಾರು ಎಂಬುದು ತಿಳಿಯದಿದ್ದರೂ, ಅವು ಶತಮಾನಗಳ ನಂತರವೂ ಬಳಕೆಯಲ್ಲಿರುವುದು ಗಮನಿಸಬೇಕಾದ ಸಂಗತಿ. ಅವುಗಳ ವಸ್ತು ಜಳ್ಳಾಗಿಲ್ಲದೇ, ಗಟ್ಟಿಯಾಗಿರುವುದು ಇದಕ್ಕೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

ಸಂಸ್ಕೃತದಲ್ಲಿ ಹಲವಾರು ಸುಭಾಷಿತಕೋಶಗಳಿವೆ. ಎಷ್ಟೋ ಸುಭಾಷಿತಗ್ರಂಥಗಳಲ್ಲಿ ವಿವಿಧ ಕರ್ತೃಗಳ ಸುಭಾಷಿತಗಳನ್ನು ಸೇರಿಸಲಾಗಿದೆ. ಸುಭಾಷಿತರತ್ನಕೋಶ, ಸುಭಾಷಿತರತ್ನಭಾಂಡಾಗಾರ, ಸೂಕ್ತಿಮುಕ್ತಾವಳೀ ಮೊದಲಾದುವು ಕೆಲವು ಪ್ರಸಿದ್ಧವಾದ ಸುಭಾಷಿತ ಸಂಗ್ರಹಗಳು. ಇವೆಲ್ಲಕ್ಕಿಂತ ಹೆಚ್ಚಿನ ಖ್ಯಾತಿ ಹೊಂದಿರುವ ಸುಭಾಷಿತಸಂಗ್ರಹವೆಂದರೆ ಭರ್ತೃಹರಿಯ ಸುಭಾಷಿತ ತ್ರಿಶತಿ. ಒಬ್ಬನೇ ಕವಿಯಿಂದ ರಚಿತವಾದ ಸುಭಾಷಿತಗಳ ಸಂಗ್ರಹ ಇದೆಂಬುದು ಇದರ ಹೆಗ್ಗಳಿಕೆ.

ಭರ್ತೃಹರಿ ಒಬ್ಬ ಕವಿಯಷ್ಟೇ ಅಲ್ಲದೆ ಪ್ರಸಿದ್ಧ ವೈಯಾಕರಣಿಯೂ, ತತ್ತ್ವಶಾಸ್ತ್ರಜ್ಞನೂ ಆಗಿದ್ದನು. ಸಂಸ್ಕೃತ ಭಾಷಾಶಾಸ್ತ್ರಕ್ಕೆ ಈತ ಬರೆದ ವಾಕ್ಯಪದೀಯ ಎಂಬ ವ್ಯಾಕರಣ ಗ್ರಂಥವು ಬಹಳ ಪ್ರಭಾವ ಬೀರಿದೆ. ಇಷ್ಟೆ ಅಲ್ಲದೆ, ಇವನಿಗೂ ಮುಂಚೆ ಬಂದ ಪತಂಜಲಿಯ ಮಹಾಭಾಷ್ಯವೆಂಬ ವ್ಯಾಕರಣ ಗ್ರಂಥಕ್ಕೂ ಈತ ಟೀಕಾಗ್ರಂಥವನ್ನು ರಚಿಸಿದ್ದಾನೆ. ಹೆಚ್ಚಿನ ಸಂಸ್ಕೃತ ಕವಿಗಳಂತೆ, ಭರ್ತೃಹರಿಯ ಕಾಲದೇಶಾದಿಗಳ ಬಗ್ಗೆಯೂ ಸ್ವಲ್ಪ ವಿವಾದವಿದೆ. ಸಾಂದರ್ಭಿಕ ಆಧಾರಗಳಿಂದ, ಇವನು ಸುಮಾರು ಕ್ರಿ. ಶ. ೪೫೦ರಿಂದ - ಕ್ರಿ. ಶ. ೬೫೦ರ ಒಳಗೆ ಇದ್ದಿರಬೇಕೆಂದು ತಿಳಿದುಬರುತ್ತದೆ. ಭಾರತಕ್ಕೆ ಯಾತ್ರೆ ಬಂದಿದ್ದ ಯಿಜಿಂಗ್ ಎಂಬ ಚೀನಾ ದೇಶದ ಬೌದ್ಧ ಭಿಕ್ಷುವೊಬ್ಬನ ಪ್ರವಾಸಕಥನದ ಪ್ರಕಾರ ಭರ್ತೃಹರಿಯು ಕ್ರಿ. ಶ. ೬೫೧ರಲ್ಲಿ ಮರಣಿಸಿದ. ಆದರೆ ಕ್ರಿ. ಶ. ೪೮೦ರ ಸುಮಾರಿನಲ್ಲಿ ಇದ್ದ ಬೌದ್ಧ ತತ್ತ್ವಶಾಸ್ತ್ರಜ್ಞ ದಿನ್ನ್ನಾಗನ (ದಿಗ್ನಾಗ ಎಂದೂ ಹೇಳುವುದಿದೆ) ಕೃತಿಗಳಿಗೂ, ಭರ್ತೃಹರಿಯ ವಾಕ್ಯಪದೀಯಕ್ಕೂ ಇರುವ ಪರಸ್ಪರ ಪ್ರಭಾವವನ್ನು ನೋಡಿದ ಕೆಲವು ಸಂಸ್ಕೃತ ಭಾಷಾಶಾಸ್ತ್ರಜ್ಞರು ಇವರಿಬ್ಬರೂ ಸಮಕಾಲೀನರಾಗಿದ್ದಿರಬೇಕೆಂದು ಹೇಳುತ್ತಾರೆ. ಈ ಕಾರಣದಿಂದ ಕೆಲವರು, ವ್ಯಾಕರಣಶಾಸ್ತ್ರಜ್ಞ ಭರ್ತೃಹರಿಯೂ, ಕವಿ ಭರ್ತೃಹರಿಯೂ ಬೇರೆ ಬೇರೆ ವ್ಯಕ್ತಿಗಳು ಎಂಬ ವಾದವನ್ನೂ ಮುಂದಿಟ್ಟಿದ್ದಾರೆ. ಇದೇನೇ ಇರಲಿ, ಸುಭಾಷಿತತ್ರಿಶತಿ ಸಂಸ್ಕೃತಕಾವ್ಯಕ್ಕೆ ಮೆರುಗು ಕೊಡುವಂತಹ ಕೃತಿ ಎಂಬುದರಲ್ಲಿ ಸಂದೇಹವಿಲ್ಲ.

