ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!

ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!

ಬರಹ

ಸದಾ ‘ಕುಣಿಯೋಣು ಬಾರ’ ಸ್ಟೈಲ್ ನಲ್ಲಿ ನನ್ನನ್ನು ದಿನವೂ ಗೋಳು ಹೊಯ್ದುಕೊಳ್ಳುವ ತಂಗಿಗೆ ಇಂದು ಬೆಳಿಗ್ಗೆ ಬರೋಬ್ಬರಿ ದೇವರು ಭೆಟ್ಟಿ ಯಾಗಿದ್ದ!

ನಿದ್ದೆಗಣ್ಣಿನಲ್ಲಿದ್ದ ಆಕೆಯನ್ನು ಬೆಳಿಗ್ಗೆ ಎಬ್ಬಿಸಿದ್ದೆ. ನನ್ನ ಸ್ಕೂಟರ್ ರಿಪೇರಿಗೆ ತೆರಳಿ ಒಂದು ವಾರವಾಗಿದೆ. ಆಕೆಯೇ ನನಗೆ ಸದ್ಯದ ಸಾರಥಿ. ಹಾಗಾಗಿ ಅನಿವಾರ್ಯ ಪ್ರಸಂಗ ಆಕೆಗೆ. ಬಸ್ ಸ್ಟ್ಯಾಂಡ್ ವರೆಗೆ ನನ್ನನ್ನು ಆಕೆಯ ದ್ವಿಚಕ್ರವಾಹನದ ಮೇಲೆ ಬಿಡುವಂತೆ ಗೋಳು ಹೊಯ್ದುಕೊಳ್ಳುವ ಸರದಿ ನನ್ನದು!

ಎದ್ದು ಬಂದವಳೇ ಅರ್ಧ ಎಚ್ಚರ, ಇನ್ನರ್ಧ ತೂಕಡಿಕೆ ಸ್ಥಿತಿಯಲ್ಲಿ ಸ್ಕೂಟಿ ಹಿಡಿದಳು. ಸ್ಕೂಟಿ ಬದಲು ಹಾವಿನ ಬಾಲ ಅದುಮಿ ಹಿಡಿದುಕೊಂಡಂತೆ ಕಿಟಾರ್ ಎಂದು ಕಿರುಚಿ ಗಾಡಿ ಕೈಬಿಟ್ಟಳು. ನಾನು ಹೌಹಾರಿ ಒಂದೇ ಕಾಲಿಗೆ ಬೂಟು ಸಿಕ್ಕಿಸಿಕೊಂಡು ಜಿಗಿಯುತ್ತ ಬರುವಷ್ಟರಲ್ಲಿ ಆಕೆಗೆ ಕಣ್ಣೀರು ಕಪಾಳಕ್ಕೆ ಬಂದಿದ್ದವು. ‘ದಿವ್ಯಾ’ ನಿಜಕ್ಕೂ ದಿವ್ಯವಾದ ಕೆಲಸ ಮಾಡಿದ್ದಳು.

ರಾತ್ರಿಯಿಡಿ ಶೃದ್ಧೆಯಿಂದ ದೊಡ್ಡ ಗಾತ್ರದ ಜೇಡವೊಂದು ಆಕೆಯ ಗಾಡಿಗೆ ಬಲೆ ನೇಯ್ದು ಶಿಕಾರಿಗೆ ಹೊಂಚುಹಾಕಿತ್ತು. ಈಕೆ ಅದನ್ನು ಗಮನಿಸದೇ ಕೈ ಇಟ್ಟಿದ್ದರಿಂದ ನ್ಯೂಟನ್ ಮಹಾಶಯನ ೩ನೇ ಸೂತ್ರ ಅಲ್ಲಿ ಅನ್ವಯವಾಗಿತ್ತು! ಕ್ರಿಯೆ-ಪ್ರತಿಕ್ರಿಯೆ ಹಾಗೆ ನನಗೆ ಮಂತ್ರಪುಷ್ಪ ಸಂದರ್ಭೋಚಿತವಾಗಿ..

