ಭಾಗ - ೪: ಅಯ್ಯಪ್ಪ ಮತ್ತು ಅಯ್ಯಪ್ಪ ದೀಕ್ಷೆಯ ವಿಶೇಷಗಳು
ಆಗಿನ ಕಾಲದಲ್ಲಿ ಪ್ರಚಲಿತವಿದ್ದ ಶೈವ ಮತ್ತು ವಿಷ್ಣು ಭಕ್ತರನ್ನು ಒಂದುಗೂಡಿಸುವುದಕ್ಕಾಗಿ ಶಿವ ಮತ್ತು ಮೋಹಿನಿಯರನ್ನೊಳಗೊಂಡ ಪುರಾಣ ಹೆಣೆದಿದ್ದಾರೆ. ಆಗಿನ ಕಾಲದಲ್ಲಿ ಶಾಕ್ತರು ಮತ್ತು ಗಾಣಪತ್ಯರೆಂಬ ಮತಾನುಯಾಯಿಗಳಿದ್ದರು ಅವರನ್ನೂ ಈ ವಾಹಿನಿಯಲ್ಲಿ ಸೇರಿಸಿಕೊಳ್ಳಲು ಗಣೇಶ ಮತ್ತು ಶಕ್ತಿ (ಮಾಲಿಕಾಪುರಮ್ಮ) ಕತೆಗಳು ಇದರಲ್ಲಿ ಒಳಗೊಂಡಿವೆ. ಹಾಗೆಯೇ ಮಹಿಷಿಯ ಪ್ರಸ್ತಾಪ ಬಂದಿರುವುದರಿಂದ ಆಗ ಕರುನಾಡಿನಲ್ಲಿ ಪ್ರಚಲಿತವಿದ್ದ ಮಹಿಷಾಸುರ ಮರ್ದಿನಿ ಅಥವಾ ಚಾಮುಂಡೇಶ್ವರಿಯ ಕತೆಯನ್ನು ಒಳಗೊಂಡಿದೆ. ಅಂತೆಯೇ ಮಹಾರಾಷ್ಟ್ರ ಭಾಗದಲ್ಲಿ ಪ್ರಚಲಿತವಿದ್ದ ದತ್ತಾತ್ರೇಯನ ಪ್ರಸ್ತಾಪವೂ ಇದರಲ್ಲಿ ಬರುತ್ತದೆ. ಇನ್ನು ರಾಮ ಹಾಗು ಹನುಮಂತನ ಭಕ್ತರನ್ನು ಇದರಲ್ಲಿ ಸೇರಿಸಿಕೊಳ್ಳಲು ಹನುಮ ಹಾಗು ಶಬರಿಯ ವೃತ್ತಾಂತ ಅಯ್ಯಪ್ಪನ ಕತೆಯಲ್ಲಿ ಬರುತ್ತದೆ. ಮತ್ತು ಪರಶುರಾಮನ ಅನುಯಾಯಿಗಳು ಈಗಿನ ಗೌಡ ಸಾರಸ್ವತರು ಪೂಜಿಸುತ್ತಿದ್ದ ದೇವರನ್ನು ಒಳಗೊಳ್ಳಲು ಅವನ ಪ್ರಸ್ತಾಪವೂ ಇದರಲ್ಲಿ ಬರುತ್ತದೆ. ಹಾಗೆಯೇ ಆಗಿನ ಕಾಲದಲ್ಲಿದ್ದ ಮುಸಲ್ಮಾನ ಬಂಧುಗಳನ್ನೂ ಈ ಸಾಮಾಜಿಕ ಪದ್ದತಿಯಲ್ಲಿ ಒಂದುಗೂಡಿಸಿಕೊಳ್ಳುವುದಕ್ಕೋಸ್ಕರ ವಾವರ ಸ್ವಾಮಿಯನ್ನು ಕಥೆಯಲ್ಲಿ ಜೋಡಿಸಿದ್ದಾರೆ. ಹೀಗೆ ಅಯ್ಯಪ್ಪ ಸ್ವಾಮಿಯ ಪುರಾಣದಲ್ಲಿ ಅಂದು ಭಾರತದಲ್ಲಿ ಪ್ರಚಲಿತವಿದ್ದ ಎಲ್ಲಾ ಮತಗಳ ಸಮ್ಮೇಳನವನ್ನು ಅದರಲ್ಲಿ ಕಾಣಬಹುದು.
