ಭಾರತದಿಂದ ಬ್ರಿಟಿಷ್ ಸಾಮ್ರಾಜ್ಯ ಮಾಡಿದ ಲೂಟಿ ನೆನಪಿರಲಿ

ಭಾರತದಿಂದ ಬ್ರಿಟಿಷ್ ಸಾಮ್ರಾಜ್ಯ ಮಾಡಿದ ಲೂಟಿ ನೆನಪಿರಲಿ

ಸಪ್ಟಂಬರ್ 8, 2022ರಂದು ನಿಧನರಾದ ಬ್ರಿಟಿಷ್ ರಾಣಿ ಎರಡನೇ ಎಲಿಜಬೆತ್‌ರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಸಪ್ಟಂಬರ್ 19, 2022ರಂದು ನಡೆದದ್ದನ್ನು ದಿನಪತ್ರಿಕೆಗಳು ವರದಿ ಮಾಡಿವೆ. ಅನೇಕ ದೇಶಗಳ ನಾಯಕರು ಸೇರಿ ಎರಡು ಸಾವಿರಕ್ಕೂ ಹೆಚ್ಚು ಗಣ್ಯರು ಅದರಲ್ಲಿ ಭಾಗವಹಿಸಿದ್ದರಂತೆ. (96 ವರುಷ ವಯಸ್ಸಿನ ಎಲಿಜಬೆತ್ 70 ವರುಷ 214 ದಿನ ಬ್ರಿಟನ್ ರಾಣಿಯಾಗಿದ್ದರು.)

ಬ್ರಿಟಿಷ್ ರಾಣಿ ಎರಡನೇ ಎಲಿಜಬೆತ್‌ರ ಸಾವಿನ ನಂತರ, ಹಲವು ದೇಶಗಳು ಅದಕ್ಕಾಗಿ ಸಂತಾಪ ವ್ಯಕ್ತಪಡಿಸಿವೆ. ಇದು ಆ ದೇಶಗಳ ದೊಡ್ಡತನ. ಯಾಕೆಂದರೆ, ಬ್ರಿಟಿಷ್ ಸಾಮ್ರಾಜ್ಯವು ಜಗತ್ತಿನ ಹಲವು ದೇಶಗಳನ್ನು ಶತಮಾನಕ್ಕಿಂತ ಅಧಿಕ ಕಾಲ ಆಳುತ್ತಾ, ಅಲ್ಲಿನ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಾ, ಅಲ್ಲಿನ ಪ್ರಜೆಗಳನ್ನು ಗುಲಾಮರಂತೆ ನಡೆಸಿಕೊಂಡಿತ್ತು.   

ಆ ವಸಾಹತುಶಾಹಿ ಸಾಮ್ರಾಜ್ಯ ಮಾಡಿದ ಅನ್ಯಾಯಗಳು ಒಂದೇ ಎರಡೇ?
ಬ್ರಿಟನ್ ಎಂಬ ವಸಾಹತುಶಾಹಿ ಸಾಮ್ರಾಜ್ಯ ಮಾಡಿದ ಅನ್ಯಾಯಗಳ ಪಟ್ಟಿ ದೀರ್ಘವಾಗಿದೆ. ಉದಾಹರಣೆಗೆ:
-ಆಕ್ರಮಿಸಿಕೊಂಡ ದೇಶಗಳ ಸ್ವಾತಂತ್ರ್ಯ ಹೋರಾಟಗಳನ್ನು ಅತ್ಯಂತ ಕ್ರೂರವಾಗಿ ದಮನ ಮಾಡಿದ್ದು
-ಸಮೃದ್ಧಿಯ ಪಥದಲ್ಲಿ ಸಾಗಬೇಕಾಗಿದ್ದ ಆ ಎಲ್ಲ ದೇಶಗಳನ್ನು, ವ್ಯವಸ್ಥಿತವಾಗಿ ಲೂಟಿ ಮಾಡಿದ್ದು
-ಆ ದೇಶಗಳ ದೇಸಿ ಸಂಸ್ಕೃತಿಯನ್ನು ಹೊಸಕಿ ಹಾಕಿ, ಅವನ್ನು ಪ್ರಗತಿಯ ಪಥದಿಂದ ಶತಮಾನಗಳಷ್ಟು ಹಿಂದಕ್ಕೆ ತಳ್ಳಿದ್ದು
-ದಮನಿಸಿದ ದೇಶಗಳಲ್ಲಿ ಮಾಡಿದ ರಾಕ್ಷಸೀ ಹಿಂಸೆ, ಪ್ರಜೆಗಳ ರಕ್ತ ಹೀರಿದ ಲೂಟಿ, ವಂಚನೆಗಳ ಸರಮಾಲೆ ಮತ್ತು ಕ್ರೂರ ಆಡಳಿತ ಬಗ್ಗೆ ಕಿಂಚಿತ್ತೂ ಪಶ್ಚಾತ್ತಾಪ ವ್ಯಕ್ತಪಡಿಸದೆ, ಈಗಲೂ ಅವನ್ನೆಲ್ಲ ಸಮರ್ಥಿಸುವ ಅಮಾನವೀಯ ವರ್ತನೆ

ಭಾರತವನ್ನಂತೂ ಬ್ರಿಟಿಷ್ ಸಾಮ್ರಾಜ್ಯ ಲೂಟಿ ಹಾಗೂ ಶೋಷಣೆ ಮಾಡಿದ್ದಕ್ಕೆ ಜಗತ್ತಿನ ಚರಿತ್ರೆಯಲ್ಲೇ ಸಾಟಿಯಿಲ್ಲ. ಆ ಸಾಮ್ರಾಜ್ಯಕ್ಕೆ “ಗ್ರೇಟ್ ಬ್ರಿಟನ್” ಎಂಬ ಹೆಸರು ಬೇರೆ! ಆದರೆ, “ಗ್ರೇಟ್" ಎಂಬ ಹೆಗ್ಗಳಿಕೆಯ ಅಡಿಪಾಯ, ಕೋಟಿಗಟ್ಟಲೆ ಭಾರತೀಯರ ಸಂಪತ್ತಿನ ದರೋಡೆ ಮತ್ತು ಲಕ್ಷಗಟ್ಟಲೆ ಭಾರತೀಯರ ಬರ್ಬರ ಕೊಲೆ ಎಂಬುದು ತಿಳಿದಿದೆಯೇ? ಬ್ರಿಟನಿನ ಕೈಗಾರೀಕರಣವನ್ನು “ಜಾಗತಿಕ ಚರಿತ್ರೆ”ಯಲ್ಲಿ ವೈಭವೀಕರಿಸಲಾಗಿದೆ. ಭಾರತದ ಸಂಪನ್ಮೂಲಗಳ ಕೊಳ್ಳೆ, ಭಾರತದ ಗುಡಿಕೈಗಾರಿಕೆಗಳ ವ್ಯವಸ್ಥಿತ ನಾಶ ಮತ್ತು ಬ್ರಿಟನಿನ ಕೈಗಾರಿಕೆಗಳ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಯಲ್ಲಿ ಹೇರಿಕೆ ಮಾಡಿದ್ದು - ಇವು ಆ ಕೈಗಾರೀಕರಣದ ಆಧಾರಸ್ತಂಭಗಳು ಎಂಬುದು ಎಷ್ಟು ಭಾರತೀಯರಿಗೆ ಅರ್ಥವಾಗಿದೆ?   

ಭಾರತದಿಂದ ಬ್ರಿಟಿಷ್ ಸಾಮ್ರಾಜ್ಯ ಮಾಡಿದ ಲೂಟಿ ಎಷ್ಟು?
ಬ್ರಿಟಿಷ್ ರಾಣಿಯ ಮರಣದ ಸಂದರ್ಭದಲ್ಲಿ ಈ ಪ್ರಶ್ನೆ ಪ್ರಸ್ತುತವಾಗುತ್ತದೆ.
ಆ ಮಹಾಪ್ರಶ್ನೆಯ ಉತ್ತರ: 45 ಟ್ರಿಲಿಯನ್ ಡಾಲರ್!
(ಒಂದು ಟ್ರಿಲಿಯನ್ = 1,000,000,000,000 ಅಂದರೆ, 1ರ ನಂತರ 12 ಸೊನ್ನೆಗಳು)

ಇದು, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೆ. ಜೈಶಂಕರ್ ಅವರು ಅಧ್ಯಯನವೊಂದರ ಆಧಾರದಿಂದ 2019ರಲ್ಲಿ ನೀಡಿದ ಮಾಹಿತಿ. ಅಮೇರಿಕಾದ ವಾಷಿಂಗ್ಟನ್ ಡಿ.ಸಿ.ಯಲ್ಲಿ “ಚಿಂತಕರ ಚಾವಡಿ” ಅಟ್ಲಾಂಟಿಕ್ ಕೌನ್ಸಿಲಿನ ಸಭೆಯಲ್ಲಿ ಉಪನ್ಯಾಸ ನೀಡುತ್ತಾ ಅವರು ಹೀಗೆಂದಿದ್ದರು: “ಭಾರತವು ಎರಡು ಶತಮಾನಗಳ ಕಾಲ ಪಾಶ್ಚಾತ್ಯ ದೇಶಗಳಿಂದ ಶೋಷಣೆಗೆ ಒಳಗಾಯಿತು. ಅವು ಪರಭಕ್ಷಕ ಪ್ರಾಣಿ(ಪ್ರಿಡೇಟರಿ) ಗಳಂತೆ 18ನೆಯ ಶತಮಾನದಲ್ಲಿ ಭಾರತಕ್ಕೆ ಬಂದವು. ಒಂದು ಆರ್ಥಿಕ ಅಧ್ಯಯನವು ಬ್ರಿಟಿಷರು ಭಾರತದಿಂದ ಎಷ್ಟು (ಸಂಪತ್ತನ್ನು) ಹೊರಕ್ಕೆ ಒಯ್ದರು ಎಂದು ಅಂದಾಜಿಸಿದೆ; ಅದರ ಅನುಸಾರ, ಇವತ್ತಿನ ಬೆಲೆಯಲ್ಲಿ ಆ ಸಂಪತ್ತಿನ ಮೌಲ್ಯ 45 ಟ್ರಿಲಿಯನ್ ಡಾಲರುಗಳು.”

ಉತ್ಸಾ ಪಟ್ನಾಯಕ್ ಎಂಬ ಹೆಸರುವಾಸಿ ಆರ್ಥಿಕತಜ್ನೆ ಇದನ್ನು ಹೀಗೆಂದು ವಿವರಿಸುತ್ತಾರೆ: “ಸುಮಾರು 200 ವರುಷಗಳ ಅವಧಿಯಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಮತ್ತು ಬ್ರಿಟಿಷ್ ಸಾಮ್ರಾಜ್ಯ ಭಾರತದಿಂದ ಸುಲಿದೊಯ್ದ ಸೊತ್ತಿನ ಮೌಲ್ಯ ಕನಿಷ್ಠ 9.2 ಟ್ರಿಲಿಯನ್ ಪೌಂಡ್‌ಗಳು (ಅಥವಾ 44.6 ಟ್ರಿಲಿಯನ್ ಡಾಲರುಗಳು; ಯಾಕೆಂದರೆ, ಬ್ರಿಟಿಷ್ ಆಡಳಿತದ ಬಹುಪಾಲು ಅವಧಿಯಲ್ಲಿ ಒಂದು ಪೌಂಡ್ ಸ್ಟರ್ಲಿಂಗಿನ ವಿನಿಮಯ ದರ 4.8 ಡಾಲರ್ ಆಗಿತ್ತು.)”