ಈ ಜೇಡ, ಹಲ್ಲಿ, ಜಿರಳೆ ಕಂಡರೆ ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ಅಷ್ಟೇ ಭಯ. ಹೆಣ್ಣು ಮಕ್ಕಳಿಗೆ ವಿಶೇಷ ಭಯ ಎಂದು ತಿಳಿಸಲು ನನಗೆ ಸಂತೋಷವೆನಿಸುತ್ತದೆ! ಆದರೆ ಈ ಎಲ್ಲ ‘ಭಯಂಕರ’ ಕೀಟ ಪ್ರಾಣಿಗಳು ನಮ್ಮ ಅನ್ನ ಬ್ರಹ್ಮ ರೈತನ ಮಿತ್ರ. ಜೇಡಗಳಂತೂ ತರಹೇವಾರಿ ಕೀಟಗಳನ್ನು ತಿಂದು ಬದುಕುತ್ತವೆ. ಸದ್ಯ ನಮ್ಮ ಮನೆಯ ಕುಶಲಕರ್ಮಿ ನನ್ನ ತಂಗಿಯ ಜೀವತಿಂದು ಬದುಕಿದಹಾಗೆ!

ಜೇಡಗಳಿಗೆ ನಾವು ಹೆದರುವ ಅವಶ್ಯಕತೆ ಇಲ್ಲ. ಕಾರಣ ಅವು ನಿರುಪದ್ರವಿ. ತನ್ನ ಆಹಾರವಾಗಬಲ್ಲ ಕೀಟಗಳನ್ನು ಬಲಿ ಕೆಡವಲು ಅವು ‘ಪ್ರೊಫೆಷನಲ್’ ರೀತ್ಯಾ ಅದ್ಬುತವಾದ ಬಲೆಯನ್ನು ನೇಯುತ್ತವೆ. ಹಾಗೆಯೇ ಸಂತಾನ ಅಭಿವೃದ್ಧಿಗಾಗಿ ಗಂಡು-ಹಣ್ಣು ಜೇಡವನ್ನು ಪರಸ್ಪರ ಆಕರ್ಷಿಸಲು ಸಹ ಬಲೆ ನೇಯುತ್ತವೆ. ಆದರೆ ಎಲ್ಲ ಜಾತಿಯ ಜೇಡ ಕೀಟಗಳು ಬಲೆ ನೇಯುವುದಿಲ್ಲ. ತಜ್ನರು ಅವುಗಳನ್ನು ‘ನಡೆದಾಡುವ ಜೇಡಗಳು’ ಎಂದು ಕರೆಯುತ್ತಾರೆ. ಈ ಬಗೆಯ ಜೇಡಗಳು ತಮ್ಮ ಆಹಾರವಾಗಬಲ್ಲ ಕೀಟಗಳನ್ನು ಹಿಡಿಯಲು ಬಲೆ ನೇಯದೇ, ಅಟ್ಟಿಸಿಕೊಂಡು ಹೋಗಿ ಹಿಡಿದು ತಿನ್ನುತ್ತವೆ.

