ಭಾಗ್ಯದ ಲಕ್ಷ್ಮಿ ಬಾರಮ್ಮ
ಬರಹ
ಗೀತ ರಚನಕಾರರು: ಪುರಂದರದಾಸರು
ಭಾಗ್ಯದ ಲಕ್ಷ್ಮಿ ಬಾರಮ್ಮ
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮ
ಹೆಜ್ಜೆಯ ಮೇಲೆ ಹೆಜ್ಜೆಯ ನಿಕ್ಕುತ,
ಗೆಜ್ಜೆಯ ಕಾಲ್ಗಳ ನಾದವ ತೋರುತ,
ಸಜ್ಜನ ಸಾಧು ಪೂಜೆಯ ವೇಳೆಗೆ,
ಮಜ್ಜಿಗೆಯೊಳಗಿನ ಬೆಣ್ಣೆಯಂತೆ,
ಭಾಗ್ಯದ ||
ಕನಕ ವೃಷ್ಟಿಯ ಕರೆಯುತ ಬಾರೇ,
ಮನ ಕಾಮನೆಯ ಸಿದ್ಧಿಯ ತೋರೇ,
ದಿನಕರ ಕೋಟಿ ತೇಜದಿ ಹೊಳೆವ,
ಜನಕ ರಾಯನ ಕುಮಾರಿ ಬಾರೇ,
ಭಾಗ್ಯದ ||
ಅತ್ತಿತ್ತಗಲದೆ ಭಕ್ತರ ಮನೆಯಲಿ,
ನಿತ್ಯ ಮಹೋತ್ಸವ ನಿತ್ಯ ಸುಮಂಗಲ ಸತ್ಯವ ತೋರುತ
ಸಾಧು ಸಜ್ಜನರ ಚಿತ್ತದಿ ಹೊಳೆವ ಪುತ್ತಳಿ ಬೊಂಬೆ
ಭಾಗ್ಯದ ||
ಸಂಖೆ ಇಲ್ಲದ ಭಾಗ್ಯವ ಕೊಟ್ಟು,
ಕಂಕಣ ಕೈಯ ತಿರುವುತ ಬಾರೇ
ಕುಂಕುಮಾಂಕಿತೆ ಪಂಕಜ ಲೋಚನೆ
ವೆಂಕಟ ರಮಣನ ಬಿಂಕದ ರಾಣಿ
ಭಾಗ್ಯದ ||
ಸಕ್ಕರೆ ತುಪ್ಪವ ಹಾಲಿಗೆ ಹರಿಸಿ
ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆಯುಳ್ಳ ಅರಗಿಣಿ ರಂಗನ
ಚೊಕ್ಕ ಪುರಂದರ ವಿಠ್ಠಲನ ರಾಣಿ
ಭಾಗ್ಯದ ||
ಭಾಗ್ಯದ ಲಕ್ಷ್ಮಿ ಬಾರಮ್ಮ
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