ಭಾರತ ನಮ್ಮ ಶತ್ರು ಅಲ್ಲ

ಭಾರತ ನಮ್ಮ ಶತ್ರು ಅಲ್ಲ

ಬರಹ

ಈ ನುಡಿ ಮುತ್ತನ್ನು ಉದುರಿಸಿದವರು ಪಾಕ್ ಅಧ್ಯಕ್ಷ ಜರ್ದಾರಿ. ಅವರಿಗೆ ಈ ವಿಷಯ ಈಗ ಹೊಳೆಯಿತೋ ಅಥವಾ ಇದೇ ಅಭಿಪ್ರಾಯ ಪಾಕ ಆಡಳಿತಗಾರರಲ್ಲೂ ಇದೆಯೋ ಎನ್ನುವುದು ನಮಗೆ ಗೊತ್ತಿಲ್ಲ. ಸಾವಿರ ವರ್ಷ ಭಾರತದೊಂದಿಗೆ ಕಾದಾಡುವ ಅಭಿಲಾಷೆ ಹೊಂದಿದ್ದ ದಿವಂಗತ ಮಾಜಿ ಪ್ರಧಾನಿಯವರ ವಿಧುರ ಈ ಮಾತನ್ನು ಹೇಳಿ ನಮ್ಮನ್ನು ಸ್ವಲ್ಪ ಚಕಿತಗೊಳಿಸಿದ್ದಂತೂ ನಿಜವೇ. ಏಕೆಂದರೆ ಪಾಕಿಗಳಿಗೆ ನಮ್ಮನ್ನು ದ್ವೇಷಿಸುವ, ಪ್ರತಿಯೊಂದಕ್ಕೂ ನಮ್ಮ ಮೇಲೆ ಗೂಬೆ ಕೂರಿಸುವ ಪರಿಪಾಠ ಹಳೆ ಹವ್ಯಾಸ. ಈಗ ಈ ಹವ್ಯಾಸದಿಂದ ಸ್ವಲ್ಪ ಬಿಡುವು ತೆಗೆದುಕೊಳ್ಳಲು ಜರ್ದಾರಿ ನಿರ್ಧರಿಸಿದ್ದರೆ ಅದು ಅವರಿಗೂ ಅವರ ದೇಶಕ್ಕೂ ಉತ್ತಮ. ಈ ರೀತಿಯ ನಮ್ಮನ್ನು ತಬ್ಬಿಬ್ಬುಗೊಳಿಸುವ ರಾಜಕಾರಣಿಗಳ ಹೇಳಿಕೆಗಳ ವಿಷಯಕ್ಕೆ ಬರುವುದಾದರೆ ಇತ್ತೀಚಿನ ಎರಡು ಘಟನೆಗಳು ನೆನಪಾಗುತ್ತವೆ.

ದೇಶದೆಲ್ಲೆಡೆ ಬಾಂಬ್ ಸ್ಫೋಟವಾದಾಗ "ಮುಸ್ಲಿಂ" ಭಯೋತ್ಪಾದಕರ ಕೆಲಸ ಎಂದು ಜರೆದಿದ್ದ ಭಾಜಪ ನಾಯಕರು ಹುತಾತ್ಮ ಹೇಮಂತ್ ಕರ್ಕರೆ pandora's box ತೆರೆದು ಎಲ್ಲರನ್ನೂ ದಿಗ್ಮೂಢರನ್ನಾಗಿಸಿದಾಗ ಉಲಿದಿದ್ದು ಭಯೋತ್ಪಾದಕರಿಗೆ ಧರ್ಮ ಇಲ್ಲ ಎಂದು.

ಅಯೋಧ್ಯೆಯಲ್ಲಿನ ಬಾಬರಿ ಮಸೀದಿಯ ಧ್ವಂಸದ ಉಸ್ತುವಾರಿ ತೆಗೆದುಕೊಂಡಿದ್ದ, ಧ್ವಂಸದ ಬಗ್ಗೆ ತನಗೆ ಲವಲೇಶವೂ ಪಶ್ಚಾತ್ತಾಪವಿಲ್ಲ ಎಂದು ಬೀಗಿದ್ದ ಕಲ್ಯಾಣ್ ಸಿಂಗ್ ಈಗ ಹೇಳುತ್ತಿರುವುದು ಬೇರೆಯೇ. ಮಸೀದಿಯ ಧ್ವಂಸ ಅವರ ನಿರ್ಧಾರವಲ್ಲ ಮತ್ತು ಅದರ ಬಗ್ಗೆ ನನಗೆ ಬಹಳ ಖೇದವಿದೆ ಎಂದು ಮುಸ್ಲಿಂ ನಾಯಕರ ಬಳಿ ಬಂದು ಅಲವತ್ತುಕೊಂಡು ಕ್ಷಮೆ ಕೋರಿದರು. ಹೀಗೆ ತಮಗೆ ಬೇಕಾದ ಸಮಯದಲ್ಲಿ ಬೇಡದ ಅವಾಂತರ ಸೃಷ್ಟಿಸಿ ನಂತರ ಶತ್ರುವನ್ನು ಮಿತ್ರ ಎನ್ನುವುದೂ, ಪಶ್ಚಾತ್ತಾಪ ಪಟ್ಟುಕೊಳ್ಳುವುದೂ ಬರೀ ಕಣ್ಣೊರೆಸುವ ತಂತ್ರವೋ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರ ಹೇಳಬೇಕು.