ಭಾರತದ ಈ ಕ್ಷಣದ ಜನಜೀವನದ ಒಂದು ಸಾಕ್ಷ್ಯಚಿತ್ರ...

ಸೂರ್ಯೋದಯದ ದೃಶ್ಯದೊಂದಿಗೆ ಹಕ್ಕಿಗಳ ಕಲರವದ ಹಿನ್ನಲೆ ಸಂಗೀತದಲ್ಲಿ ಪ್ರಾರಂಭವಾಗುತ್ತದೆ. ರಸ್ತೆ ಬದಿಯ ಬಸ್ ನಿಲ್ದಾಣದಲ್ಲಿ ಚಳಿಯಿಂದ ಗಡಗಡ ನಡುಗುತ್ತಿದ್ದ ಅಜ್ಜ ಕಿಸೆಯಿಂದ ಬೀಡಿ ತೆಗೆದು ಬೆಂಕಿ ಹಚ್ಚಿ ಸೇದುತ್ತಾ ದೂರಕ್ಕೆ ದೃಷ್ಟಿ ಹಾಯಿಸಿದ್ದಾರೆ. ಶ್ರೀಮಂತ ಉದ್ಯಮಿಯೊಬ್ಬ ವ್ಯವಹಾರದ ನಿಮಿತ್ತ ತನ್ನ ಐಷಾರಾಮಿ ವಾಹನದಲ್ಲಿ ಸಿಗರೆಟ್ ಸೇದುತ್ತಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ವಿದೇಶಕ್ಕೆ ಪ್ರಯಾಣಿಸಲು ಹೊರಟಿದ್ದಾನೆ. ಭಿಕ್ಷುಕಿಯೊಬ್ಬರು ತನ್ನ ಅಂಗವಿಕಲ ಮಗುವನ್ನು ಹೆಗಲಿಗೆ ಕಟ್ಟಿಕೊಂಡು ಅಸ್ತವ್ಯಸ್ತ ಸ್ಥಿತಿಯಲ್ಲಿ ಆಗತಾನೆ ಬಾಗಿಲು ತೆರದ ಚಿಕ್ಕ ಹೋಟೆಲಿನ ಮುಂದೆ ನಿಂತು ಕಾಫಿ ಕುಡಿಯುವ ಗ್ರಾಹಕರ ಬಳಿ ಕಾಫಿಗಾಗಿ ಅಂಗಲಾಚುತ್ತಿದ್ದಾರೆ. ಪಂಚತಾರಾ ಹೋಟೆಲಿನ ಲೌಂಜ್ ನಲ್ಲಿ ಕಾಫಿ ಜೊತೆ ಕುಕೀಸ್ ತಿನ್ನುತ್ತಾ ಜೋರಾಗಿ ನಗುತ್ತಾ ಹರಟುತ್ತಿರುವ ಕೆಲವು ಮಹಿಳೆಯರು, ದಡೂತಿ ಹೆಂಗಸೊಬ್ಬಳು ಎರಡು ಭರ್ಜರಿ ನಾಯಿಗಳೊಂದಿಗೆ ಅದನ್ನು ಇಂಗ್ಲೀಷಿನಲ್ಲಿ ಮುದ್ದಾಗಿ ಮಾತನಾಡಿಸುತ್ತಾ ವಾಕಿಂಗ್ ಮಾಡುತ್ತಿದ್ದಾಳೆ, ಕಾಲೇಜು ಹುಡುಗನೊಬ್ಬ ತನ್ನ ಗೆಳತಿಯೊಂದಿಗೆ ಬೈಕಿನಲ್ಲಿ ವೀಲಿಂಗ್ ಮಾಡುತ್ತಾ ಕರ್ಕಶ ಧ್ವನಿಯಲ್ಲಿ ಹಾರನ್ ಮಾಡುತ್ತಾ ವೇಗವಾಗಿ ಸಾಗುತ್ತಿದ್ದಾನೆ, ಬಡಕಲು ನಾಯಿಯೊಂದು ಬೇಕರಿ ಬಳಿ ಬನ್ನು ತಿನ್ನುತ್ತಿರುವ ವ್ಯಕ್ತಿಯನ್ನು ಆಸೆ ಕಂಗಳಿಂದ ನೋಡುತ್ತಿದೆ, ಹುಡುಗಿಯರ ಗುಂಪೊಂದು ಇಂದು