ಭಾರತಕ್ಕೆ ಮೊದಲ ಆಸ್ಕರ್ ಗರಿ ಮೂಡಿಸಿದ ಭಾನು ಅಥಯ್ಯಾ

ಭಾರತಕ್ಕೆ ಮೊದಲ ಆಸ್ಕರ್ ಗರಿ ಮೂಡಿಸಿದ ಭಾನು ಅಥಯ್ಯಾ

ಚಿತ್ರರಂಗದಲ್ಲಿ ದುಡಿಯುವ ಎಲ್ಲರಿಗೂ ಒಂದು ಕನಸಿರುತ್ತದೆ. ಪ್ರತಿಷ್ಟಿತ ಅಕಾಡೆಮಿ ಪುರಸ್ಕಾರ ಅರ್ಥಾತ್ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಬೇಕು ಎಂಬುದು. ಚಿತ್ರರಂಗದಲ್ಲಿರುವ ಬಹುತೇಕ ಎಲ್ಲಾ ವಿಭಾಗಗಳಲ್ಲಿ ಆಸ್ಕರ್ ಪುರಸ್ಕಾರ ದೊರೆಯುತ್ತದೆ. ಕೇವಲ ಆಂಗ್ಲ ಭಾಷೆಯಲ್ಲ, ವಿದೇಶೀ ಭಾಷೆಯ ಚಿತ್ರಗಳಿಗೂ ಈ ಪುರಸ್ಕಾರ ಲಭ್ಯವಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಆಸ್ಕರ್ ವಿಜೇತರು ಕಮ್ಮಿ. ಆಸ್ಕರ್ ವಿಜೇತರಾದ ಮೊದಲ ಭಾರತೀಯ ವ್ಯಕ್ತಿ ಯಾರು ಎಂದು ನಿಮಗೆ ಕುತೂಹಲವಿರಬಹುದಲ್ವೇ? ಅವರೇ ಭಾನು ಅಥಯ್ಯಾ ಅಥವಾ ಭಾನು ಅಥಯಾ (Bhanu Athaiya) ಎಂಬ ಮಹಿಳೆ. ಮಹಿಳೆಯಾ ಎಂದು ಹುಬ್ಬೇರಿಸಿಕೊಳ್ಳದಿರಿ. ಅವರ ಸಾಧನೆಯನ್ನೊಮ್ಮೆ ಗಮನಿಸುವ.

ಭಾನುಮತಿ ಅನ್ನಾಸಾಹೇಬ್ ರಾಜೋಪಾದ್ಯಾಯ ಎಂಬ ಮಹಿಳೆ ನಂತರದ ದಿನಗಳಲ್ಲಿ ಭಾನು ಅಥಯ್ಯಾ ಎಂದು ಚಿತ್ರರಂಗದಲ್ಲಿ ಗುರುತಿಸಲ್ಪಡುತ್ತಾರೆ. ೧೯೨೯ ಎಪ್ರಿಲ್ ೨೮ರಂದು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರದಲ್ಲಿ ಜನಿಸಿದರು. ಅಣ್ಣಾ ಸಾಹೇಬ್ ರಾಜೋಪಾಧ್ಯಾಯ ಹಾಗೂ ಶಾಂತಾಬಾಯಿ ದಂಪತಿಯವರ ಏಳು ಮಂದಿ ಮಕ್ಕಳಲ್ಲಿ ಮೂರನೆಯವರು. ಭಾನು ಅವರ ತಂದೆ ಪೈಂಟರ್ ಆಗಿದ್ದರು. ಭಾನು ಅವರಿಗೆ ೯ ವರ್ಷ ವಯಸ್ಸಾಗಿರುವಾಗ ಅವರ ತಂದೆಯವ ನಿಧನವಾಗುತ್ತದೆ. 

