ಭಾರತೀಯತೆ ಎಂದರೆ...

ಭಾರತೀಯತೆ ಎಂದರೆ...

ಭಾರತದ ಈ ಕ್ಷಣದ ಸಾಮಾಜಿಕ ಮತ್ತು ಧಾರ್ಮಿಕ ಸಂಘಟನಾತ್ಮಕ ಚಟುವಟಿಕೆಗಳನ್ನು ಗಮನಿಸೋಣ...

1) ಬ್ರಾಹ್ಮಣರ ಸ್ವಾಭಿಮಾನ ವೇದಿಕೆ: ಹಾದಿ ಬೀದಿಯಿಂದ - ಎಲ್ಲಾ ದೊಡ್ಡ ವಿಚಾರಸಂಕೀರ್ಣಗಳಲ್ಲೂ ಸಾಮಾನ್ಯರು ಅಸಾಮಾನ್ಯರು ಕನಿಷ್ಠರು ಎಲ್ಲರೂ ಬ್ರಾಹ್ಮಣರನ್ನು ಟೀಕಿಸುವುದೇ ಆಗಿದೆ. ಅದಕ್ಕೆ ಉತ್ತರವಾಗಿ ಬ್ರಾಹ್ಮಣ ಶ್ರೇಷ್ಠತೆ ಸಾರುವ ಸ್ವಾಭಿಮಾನಿ ವೇದಿಕೆ.

2) ವೀರಶೈವ - ಲಿಂಗಾಯತ ಜಾಗೃತ ಬ್ರಿಗೇಡ್: ಬೇರೆ ಬೇರೆ ಹೆಸರುಗಳಲ್ಲಿ ಹರಿದು ಹಂಚಿಹೋಗಿ ಜಾತಿಯ ಕಾರಣಕ್ಕೆ ಅನೇಕ ಸೌಕರ್ಯಗಳಿಂದ ವಂಚಿತವಾದ ಬ್ರಾಹ್ಮಣ್ಯ - ಪೌರೋಹಿತಶಾಹಿ ವಿರುದ್ಧ ಪ್ರತ್ಯೇಕ ಧರ್ಮದ ಮೀಸಲಾತಿಯ ಮುಖಾಂತರ ಅಭಿವೃದ್ಧಿ ಸಾಧಿಸಲು ಹೋರಾಡುವ ವೇದಿಕೆ.

3) ಮುಸ್ಲಿಂ ಹಿತರಕ್ಷಣಾ ಸಂಘಟನೆ: ಜಾತ್ಯಾತೀತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲರಂತೆ ಸರಿಸಮನಾದ ಹಕ್ಕುಗಳಿದ್ದರೂ ಎರಡನೇ ದರ್ಜೆಯ ವ್ಯಕ್ತಿಗಳಂತೆ  ತುಳಿಯುವ ಹಿಂದುಗಳ ದೌರ್ಜನ್ಯದ ವಿರುದ್ಧ ಸಂಘಟನಾತ್ಮಕ ಹೋರಾಟ ನಡೆಸುವ ಸಂಸ್ಥೆ.

4) ಹಿಂದೂ ರಕ್ಷಣಾ ಸೇನೆ: ಹಿಂದೂ ಮೂಲನಿವಾಸಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಮುಸ್ಲಿಂ ಕ್ರಿಶ್ಚಿಯನ್ ಮುಂತಾದ ಅನ್ಯ ಧರ್ಮೀಯರ ಬಲಪ್ರಯೋಗ ಮತ್ತು ಕುತಂತ್ರಗಳಿಂದ ರಕ್ಷಣೆ ಪಡೆಯಲು ಸ್ಥಾಪಿಸಲಾದ ಕ್ರಾಂತಿಕಾರಿ ಸಂಘಟನೆ.

5) ದಲಿತ - ಧಮನಿತರ ಸಂಘರ್ಷ ಪಡೆ: ಶತಶತಮಾನಗಳಿಂದ ಮನುಸ್ಮೃತಿಯ ಆಚಾರ ವಿಚಾರಗಳಿಂದ ಪಶುಗಳಿಗಿಂತ ಕೀಳಾಗಿ ನಡೆಸಿಕೊಳ್ಳಿತ್ತಿರುವ ಬಲಾಡ್ಯ ಜಾತಿಗಳಿಂದ ವಿಮೋಚನೆಗಾಗಿ ಹೋರಾಡುವ ಸಂಘಟನೆ..

6) ಮಹಿಳಾ ವಿಮೋಚನಾ ಸಂಸ್ಥೆ: ಸೃಷ್ಟಿಯ ಸಮಾನತೆಯನ್ನು ದಿಕ್ಕರಿಸಿ ಅನವಶ್ಯಕ ಪೂಜನೀಯ ಭಾವನೆಯನ್ನು ಉಂಟುಮಾಡಿ ಅದನ್ನೇ ನೆಪವಾಗಿಟ್ಟುಕೊಂಡು ಮಹಿಳೆಯನ್ನು ಗುಲಾಮಳಂತೆ ತಮ್ಮ ಧರ್ಮಗಳಲ್ಲಿ ಬಂಧಿಸಿ ಶೋಷಿಸುತ್ತಿರು ಪುರುಷ ಸಮಾಜದ ವಿರುದ್ಧ ಧ್ವನಿ ಎತ್ತುವ ವೇದಿಕೆ.