ಇನ್ನು ದಂತಕಥೆಯೊಂದರ ಪ್ರಕಾರ ಹೇಳುವುದಾದರೆ, ರಾಜ ವಿಕ್ರಮಾದಿತ್ಯನ ಸಹೋದರನಾಗಿದ್ದ ಈತ ಸಂಸಾರದಿಂದ ಸನ್ಯಾಸಕ್ಕೂ, ಸನ್ಯಾಸದಿಂದ ಸಂಸಾರಕ್ಕೂ ಏಳು ಬಾರಿ ತೊನೆದಾಡಿದ್ದನೆಂದೂ ಹೇಳಲಾಗುತ್ತದೆ. ಆದರೆ ಭಾರತದ ಇತಿಹಾಸದಲ್ಲಿ ವಿಕ್ರಮಾದಿತ್ಯ ಎಂಬ ಹೆಸರಿನ ಹಲವಾರು ರಾಜರು ಇರುವುದೂ, ಮತ್ತು ಅದರಲ್ಲೂ ಅನೇಕರ ಕಾಲ ಸರಿಯಾಗಿ ತಿಳಿಯದೇ ಇರುವುದರಿಂದಲೂ ಇವನ ಕಾಲನಿರ್ಣಯಕ್ಕೆ ಹೆಚ್ಚಿನ ಸಹಾಯವೇನೂ ಆಗಿಲ್ಲ. ಇದೇನೇ ಇರಲಿ, ಒಟ್ಟಿನಲ್ಲಿ ಇವನಿಗೆ ಜೀವನದ ಪೂರ್ಣಾನುಭವ ದೊರೆತಿದ್ದಿರಬೇಕು ಎಂಬುದರಲ್ಲಿ ಸಂಶಯವಿಲ್ಲ. ಇವನ ಸುಭಾಷಿತ ತ್ರಿಶತಿಯಲ್ಲಿ ನೂರು ನೂರು ಶ್ಲೋಕಗಳ ಮೂರು ಭಾಗಗಳಿವೆ. ನೀತಿಶತಕ, ಶೃಂಗಾರಶತಕ ಮತ್ತು ವೈರಾಗ್ಯಶತಕ ಎಂಬೀ ಮೂರು ಭಾಗಗಳಲ್ಲಿ ಆಯಾ ವಿಷಯಾನುಸಾರ ಸುಭಾಷಿತಗಳನ್ನು ವಿಂಗಡಿಸಲಾಗಿದೆ. ಇದರಲ್ಲಿ ನೀತಿಶತಕ ಬಹಳವೇ ಪ್ರಖ್ಯಾತಿಯಾದದ್ದು. ಈ ಸುಭಾಷಿತತ್ರಿಶತಿ ಹಲವು ಭಾಷೆಗಳಿಗೆ ಆನುವಾದವೂ ಆಗಿದೆ.

