ಭಾರತದ ಆತ್ಮರಕ್ಷಣೆಗೆ ‘ದಿವ್ಯಾಸ್ತ್ರ'ದ ಹೆಗ್ಗಳಿಕೆ

ಭಾರತದ ಬತ್ತಳಿಕೆಯಲ್ಲಿರುವ ಅಗ್ನಿ ಕ್ಷಿಪಣಿಗಳ ಪೈಕಿ ಅತ್ಯಂತ ಸದೃಢವಾದ ಹಾಗೂ ಸಶಕ್ತವಾದ ಅಗ್ನಿ -೫ ಕ್ಷಿಪಣಿಗೆ ಈಗ ‘ಸ್ವತಂತ್ರ ಗುರಿ ನಿರ್ದೇಶಿತ ಮರುಪ್ರವೇಶ ವಾಹನ ತಂತ್ರಜ್ಞಾನ' (ಎಂಐ ಆರ್ ವಿ) ಅಳವಡಿಸಿ, ಪ್ರಯೋಗಾರ್ಥ ಯಶಸ್ವಿ ಪರೀಕ್ಷೆ ನಡೆಸಲಾಗಿದೆ. ಬಹುತೇಕ ಏಷ್ಯಾ ಖಂಡವನ್ನು ಆವರಿಸಬಲ್ಲ ಸಾಮರ್ಥ್ಯ ಹೊಂದಿರುವ ಈ ಕ್ಷಿಫಣಿಗೆ ‘ದಿವ್ಯಾಸ್ತ್ರ' ಎಂಬ ಸೂಕ್ತ ಹೆಸರನ್ನೇ ನಾಮಕರಣ ಮಾಡಲಾಗಿದೆ.
೨೦೧೬ರಲ್ಲಿ ಅಗ್ನಿ - ೫ ಕ್ಷಿಪಣಿಯನ್ನು ಪ್ರಯೋಗಾರ್ಥ ಉಡಾಯಿಸಲಾಗಿತ್ತಾದರೂ, ಈಗ ಡಿ ಆರ್ ಡಿ ಒ ಸಂಪೂರ್ಣ ದೇಶೀಯವಾಗಿ ನಿರ್ಮಿಸುರುವ ‘ದಿವ್ಯಾಸ್ತ್ರ'ವಾಗಿ ಹೊರಹೊಮ್ಮುತ್ತಿದೆ. ಈ ಸುದ್ದಿಯನ್ನು ಪ್ರಕಟಿಸಿರುವ ಪ್ರಧಾನಿ ನರೇಂದ್ರ ಮೋದಿ, ಡಿ ಆರ್ ಡಿ ಒ ತಂಡಕ್ಕೆ ಅಭಿನಂದನೆ ವ್ಯಕ್ತಪಡಿಸಿದ್ದಾರೆ. ಈ ಯಶಸ್ವಿ ಪ್ರಯೋಗದೊಂದಿಗೆ ಈಗಾಗಲೇ ಇಂಥ ಎಂ ಐ ಆರ್ ವಿ ತಂತ್ರಜ್ಞಾನದ ಕ್ಷಿಪಣಿಗಳನ್ನು ಹೊಂದಿರುವ ಆರನೇ ದೇಶವಾಗಿ ಹೊರಹೊಮ್ಮಿದೆ. ೧೯೭೦ರಲ್ಲಿ ಮೊದಲಿಗೆ ಅಮೇರಿಕ ಇಂಥ ತಂತ್ರಜ್ಞಾನವನ್ನು ಹೊಂದಿತ್ತು. ಆನಂತರ ರಷ್ಯಾ, ಫ್ರಾನ್ಸ್, ಬ್ರಿಟನ್, ಚೀನ ಹಾಗೂ ಇಸ್ರೇಲ್ ಈ ತಂತ್ರಜ್ಞಾನದ ಮೂಲಕ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿತ್ತು.