ಇನ್ನು ಪೂಜಾ ಪದ್ದತಿಗೆ ಬಂದರೆ, ಶಿವ ಅಭಿಷೇಕ ಪ್ರಿಯ ಮತ್ತು ವಿಷ್ಣು ಅಲಂಕಾರ ಪ್ರಿಯ ಮತ್ತು ಶಿವ ಭಸ್ಮವನ್ನು ಧರಿಸಿದರೆ ವಿಷ್ಣು ಗಂಧವನ್ನು (ಚಂದನವನ್ನು) ಧರಿಸಿತ್ತಾನೆ. ಆದ್ದರಿಂದ ಅಯ್ಯಪ್ಪ ಸ್ವಾಮಿಗೆ ಮೊದಲು ಪಂಚಾಮೃತ ಅಭಿಷೇಕ ಮತ್ತು ಭಸ್ಮಾಭಿಷೇಕ ಮಾಡಿದ ನಂತರ ಅಲಂಕಾರ ಮಾಡುತ್ತಾರೆ. ಇಲ್ಲಿ ಜಾತಿಯಿಂದ ಯಾರೂ ಶ್ರೇಷ್ಠರೆನ್ನಿಸಿಕೊಳ್ಳಬಾರದೆಂದು ಹಲವಾರು ನಿಯಮಗಳನ್ನು ಅಳವಡಿಸಿದ್ದಾರೆ. ಸಾಮಾನ್ಯವಾಗಿ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ತ್ರಿಕಾಲ ಸಂಧ್ಯಾವಂದನೆ ಮಾಡಿದರೆ ಶೂದ್ರರು ಅದನ್ನು ಮಾಡಲು ನಿರ್ಬಂಧವಿದೆ. ಆದರೆ ಅಯ್ಯಪ್ಪನ ದೀಕ್ಷೆ ಕೈಗೊಂಡವರೆಲ್ಲರೂ ಪ್ರಾತಃ ಸಂಧ್ಯಾ ಮತ್ತು ಸಾಯಂ ಸಂಧ್ಯಾ ಸಮಯಕ್ಕೆ ಅಯ್ಯಪ್ಪನ ಪೂಜೆಯನ್ನು ಮಾಡುವುದರಿಂದ ಅವರಲ್ಲೇಳ ಬಹುದಾದ ವ್ಯತ್ಯಾಸವನ್ನು ಇಲ್ಲವಾಗಿಸುವ ಪ್ರಯತ್ನ ಮಾಡಲಾಗಿದೆ. ಹಾಗೆಯೇ ಇಲ್ಲಿ ಕುಲದಿಂದ ಮತ್ತು ವಯೋಮಾನದಿಂದ ಯಾರೂ ಹಿರಿಯರಲ್ಲ/ಶ್ರೇಷ್ಠರಲ್ಲವೆಂದು ತಿಳಿಸಲು ಸ್ವಾಮಿಗಳು ಒಬ್ಬರಿಗೊಬ್ಬರು ಎದುರಾದಾಗ ಎಲ್ಲರೂ ಎಲ್ಲರ ಕಾಲಿಗೆ ಬೀಳುವ ರೂಢಿ ಇದೆ. ಹೊಸದಾಗಿ ಈ ಪಂಗಡಕ್ಕೆ ಸೇರಿಕೊಂಡವರನ್ನು ಹುರಿದುಂಬಿಸಲೋಸುಗ ಕನ್ಯಾ ಸ್ವಾಮಿಯಾದವನ ಕಾಲಿಗೆ ಮೊದಲು ಬೀಳುವ ಪರಿಪಾಠವಿದೆ. ಇದರಂತೆಯೇ ಸಹಪಂಕ್ತಿ ಭೋಜನ ಮತ್ತು ಎಂಜಲೆಲೆಯನ್ನು ಎತ್ತುವ ರೂಢಿ ಜನರೆಲ್ಲ ಸಮಾನರೆನ್ನುವುದನ್ನು ರೂಢಿಸಲು ಮಾಡುವ ಯತ್ನವಾಗಿದೆ. ಕನ್ಯಾ ಸ್ವಾಮಿಯಾದವನು ೧೦೮ ಒಲೆಗಳಿಂದ ಬೂಧಿಯನ್ನು ಸಂಗ್ರಹಿಸ ಬೇಕೆಂಬ ಪದ್ದತಿಯೂ ಎಲ್ಲ ಕುಲಸ್ತರು ಒಂದುಗೂಡ ಬೇಕೆಂಬುದರ ಸಂಕೇತವೇ ಆಗಿದೆ. ಇನ್ನು ಆ ಕಾಲದಲ್ಲಿ ಪ್ರಚಲಿತವಿದ್ದ ತಂತ್ರ ಪದ್ದತಿಗಳಿಂದ ಕೆಲವೊಂದು ಆಚಾರಗಳನ್ನೂ ಅಯ್ಯಪ್ಪನ ಮಾಲೆ ಧರಿಸಿದವರು ಪಾಠಿಸುತ್ತಾರೆ. ಅವೆಂದರೆ ಬೆಳಿಗ್ಗೆ ಮತ್ತು ಸಾಯಂಕಾಲ ತಣ್ಣನೆಯ ಕೊರೆಯುವ ಛಳಿಯಲ್ಲಿ ತಣ್ಣೀರ ಸ್ನಾನ ಮಾಡುವುದು; ಬರಿಗಾಲಲ್ಲಿ ನಡೆಯುವುದು, ಏಕ ಭುಕ್ತಿ (ಒಂದು ಹೊತ್ತಿನ ಊಟ), ಕರಿಬಟ್ಟೆಯನ್ನು ಧರಿಸುವುದು, ನೆಲದ ಮೇಲೆ ಮಲಗುವುದು, ಗಡ್ಡ ಮೀಸೆ ಬೆಳಸಿಕೊಂಡು ತಾಂತ್ರಿಕರಂತೆ (ಅಥವಾ ತಂತ್ರೋಪಾಸನೆ ಅಳವಡಿಸಿಕೊಂಡ ಬೌದ್ದರಂತೆ) ಏಕಾಂತ ವಾಸ ಅನುಭವಿಸುವುದು. ಮದುವೆಯಾಗಿದ್ದರೂ ಚಿತ್ತವನ್ನು ನಿಯಂತ್ರಿಸಲು ಬ್ರಹ್ಮಚರ್ಯವನ್ನು ಪಾಲಿಸುವುದು ಮತ್ತು ಸ್ವಂತ ಹೆಂಡತಿಯನ್ನೂ ಮಾತಾ ಎಂದು ಸಂಭೋದಿಸುವುದು ಇತ್ಯಾದಿ.
ಇನ್ನು ವ್ರತ ಪ್ರಾರಂಭವಾಗುವುದು ಶಿವನಿಗೆ ಪ್ರಿಯವಾದ ಕಾರ್ತೀಕ ಮಾಸದಲ್ಲಿ ಮತ್ತು ಕೊನೆಗೊಳ್ಳುವುದು ವಿಷ್ಣುವಿಗೆ ಪ್ರಿಯವಾದ ಧನುರ್ಮಾಸದಲ್ಲಿ. ಹಾಗೆಯೇ ಮಣಿಕಂಠ ಕುಳಿತುಕೊಂಡ ಭಂಗಿಯನ್ನು ಗಮನಿಸಿದರೆ ನಮಗೆ ಕಾಣುವುದು ಕೆಳಗಿರುವುದು ಶಿವನ ಫಣಿಪೀಠವನ್ನು ಹೋಲುವ ಪೀಠ ಮತ್ತು ಮೇಲೆ ಕುಳಿತುಕೊಂಡಿರುವ ಮಣಿಕಂಠ ಧರಿಸುವುದು ಊರ್ಧ್ವಪುಂಡ್ರ ನಾಮ. ಅಯ್ಯಪ್ಪನ ತಲೆಯ ಮೇಲ್ಭಾಗವೂ ಕೂಡ ಲಿಂಗದಂತೆ ಅಂಡಾಕಾರವಾಗಿ ಗೋಚರಿಸುತ್ತದೆ. ಹಾಗೆಯೇ ಮಾಲೆ ಧರಿಸಿದ ಅಯ್ಯಪ್ಪ ಸ್ವಾಮಿಗಳು ಒಂದು ತುಳಸೀ ಮಾಲೆ ಮತ್ತು ಒಂದು ರುದ್ರಾಕ್ಷಿ ಮಾಲೆಯನ್ನು ಧರಿಸುವುದು ಕೂಡ ಹರಿಹರರ ಒಗ್ಗೂಡುವಿಕೆಯಾಗಿದೆ. ಮಣಿಕಂಠ ಬಲದ ಹಸ್ತದಲ್ಲಿ ತೋರುವ ಮುದ್ರೆಯನ್ನು ಚಿನ್ಮುದ್ರೆಯೆನ್ನುತ್ತಾರೆ. ಬುದ್ಧನದು ಜ್ಞಾನ ಮುದ್ರೆಯಾದರೆ (ಹೆಬ್ಬರಳು ಮತ್ತು ತೋರು ಬೆರಳುಗಳನ್ನು ಒಟ್ಟಾಗಿಸಿ ಕೂಡಿ ಹಿಡಿಯುವ ಮುದ್ರೆ) ಇತರ ಹಿಂದೂ ದೇವತೆಗಳು ಅಭಯ ಮುದ್ರೆಯನ್ನು ಹೊಂದಿರುತ್ತಾರೆ. ಅಯ್ಯಪ್ಪನಾದರೋ ಅವರೆಡರನ್ನೂ ಸೇರಿಸಿ ಆಧುನಿಕರು "ಸೂಪರ್" ಎಂದು ಸೂಚಿಸುವ ರೀತಿಯಲ್ಲಿರುವ 'ಚಿನ್ಮುದ್ರೆ'ಯನ್ನು ಧರಿಸಿದ್ದಾನೆ. ಹೀಗೆ ಅವನು ಏಕಕಾಲಕ್ಕೆ ಜ್ಞಾನ ಮತ್ತು ಅಭಯವನ್ನು ಕೊಡುತ್ತಾನೆ. ಹೀಗೆ ಅನೇಕ ರೀತಿಯಿಂದ ಅಯ್ಯಪ್ಪನ ಪೂಜಾ ಕ್ರಮ ಮತ್ತು ಮೂರ್ತಿಯ ಸ್ವರೂಪ ವಿಶಿಷ್ಠವಾಗಿವೆ.
ಸಾಮಾಜಿಕ ದೃಷ್ಠಿಯಿಂದ ಇನ್ನೊಂದು ಹೆಜ್ಜೆ ಮುಂದೆ ಹೋಗಿ ನೋಡಿದಾಗ ಮಾಲೆ ಧರಿಸುವವರೆಲ್ಲರೂ ಕಪ್ಪು ಬಟ್ಟೆಯ ಸಮವಸ್ತ್ರ ಧರಿಸಿ ತಾವೆಲ್ಲರೂ ಒಂದೇ ಎಂದು ಸಾರುತ್ತಾರೆ. ಕಪ್ಪು ಬಟ್ಟೆಯೇ ಏಕೆಂದರೆ ಅದು ಸುತ್ತಲಿನ ಬಿಸಿಯನ್ನು ಬಹುಬೇಗ ಹೀರಿಕೊಳ್ಳುವುದರಿಂದ ಆ ಬಟ್ಟೆಯನ್ನು ಧರಿಸಿದವರಿಗೆ ಬೇಗನೆ ಛಳಿಯಾಗುವುದಿಲ್ಲವೆನ್ನುವುದು ಒಂದು ಉದ್ದೇಶವಾದರೆ ಅದು ಜನರನ್ನು ತಮ್ಮಿಂದ ದೂರವಿರಿಸಿಕೊಳ್ಳಲು ತೊಡುವ ಬಟ್ಟೆಯಾಗಿದೆ. ನಾವು ಯಾರಿಗಾದರೂ ವಿರೋಧ ವ್ಯಕ್ತ ಮಾಡಬೇಕಾದರೆ ಕಪ್ಪು ಬಟ್ಟೆಯನ್ನು ತೋರುವುದಿಲ್ಲವೆ ಹಾಗೆ.
