ಭಾರತದಲ್ಲೂ ಆಪಲ್ ಐಪ್ಯಾಡ್
ಭಾರತದಲ್ಲೂ ಆಪಲ್ ಐಪ್ಯಾಡ್
ಭಾರತದಲ್ಲಿ ಆಪಲ್ ಐಪ್ಯಾಡ್ ಈಗ ಲಭ್ಯವಾಗಿದೆ.ವೈ-ಫೈ ಮತ್ತು ತ್ರೀಜಿ ಸವಲತ್ತುಳ್ಳ ಐಪ್ಯಾಡುಗಳಿಗೆ ಬೆಲೆ ಇಪ್ಪತ್ತೆಂಟು ಸಾವಿರದಿಂದ ಹಿಡಿದು,ನಲುವತ್ತೈದು ಸಾವಿರದವರೆಗಿದೆ.ಕನಿಷ್ಠ ಬೆಲೆಯಲ್ಲಿ ಹದಿನಾರು ಜೀಬಿ ಸಾಮರ್ಥ್ಯ ಸಿಕ್ಕಿದರೆ,ಗರಿಷ್ಠ ಬೆಲೆಗೆ ಅರುವತ್ತನಾಲ್ಕು ಜೀಬಿ ಸಿಗಲಿದೆ.ಆರು ನಮೂನೆಯ ಐಪ್ಯಾಡುಗಳು ಲಭ್ಯ.ಸ್ಮರಣ ಸಾಮರ್ಥ್ಯ ಹದಿನಾರು ಜೀಬಿ,ಮೂವತ್ತೆರಡು ಜೀಬಿ,ಅರುವತ್ತನಾಲ್ಕು ಜೀಬಿ ಸಾಮರ್ಥ್ಯದವು;ಬರೇ ವೈ-ಫೈ ಅಥವಾ ವೈ-ಫೈ ಜತೆಗೆ ತ್ರೀಜಿ ಸಾಮರ್ಥ್ಯದಲ್ಲಿ ಸಿಗುತ್ತವೆ.ಬಿಎಸೆನ್ನೆಲ್ ಐಪ್ಯಾಡಿಗೇ ತನ್ನ ಯೋಜನೆಗಳನ್ನು ಪ್ರಕಟಿಸಿದೆ.ಅದರ ಪ್ರಕಾರ ಮಾಸಿಕ ಶುಲ್ಕ ರೂ.999 ತೆತ್ತರೆ ಅಪರಿಮಿತ ತ್ರೀಜಿ ಸಂಪರ್ಕ ಲಭ್ಯ.ರೂ.600ಕ್ಕೆ ಆರು ಜೀಬಿ ಮತ್ತು ರೂ.99ಕ್ಕೆ ಒಂದು ದಿನ ಅಪರಿಮಿತ ತ್ರೀಜಿ ಸವಿಯಬಹುದು.
ಹೆಚ್ಚು ಪ್ರಚಾರವಿಲ್ಲದೆ ಐಪ್ಯಾಡ್ ಬಿಡುಗಡೆಯಾಗಿದೆ.ಜನರ ಪ್ರತಿಕ್ರಿಯೆಯೂ ತಣ್ಣಗೇ ಇತ್ತು.ನಿಧಾನವಾಗಿ ಹೆಚ್ಚು ಉತ್ಸಾಹ ವ್ಯಕ್ತವಾಗುವ ನಿರೀಕ್ಷೆಯಿದೆ.ಬೆಲೆ ಹೆಚ್ಚಿಗೇ ಎನ್ನಬಹುದಾದ್ದರಿಂದ, ತಂತ್ರಜ್ಞರು ಮತ್ತು ವಿದ್ಯಾರ್ಥಿಗಳಷ್ಟೇ ಇದನ್ನು ಖರೀದಿಸಿಯಾರು.ಉಳಿದವರು ಕಾದು ನೋಡುವ ತಂತ್ರಕ್ಕೇ ಶರಣಾಗಿ,ಇತರ ಕಂಪೆನಿಗಳ ಟ್ಯಾಬ್ಲೆಟ್ಗಳ ಬಿಡುಗಡೆಗಾಗಿ ಕಾದಾರು.ಖಾಸಗಿ ಕಂಪೆನಿಗಳ ತ್ರೀಜಿ ಯೋಜನೆಗಳೂ ಲಭ್ಯವಾದಾಗ,ತ್ರೀಜಿ ಸಂಪರ್ಕವೂ ಅಗ್ಗವಾದೀತು.