ಭಾರತ ಈ ತಂತ್ರಜ್ಞಾನವನ್ನು ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿ ಪಡಿಸುವ ಮೂಲಕ ಆತ್ಮ ನಿರ್ಭರತೆಗೆ ಒತ್ತು ನೀಡಿರುವುದು ಇನ್ನೊಂದು ಹೆಗ್ಗಳಿಕೆ ಎನ್ನಲಡ್ಡಿಯಿಲ್ಲ. ಸಾಂಪ್ರದಾಯಿಕ ಕ್ಷಿಪಣಿಗಳು ಏಕ ಸಿಡಿತಲೆಗಳನ್ನು ಹೊಂದಿದರೆ, ಇದು ಬಹು ಸಿಡಿತಲೆಗಳ ಸಾಮರ್ಥ್ಯವನ್ನು ಹೊಂದಿದೆ. ಅಂದರೆ ಏಕಕಾಲಕ್ಕೆ ಹತ್ತು ಹಲವು ಗುರಿಗಳತ್ತ ಬಾಂಬ್ ಹಾಕುವ ಸಾಮರ್ಥ್ಯ ಹೊಂದಿದೆ. ಇದು ಭಾರತ ಪ್ರಸಕ್ತ ತನ್ನ ಭೌಗೋಳಿಕ ವ್ಯಾಪ್ತಿಯಲ್ಲಿ ಎದುರಾಳಿಗಳಿಂದ ತನ್ನ ಆತ್ಮರಕ್ಷಣೆಗೆ ಇರಿಸುವ ಅತ್ಯಂತ ಮಹತ್ವದ ಹೆಜ್ಜೆ ಎಂದೇ ವಿಶ್ಲೇಷಿಸಲಾಗುತ್ತಿದೆ. ನೆರೆಯ ಪಾಕಿಸ್ತಾನ ಹಾಗೂ ಚೀನಗಳ ಬೆದರಿಕೆಯನ್ನು ಎದುರಿಸಲು ಭಾರತ ಈ ಮೂಲಕ ಅತ್ಯಂತ ಸಮರ್ಥವಾಗಿದೆ. ಚೀನಾದಲ್ಲಿ ಈಗಾಗಲೇ ಎಂ ಐ ಆರ್ ವಿ ತಂತ್ರಜ್ಞಾನ ಹೊಂದಿರುವ ಡಿ ಎಫ್ ೫ ಬಿ ಹಾಗೂ ಸಿ ಎಸ್ ಎಸ್ - ೪ ಎಂಬ ಕ್ಷಿಪಣಿಗಳಿವೆ. ಚೀನ ಈಚೆಗಷ್ಟೇ ತನ್ನ ರಕ್ಷಣ ಬಜೆಟ್ ಅನ್ನು ಶೇ.೭ರಷ್ಟು ಹೆಚ್ಚಿಸಿಕೊಂಡಿರುವುದು ಇಲ್ಲಿ ಉಲ್ಲೇಖಾರ್ಹ. ಪಾಕಿಸ್ತಾನ ಕೂಡ ಇಂಥ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ವರದಿಗಳಿವೆ.
ರಾಜಕೀಯವಾಗಿ ಚೀನ ಮತ್ತು ಪಾಕಿಸ್ಥಾನಗಳು ಜಂಟಿ ತಂತ್ರವನ್ನು ಹೂಡುತ್ತಿರುವ ಈ ಕಾಲಘಟ್ಟದಲ್ಲಿ ಭಾರತ ತನ್ನ ರಕ್ಷಣ ಸಾಮರ್ಥ್ಯವನ್ನು ಓರೆಗೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಅಗ್ನಿ ಕ್ಷಿಪಣಿಗಳ ಸರಣಿಯಲ್ಲಿ ೭೦೦ ರಿಂದ ೧೫೦೦ ಕಿ.ಮೀ. ವ್ಯಾಪ್ತಿ ಹೊಂದಿರುವ ಕ್ಷಿಪಣಿಗಳು ಇತ್ತಾದರೂ ಈಗ ೫ ಸಾವಿರದಿಂದ ೮ ಸಾವಿರ ಕಿ ಮೀ ವ್ಯಾಪ್ತಿ ಹೊಂದಿರುವ ಈ ದಿವ್ಯಾಸ್ತ್ರದ ಮೂಲಕ ಪಾಕಿಸ್ತಾನ ಹಾಗೂ ಚೀನಗಳಿಗೆ ಸಂದೇಶವನ್ನು ರವಾನಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೨-೦೩-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