ಜೇಡಗಳ ಸ್ಪರ್ಷಜ್ನಾನಕೂಡ ಅದ್ಭುತವಾದದ್ದು. ಈ ಶಕ್ತಿಯನ್ನೇ ಬಳಸಿಕೊಂಡು ಅವು ತಮ್ಮ ಆಹಾರ ಪತ್ತೆ ಮಾಡುತ್ತವೆ. ಜೇಡ ತನ್ನ ಶಿಕಾರಿಯನ್ನು ಕಚ್ಚಿ, ವಿಷಕಾರಿಯಾದ ರಸ ಬಿಟ್ಟು ಅವುಗಳನ್ನು ನಿಷ್ಕ್ರಿಯಗೊಳಿಸಿ ಕೊಲ್ಲುತ್ತದೆ. ಜೀರ್ಣಕಾರಕ ರಸಗಳನ್ನು ಬಲಿಗೆ ಬಿದ್ದ ಕೀಟಗಳ ದೇಹದೊಳಗೆ ಚುಚ್ಚುವ ಜೇಡ ಆನಂತರ ಸುತ್ತ ಬಲೆ ನೇಯ್ದು, ದೇಹದ ರಸವನ್ನು ಹೀರುತ್ತವೆ. ಹಾಗಾಗಿ ಜೈವಿಕ ಕೀಟ ನಿಯಂತ್ರಣದಲ್ಲಿ ಅವುಗಳ ಕೊಡುಗೆ ಅಪಾರವಾದದ್ದು.

ಚೀನಾದ ರೈತರು ಭತ್ತದ ಗದ್ದೆಗಳಲ್ಲಿ ಕೀಟಗಳ ಹತೋಟಿಗಾಗಿ ‘ಜೇಡಗಳ ಕೊಯ್ಲು’ ಎಂಬ ವಿಧಾನವನ್ನು ಯಶಸ್ವಿಯಾಗಿ ಬಳಸುತ್ತಿದ್ದಾರೆ. ಭತ್ತದ ಗದ್ದೆಗಳ ಹತ್ತಿರದಲ್ಲಿ ಜೇಡಗಳು ಹೆಚ್ಚಿರುವ ಸ್ಥಳಗಳಲ್ಲಿ ನೆಡ ಬೇಕಿರುವ ಭತ್ತದ ಹುಲ್ಲಿನ ಕಂತೆಗಳನ್ನು ಇರಿಸುತ್ತಾರೆ. ಇವುಗಳಲ್ಲಿ ರಾಶಿ ರಾಶಿ ಜೇಡಗಳು ಅವಿತುಕೊಂಡು ವಂಶಾಭಿವೃದ್ಧಿ ಮಾಡಿಕೊಳ್ಳುತ್ತವೆ. ಅನಂತರ ಈ ಹುಲ್ಲಿನ ಕಂತೆಗಳನ್ನು ಕೀಟಗಳು ಜಾಸ್ತಿಇರುವ ಗದ್ದೆಗಳಲ್ಲಿ ಊರಲಾಗುತ್ತದೆ. ಈ ಜೇಡ ಕೊಯ್ಲು ಪ್ರಯೋಗದಿಂದಾಗಿ ಶೇಕಡಾ ೫೦ ರಿಂದ ೬೦ರಷ್ಟು ಪೈರಿಗೆ ಹಾನಿಕಾರಕವಾಗಬಲ್ಲ ಕೀಟಗಳ ನಿಯಂತ್ರಣವಾಗುತ್ತದೆ ಎಂಬುದು ಚೀನಾ ದೇಶದ ರೈತರ ಅನುಭವ.