“1765ರಿಂದ 1938ರ ವರೆಗೆ ಬ್ರಿಟಿಷರು ಮಾಡಿದ ಸುಲಿಗೆಯ ಮೌಲ್ಯ 45 ಟ್ರಿಲಿಯನ್ ಡಾಲರುಗಳು. ಆ ಅವಧಿಯಲ್ಲಿ ಭಾರತದ ರಫ್ತು ಮಿಗತೆಯನ್ನು ಪರಿಗಣಿಸಿ, ಅದರ ಮೇಲೆ ಶೇಕಡಾ 5 ಚಕ್ರ ಬಡ್ದಿ ದರದ ಲೆಕ್ಕಾಚಾರ ಮಾಡಿ ಇದನ್ನು ಅಂದಾಜಿಸಲಾಗಿದೆ” ಎಂದು ಅವರು ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ.

“1929ಕ್ಕಿಂತ ಮುಂಚಿನ ಮೂರು ದಶಕಗಳ ಅವಧಿಯಲ್ಲಿ, ಭಾರತದ "ರಫ್ತು ಮಿಗತೆ” ಜಗತ್ತಿನಲ್ಲೇ ಎರಡನೇ ಅತ್ಯಧಿಕ ಸ್ಥಾನದಲ್ಲಿತ್ತು. ಆದರೂ 1900ರಿಂದ 1946ರ ಅವಧಿಯಲ್ಲಿ ಭಾರತೀಯರ ತಲಾ ವಾರ್ಷಿಕ ಆದಾಯದಲ್ಲಿ ಹೆಚ್ಚಳ ಆಗಲೇ ಇಲ್ಲ" ಎಂದೂ ಅವರು ತಿಳಿಸುತ್ತಾರೆ. ಇದು ಬ್ರಿಟಿಷರು ಭಾರತದ ಸಂಪತ್ತನ್ನು ಸಿಕ್ಕಸಿಕ್ಕಂತೆ ದರೋಡೆ ಮಾಡಿದ್ದರ ಪರಿಣಾಮ.

ಬ್ರಿಟನ್ ಈಗ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಕಳೆದ ಕೆಲವು ವರುಷಗಳಲ್ಲಿ  ಬ್ರಿಟನಿನ ಜಿಡಿಪಿ (ಗ್ರೊಸ್ ಡೊಮೆಸ್ಟಿಕ್ ಪ್ರಾಡಕ್ಟ್) ಕೇವಲ 3 ಟ್ರಿಲಿಯನ್ ಡಾಲರ್ ಆಗಿತ್ತು. ಅಂದರೆ, ಈಗಿನ ಹಣದ ಮೌಲ್ಯದ ಆಧಾರದಲ್ಲಿ, ಬ್ರಿಟನ್ ತನ್ನ ಈಗಿನ ಜಿಡಿಪಿಯ 15 ಪಟ್ಟು ಸಂಪತ್ತನ್ನು ಭಾರತದಿಂದ ಲೂಟಿ ಮಾಡಿತು!