ಭರ್ತೃಹರಿಯ ಕೆಲವು ಸುಭಾಷಿತಗಳನ್ನು ಭಾವಾನುವಾದ ಮಾಡಿ, ಈ ಸುಭಾಷಿತಗಳನ್ನು ಓದಿಲ್ಲದವರಿಗೆ ಅವುಗಳನ್ನು ಪರಿಚಯಿಸುವ ಕಿರುಯತ್ನ ನನ್ನದು. ಪದಶಃ ಅರ್ಥಕ್ಕೆ ಹೋಗದೆ, ಪದ್ಯದ ಭಾವವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಿದ್ದೇನೆ. ಸಂಸ್ಕೃತ ಬಲ್ಲವರಿಗೆಂದು ಮೂಲವನ್ನೂ, ಕನ್ನಡ ಲಿಪಿಯಲ್ಲಿ ಕೊಟ್ಟಿದ್ದೇನೆ.

ಮೊದಲಿಗೆ ಶೃಂಗಾರ ಶತಕದಿಂದಾಯ್ದ ಕೆಲವು ಪದ್ಯಗಳನ್ನು ನೋಡೋಣ. ಗಂಡು ಹೆಣ್ಣಿನ ನಡುವಿನ ಪ್ರೀತಿಯನ್ನು, ಅದರ ಶಕ್ತಿಯನ್ನು ಚೆನ್ನಾಗಿ ಬಲ್ಲವ ಈ ಕವಿ. ಹೆಣ್ಣಿನ ಒಲವು ಸಿಕ್ಕರೆ ಏನಾಗಬಹುದು, ಸಿಗದಿದ್ದರೆ ಏನಾಗಬಹುದೆಂದು ಅವನ ಮಾತಿನಲ್ಲಿ ಕೇಳೋಣ:

ಹೆಣ್ಣಲ್ಲದೇ ಮತ್ತೆ ಏನಿಹುದು
ಈ ಜಗದಿ ಅಮೃತ ವಿಷವೆಂದು?
ಒಲಿದವಗೆ ಅವಳೇ ಅಮೃತಬಳ್ಳಿ
ಒಲಿಯದಿರೆ ಆದಾಳು ವಿಷದ ಕಳ್ಳಿ

ಸಂಸ್ಕೃತ ಮೂಲ:
ನಾಮೃತಮ್ ನ ವಿಷಮ್ ಕಿಂಚಿದೇಕಾಂ ಮುಕ್ತ್ವಾ ನಿತಂಬಿನೀಮ್ |
ಸೇವಾಮೃತಲತಾ ರಕ್ತಾ ವಿರಕ್ತಾ ವಿಷವಲ್ಲರೀ ||

ಪ್ರೇಯಸಿ ಹತ್ತಿರವಿಲ್ಲದಿದ್ದರೆ ತನಗಾಗುವ ಬವಣೆಯನ್ನು ಕವಿ ಹೇಳುವ ಪರಿ ನೋಡಿ:

ಆಗಸದಿ ಹೊಳೆಯುವ ಚುಕ್ಕಿಗಳು ಚಂದಿರನು
ಮತ್ತೆ ದೀಪವು ಕತ್ತಲ ಕಳೆವುದೆಂಬರು.
ಎಳೆಜಿಂಕೆಕಣ್ಣಿನ ಸೊಬಗಿ ಬಳಿಯಿಲ್ಲದಿರಲು
ಜಗವಿದಾಗಿಹುದೆನಗೆ ಕಡುಕತ್ತಲು!

ಸಂಸ್ಕೃತ ಮೂಲ:
ಸತಿ ಪ್ರದೀಪೇ ಸತ್ಯಗ್ನೌ ಸತ್ಸು ತಾರಾಮಣೀಂದುಷು|
ವಿನಾ ಮೇ ಮೃಗಶಾವಾಕ್ಷ್ಯಾ ತಮೋಭೂತಮಿದಂ ಜಗತ್||

ಹೆಣ್ಣನ್ನು ಅಬಲೆ ಎಂದು ಕರೆಯುವುದು ಲೋಕರೂಢಿ. ಅದಕ್ಕೆ ಭರ್ತೃಹರಿ ಹೀಗೆನ್ನುತ್ತಾನೆ:

ಕವಿಗಳ ಮಾತೆಲ್ಲ ಬರೀ ವ್ಯತಿರಿಕ್ತ
ಕರೆಯುವರು ಹೆಣ್ಣನ್ನು ಅಬಲೆಯೆಂದು
ಕಡೆಕಣ್ನೋಟದಲೆ ಇಂದ್ರನನೂ ಗೆಲ್ಲುವ
ಬಲವಿರುವ ಅವರೆಂತು ಅಬಲೆಯಾದಾರು?