ಖ್ಯಾತ ಗ್ರಾಹಕ ತಜ್ನ ಅಡ್ಡೂರು ಕೃಷ್ಣರಾವ ಅವರು ಉಲ್ಲೇಖಿಸುವಂತೆ, ಷೀಟ್ ವೀವರ್ಸ್ (ಲಿನಿಫಿಡೇ), ವೂಲ್ಫ್ ಜೇಡ (ಲೈಕೋಸಿಡೇ), ಓರಬ್ ವೀವರ್ಸ್ (ಅರೇಸಿಡೇ) ಎಂಬ ಪ್ರಜಾತಿಯ ಜೇಡ ಕುಟುಂಬಗಳಿಗೆ ‘ಬಲೂನಿಂಗ್ ಜೇಡ ಕುಟುಂಬಗಳು’ ಎಂದು ಕರೆಯಲಾಗುತ್ತದೆ. ಇವು ಗಾಳಿಯಲ್ಲಿ ತೇಲಿಹೋಗುವ ರೇಷ್ಮೆ ನೂಲಿನಂತಹ (ನಮ್ಮ ಉ.ಕ. ಭಾಗದಲ್ಲಿ ‘ಮುತ್ಯಾ’) ಬಲೆಯ ತಂತುಗಳಿಗೆ ತಗುಲಿಕೊಂಡು ಒಂದು ಹೊಲದಲ್ಲಿ ಪಸರಿಸುತ್ತವೆ. ಲಿನಿಫಿಡೇ ಕುಟುಂಬದ ಜೇಡಗಳು ಭತ್ತದ ಬೆಳೆಯ ಪೀಡೆ ಕೀಟಗಳಾದ ಜಿಗಿಹುಳು ಮತ್ತು ಎಲೆಜಿಗಿಹುಳುಗಳ ಪ್ರಧಾನ ಭಕ್ಷಕರು. ಇವು ತಮ್ಮ ಹೊಲಗಳಲ್ಲಿ ವಂಶಾಭಿವೃದ್ಧಿ ಮಾಡಿಕೊಳ್ಳಲು ಚೀನಾ ಮತ್ತು ಜಪಾನ್ ದೇಶದ ನೇಗಿಲಯೋಗಿಗಳು ಅವಕಾಶ ಕಲ್ಪಿಸುತ್ತಾರೆ. ಈ ಕಾರಣದಿಂದಾಗಿಯೇ ಜೇಡಗಳ ಮೂಲಕ ಭತ್ತದ ಕೀಟ ನಿಯಂತ್ರಣದಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಗದ್ದೆಗಳ ಹತ್ತಿರದಲ್ಲಿ ಹುಲ್ಲಿನ ಕಂತೆಗಳನ್ನು ಇರಿಸುವರಲ್ಲದೇ ಹೊಲಗಳ ಬದಿಗಳಲ್ಲಿ ಬೇಲಿ ಗಿಡಗಳನ್ನು ಬೆಳೆಸುವುದೂ ಉಪಕಾರಿ ಜೇಡಗಳ ವಂಶಾಭಿವೃದ್ಧಿಗೆ ಸಹಕಾರಿ. ಯಾಕೆಂದರೆ ಜೇಡಗಳು ಇವುಗಳನ್ನು ತಮ್ಮ ಆವಾಸ ಸ್ಥಾನಗಳನ್ನಾಗಿ ಪರಿವರ್ತಿಸಿಕೊಳ್ಳುತ್ತವೆ. ಬಲಿ ಕೀಟಗಳು ದೀರ್ಘಕಾಲದ ವರೆಗೆ ಇವುಗಳಿಗೆ ದಕ್ಕದಿದ್ದರೂ ಜೇಡಗಳು ಬದುಕಿ ಉಳಿಯುತ್ತವೆ. ಆದರೆ ಇತ್ತೀಚೆಗೆ ಕೀಟ ಹತೋಟಿಗಾಗಿ ರಾಸಾಯನಿಕ ಕೀಟನಾಶಕಗಳ ಬಳಕೆ ಹೊಲಗಳಲ್ಲಿ ಜಾಸ್ತಿಯಾದಂತೆ ಜೀವಂತ ಹಾಗು ಪರಿಸರ ಸ್ನೇಹಿ ಕೀಟ ನಿಯಂತ್ರಕಗಳಾದ ಜೇಡಗಳು ನನ್ನ ತಂಗಿಯ ‘ಸ್ಕೂಟಿ’ಗೆ ಗಂಟು ಬೀಳುತ್ತಿವೆ!