ಇವೂ ನೆನಪಿರಲಿ
-ಭಾರತದ ಹಲವು ರಾಜ್ಯಗಳ ಮೇಲೆ ಧಾಳಿ ಮಾಡಿದ ಬ್ರಿಟಿಷ್ ಸೈನ್ಯ, ಆ ರಾಜ್ಯಗಳ ಲಕ್ಷಗಟ್ಟಲೆ ಸೈನಿಕರನ್ನು ಕೊಲೆ ಮಾಡಿತು.
-ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಸಾವಿರಾರು ಭಾರತೀಯರನ್ನು ಬ್ರಿಟಿಷರು ಕೊಂದರು.
-ಸ್ವಾತಂತ್ರ್ಯ ಹೋರಾಟವನ್ನು ದಮನ ಮಾಡಲಿಕ್ಕಾಗಿ, ಸಾವಿರಾರು ಭಾರತೀಯರನ್ನು ಬ್ರಿಟಿಷರು ಗಲ್ಲಿಗೇರಿಸಿದರು.
-ಅದಲ್ಲದೆ, ಒಂದನೇ ಮಹಾಯುದ್ಧ ಮತ್ತು 2ನೇ ಮಹಾಯುದ್ಧದಲ್ಲಿ, ಭಾರತೀಯ ಸೈನ್ಯವು ಭಾಗವಹಿಸುವಂತೆ ಬ್ರಿಟಿಷರು  ಕುಟಿಲ ತಂತ್ರ ಮಾಡಿದರು. ಜರ್ಮನಿಯ ವಿರುದ್ಧ ಯುದ್ಧಕ್ಕೆ ಬ್ರಿಟಿಷರಿಗೆ ಭಾರತೀಯ ಸೈನ್ಯ ಬೇಕಾಗಿತ್ತು. ಎರಡು ಮಹಾಯುದ್ಧಗಳಲ್ಲಿ ಬಲಿದಾನಗೈದ ಭಾರತೀಯ ಸೈನಿಕರ ಸಂಖ್ಯೆ 1,61,187ಕ್ಕಿಂತ ಅಧಿಕ.
ಇವರೆಲ್ಲರ ಜೀವಕ್ಕೆ ಬೆಲೆ ಕಟ್ಟಲಾದೀತೇ?
 
ಜಲಿಯಾನಾವಾಲಾ ಬಾಗ್‌ನಲ್ಲಿ ಬ್ರಿಟಿಷರ ಹತ್ಯಾಕಾಂಡದಿಂದ ಇಡೀ ಜಗತ್ತೇ ಆಕ್ರೋಶಗೊಂಡಿತ್ತು. ಯಾಕೆಂದರೆ ಅದು ಅಧಿಕಾರದ ಮದ ತುಂಬಿದ, ರಾಕ್ಷಸೀ ಪ್ರವೃತ್ತಿಯ ಬ್ರಿಟಿಷ್ ಅಧಿಕಾರಿಯೊಬ್ಬನ ಆದೇಶದಂತೆ ನಿರಪರಾಧಿ ಪ್ರಜೆಗಳ ಮೇಲೆ 13-4-1919ರಂದು ಗುಂಡಿನ ಮಳೆಗರೆದು ನಡೆಸಿದ 379 ಜನರ ಕಗ್ಗೊಲೆ. ಬ್ರಿಟಿಷ್ ಸರಕಾರದ ಹಾಗೂ ರಾಜ ಮನೆತನದ ಯಾರಾದರೂ ಈ “ಮಾನವಕುಲದ ಕಳಂಕವಾದ ಕಗ್ಗೊಲೆ” ಬಗ್ಗೆ ಕಿಂಚಿತ್ ಪಶ್ಚಾತ್ತಾಪ ವ್ಯಕ್ತಪಡಿಸಿದ್ದು ಇದೆಯೇ?

ಭಾರತದ "ಗುರುಕುಲ ಶಿಕ್ಷಣ ವ್ಯವಸ್ಥೆ"ಯನ್ನು ನಾಶ ಮಾಡಿದ ಬ್ರಿಟಿಷರು
ಭಾರತದ ಪಾರಂಪರಿಕ ಜ್ನಾನ ಜಗತ್ತಿನಲ್ಲೇ ಸಾಟಿಯಿಲ್ಲದ್ದು. ಎಲ್ಲದಕ್ಕಿಂತ ಮಿಗಿಲಾಗಿ ಅದು ಭಾರತೀಯರನ್ನು “ಸರ್ವೇ ಜನಃ ಸುಖಿನೋ ಭವಂತು” ಎಂಬಂತಹ ಉದಾತ್ತ ಚಿಂತನೆಗಳ ಆತ್ಮಸ್ಥೈರ್ಯದ ವ್ಯಕ್ತಿಗಳನ್ನಾಗಿ ಪರಿವರ್ತಿಸುತ್ತಿತ್ತು.