ಸಂಸ್ಕೃತ ಮೂಲ:
ನೂನಂ ಹಿ ತೇ ಕವಿವರಾ ವಿಪರೀತವಾಚೋ
ಯೇ ನಿತ್ಯಮಾಹುರಬಲಾ ಇತಿ ಕಾಮಿನೀಸ್ತಾಃ|
ಯಾಭಿರ್ವಿಲೋಲತರತಾರಕದೃಷ್ಟಿಪಾತೈಃ
ಶಕ್ರಾದಯೋಽಪಿ ವಿಜಿತಾಸ್ತ್ವಬಲಾಃ ಕಥಂ ತಾಃ||

ದೇವಾಧಿದೇವತೆಗಳೇ ಹೆಣ್ಣಿನ ಕಡೆಗಣ್ಣಿನ ನೋಟದಲ್ಲಿ ಸೋತುಹೋಗುವಾಗ ಹುಲುಮಾನವರ ಪಾಡೇನು? ಹೆಣ್ಣೊಬ್ಬಳ ಕಣ್ನೋಟದಿಂದ ಗಾಸಿಗೊಂಡು, ಅವಳ ಪ್ರೇಮಕ್ಕಾಗಿ ಹಲುಬುತ್ತಿರುವವನೊಬ್ಬನ ಮಾತಿನಲ್ಲಿ ಕವಿ ಹೀಗೆ ನುಡಿಯುತ್ತಾನೆ:

ಸರಸರನೆ ಹರಿಯುವ ಹೊಳೆವ ಚರ್ಮದ ಹಾವು
ಕಚ್ಚುವುದೇ ಮೇಲವಳ ಕಣ್ನೋಟಕಿಂತ
ವೈದ್ಯರಿಹರೆಲ್ಲೆಲ್ಲೂ ಹಾವು ಕಚ್ಚಿದರವಳ
ಕ್ಷಣನೋಟದ ಗಾಯಕೆ ಇಲ್ಲ ಔಷಧಿಯು

ಸಂಸ್ಕೃತ ಮೂಲ:
ವ್ಯಾದೀರ್ಘೇಣ ಚಲೇನ ವಕ್ರಗತಿನಾ ತೇಜಸ್ವಿನಾ ಭೋಗಿನಾ
ನೀಲಾಬ್ಜದ್ಯುತಿನಾಹಿನಾ ಪರಮಹಮ್ ದಷ್ಟೋ ನ ತಚ್ಚಕ್ಷುಷಾ|
ದಷ್ಟೇ ಸಂತಿ ಚಿಕಿತ್ಸಕಾ ದಿಶಿ ದಿಶಿ ಪ್ರಾಯೇಣ ಧರ್ಮಾರ್ಥಿನೋ
ಮುಗ್ಧಾಕ್ಷೀಕ್ಷಣವೀಕ್ಷಿತಸ್ಯ ನ ಹಿ ಮೇ ಮಂತ್ರೋ ನ ಚಾಪ್ಯೌಷಧಮ್||

ಇನ್ನು ವೈರಾಗ್ಯಶತಕದ ಕೆಲವು ಶ್ಲೋಕಗಳನ್ನು ನೋಡೋಣ. ಭರ್ತೃಹರಿ ಬೌದ್ಧ ಭಿಕ್ಷುವಾಗಿದ್ದಾಗ ಇವುಗಳನ್ನು ಬರೆದಿರಬಹುದು ಎಂದು ಊಹಿಸಿದರೆ ತಪ್ಪಾಗಲಾರದೇನೋ?

ಪ್ರಕೃತಿ ಬೇಕಾದ್ದನ್ನು ಕೊಟ್ಟಿರುವಾಗ, ವೈರಾಗ್ಯದ ಮೊರೆ ಹೋಗಬೇಕಾದಂತಹವರು ಅದನ್ನು ಮಾಡದೇ, ಹಣವಂತರ ಮನೆಯ ಬಾಗಿಲನ್ನು ಕಾಯುವರಲ್ಲಾ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾನೆ ಭರ್ತೃಹರಿ.

ಕಾಡಿನಲಿವೆ ತಿನ್ನಲು ಸವಿ ಹಣ್ಣು ಹಂಪಲು
ಕುಡಿಯಲು ಪುಣ್ಯನದಿಗಳ ತಂಪು ಸಿಹಿ ನೀರು
ಮಲಗಲೋ ಎಲೆಚಿಗುರಿನ ಮೃದು ಮಂಚವಿರಲು
ಲೋಭಿ ಧನಿಕರ ಬಾಗಿಲ ಹೀಗೇಕೆ ಕಾಯ್ವರು?