ಬಿಡುಗಡೆಯಾಗಲಿರುವ ಪ್ರಖ್ಯಾತ ನಟನ ಚಿತ್ರಕ್ಕೆ ಟಿಕೆಟ್ ಪಡೆದ ಖುಷಿಯಲ್ಲಿ ಕೇಕೆ ಹಾಕುತ್ತಾ ಬಸ್ ಹತ್ತುತ್ತಿದ್ದಾರೆ, ಯಾರದೋ ಮನೆಯ ಟಿವಿಯಲ್ಲಿ, ಸಿನಿಮಾ ನಟನ 70 ಅಡಿ ಕಟೌಟ್ ಗೆ ಹೆಲಿಕಾಪ್ಟರ್ ನಲ್ಲಿ ಪುಷ್ಪಗಳ ಸುರಿಮಳೆ ಮತ್ತು ಹಾಲಿನ ಅಭಿಷೇಕದ ವಿಷಯವನ್ನು ಸಂಭ್ರಮದಿಂದ ವರ್ಣಿಸಲಾಗುತ್ತಿದೆ.
ಕ್ಷೌರಿಕನ ಅಂಗಡಿಯಲ್ಲಿ ಕುಳಿತು ತನ್ನ ಸರದಿಗಾಗಿ ಕಾಯುತ್ತಿದ್ದ ಗಿರಾಕಿ ಓದುತ್ತಿದ್ದ ಪತ್ರಿಕೆಯ ಮುಖಪುಟ- " ರಾಜ್ಯದಲ್ಲಿ ಮತ್ತೆ ಗರಿಗೆದರಿದ ಪರ್ಸಂಟೇಜ್ ಭ್ರಷ್ಟಾಚಾರ ರಾಜಕೀಯ, ಮುಂದುವರೆದ ರೈತರ ಆತ್ಮಹತ್ಯೆ, ಉಚಿತ ಯೋಜನೆಗಳು ಇನ್ನೂ ಗೊಂದಲದಲ್ಲಿ, ಹೊತ್ತಿ ಉರಿಯುತ್ತಿರುವ ಮಣಿಪುರ ಪ್ರಧಾನಿಗಳ ಮೌನ ..... "ಇನ್ನೂ ಏನೇನೂ ಬರೆದಿತ್ತು. ಬಿಸಿಲಿನ ಏರಿಕೆಯ ದೃಶ್ಯದೊಂದಿಗೆ, ಜನಪ್ರಿಯ ಸಿನಿಮಾ ಹಾಡುಗಳ ಹಿನ್ನೆಲೆಯಲ್ಲಿ ಸಬ್ ರಿಜಿಸ್ಟ್ರಾರ್, ಆರ್ ಟಿ ಓ, ಪೋಲಿಸ್, ಮುನ್ಸಿಪಲ್, ನಗರಸಭೆ, ಕಾರ್ಪೊರೇಷನ್ ಮುಂತಾದ ಆಫೀಸುಗಳಲ್ಲಿ ಝಣಝಣ ಕಾಂಚಾಣದ ಗ್ರಾಫಿಕ್ಸ್ ನಲ್ಲಿ ಮೂಡಿದ ಚಿತ್ರಗಳು, ಜನರು ಹಿಡಿ ಶಾಪ ಹಾಕುವ ಭಾವನೆಗಳು ನರ್ತಿಸುತ್ತಾ ವೇಗ ವೇಗವಾಗಿ ಸಾಗುತ್ತವೆ. ಲೋಕಸಭೆ - ವಿಧಾನಸಭೆಗಳಲ್ಲಿ ಎರಡು ಮೂರು ಗುಂಪುಗಳು ಜೋರು ಧ್ವನಿಯಲ್ಲಿ ಮಾತನಾಡುತ್ತಾ ಕೆಟ್ಟದಾಗಿ ಕೈ ಸನ್ನೆ ಮಾಡುತ್ತಿರುವ ದೃಶ್ಯಗಳು ಮಬ್ಬಾಗುತ್ತಿದ್ದಂತೆ ಮದುವೆಯ ಬೀಗರೂಟದ ಎಂಜಲು ಎಲೆಗಳನ್ನು ಎಸೆಯುವ ಜಾಗದಲ್ಲಿ ಬೀದಿನಾಯಿಗಳು ಅಳಿದುಳಿದ ಮೂಳೆ ಮಾಂಸಕ್ಕಾಗಿ ಜೋರಾಗಿ ಬೊಗಳುತ್ತಾ ಜಗಳವಾಡುವ ದೃಶ್ಯಗಳು ಕಂಡುಬರುತ್ತದೆ.