ಒಂದು ಪ್ರಸಂಗದಲ್ಲಿ ಶನಿದೇವರು ಎಲ್ಲರನ್ನೂ ಕಾಡುವುದರಿಂದ ಅವನಿಗೆ ಯಾವುದೋ ಶಾಪ ಉಂಟಾಗಿರುತ್ತದಂತೆ ಆದ್ದರಿಂದ ಅದರ ವಿಮೋಚನೆಗಾಗಿ ಅವನು ಮಣಿಕಂಠನಾದ ಅಯ್ಯಪ್ಪನನ್ನು ಭೇಟಿಯಾಗುತ್ತಾನಂತೆ. ಆಗ ಅಯ್ಯಪ್ಪ ಸ್ವಾಮಿ ನಿನ್ನ ಶಾಪ ವಿಮೋಚನೆಯಾಗ ಬೇಕೆಂದರೆ ನನ್ನ ಭಕ್ತರನ್ನು ಕಾಡಬೇಡವೆಂದು ಆದೇಶಿಸುತ್ತಾನಂತೆ. ಹೀಗೆ ತನ್ನ ಧರ್ಮವನ್ನು ಪಾಲಿಸುವಾಗ ತನ್ನ ಭಕ್ತರನ್ನು ಅದರಿಂದ ವಿನಾಯಿತಿ ಕೊಡೆಂದು ಆದೇಶಿಸಿದ್ದರಿಂದ ಮಣಿಕಂಠನನ್ನು ಧರ್ಮಶಾಸ್ತ ಎಂಬ ವಿಶೇಷಣದಿಂದ ಕರೆಯುತ್ತಾರೆ. ಶನಿದೇವರ ಪ್ರೀತ್ಯರ್ಥವಾಗಿ ಅಯ್ಯಪ್ಪನ ಭಕ್ತರು ಅವನಿಗೆ ಪ್ರಿಯವಾದ ಕರಿ ಬಟ್ಟೆಯನ್ನು ಧರಿಸುತ್ತಾರೆ. ಮತ್ತು ಮಾಮೂಲಿಯಾಗಿ ಶನಿ ಪ್ರಭಾವಕ್ಕೆ ಒಳಗಾದ ಮನುಷ್ಯ ಕೇಶ ಮತ್ತು ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲಾಗುವುದಿಲ್ಲ, ತನ್ನ ಪರಿವಾರದಿಂದ ದೂರವಾಗುತ್ತಾನೆ, ಹೆಂಡತಿ ಮಕ್ಕಳ ಪ್ರೀತಿಯಿಂದ ವಂಚಿತನಾಗುತ್ತಾನೆ, ಒಳ್ಳೆಯ ಊಟವನ್ನು ಮಾಡಲಾರ, ಒಳ್ಳೆಯ ಹಾಸಿಗೆ ಅಥವಾ ಇತರ ಭೋಗದ ವಸ್ತುಗಳಾದ ವಾಹನ ಮೊದಲಾದವುಗಳನ್ನು ಪಡೆಯಲಾಗುವುದಿಲ್ಲ. ಇವೆಲ್ಲವನ್ನೂ ಅಯ್ಯಪ್ಪನ ಭಕ್ತರು ಸ್ವಯಂಪ್ರೇರಿತರಾಗಿ ಆಚರಿಸುವುದರಿಂದ ಅವರಿಗೆ ಸಹಜವಾಗಿಯೇ ಶನೇಶ್ವರನು ಕಾಡುವ ಪ್ರಮೇಯ ಉಂಟಾಗುವುದಿಲ್ಲ. ಹೀಗೆ ಜ್ಯೋತಿಷ್ಯವನ್ನು ನಂಬುವವರ ವಿಚಾರಗಳನ್ನೂ ಅಯ್ಯಪ್ಪನ ದೀಕ್ಷೆಯೊಳಗೊಂಡಿದೆ.
ಮುಂದುವರೆಯುವುದು.....