ಸಂಸ್ಕೃತ ಮೂಲ:
ಫಲಂ ಸ್ವೇಚ್ಛಾಲಭ್ಯಂ ಪ್ರತಿವನಮಖೇದಂ ಕ್ಷಿತಿರುಹಾಂ
ಪಯಃ ಸ್ಥಾನೇ ಸ್ಥಾನೇ ಶಿಶಿರಮಧುರಂ ಪುಣ್ಯಸರಿತಾಮ್|
ಮೃದುಸ್ಪರ್ಶಾ ಶಯ್ಯಾ ಸುಲಲಿತಲತಾಪಲ್ಲವಮಯೀ
ಸಹಂತೇ ಸಂತಾಪಂ ತದಪಿ ಧನಿನಾಂ ದ್ವಾರಿ ಕೃಪಣಾಃ||

ಈ ಜೀವನ ನಶ್ವರ ಹಾಗೂ ಕ್ಷಣಿಕವೆಂದು ಅರಿತಿದ್ದೂ ಇನ್ನೊಬ್ಬರಿಗೆ ಕೆಡುಕನ್ನು ಬಯಸುವರ ಬಗ್ಗೆ ಕವಿಯ ಉದ್ಗಾರ ಹೀಗೆ:

ಮುಪ್ಪೆಂಬ ಹುಲಿ ಮೇಲೆ ಜಿಗಿಯೆ ಕಾದಿಹುದು
ರೋಗಗಳು ಶತ್ರುಗಳಂತೆ ಮೇಲೆ ಮುಗಿಬೀಳುವುವು
ಒಡೆದ ಮಡಿಕೆಯೊಳಗಿನ ನೀರಂತೆ ಬಾಳು ಕಳೆದಿರಲು
ಪರರಿಗೆ ಕೆಡುಕ ಬಯಸುವುದಿದೆಂಥ ಮರುಳು ?

ಸಂಸ್ಕೃತ ಮೂಲ:
ವ್ಯಾಘ್ರೀವ ತಿಷ್ಠತಿ ಜರಾ ಪರಿತರ್ಜಯಂತೀ
ರೋಗಾಶ್ಚ ಶತ್ರವ ಇವ ಪ್ರಹರಂತಿ ದೇಹಮ್|
ಆಯುಃ ಪರಿಸ್ರವತಿ ಭಿನ್ನಘಟಾದಿವಾಂಭೋ
ಲೋಕಸ್ತಥಾಪ್ಯಹಿತಮಾಚರತೀತಿ ಚಿತ್ರಮ್||

ಆಸೆಯೇ ದುಃಖಕ್ಕೆ ಮೂಲ ಎಂಬ ಬುದ್ಧನ ತತ್ತ್ವವನ್ನು ಈ ಮುಂದಿನ ಸುಭಾಷಿತದಲ್ಲಿ ನೋಡಬಹುದು. ಆಸೆ ಹೆಚ್ಚಾಗಿ, ಎಷ್ಟು ಸಿರಿಯಿದ್ದರೂ ಸಾಲದೆಂಬ ಭಾವವಿರುವ ಶ್ರೀಮಂತನೊಬ್ಬನಿಗೆ ಜೀವನದಲ್ಲಿ ತೃಪ್ತಿಯಿರುವ ವಿರಕ್ತನೊಬ್ಬ ಹೇಳುವ ಮಾತಿದು.

ನಾರುಮಡಿ ಉಟ್ಟರೂ ನಮಗುಂಟು ತೃಪ್ತಿ
ಸೊಗಸಾದ ಬಟ್ಟೆಬರೆ ಉಟ್ಟ ನಿಮ್ಮಷ್ಟೇ!
ಆಸೆ ಹೆಚ್ಚಿದವ ನಿಜದಿ ಬಡವ; ಇಲ್ಲದಿರೆ
ಬಡವ ಧನಿಕರ ಭೇದ ಕಾಣುವುದೆ ಇಲ್ಲ

ಸಂಸ್ಕೃತ ಮೂಲ:
ವಯಮಿಹ ಪರಿತುಷ್ಟಾಃ ವಲ್ಕಲೈಸ್ತ್ವಂ ದುಕೂಲೈಃ
ಸಮ ಇವ ಪರಿತೋಷೋ ನಿರ್ವಿಶೇಷೋ ವಿಶೇಷಃ|
ತು ಭವತು ದರಿದ್ರೋ ಯಸ್ಯ ತೃಷ್ಣಾ ವಿಶಾಲಾ
ಮನಸಿ ಚ ಪರಿತುಷ್ಟೇ ಕೋಽರ್ಥವಾನ್ ಕೋ ದರಿದ್ರಃ||

ಭರ್ತೃಹರಿಯ ರಚನೆಗಳಲ್ಲಿ ಅತಿ ಪ್ರಖ್ಯಾತವಾಗಿರುವುದು ನೀತಿಶತಕದಲ್ಲಿರುವ ಸುಭಾಷಿತಗಳು ಎನ್ನಬಹುದು. ಸಂಸ್ಕೃತವನ್ನು ಅಲ್ಪಸ್ವಲ್ಪ ಬಲ್ಲವರಿಗೂ ಇದರಲ್ಲಿರುವ ಕೆಲವಾದರೂ ಶ್ಲೋಕಗಳ ಪರಿಚಯ ಇರುವುದು ಸಾಮಾನ್ಯ ಸಂಗತಿ. ಈಗ ನೀತಿಶತಕದಿಂದಾಯ್ದ ಕೆಲವು ಶ್ಲೋಕಗಳ ಅನುವಾದವನ್ನು ನೋಡೋಣ.

