ಭಾರತ ಸಂವಿಧಾನ

ಭಾರತ ಸಂವಿಧಾನ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಪಿ.ಅನಂತಕೃಷ್ಣ ಭಟ್
ಪ್ರಕಾಶಕರು
ಡಾ. ಪಿ.ಅನಂತ ಕೃಷ್ಣ ಭಟ್, ದ್ವಾರಕ, ಕೊಡಿಯಾಲ್ ಬೈಲ್, ಮಂಗಳೂರು.
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೪

ಸ್ವಾತಂತ್ರ್ಯೋತ್ತರ ಅಮೃತ ವರ್ಷದ ಸಂದರ್ಭದಲ್ಲಿ ವಿಶ್ರಾಂತ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ಪಿ.ಅನಂತಕೃಷ್ಣ ಭಟ್ ಇವರು ಬರೆದ ‘ಭಾರತ ಸಂವಿಧಾನ’ -ಒಂದು ಸುಂದರ ಪಕ್ಷಿ ನೋಟ ಸಂವಿಧಾನದ ಕುರಿತಾದ ಕುತೂಹಲಕರವಾದ ಮಾಹಿತಿ ನೀಡುತ್ತದೆ. ವಿಶ್ವದ ಸುದೀರ್ಘ ಸಂವಿಧಾನ ಎಂಬ ಹೆಗ್ಗಳಿಕೆಯ ರಾಜ್ಯಾಂಗ ಘಟನೆ ನಮ್ಮದು. ವಿಶ್ವ ಇತಿಹಾಸದ ಸಂದಿಗ್ಧತೆಯಿಂದ, ಸ್ವಾತಂತ್ರ್ಯ ಹೋರಾಟದ ಅಗ್ನಿ ಮುಖದಿಂದ, ರಾಷ್ಟ್ರಪ್ರೇಮದ ಜ್ವಲಂತ ಏರುಗತಿಯಿಂದ ಉದಿಸಿ ಬಂದ ಚಾರಿತ್ರಿಕ ದಾಖಲೆಯೇ ನಮ್ಮ ಸಂವಿಧಾನ. ವಿಶ್ವದ ಜನಸಂಖ್ಯಾತ್ಮಕವಾದ ಪ್ರಥಮ ಪ್ರಜಾತಂತ್ರ ರಾಷ್ಟ್ರವೆನಿಸಿದ ನಮ್ಮ ಭಾರತದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಭದ್ರ ಬುನಾದಿಯನ್ನು ರಚಿಸಿದ ಹೊತ್ತಗೆಯೇ ನಮ್ಮ ಭಾರತ ಸಂವಿಧಾನ.

ನಮ್ಮೆಲ್ಲರ ರಾಷ್ಟ್ರೀಯ ಸಾಮೂಹಿಕ ಬದುಕಿನೊಂದಿಗೆ, ವ್ಯಕ್ತಿಗತ ಹಕ್ಕು, ಕರ್ತವ್ಯಗಳ ಸುಂದರ ಹಂದರ ಹೆಣೆದು, ಜನ-ಸಮುದಾಯ ಹಾಗೂ ಸರಕಾರಗಳ ಮಧ್ಯೆ ಸುವರ್ಣ ಸೇತು ನಿರ್ಮಿಸಿದ ಅಮೋಘ ದಾಖಲೆ ನಮ್ಮ ರಾಜ್ಯಾಂಗ ಘಟನೆ. ಅದೇ ರೀತಿ ನಮ್ಮ ವಿಶಾಲ ರಾಷ್ಟ್ರದ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರ, ಕರ್ತವ್ಯಗಳ ಪರಿಧಿಯನ್ನು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ನಿಖರ ರೇಖಾ ವಿನ್ಯಾಸವನ್ನು ಪಡಿ ಮೂಡಿಸಿದ ಮೂಲಭೂತ ದಾಖಲೆ ನಮ್ಮ ಸಂವಿಧಾನ.