ಸಂಜೆ… ತಲೆ ಬಗ್ಗಿಸಿ ಗುಂಪು ಗುಂಪಾಗಿ ಸಾಗುವ ಕುರಿಗಳು ಮತ್ತು ಅದರ ಹಿಂದೆ ಕೋಲು ಹಿಡಿದು ಸಾಗುವ ಕುರಿಗಾಹಿಯ ದೃಶ್ಯದೊಂದಿಗೆ ಸಮ್ಮಿಳನ ಹೊಂದುವ ಚಿತ್ರಗಳು ಇದ್ದಕ್ಕಿದ್ದಂತೆ ಸಂಭ್ರಮ ಸಾರುವಂತ ಬಾರು ಮಾಲುಗಳ ಜಗಮಗಿಸುವ ದೀಪಗಳ ಸಾಲುಗಳು ಹಿನ್ನೆಲೆಯಲ್ಲಿ ಪಾಶ್ಚಾತ್ಯ ಸಂಗೀತ ಕ್ಯಾಬರೆ ಡ್ಯಾನ್ಸಗಳು ಕಾಣತೊಡಗುತ್ತದೆ, ಅನೇಕರು ತಾವು ಕುಳಿತ ಜಾಗದಲ್ಲೇ ತಮ್ಮ ಮೊಬೈಲುಗಳಲ್ಲಿ ಹೆಣ್ಣಿನ ಬೆತ್ತಲೆ ಮೆರವಣಿಗೆಯ ದೃಶ್ಯಗಳನ್ನು ತದೇಕಚಿತ್ತದಿಂದ ನೋಡುತ್ತಿದ್ದಾರೆ, ಹಾಗೇ ದೃಶ್ಯದಲ್ಲಿ ಕತ್ತಲು ದಟ್ಟವಾಗುತ್ತಿದ್ದಂತೆ ಕಾರು ಬಾರು ಹೋಟೆಲುಗಳಿಂದ ಟಾಕು ಟೀಕಾಗಿ ಬಟ್ಟೆ ತೊಟ್ಟ ಗಣ್ಯರು ಸುತ್ತಲೂ ಕಣ್ಣಾಡಿಸುತ್ತಾರೆ.