ಬ್ರಿಟಿಷರಿಗೆ ಇದು ಬೇಡವಾಗಿತ್ತು. ಯಾಕೆಂದರೆ ಅವರಿಗೆ ತಮ್ಮ ಚಾಕರಿ ಮಾಡುವ ಕೂಲಿಗಳು ಬೇಕಾಗಿತ್ತು. ಭಾರತೀಯರನ್ನು ಗುಲಾಮಿ ಮನಸ್ಥಿತಿಯವರನ್ನಾಗಿ ಮಾಡಲಿಕ್ಕಾಗಿ ನಮ್ಮ ಗುರುಕುಲ ಶಿಕ್ಷಣ ಪದ್ಧತಿಯನ್ನು ಅವರು ವ್ಯವಸ್ಥಿತವಾಗಿ ನಾಶ ಮಾಡಿದರು. ಬದಲಾಗಿ, ಮೆಕಾಲೆ ಶಿಕ್ಷಣ ಪದ್ಧತಿ ಎಂಬ ಬಹು ದೊಡ್ಡ ಹುನ್ನಾರವನ್ನು ಭಾರತದಲ್ಲಿ ಜ್ಯಾರಿ ಮಾಡಲಾಯಿತು. ಅದರ ದುಷ್ಪರಿಣಾಮಗಳನ್ನು ನಾವು ಈಗಲೂ ಅನುಭವಿಸುತ್ತಿದ್ದೇವೆ, ಅಲ್ಲವೇ? ಈ ಸಾಂಸ್ಕೃತಿಕ ನಷ್ಟಕ್ಕೆ ಎಣೆಯುಂಟೇ?

ನಿಜವಾದ ಸ್ವಾತಂತ್ರ್ಯ
ಬ್ರಿಟಿಷರ ಬಗ್ಗೆ ಸಹಾನುಭೂತಿ ಹೊಂದಿರುವ ಮತ್ತು ಬ್ರಿಟಿಷರ ಗುಣಗಾನ ಮಾಡುವ ಕೆಲವರು, ಈ ಎಲ್ಲ ಚಾರಿತ್ರಿಕ ಸತ್ಯಗಳನ್ನು ತಿಳಿಯಬೇಕಾಗಿದೆ. ಸ್ವಾತಂತ್ರ್ಯ ಗಳಿಸಿ, 75 ವರುಷಗಳ ನಂತರವಾದರೂ ದೆಹಲಿಯ “ರಾಜಪಥ”ವು “"ಕರ್ತವ್ಯಪಥ"ವಾಗಿ ಬದಲಾದಂತೆ, ತಮ್ಮ ಚಿಂತನಾಕ್ರಮವನ್ನೇ ಬದಲಾಯಿಸಿಕೊಳ್ಳಬೇಕಾಗಿದೆ. ಅದುವೇ ನಿಜವಾದ “ಸ್ವಾತಂತ್ರ್ಯ".

ಫೋಟೋ 1 ಮತ್ತು 2: ಜಲಿಯಾನಾವಾಲಾ ಬಾಗ್‌ನಲ್ಲಿ ಬ್ರಿಟಿಷರಿಂದಾದ 379 ಜನರ ಕಗ್ಗೊಲೆಯ ದಾಖಲೆಗಳು
ಫೋಟೋ ಕೃಪೆ: ಸ್ಕ್ರೋಲ್.ಇನ್ ಮತ್ತು ಇಂಡಿಯಾಟೈಮ್ಸ್.ಕೋಮ್