-------------------------------
ಬಾಹ್ಯಾಕಾಶಕ್ಕೆ ಮೊಬೈಲ್
ಸೆಲ್ಪೋನನ್ನು ಬಾಹ್ಯಾಕಾಶಕ್ಕೆ ಕಳುಹಿಸಿ,ಅದನ್ನು ಬಳಸಿ ಕೃತಕ ಉಪಗ್ರಹವನ್ನು ನಿಯಂತ್ರಿಸುವ ಪ್ರಯತ್ನವನ್ನು ಮೊದಲ ಬಾರಿಗೆ ಮಾಡಲಾಗುತ್ತಿದೆ.ಯುಕೆಯ ವಿಜ್ಞಾನಿಗಳು ಈ ಪ್ರಯೋಗಕ್ಕಿಳಿದವರು.ಸರ್ರೇ ಸ್ಪೇಸ್ ಸೆಂಟರಿನ ತಂಡವು ಗೂಗಲ್ ಆಂಡ್ರಾಯಿಡ್ ವ್ಯವಸ್ಥೆ ಬಳಸಿದ ಸೆಲ್ಫೋನನ್ನು ಕೃತಕ ಉಪಗ್ರಹದೊಂದಿಗೆ ರಾಕೆಟಿನಲ್ಲಿ ಕಳುಹಿಸಿ,ಅದು ಬಾಹ್ಯಾಕಾಶದಲ್ಲಿ ಕೆಲಸ ಮಾಡುತ್ತದೆಯೇ ಎಂದು ಪರೀಕ್ಷಿಸಲಿದೆ.ಕೆಲಸ ಮಾಡಿದರೆ,ಸೆಲ್ಫೋನಿನ ಮೂಲಕ ಭೂಮಿಯ ಚಿತ್ರ ತೆಗೆದು,ಉಪಗ್ರಹ ಮೂಲಕ ಬಾಹ್ಯಾಕಾಶ ಕೇಂದ್ರದಲ್ಲಿ ಸ್ವೀಕರಿಸಿ,ಚಿತ್ರದ ವೀಕ್ಷಣೆ ನಡೆಯಲಿದೆ.ಸೆಲ್ಪೋನ್ ಬಾಹ್ಯಾಕಾಶದ ವೈಪರೀತ್ಯದ ಹವಾಗುಣದಲ್ಲಿ ಕೆಡದಂತೆ ಅದನ್ನು,ಸುರಕ್ಷಿತ ಆವರಣದೊಳಗೆ ಇಡಬೇಕಾಗುತ್ತದೆ.ಕ್ಯಾಮರಾಕ್ಕಾಗಿ ಅದರಲ್ಲಿ ರಂಧ್ರವನ್ನು ಮಾಡಿದ್ದಾರೆ.ಇದುವರೆಗೆ ಮೊಬೈಲ್ ಫೋನುಗಳನ್ನು ಬಲೂನುಗಳಲ್ಲಿ ಕಳುಹಿಸಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
------------------------------------
ಐಪ್ಯಾಡಿಗಾಗಿ ಪತ್ರಿಕೆ:ಮುರ್ಡೋಕ್ ಸಾಹಸ
ದ ಡೈಲಿ ಎನ್ನುವ ಪತ್ರಿಕೆಯನ್ನು ಐಪ್ಯಾಡಿಗಾಗಿಯೇ ಸಿದ್ಧಪಡಿಸಿ ಒದಗಿಸಲು ಮಾಧ್ಯಮ ತ್ರಿವಿಕ್ರಮ ಮುರ್ಡೋಕ್ ಯೋಜಿಸಿದ್ದಾರಂತೆ.ಈ ಬಗ್ಗೆ ಪ್ರಕಟಣೆ ಹೊರಬಿದ್ದಿದೆ.ನ್ಯೂಯಾರ್ಕಿನ ಐಪ್ಯಾಡ್ ಬಳಕೆದಾರರಿಗೆ ವಾರದ ಚಂದಾ ತೊಂಭತೊಂಭತ್ತು ಸೆಂಟುಗಳು.ಅಂತರ್ಜಾಲದ ಡೈಲಿ ಕಾರ್ಪ್ ಸಂಸ್ಥೆಯು ಅಂತರ್ಜಾಲದ ತನ್ನ ಮಾಹಿತಿಗಳನ್ನು ಚಂದಾಹಣದ ಆಧಾರದ ಮೇಲೆಯೇ ಒದಗಿಸಲು ಆರಂಭಿಸಿದ ಹೆಗ್ಗಳಿಕೆ ಹೊಂದಿದೆ.ಆದರೆ ಜನರಿನ್ನೂ ಹಣ ಪಾವತಿಸಿ ಸೇವೆ ಪಡೆಯಲು ಹೆಚ್ಚಿನ ಹುರುಪು ಹೊಂದಿಲ್ಲ.