ಮಾಡಬೇಕಾದ ಕಾರ್ಯವನ್ನು ಮಾಡದೇ ಬಿಡುವ ಸಾಧಾರಣ ಜನರಿಗೂ, ಕಾರ್ಯ ಸಾಧಿಸುವ ಛಲವಿರುವ ಜನರಿಗೂ ಇರುವ ವ್ಯತ್ಯಾಸವನ್ನು ಭರ್ತೃಹರಿ ಒಂದು ಸೊಗಸಾದ ಉಪಮೆಯೊಂದಿಗೆ ಹೀಗೆ ಬಣ್ಣಿಸುತ್ತಾನೆ:

ಚೆಂಡು ಬಿದ್ದು ಪುಟಿಯುವಂತೆ
ಬಿದ್ದರೂ ಏಳುವರು ಸಜ್ಜನರು
ಹೆಂಟೆ ಮಣ್ಣು ಒಡೆಯುವಂತೆ
ನಶಿಪರಯ್ಯಾ ಅಯೋಗ್ಯರು !

ಸಂಸ್ಕೃತ ಮೂಲ :
ಪ್ರಾಯಃ ಕಂದುಕ ಪಾತೇನೋತ್ಪತತ್ಯಾರ್ಯಃ ಪತನ್ನಪಿ|
ತಥಾ ಪತತ್ಯನಾರ್ಯಸ್ತು ಮೃತ್ಪಿಂಡ ಪತನಂ ಯಥಾ||

ಎಲ್ಲರಿಗೂ ಒಂದಲ್ಲ ಒಂದು ಕಲಾಪ್ರಕಾರದ ಅರಿವಿರಬೇಕು, ಇಲ್ಲದಿದ್ದರೆ ಮಾನವನಿಗೂ ಪ್ರಾಣಿಗಳಿಗೂ ವ್ಯತ್ಯಾಸವೆಲ್ಲಿ ಎಂಬುದನ್ನು ಮನಸ್ಸಿಗೆ ಮುಟ್ಟುವಂತೆ ಭರ್ತೃಹರಿ ಹೇಳುವ ಪರಿ ಹೀಗೆ.

ಇರಲಿ ಆಸಕ್ತಿ ಸಾಹಿತ್ಯ ಸಂಗೀತ
ಅಥವಾ ಮತ್ತೊಂದು ಲಲಿತಕಲೆ
ಇಲ್ಲದೆ ಹೋದವ ತಾ ಪಶುವೇ ಸರಿ
ಬಾಲ ಕೊಂಬು ಎರಡಿಲ್ಲದೆಲೆ!
ಹುಲ್ಲನು ತಿನ್ನದೇ ಜೀವಿಸಬಲ್ಲವ
ನೆಂಬುದೆ ಪುಣ್ಯ ಪ್ರಾಣಿಗಳಿಗೆ!

ಸಂಸ್ಕೃತ ಮೂಲ:
ಸಾಹಿತ್ಯಸಂಗೀತಕಲಾವಿಹೀನಃ ಸಾಕ್ಷಾತ್ಪಶುಃ ಪುಚ್ಛವಿಷಾಣಹೀನಃ|
ತೃಣಂ ನ ಖಾದನ್ನಪಿ ಜೀವಮಾನಸ್ತದ್ಭಾಗಧೇಯಂ ಪರಮಂ ಪಶೂನಾಮ್||

ಇದರಲ್ಲಿ ಹೀನದ ಬಳಕೆ ಸ್ವಾರಸ್ಯವಾಗಿದೆ. ಸಂಸ್ಕೃತದಲ್ಲಿ ಇಲ್ಲದಿರುವುದಕ್ಕೆ ಹೀನ, ರಹಿತ ಎರಡು ಪದ ಬಳಸಬಹುದು. ಆದರೆ ಇವುಗಳ ಬಳಕೆಯಲ್ಲಿ ಒಂದು ಸೂಕ್ಷ್ಮವಾದ ವ್ಯತ್ಯಾಸವಿದೆ. ಹೀನ ಒಳ್ಳೆಯ ಗುಣ ಇಲ್ಲದಿರುವ ಸಂದರ್ಭದಲ್ಲಿ ಬಳಕೆಯಾಗುತ್ತದೆ. ಉದಾಹರಣೆಗೆ ಬಲಹೀನ, ಮತಿಹೀನ. ರಹಿತ ಕೆಟ್ಟ ಗುಣ ಇಲ್ಲದಿರುವ ಸಂದರ್ಭದಲ್ಲಿ ಬಳಕೆಯಾಗುತ್ತದೆ. ಉದಾಹರಣೆಗೆ ಕಲಂಕರಹಿತ, ದೋಷರಹಿತ. ಈ ಶ್ಲೋಕದ ಸಂದರ್ಭದಲ್ಲಿ ಸಾಹಿತ್ಯ, ಸಂಗೀತ, ಕಲೆ ಒಳ್ಳೆಯ ಇಲ್ಲದಿರುವ ಪದಾರ್ಥಗಳು. ಹಾಗೆಯೇ ಬಾಲ, ಕೊಂಬು ಕೂಡಾ ಇರಬೇಕಾದ ಒಳ್ಳೆಯ ಪದಾರ್ಥಗಳು!