7) ಅನ್ನಧಾತ ಸುಖೀಭವ ಹೋರಾಟ ಸಮಿತಿ: ಈ ದೇಶದ ಬೆನ್ನೆಲುಬು ಪ್ರತಿಮನೆಯ ಅನ್ನಧಾತ ಇಂದು ಸ್ವತಃ ಊಟಕ್ಕೆ ಗತಿಯಿಲ್ಲದ ಸ್ಥಿತಿ ತಲುಪಿದ್ದಾನೆ.  ಆದ್ದರಿಂದ ಆತನನ್ನು ಮತ್ತೆ ಮುಖ್ಯವಾಹಿನಿಯ ಅತಿಮುಖ್ಯ ವ್ಯಕ್ತಿಯಾಗಿಸುವ ಜಾಗೃತ ಸಂಘಟನೆ.

8) ಕಾರ್ಮಿಕ ಹಕ್ಕುಗಳ ಹೋರಾಟ ಯೂನಿಯನ್: ಬಂಡವಾಳಶಾಹಿಗಳ ನಿರಂತರ ಲಾಭದ ಒತ್ತಡದಿಂದ ಅಪಾರ ಸಂಕಷ್ಟಗಳಿಗೆ ಒಳಗಾಗಿ ಅತ್ಯಂತ ನಿಕೃಷ್ಟ ಜೀವನ ಸಾಗಿಸುತ್ತಿರುವ ಕಾರ್ಮಿಕ ಹಕ್ಕುಗಳ ರಕ್ಷಣೆಯ ಸಂಘಟನೆ.

9) ಕ್ರಿಶ್ಚಿಯನ್ ಕಮ್ಯುನಿಟಿ ಸರ್ವಿಸ್: ಭಾರತದಲ್ಲಿ ಹೆಚ್ಚುತ್ತಿರುವ ಅಸಹನೆಯ ಪರಿಣಾಮ ಕ್ರಿಶ್ಚಿಯನ್ ಚರ್ಚುಗಳು ಮತ್ತು ಮಿಷನರಿಗಳ ಮೇಲೆ ನಡೆಯುತ್ತಿರುವ ಹಲ್ಲೆ ದೌರ್ಜನ್ಯಗಳ ತಡೆಗೆ ಹೋರಾಡುವ ಸಂಘಟನಾತ್ಮಕ ಸಂಸ್ಥೆ.

10) ಸರ್ವಧರ್ಮ - ಸರ್ವಜನಾಂಗದ ಶಾಂತಿ ಸಮನ್ವಯ ಒಕ್ಕೂಟ: ಯಾವುದೇ ಧರ್ಮ ಪಂಥ ವಾದಗಳಿಗೆ ಬಲಿಯಾಗದೆ ಮಾನವೀಯತೆಯಡೆಗೆ ಸಮಾಜವನ್ನು ಕೊಂಡೊಯ್ಯಲು ಜನರನ್ನು ಎಚ್ಚರಿಸುವ ಸಾಮಾಜಿಕ ಸಂಸ್ಥೆ..

ಯಪ್ಪಾ,....

ಯಾರ ವಿರುದ್ಧ ಹೋರಾಟ - ಯಾರ ಪರ ಹೋರಾಟ.... ಶೋಷಿತರು ಯಾರು - ಶೋಷಕರು ಯಾರು? ನ್ಯಾಯವಾಗಿರುವವರು ಯಾರು ಅನ್ಯಾಯವಾಗಿರುವುದು ಯಾರಿಗೆ? ಸಂಸದೀಯ ಪ್ರಜಾಪ್ರಭುತ್ವ - ಸಂವಿಧಾನ ಏನು ಮಾಡುತ್ತಿದೆ. ಇಡೀ ದೇಶ ಈ ರೀತಿಯ ಅತೃಪ್ತ ಆತ್ಮವೇ, ಅಥವಾ ಇದೇ ವಾಸ್ತವ ಇದನ್ನೇ ಒಪ್ಪಿಕೊಂಡು ಬದುಕುವುದು ಜಾಣತನವೇ ಅಥವಾ ಅನಿವಾರ್ಯವೇ. ಮಾನವೀಯತೆ, ಭಾರತೀಯತೆ ಎಂಬುದು ಮರೀಚಿಕೆಯೇ,? ಯಾರಿಗೂ ತೃಪ್ತಿ ಇಲ್ಲ. ಒಬ್ಬರಿಗೊಬ್ಬರು ಅನುಮಾನದಿಂದ ನೋಡುವ ಈ Social structure ಸಂಪೂರ್ಣ ಪುನರ್ ಪರಿಶೀಲಿಸುವ ಅವಶ್ಯಕತೆ ಇದೆ‌. 

" ನಾನು ಈ ಮಣ್ಣಿನ ಈ ಗಾಳಿಯ ಈ ನೀರಿನ ವಾರಸುದಾರ. ನನ್ನ ಮೂಲ ಯಾವುದೇ ಇರಲಿ. ಈ ಕ್ಷಣದಿಂದ ನಾನೊಬ್ಬ ಭಾರತೀಯ. ನನ್ನ ನಿಷ್ಠೆ ಭಾರತೀಯ ಸಂವಿಧಾನಕ್ಕೆ "

ಭಾರತೀಯತೆ ಎಂದರೆ...

" ಸರ್ವತಂತ್ರ ಸ್ವತಂತ್ರ ಸಾರ್ವಭೌಮ ಸಮಾನತೆಯ ಧರ್ಮಾತೀತ ಜಾತ್ಯಾತೀತ ಪ್ರಜ್ಞೆ. ಉಳಿದದ್ದೆಲ್ಲಾ ನಂತರ ". ಆ ಕನಸಿನ ದಿನಗಳ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ..

  • 276 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿಯೇ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿತು. ಮಂಗಳೂರಿನ ವಾಸ್ತವ್ಯದ ಸಮಯದಲ್ಲಿ ಬರೆದ ಬರಹ ಇದು.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ: ‘SAM ವಾದ' ಸಂಸ್ಥೆಯಲ್ಲಿ...