-------------------------------------------
ಹನೀಕೂಂಬ್
ಆಂಡ್ರಾಯಿಡ್ ೩.೦ ಆವೃತ್ತಿಯ ತಂತ್ರಾಂಶ ಅಭಿವೃದ್ಧಿ ಕಿಟ್ ಎಸ್ಡಿಕೆಗೆ ಹನೀಕೂಂಬ್ ಎಂದು ಹೆಸರಿಸಲಾಗಿದೆ.ಇದು ಗೂಗಲ್ನ ಟ್ಯಾಬ್ಲೆಟ್ ಸಾಧನದ ಕಾರ್ಯನಿರ್ವಹಣಾ ತಂತ್ರಾಂಶ ವ್ಯವಸ್ಥೆಗಾಗಿಯೇ ಅಭಿವೃದ್ಧಿ ಪಡಿಸಿದ್ದು ಒಂದು ವಿಶೇಷ.ಟ್ಯಾಬ್ಲೆಟ್ಗಾಗಿಯೇ ಬ್ರೌಸರ್,ಮೀಡಿಯಾ ಪ್ಲೇಯರ್ ಇತ್ಯಾದಿ ಇದರಲ್ಲಿದೆ.ಜತೆಗೆ ಎಮ್ಯುಲೇಟರ್ ಇರುವುದರಿಂದ ಟ್ಯಾಬ್ಲೆಟ್ ಸಾಧನಕ್ಕೆ ರಚಿಸಿದ ಯಾವುದೇ ತಂತ್ರಾಂಶ ಹೇಗೆ ಕೆಲಸ ಮಾಡಬಹುದು ಎಂಬ ಪಕ್ಷಿನೋಟ ಸಿಗುತ್ತದೆ.
-----------------------------------
ಕ್ಷಣಹೊತ್ತು,ಆಣಿ ಮುತ್ತು ಪುಸ್ತಕ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ಷಡಕ್ಷರಿಯವರ "ಕ್ಷಣಹೊತ್ತು,ಆಣಿ ಮುತ್ತು" ಪುಸ್ತಕ ಗೆಲ್ಲಿ!.ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ತಂತ್ರಾಂಶ ಅಳವಡಿಸಿ,ಹಳೆ ಮೊಬೈಲ್ ಪೋನ್ಗಳನ್ನು ಸ್ಪರ್ಶಸಂವೇದಿ ತೆರೆಯವಾಗಿ ಮಾಡುವುದು ಹೇಗೆ?(ಉತ್ತರವು ಈ ಅಂಕಣದಲ್ಲಿ ಹಿಂದೆ ಚರ್ಚಿತವಾಗಿದೆ http://ashok567.blogspot.com ತಿರುವಿ ನೋಡಿ).
*ನಮ್ಮ ಮೇಲ್ಮನೆಯ ಕಾಸು-ಕುಡಿಕೆ ಬರಹಗಳು ಇರುವ ಬ್ಲಾಗ್ ಯಾವುದು?
(ಉತ್ತರಗಳನ್ನು ashok567@gmail.comಗೆ ಮಿಂಚಂಚೆ ಮಾಡಿ,ವಿಷಯ:NS16 ನಮೂದಿಸಿ.)
(ಕಳೆದ ವಾರದ ಸರಿಯುತ್ತರಗಳು:
*ನಂಬರ್ ಪೋರ್ಟೇಬಿಲಿಟಿಗೆ ಕನ್ನಡ ಪದ ನಿಶ್ಚಲಂಕೆ(ನಿಶ್ಚಲ+ಅಂಕೆ).
*ಜಿ ಎಸ್ ಎಂ. ಮತ್ತು ಸಿಡಿಎಂಎ ಮೊಬೈಲ್ ಸೇವೆ ಒದಗಿಸಲು ಲಭ್ಯವಿರುವ ವಿಭಿನ್ನ ತಂತ್ರಜ್ಞಾನಗಳು.ಮಾಹಿತಿಯನ್ನು ಬಳಕೆದಾರನಿಗೆ ಮುಟ್ಟಿಸುವ ವಿಧಾನ ಈ ತಂತ್ರಜ್ಞಾನಗಳಲ್ಲಿ ಬೇರೆ ಬೇರೆಯಾಗಿವೆ.ಬಹುಮಾನ ಗೆದ್ದವರು ಲೋಯ್ ಕ್ಯಾಸ್ಟೆಲಿನೋ,ಕಲ್ಯಾಣಪುರ,ಉಡುಪಿ.