ಉತ್ತಮ ಜನರು ಅಪಾತ್ರರ ಆಶ್ರಯ ಪಡೆಯದೇ ಇರುವುದಕ್ಕೆ ಭರ್ತೃಹರಿ ಕೊಡುವ ಕಾರಣ ನೋಡಿ:

ಘಮಘಮಿಪ ಹೂ ಗೊಂಚಲಿನಂತೆ
ಎರಡೆ ಎಡೆ ಜಗದಲಿ ಉತ್ತಮರಿಗೆ
ಮೆರೆದರೆ ಸುಂದರಿಯರ ಮುಡಿಯಲ್ಲಿ
ಅಳಿದರೆ ತಾಯಿ ಗಿಡದ ಅಡಿಯಲ್ಲಿ

ಸಂಸ್ಕೃತ ಮೂಲ:
ಕುಸುಮಸ್ತಬಕಸ್ಯೇವ ದ್ವೇ ವೃತ್ತಿರ್ಮನಸ್ವಿನಃ|
ಮೂರ್ಧ್ನಿ ವಾ ಸರ್ವಲೋಕಸ್ಯ ಶೀರ್ಯತೇ ವನ ಏವ ವಾ||

ಭರ್ತೃಹರಿ ಇದನ್ನು ಬರೆದ ಸಮಯದಲ್ಲಿ, ಭಾರತದಲ್ಲಿ ಗಂಡಸರೂ ಹೆಂಗಸರೂ ಅಲಂಕಾರಕ್ಕೆಂದು ಹೂಮುಡಿಯುವ ಪರಿಪಾಠವಿದ್ದಿರಬೇಕು. ಕಾಲಧರ್ಮಕ್ಕೆ ಹೊಂದಿಕೆಯಾಗುವಂತೆ ಮೂಲದ ಸರ್ವಲೋಕವನ್ನು ಸುಂದರಿಯರ ಮುಡಿಯಾಗಿ ಮಾರ್ಪಡಿಸುವ ಸ್ವಾತಂತ್ರ್ಯ ತೆಗೆದುಕೊಂಡಿದ್ದೇನೆ.

ಗಳಿಸಿದ ಹಣವನ್ನು ಸದ್ವಿನಿಯೋಗ ಮಾಡಬೇಕು, ಇಲ್ಲದೇ ಹೋದರೆ ಹಾಳಾಗುವುದು ಖಂಡಿತ ಎಂಬ ನಂಬಿಕೆ ಭರ್ತೃಹರಿಯದು:

ಅನುಭವಿಸು ಇಲ್ಲ ದಾನ ಕೊಡು ಅಥವ
ವಿನಾಶವೆಂದು ಹಣಕಿದೆ ಮೂರು ಗತಿ
ಒಂದನೆಯದು ಎರಡನೆಯದೂ ಮಾಡದೆ
ಹೋದರೆ ಮೂರನೆ ಗತಿಯೇ ಪ್ರಾಪ್ತಿ

ಸಂಸ್ಕೃತ ಮೂಲ:
ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ |
ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾ ಗತಿರ್ಭವತಿ ||

ಚಾತಕ ಪಕ್ಷಿಯೆಂಬುದು ನೆಲದ ಮೇಲೆ ಬಿದ್ದ ನೀರನ್ನು ಕುಡಿಯದೇ, ಕೇವಲ ಆಕಾಶದಿಂದ ಮಳೆಯಾಗಿ ಬೀಳುತ್ತಿರುವ ನೀರನ್ನು ಮಾತ್ರ ಕುಡಿಯುತ್ತದೆ ಎಂಬುದೊಂದು ಪ್ರತೀತಿ. ಈ ಪಕ್ಷಿಯ ಉದಾಹರಣೆಯನ್ನು ಮುಂದಿಟ್ಟುಕೊಂಡು, ಅವರಿವರಲ್ಲಿ ಬೇಡುವ ಪ್ರವೃತ್ತಿಯಿರುವಂತಹವರಿಗೆ, ಎಲ್ಲರಲ್ಲೂ ಕೇಳುವುದು ವ್ಯರ್ಥವೆಂದು ಈ ಕಿವಿಮಾತನ್ನು ಹೇಳುತ್ತಾನೆ.