ಆ..ಬಂದರು ನೋಡಿ ನಗುನಗುತ್ತಾ ಆಗಲೇ ಮಾತುಕತೆ ಮುಗಿಸಿ ಸಿದ್ದವಾಗಿ ಬಂದ ಬೆಲೆವೆಣ್ಣುಗಳು, ಕಾರು ಭಾಗ್ಯ, ಆಟೋ ಭಾಗ್ಯ, ಮರೆ ಮಾಚುವ ಯಾವುದೋ ಜಾಗದ ಭಾಗ್ಯ ಅವರವರ ದೌರ್ಭಾಗ್ಯಕ್ಕೆ ತಕ್ಕಂತೆ. ಮಬ್ಬುಗತ್ತಲ ದೃಶ್ಯಗಳು, ಹಿನ್ನೆಲೆಯಲ್ಲಿ ಮೊದಲು ಹೆಣ್ಣಿನ ನಗುವಿನ ಕಲರವ, ಗಂಡಿನ ಎದುಸಿರಿನ ಶಬ್ದ, ನಂತರ ನಿಧಾನವಾಗಿ ಹೆಣ್ಣು ಧ್ವನಿಯ ಅಸಹಾಯಕ ಆಕ್ರಂದನ ಅದು ಕಡಿಮೆಯಾಗುತ್ತಿದ್ದಂತೆ ಸಮಾಜದ ಸಾವಿನ ಶ್ರದ್ಧಾಂಜಲಿ ವಾದನ. ಶುಭಂ.
ಟೈಟಲ್ ಕಾರ್ಡ್. ಪಾತ್ರವರ್ಗದಲ್ಲಿ.
ಭಾರತದ ಪ್ರಧಾನಿ, ನರೇಂದ್ರ ಮೋದಿ,.....
ವಿರೋಧ ಪಕ್ಷದ ನಾಯಕ, ರಾಹುಲ್ ಗಾಂಧಿ.
ಕರ್ನಾಟಕದ ಮುಖ್ಯ ಮಂತ್ರಿ, ಸಿದ್ದರಾಮಯ್ಯ..
ವಿರೋಧ ಪಕ್ಷದ ನಾಯಕ, ಬಸವರಾಜ್ ಬೊಮ್ಮಾಯಿ..
ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬ..
ರಾಜ್ಯ ಮುಖ್ಯ ಕಾರ್ಯದರ್ಶಿ, ವಂದಿತಾ ಶರ್ಮ.....
ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ,ವೈ ವಿ ಚಂದ್ರಚೂಡ್.
ಕರ್ನಾಟಕದ ಮುಖ್ಯ ನ್ಯಾಯ ಮೂರ್ತಿ, ಪ್ರಸನ್ನ ಬಿ ಚರಾಲೆ.
ಛಾಯಾಗ್ರಹಣ, ಎಲೆಕ್ಟ್ರಾನಿಕ್ ಮಾಧ್ಯಮಗಳು. ಸಂಕಲನ, ಸರ್ಕಾರಿ ಅಧಿಕಾರಿಗಳು, ಗೀತ ರಚನೆ, ಧಾರ್ಮಿಕ ಮುಖಂಡರು. ಹಿನ್ನೆಲೆ ಸಂಗೀತ, ರೈತರು ಕಾರ್ಮಿಕರು ಅಬಲೆಯರ ನಿಟ್ಟುಸಿರು. ಪ್ರೇಕ್ಷಕರ ಮತ್ಯಾರು !! ನಾವೇ...!
ದಿನಗಳು ಉರುಳುತ್ತಿವೆ. ಇದು ಸಾಂಕೇತಿಕ. ನೀವು ನಿಮ್ಮ ಕಲ್ಪನೆ ಮತ್ತು ವಾಸ್ತವವನ್ನು ಮತ್ತಷ್ಟು ವಿಸ್ತರಿಸಿಕೊಂಡು ಭಾರತದ ಸಾಧನೆ ಮತ್ತು ವಿಫಲತೆಯ ದೃಶ್ಯಗಳನ್ನು ಸೇರಿಸಿಕೊಳ್ಳಬಹುದು. ಅನುಭವಿಸಿದ ಒಳ್ಳೆಯ ಮತ್ತು ಕೆಟ್ಟ ಘಟನೆಗಳನ್ನು ಸಹ ಜೋಡಿಸಬಹುದು. ಆಗ ಭಾರತದ ವಿವಿಧ ಮುಖಗಳ ಪರಿಚಯ ನಿಮಗಾಗುತ್ತದೆ.
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