ಭಾನು ಅವರು ತಮ್ಮ ವೃತ್ತಿ ಜೀವನವನ್ನು ಮುಂಬಯಿಯ ಮಹಿಳಾ ಪತ್ರಿಕೆಯೊಂದಕ್ಕೆ ಸ್ವತಂತ್ರ ಲೇಖಕರಾಗಿ ಪ್ರಾರಂಭಿಸುತ್ತಾರೆ. ಅವರಿಗೆ ವಸ್ತ್ರ ವಿನ್ಯಾಸ ಹಾಗೂ ಫ್ಯಾಷನ್ ಡಿಸೈನ್ ಬಗ್ಗೆ ತುಂಬಾನೇ ಆಸಕ್ತಿ ಇತ್ತು. ಇದೇ ವಿಚಾರಗಳ ಬಗ್ಗೆ ಅವರು ಬರೆಯುತ್ತಿದ್ದ ಲೇಖನಗಳು ಬಹಳ ಜನರಿಗೆ ಮೆಚ್ಚುಗೆಯಾಗುತ್ತಿದ್ದವು. ಭಾನು ಅವರು ನಿಧಾನವಾಗಿ ವಸ್ತ್ರ ವಿನ್ಯಾಸ ಮಾಡುವತ್ತ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾ ಹೋದರು. ಅವರ ವಸ್ತ್ರ ವಿನ್ಯಾಸವು ಬಾಲಿವುಡ್ ಚಿತ್ರ ನಿರ್ದೇಶಕರಾದ ಗುರುದತ್ ಅವರ ಮನಸ್ಸು ಗೆದ್ದಿತು. ನಂತರದ ದಿನಗಳಲ್ಲಿ ಅವರು ಗುರುದತ್ ಅವರ ಚಿತ್ರ ತಂಡದ ಖಾಯಂ ವಸ್ತ್ರ ವಿನ್ಯಾಸಕಿಯಾದರು. ೧೯೫೬ರಲ್ಲಿ ಬಿಡುಗಡೆಯಾದ ಸಿ.ಐ. ಡಿ ಚಿತ್ರದಿಂದ ತಮ್ಮ ಚಿತ್ರ ಬದುಕಿನ ಯಾತ್ರೆಯನ್ನು ವಸ್ತ್ರ ವಿನ್ಯಾಸಕಿಯಾಗಿ ಭಾನುಮತಿ ಪ್ರಾರಂಭಿಸಿದರು. 

ಸಿಐಡಿ ಚಿತ್ರದ ನಂತರ ಗುರುದತ್ ಅವರ ಪ್ಯಾಸಾ (೧೯೫೭), ಚೌದವೀ ಕಾ ಚಾಂದ್ (೧೯೬೦), ಸಾಹೀಬ್ ಬೀವಿ ಔರ್ ಗುಲಾಮ್ (೧೯೬೨) ಮುಂತಾದ ಪ್ರಸಿದ್ಧ ಚಿತ್ರಗಳಲ್ಲಿ ತಮ್ಮ ಕುಶಲತೆಯನ್ನು ತೋರಿಸಿದರು. ಕಪ್ಪು ಬಿಳುಪು ಚಿತ್ರಗಳಲ್ಲೂ ಇವರ ವಸ್ತ್ರ ವಿನ್ಯಾಸ ಬಹಳ ಸೊಗಸಾಗಿ ಮನಮುಟ್ಟುವಂತಿತ್ತು. ಪ್ರೇಕ್ಷಕರೂ ಮೆಚ್ಚಿಕೊಂಡರು. ನಿಧಾನವಾಗಿ ಚಲನಚಿತ್ರರಂಗದಲ್ಲಿ ಭಾನು ಬೇರೂರತೊಡಗಿದರು. 