----------------------------------------------------------------------------------------------------------------------------------------------
ವಿ.ಸೂ.: ಈ ಲೇಖನ ಮಾಲೆಯನ್ನು ಒಂದೇ ಕಂತಿನಲ್ಲಿ ಕೊಡೋಣವೆಂದಿದ್ದೆ; ಆದರೆ ಲೇಖನ ಬಹಳ ದೀರ್ಘವೆನಿಸಿದ್ದರಿಂದ ಅದನ್ನು ಐದು ಭಾಗಗಳಾಗಿ ವಿಭಜಿಸಿ ಪ್ರತ್ಯೇಕ ಶೀರ್ಷಿಕೆಗಳನ್ನು ಕೊಟ್ಟಿದ್ದೇನೆ. ಅವುಗಳು ಈ ರೀತಿ ಇವೆ:
ಶಬರಿಮಲೆ ಯಾತ್ರೆ ಅಥವಾ ಅಯ್ಯಪ್ಪ ಸ್ವಾಮಿಯ ವ್ರತದ ಹಿನ್ನಲೆ: ಒಂದು ಚಿಂತನೆ (ಭಾಗ - ೧) http://sampada.net/%E0%B2%B6%E0%B2%AC%E0%B2%B0%E0%B2%BF%E0%B2%AE%E0%B2%B2%E0%B3%86-%E0%B2%AF%E0%B2%BE%E0%B2%A4%E0%B3%8D%E0%B2%B0%E0%B3%86-%E0%B2%85%E0%B2%A5%E0%B2%B5%E0%B2%BE-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%E0%B2%AF-%E0%B2%B5%E0%B3%8D%E0%B2%B0%E0%B2%A4%E0%B2%A6-%E0%B2%B9%E0%B2%BF%E0%B2%A8%E0%B3%8D%E0%B2%A8%E0%B2%B2%E0%B3%86-%E0%B2%92%E0%B2%82%E0%B2%A6%E0%B3%81-%E0%B2%9A%E0%B2%BF%E0%B2%82%E0%B2%A4%E0%B2%A8%E0%B3%86-%E0%B2%AD%E0%B2%BE%E0%B2%97-%E0%B3%A7
ಭಾಗ - ೨: ಅಯ್ಯಪ್ಪ ಸ್ವಾಮಿಯ ದೀಕ್ಷೆ ಅಥವಾ ಮಾಲಾ ಧಾರಣೆ ಮತ್ತು ಯಾತ್ರೆ http://sampada.net/%E0%B2%AD%E0%B2%BE%E0%B2%97-%E0%B3%A8-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%E0%B2%AF-%E0%B2%A6%E0%B3%80%E0%B2%95%E0%B3%8D%E0%B2%B7%E0%B3%86-%E0%B2%85%E0%B2%A5%E0%B2%B5%E0%B2%BE-%E0%B2%AE%E0%B2%BE%E0%B2%B2%E0%B2%BE-%E0%B2%A7%E0%B2%BE%E0%B2%B0%E0%B2%A3%E0%B3%86-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%AF%E0%B2%BE%E0%B2%A4%E0%B3%8D%E0%B2%B0%E0%B3%86
ಭಾಗ - ೩: ಅಯ್ಯಪ್ಪ ಸ್ವಾಮಿಯ ದೀಕ್ಷೆಯ ಚಾರಿತ್ರಿಕ ಹಿನ್ನಲೆ http://sampada.net/%E0%B2%AD%E0%B2%BE%E0%B2%97-%E0%B3%A9-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%E0%B2%AF-%E0%B2%A6%E0%B3%80%E0%B2%95%E0%B3%8D%E0%B2%B7%E0%B3%86%E0%B2%AF-%E0%B2%9A%E0%B2%BE%E0%B2%B0%E0%B2%BF%E0%B2%A4%E0%B3%8D%E0%B2%B0%E0%B2%BF%E0%B2%95-%E0%B2%B9%E0%B2%BF%E0%B2%A8%E0%B3%8D%E0%B2%A8%E0%B2%B2%E0%B3%86
ಭಾಗ - ೪: ಅಯ್ಯಪ್ಪ ಮತ್ತು ಅಯ್ಯಪ್ಪ ದೀಕ್ಷೆಯ ವಿಶೇಷಗಳು
ಭಾಗ - ೫: ಅಯ್ಯಪ್ಪ ದೀಕ್ಷೆಯ ನಿಜವಾದ ಅರ್ಥ http://sampada.net/%E0%B2%AD%E0%B2%BE%E0%B2%97-%E0%B3%AB-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%A6%E0%B3%80%E0%B2%95%E0%B3%8D%E0%B2%B7%E0%B3%86%E0%B2%AF-%E0%B2%A8%E0%B2%BF%E0%B2%9C%E0%B2%B5%E0%B2%BE%E0%B2%A6-%E0%B2%85%E0%B2%B0%E0%B3%8D%E0%B2%A5