ಎಲೇ ಚಾತಕ, ಸಾವಧಾನ ಮನದಿ ಕೇಳು ಒಂದೆರಡು ಕ್ಷಣ
ಬಾನಲಿಹವು ಹಲವು ಮುಗಿಲು; ಆದರೊಂದೊಂದೂ ವಿಭಿನ್ನ.
ಮಳೆಯ ಸುರಿಸಿದರೆ ಕೆಲವು, ಬರಿದೆ ಗುಡುಗುವುವು ಕೆಲವು
ಅದಕೆ ನೀ ಕಂಡ ಕಂಡಲ್ಲೆಲ್ಲ ತೋರದಿರು ದೈನ್ಯವನ್ನ

ಸಂಸ್ಕೃತ ಮೂಲ:
ರೇ ರೇ ಚಾತಕ ಸಾವಧಾನಮನಸಾ ಮಿತ್ರ ಕ್ಷಣಂ ಶ್ರೂಯತಾಂ
ಅಂಭೋದಾ ಬಹವೋ ಹಿ ಸಂತಿ ಗಗನೇ ಸರ್ವೇಽಪಿ ನೈತಾದೃಶಾಃ|
ಕೇಚಿದ್ವೃಷ್ಟಿಭಿರಾರ್ದ್ರಯಂತಿ ಧರಣೀಂ ಗರ್ಜಂತಿ ಕೇಚಿದ್ವೃಥಾ
ಯಂ ಯಂ ಪಶ್ಯಸಿ ತಸ್ಯ ತಸ್ಯ ಪುರತೋ ಮಾ ಬ್ರೂಹಿ ದೀನಂ ವಚಃ||

ಒಳ್ಳೆಯ ಗೆಳೆಯನೆಂದರೆ ಹೇಗಿರಬೇಕು, ಅವನ ಲಕ್ಷಣಗಳೇನು ಎಂಬುದನ್ನು ಕವಿ ಹೀಗೆ ವಿವರಿಸುತ್ತಾನೆ:

ಕೆಡುಕುಗಳ ಕಳೆದು ಒಳಿತ ಕೂಡಿಸುವ
ಗುಟ್ಟುಗಳ ಮುಚ್ಚಿಟ್ಟು ಗುಣಬಯಲಿಗೆಳೆವ
ಆಪತ್ತಿನಲಿ ಕೈ ಹಿಡಿದು ಬೇಕಾದ್ದ ಕೊಡುವ
ಇಂಥವನು ಇದ್ದರವ ನಿಜವಾದ ಗೆಳೆಯ

ಸಂಸ್ಕೃತ ಮೂಲ:
ಪಾಪಾನ್ನಿವಾರಯತಿ ಯೋಜಯತೇ ಹಿತಾಯ
ಗುಹ್ಯಂ ನಿಗೂಹತಿ ಗುಣಾನ್ ಪ್ರಕಟೀಕರೋತಿ|
ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ
ಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತಃ||

ಹೀಗೆ ಭರ್ತೃಹರಿ ಹೇಳದೇ ಇರುವ ವಿಷಯವೇ ಇಲ್ಲ ಎಂದರೆ ಅದರಲ್ಲಿ ಹೆಚ್ಚು ಉತ್ಪ್ರೇಕ್ಷೆಯೇನೂ ಇಲ್ಲ. ಓದುಗರಲ್ಲಿ ಸುಭಾಷಿತಗಳ ಬಗ್ಗೆ ಆಸಕ್ತಿ ಮೂಡಿಸಲು ಈ ಲೇಖನ ಯಶಸ್ವಿಯಾದರೆ, ನನ್ನ ಪ್ರಯತ್ನ ಸಾರ್ಥಕವೆಂಬ ಮಾತಿನೊಡನೆ ಈ ಅವಲೋಕನವನ್ನು ಮುಗಿಸುವೆ.

(ಈ ಸುಭಾಷಿತಗಳ ಮೂಲ ಶ್ಲೋಕಗಳ ಪಾಠವನ್ನು ತಿದ್ದುವುದರಲ್ಲಿ, ಮತ್ತು ಅನುವಾದಮಾಡುವಲ್ಲಿ ತಮ್ಮ ಸಲಹೆಗಳನ್ನಿತ್ತ ಶ್ರೀ ಕಪ್ಪಿನಿಯರಿಗೆ ನಾನು ಬಹಳ ಆಭಾರಿ.)

-ಹಂಸಾನಂದಿ

(ಕೆಲ ವರ್ಷಗಳ ಹಿಂದೆ ಬೇರೊಂದು ಸಾಹಿತ್ಯ ಸಂಚಿಕೆಯೊಂದರಲ್ಲಿ ಪ್ರಕಟವಾಗಿದ್ದ ನನ್ನ ಲೇಖನವನ್ನು, ಸಹೃದಯಿ ಸಂಪದಿಗರ ಮುಂದೆ ಮತ್ತೆ ಇಟ್ಟಿದ್ದೇನೆ)