ನಮ್ಮ ಪರಿಸರವಾದಿ ಮುಕುಂದ ಮೈಗೂರ್ ಅವರನ್ನು ಸಹ ನಾನು ಜೇಡಗಳ ಕುರಿತು ಕೇಳಿದೆ. ‘ನೋಡ್ರಿ..ಮನೆಗಳೊಳಗ ಜೇಡ ಬಲೆ ಹೆಣೆದರೆ ನಮ್ಮ ಜನ ಅಪಶಕುನ ಅಂತ ಭಾವಿಸ್ತಾರ. ಕೂಡಲೇ ಆ ಬಲಿ ಕಿತ್ತು ಹಾಕಬೇಕು ಅಂತ ಕಸಬರಿಗೆ ಹಿಡಕೊಂಡು ಸಮರ ಸಾರತಾರ. ಆದರ ನಮ್ಮ ಮನೆಯೊಳಗಿನ ಎಲ್ಲ ಫೋಟೊಗಳ ಹಿಂದ ಸಾಕಷ್ಟು ಜೇಡಗಳು ಗೂಡು ಕಟ್ಯಾವ. ನಾನು ವರ್ಷಕ್ಕೊಮ್ಮೆ ಅವನ್ನೆಲ್ಲ ಕಿತ್ತಿ ಹಾಕಿ ಸ್ವಚ್ಛ ಮಾಡಬೇಕು ಅಂತ ಮನೆಯವರಿಗೆಲ್ಲ ತಾಕೀತು ಮಾಡೀನಿ. ಯಾಕಂದ್ರ ಈ ಮಲೇರಿಯಾ ತರಬಲ್ಲ ಸೊಳ್ಳೆಗಳಿಗೆ ಈ ಜೇಡಗಳು ಶತ್ರು. ನಮ್ಮ ಆರೋಗ್ಯಕ್ಕ ಹಾನಿ ತರಬಲ್ಲ ಸಾಕಷ್ಟು ಕೀಟಗಳನ್ನು ಅವು ತಿಂದು ಸ್ವಚ್ಛ ಮಾಡತಾವ. ಹಂಗ ಧೂಳು ಸಹ ಹಿಡದು ಇಟ್ಟುಕೊಂಡು ಶ್ವಾಸಕೋಶದ ಕಾಯಿಲೆ ಬರಲಾರಧಾಂಗ ತಕ್ಕ ಮಟ್ಟಿಗೆ ಸಹಾಯ ಮಾಡತಾವ’ ಅಂದ್ರು.

ಅಬ್ಬಾ ಜೇಡ! ಅಂತ ನಿಟ್ಟುಸಿರು ಬಿಟ್ಟೆ. ಗೆಳೆಯ ಛಾಯಾಪತ್ರಕರ್ತ ಕೇದಾರನಾಥ್ ಅವರಿಗೆ ಫೋನಾಯಿಸಿದೆ. ಖುಷಿಯಿಂದ ಬಂದು ಹತ್ತಾರು ಕೋನಗಳನ್ನು ಬದಲಿಸಿ ಚಿತ್ರಗಳನ್ನು ಕ್ಲಿಕ್ಕಿಸಿದರು. ತಂಗಿ ದಿವ್ಯಾ ಅಂದ್ಲು..‘ಮತ್ತ ಸಂಪದಕ್ಕ ನಮ್ಮ ಅಣ್ಣ ಲೇಖನ ಬರೀತಾನ. ಮಂದಿ ತಲಿ ತಿಂತಾನ. ನಾನು ಕೊಂದ ಹಾಕಬೇಕಿತ್ತು ಅದನ್ನ’ ಅಂದು ಸಿಟ್ಟಿನಿಂದ ನನ್ನ ದುರುಗುಟ್ಟಿ ನೋಡಿದ್ಲು.

ನಾನು ನಡೆದುಕೊಂಡೇ ಬಸ್ ಸ್ಟ್ಯಾಂಡ್ ಗೆ ಬರಬೇಕಾಯಿತು ಅಂತ ಬೇರೆ ಹೇಳಬೇಕಿಲ್ಲ..ಅಲ್ವೇ?