------------------------------------------------------------
ಡಾ.ವಸಂತ್ ಕುಮಾರ್ ಪೆರ್ಲ ಬ್ಲಾಗ್
http://vasanthkumarperla.blogspot.com/ನಲ್ಲಿ ಆಕಾಶವಾಣಿಯ ಡಾ.ವಸಂತ್ ಕುಮಾರ್ ಪೆರ್ಲ ಅವರ ಬ್ಲಾಗ್ ಬರಹಗಳಿವೆ.ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದು ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಜತೆ ಹತ್ತಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವವರು.ಸದ್ಯ ಕಾರವಾರ ನಿಲಯದ ಕಾರ್ಯಕ್ರಮ ನಿರ್ವಾಹಕರು.ಮಂಗಳೂರು ನಿಲಯದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದ ಪೆರ್ಲರವರ ಕವನ,ಬರಹಗಳು,ಸಂದರ್ಶನಗಳು ಬ್ಲಾಗಿಗೆ ವಸ್ತುಗಳಾಗಿವೆ.
-------------------------------------------------
ಕಿಂದರಿಜೋಗಿ
ಮಕ್ಕಳಿಗಾಗಿಯೇ ರಚಿಸಲಾದ ಅಂತರ್ಜಾಲ ತಾಣ http://kindarajogi.comಕಣ್ಮನ ಸೆಳೆಯುವಂತಿದೆ.http://kindarajogi.comಯಲ್ಲಿ ಓದಿ ಕಲಿ,ಮಾಡಿ ತಿಳಿ,ನೋಡಿ ಕಲಿ,ಭೂಮಿ ಮೇಲೆ ಹೀಗೆ ಹಲವು ವಿಭಾಗಗಳಿವೆ.ಪ್ರಾಯೋಗಿಕವಾಗಿ ಕಲಿಯಲು ಉತ್ತೇಜನ ನೀಡುವ ವಿಭಾಗವೇ ಮಾಡಿ ಕಲಿ.ಇತರ ವಿಭಾಗಗಳೂ ಹೀಗೆ ಅನ್ವರ್ಥಕವಾಗಿವೆ."ಹರಿಣಿ"ಯವರ ಪೋಕ್ರಿ ಮಕ್ಕಳನ್ನು ರಂಜಿಸಲು ಇಲ್ಲಿ ಪ್ರತ್ಯಕ್ಷನಾಗಿದ್ದಾನೆ.ಗಣಿತ,ವಿಜ್ಞಾನಕ್ಕೆ ಸಂಬಂಧಿಸಿದ ವಿಭಾಗವೂ ಇದೆ.ಅಂತರ್ಜಾಲ ತಾಣದಲ್ಲಿ ಬರಹಗಳನ್ನು ಪ್ರಕಟಿಸಲು info@kindarajogi.comಗೆ ಮಿಂಚಂಚೆ ಕಳುಹಿಸಿ.
--------------------------------------------------------
ಟ್ವಿಟರ್ ಚಿಲಿಪಿಲಿ
*ಹದಿನೈದು ವರ್ಷ ಹಿಂದೆ ಇಡ್ಲಿಗೆ ಐವತ್ತು ಪೈಸೆ,ಎಸ್ಟಿಡಿ ಕರೆಗೆ ಹದಿನೈದು ರೂಪಾಯಿ ಇತ್ತು..ಈಗ ಎಸ್ಟಿಡಿಗೆ ಐವತ್ತು ಪೈಸೆಯಾದರೆ,ಇಡ್ಲಿಗೆ ಹದಿನೈದು ರೂಪಾಯಿ!
*ನೀರುಳ್ಳಿ ಉತ್ತಪ್ಪ,ರಾಬಿನ್ ಉತ್ತಪ್ಪ ಭಾರೀ ದುಬಾರಿ...
*ಹೊಸ ಪ್ರಶಸ್ತಿಗಳು:ಸ್ಕೇಮ್ ರತ್ನ,ಸ್ಕೇಮ್ ವಿಭೂಷಣ,ಸ್ಕೇಮ್ ಭೂಷಣ್....
*ಕುಡಿದ ಸೆಕ್ಯುರಿಟಿವಾಲಾ ಉವಾಚ:ಸಾಬ್ಜಿ,ಆಜ್ ಸೆಕ್ಯುರಿಟಿ ಟೈಟ್ ಹೈ...
*ಕಂಪ್ಯೂಟರ್ ಸಾಕ್ಷರ ಹೈಸ್ಕೂಲ್ ಶಿಕ್ಷಕರಿಗೆ ಲೀನಕ್ಸ್ ತರಬೇತಿಯ ಬಗ್ಗೆ ಅಸಕ್ತಿಯಿದ್ದರೆ ashok567@gmail.comಗೆ ಮಿಂಚಿಸಿ.
*ಅಶೋಕ್ಕುಮಾರ್ ಎ