ನಮ್ಮ ಸಂವಿಧಾನ ರಚನಾ ಸಭೆಯು ಡಾ. ಬಾಬು ರಾಜೇಂದ್ರ ಪ್ರಸಾದರ ಅಧ್ಯಕ್ಷತೆಯಲ್ಲಿ, ಅದೇ ರೀತಿ ಕರಡು ಸಮಿತಿ ಡಾ. ಬಿ ಆರ್ ಅಂಬೇಡ್ಕರ್ ರವರ ಹಿರಿತನದಲ್ಲಿ ಸುಮಾರು ೨೯೮ ಸದಸ್ಯರ ಸಹಯೋಗದಲ್ಲಿ ೨ ವರ್ಷ, ೧೧ ತಿಂಗಳು, ೧೮ ದಿನಗಳ ನಿರಂತರ ಪರಿಶ್ರಮದಿಂದ ರೂಪುಗೊಂಡ ಅಮೋಘ ದಾಖಲೆ. ಕರ್ನಾಟಕದ ಕೆ ಸಿ ರೆಡ್ಡಿ, ಕೆಂಗಲ್ ಹನುಮಂತಯ್ಯ, ಸಿದ್ಧವೀರಪ್ಪ, ಎಸ್ ನಿಜಲಿಂಗಪ್ಪ, ಟಿ ಚೆನ್ನಯ್ಯ, ಟಿ ಸಿದ್ಧಲಿಂಗಯ್ಯ, ಎಸ್ ವಿ ಕೃಷ್ಣಮೂರ್ತಿ ರಾವ್ ಮುಂತಾದವರು ಈ ರಚನಾ ಸಭೆಯಲ್ಲಿ ಭಾಗವಹಿಸಿದ ಪ್ರಮುಖರು. ಅದೇ ರೀತಿಯಲ್ಲಿ ಅಂದಿನ ಮದ್ರಾಸ್ ಪ್ರಾಂತದ ಭಾಗವಾದ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆನಗಲ್ ನರಸಿಂಹ ರಾವ್, ಉಳ್ಳಾಲ ಶ್ರೀನಿವಾಸ ಮಲ್ಯ, ಹೆಚ್ ವಿ ಕಾಮತ್, ಬೆನಗಲ್ ರಾಮರಾವ್ ಹಾಗೂ ರೆ. ಫಾದರ್ ಜೆರೊಮ್ ಡಿ’ಸೋಜ ಮುಂತಾದವರು ಈ ಸಭೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಹೆಮ್ಮೆಯ ವಿಚಾರ.

ಈ ಕೃತಿಗೆ ಮುನ್ನುಡಿಯನ್ನು ಬರೆದು ಶುಭಾಹಾರೈಸಿ ಅಭಿನಂದಿಸಿದ್ದಾರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು, ಉಜಿರೆ ಇದರ ಮಾನ್ಯ ಉಪಾಧ್ಯಕ್ಷರಾದ ಪ್ರೊ ಎಸ್ ಪ್ರಭಾಕರ್. ಪರಿವಿಡಿಯಲ್ಲಿ ೩೭ ಅಧ್ಯಾಯಗಳಿವೆ. ಅದರಲ್ಲಿ ಭಾರತದ ಸಂವಿಧಾನ, ಹೊಸತನಕ್ಕೆ ಮುನ್ನುಡಿ-ನಮ್ಮ ಸಂವಿಧಾನ, ಸಂವಿಧಾನದ ಪೀಠಿಕೆ ಅಥವಾ ಪ್ರಸ್ತಾವನೆ, ಭಾರತ ಒಕ್ಕೂಟ, ಪೌರತ್ವ, ರಾಷ್ಟ್ರ ಜೀವನದ ಉಸಿರು - ಮೂಲಭೂತ ಹಕ್ಕುಗಳು, ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ  ಮತ್ತು ಶೈಕ್ಷಣಿಕ ಹಕ್ಕುಗಳು, ಭಾರತದ ರಾಷ್ಟ್ರಾಧ್ಯಕ್ಷರು, ಭಾರತದ ಪ್ರಧಾನ ಮಂತ್ರಿ, ಹಿರಿಯರ ಸಭೆ - ರಾಜ್ಯಸಭೆ, ಲೋಕ ಸಭೆ, ವಿಧಾನ ಸಭೆ, ವಿಧಾನ ಪರಿಷತ್, ಸಂವಿಧಾನ ಸೃಜಿಸಿದ ಮೂರು ಆಯೋಗಗಳು, ಕೇಂದ್ರ- ರಾಜ್ಯಗಳ ಸಂಬಂಧ, ಆಡಳಿತ ಭಾಷೆ, ಸಾಂವಿಧಾನಿಕ ತಿದ್ದುಪಡಿ ಮೊದಲಾದ ವಿಷಯಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಬರೆದಿದ್ದಾರೆ.

ಅಗತ್ಯವಿದ್ದಲ್ಲಿ ಛಾಯಾ ಚಿತ್ರಗಳನ್ನು ನೀಡಲಾಗಿದೆ. ಸುಮಾರು ೧೬೦ ಪುಟಗಳ ಈ ಕೃತಿಯನ್ನು ಲೇಖಕರು ವೀರ ಯೋಧರಿಗೆ, ಧೀರ ವನಿತೆಯರಿಗೆ, ನಾಡ ಬಿಡುಗಡೆಗಾಗಿ ದುಡಿದ ದೇಶ ಬಂಧುಗಳಿಗೆ, ಕ್ರಾಂತಿ ವೀರರಿಗೆ, ವೀರ ಮರಣಗೈದ ಅಮರ ಜ್ಯೋತಿಗಳಿಗೆ, ಹುತಾತ್ಮ ಪುಣ್ಯ ಜೀವಿಗಳಿಗೆ ಅರ್ಪಣೆ ಮಾಡಲಾಗಿದೆ.