ಭಾನು ಅವರ ವೃತ್ತಿ ಜೀವನಕ್ಕೆ ಅತ್ಯಂತ ದೊಡ್ದ ಬ್ರೇಕ್ ನೀಡಿದ್ದು ೧೯೮೨ರಲ್ಲಿ ಬಿಡುಗಡೆಯಾದ ರಿಚರ್ಡ್ ಅಟೆನ್ ಬರ್ಗ್ ಅವರ ‘ಗಾಂಧಿ' ಚಿತ್ರ. ಈ ಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿದ್ದು ಭಾನು ಅವರ ಹೆಗ್ಗಳಿಕೆ. ಈ ಚಿತ್ರದಲ್ಲಿ ಇವರ ಕೆಲಸಕ್ಕೆ ಅರ್ಹವಾಗಿಯೇ ಇವರಿಗೆ ಅಕಾಡೆಮಿ ಪ್ರಶಸ್ತಿ (ಆಸ್ಕರ್) ಜೋನ್ ಮೊಲ್ಲೊ ಜೊತೆ ಜಂಟಿಯಾಗಿ ದೊರೆಯಿತು. ಹೀಗೆ ಭಾರತದ ಚಿತ್ರರಂಗದ ಇತಿಹಾಸದಲ್ಲಿ ಮೊದಲ ಆಸ್ಕರ್ ಪ್ರಶಸ್ತಿಯ ಗರಿ ಮೂಡಿಸಿದವರು ಭಾನು ಅಥಯ್ಯಾ ಅವರು. ಸುಮಾರು ೫ ದಶಕಗಳ ಕಾಲ ಚಿತ್ರರಂಗದಲ್ಲಿ ದುಡಿದ ಇವರು ಬರೋಬರಿ ೧೦೦ ಚಿತ್ರಗಳಿಗೆ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದರು. ಇವರು ಹಲವಾರು ಖ್ಯಾತ ಚಿತ್ರಗಳಿಗೆ ವಸ್ತ್ರ ವಿನ್ಯಾಸಕಿಯಾಗಿದ್ದರು. ಅವುಗಳಲ್ಲಿ ಕೆಲವು ಪ್ರಮುಖ ಚಿತ್ರಗಳೆಂದರೆ ರಾಮ್ ತೇರೀ ಗಂಗಾ ಮೈಲಿ (೧೯೮೫), ಚಾಂದನಿ (೧೯೮೯), ಅಗ್ನಿಪಥ್ (೧೯೯೦), ಹೀನ್ನಾ (೧೯೯೧), ೧೯೪೨-ಎ ಲವ್ ಸ್ಟೋರಿ (೧೯೯೩), ಡಾ. ಬಾಳಾ ಸಾಹೇಬ್ ಅಂಬೇಡ್ಕರ್ (೨೦೦೦), ಲಗಾನ್ (೨೦೦೧). ೨೦೧೫ರಲ್ಲಿ ಬಿಡುಗಡೆಯಾದ ನಾಗರಿಕ್ ಇವರ ಕೊನೆಯ ಚಿತ್ರ. ತಮ್ಮ ೮೫ನೇ ವಯಸ್ಸಿನಲ್ಲೂ ಚಲನಚಿತ್ರಗಳಿಗೆ ವಸ್ತ್ರ ವಿನ್ಯಾಸ ಮಾಡುತ್ತಿದ್ದರು ಭಾನು. ಬದಲಾದ ಸಮಯಕ್ಕೆ ಸರಿಯಾಗಿ, ಪಾತ್ರಗಳಿಗೆ ಅನುಗುಣವಾಗಿ ವಸ್ತ್ರ ನಿರ್ಮಾಣ ಮಾಡುತ್ತಿದ್ದುದೇ ಭಾನು ಅವರ ಹೆಗ್ಗಳಿಕೆ. ಲಗಾನ್ ಚಿತ್ರದಲ್ಲಿ ಅವರು ಮಾಡಿದ ವಸ್ತ್ರ ವಿನ್ಯಾಸವೇ ಇದಕ್ಕೆ ಸಾಕ್ಷಿ. 

ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿದ ಖ್ಯಾತಿ ಇವರದ್ದು. ಗುರುದತ್, ಯಶ್ ಚೋಪ್ರಾ, ಬಿ.ಆರ್.ಚೋಪ್ರಾ, ರಾಜ್ ಕಪೂರ್, ವಿಜಯ್ ಆನಂದ್, ಅಶುತೋಷ್ ಗೌರಿಕರ್ ಹಾಗೂ ಹಾಲಿವುಡ್ ನಿರ್ದೇಶಕರಾದ ರಿಚರ್ಡ್ ಅಟೆನ್ ಬರೋ (ಗಾಂಧಿ ಖ್ಯಾತಿ) ಜೊತೆ ಕೆಲಸ ಮಾಡಿದ್ದಾರೆ. 

ವೃತ್ತಿಯಲ್ಲಿ ಬದ್ಧತೆ ಹಾಗೂ ಹೊಸ ಹೊಸ ವಿನ್ಯಾಸದ ಕಲ್ಪನೆಗಳು ಭಾನು ಅವರನ್ನು ಸದಾ ಚಲಾವಣೆಯಲ್ಲಿ ಇರಿಸುವಂತೆ ಮಾಡಿತು ಎಂದು ಚಿತ್ರರಂಗದ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಸತ್ಯೇಂದ್ರ ಅಥಯ್ಯ ಅವರನ್ನು ಮದುವೆಯಾಗಿ ನಂತರದ ದಿನಗಳಲ್ಲಿ ವಿಚ್ಚೇದನ ನೀಡಿದರು. ೧೯೯೧ರಲ್ಲಿ ಲೇಕಿನ್ ಚಿತ್ರ ಹಾಗೂ ೨೦೦೨ರಲ್ಲಿ ಲಗಾನ್ ಚಿತ್ರಗಳ ಉತ್ತಮ ವಸ್ತ್ರ ವಿನ್ಯಾಸಕ್ಕಾಗಿ ಎರಡು ಬಾರಿ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ದೊರೆತಿದೆ. ೨೦೦೯ರಲ್ಲಿ ಚಿತ್ರರಂಗದಲ್ಲಿ ಜೀವಮಾನ ಸಾಧನೆಗಾಗಿ ಫಿಲ್ಮ್ ಫೇರ್ ಪ್ರಶಸ್ತಿ ಭಾನು ಅಥಯ್ಯ ಅವರಿಗೆ ನೀಡಲಾಯಿತು. 

ತಮ್ಮ ೯೧ ನೇ ವಯಸ್ಸಿನಲ್ಲಿ ಮೆದುಳು ಕ್ಯಾನ್ಸರ್ ಕಾರಣದಿಂದ ಭಾನು ಅಥಯ್ಯ ಅವರು ಮುಂಬಯಿಯಲ್ಲಿ (೨೦೨೦, ಅಕ್ಟೋಬರ್ ೧೫) ನಿಧನ ಹೊಂದುತ್ತಾರೆ. ಹೀಗೆ ಭಾರತೀಯ ಚಿತ್ರರಂಗಕ್ಕೆ ಆಸ್ಕರ್ ಪ್ರಶಸ್ತಿಯ ಮೊದಲ ಹೆಗ್ಗಳಿಕೆಯನ್ನು ತಂದುಕೊಟ್ಟ ಜೀವ ಅಸ್ತಂಗತವಾಗುತ್ತದೆ. ಭಾನು ಅಥಯ್ಯ ಅವರು ನಮ್ಮ ಜೊತೆ ಇಲ್ಲವಾದರೂ ಅವರು ವಸ್ತ್ರ ವಿನ್ಯಾಸ ಮಾಡಿದ ನೂರಾರು ಚಿತ್ರಗಳು ನಮ್ಮ ನಡುವೆ ಜೀವಂತವಾಗಿವೆ.

ಚಿತ್ರ ಕೃಪೆ: ಅಂತರ್ಜಾಲ ತಾಣ