ಭಾವದ ನೂಲೇಣಿಯನೇರಿ (ಒಂದು ಯುಗಳ ಗೀತೆ )

ಭಾವದ ನೂಲೇಣಿಯನೇರಿ (ಒಂದು ಯುಗಳ ಗೀತೆ )

(picture source from Wikipedia (Romeo, Juliet) : https://en.m.wikipedia.org/wiki/File:DickseeRomeoandJuliet.jpg)
 
ಭಾವದ ನೂಲೇಣಿಯನೇರಿ ಹತ್ತಿದೆ ಆಗಸಕೆ 
ತೂಗಿ ಜೋತಾಡುತ ಮೃದುಲ ಒಪ್ಪಿದೆ ನಿನ್ನ ಜತೆ 
ಸಮ್ಮತಿಸಿದೆ ಮನದೊಳಗೆ, ನೀತಿ ಸಂಹಿತೆ ಬಳಿಗೆ
ಹತ್ತಿರಕು ಕಟ್ಟಿದೆ ಬೇಲಿ, ಸರಿದೂರ ಕಟ್ಟೆ ತಾಳಿ || ಭಾವದ ನೂಲೇಣಿಯನೇರಿ ||

ಬಯಸಿದೆನೆ ಬೆಚ್ಚನೆ ಮಡಿಲು, ಮಾತಿದ್ದರೇನು ಬರಸಿಡಿಲು ?
ಅಡಗಿಸದೆ ಆಡೆ ನಿರಾಳ, ಆಗುವುದೆ ನಿಚ್ಚಳ ಮನದಾಳ 
ತೊಳೆದು ತಾನೆ ಖಾಲಿ ಮಲ, ಒಳಗಾಗುವುದು ಅಮಲ 
ಕೊಡು ನಿನ್ನ ಭಾವದ ಕೊಳ, ನೆಡುವೆನಲ್ಲೆ ಕೆಸರಿನ ಕಮಲ || ಭಾವದ ನೂಲೇಣಿಯನೇರಿ ||

ನಿ ಕಾಣೆ ನಿನ್ನಯ ಮುಖವ, ಕನ್ನಡಿಯು ತೋರದು ಸಕಲ 
ಇಣುಕಲಿದೆ ಅಂತರಂಗದೊಳಗೆ, ಚಿಮ್ಮಿಸಂತರಗಂಗೆಯ ಬುಗ್ಗೆ 
ಚಿಲುಮೆಯದು ತಟ್ಟುವುದೆ ಪೂರಾ, ಮಜ್ಜನದೆ ಪ್ರೇಮದ ವ್ಯಾಪಾರ 
ಕಾಣದೆಯೂ ಅರಿಯುವುದೆ ಸರತಿ, ಜಳಕದಲೆ ನಿರ್ಮಲ ಪ್ರೀತಿ || ಭಾವದ ನೂಲೇಣಿಯನೇರಿ ||

ಪಡೆದಿರುವೆ ಜನ್ಮಾಂತರ ಸಾಲ, ಕಂತಿನಲ್ಲಿ ತೀರಿಸುವ ಹಂಬಲ 
ಕೊಡಲೊಲ್ಲೆ ಅಸಲೊಂದೆ ಸಲಕೆ, ಕೊಟ್ಟರೆ ಕಳುವಾಗುವ ಭಯಕೆ 
ಕಟ್ಟುತಿದ್ದರೂ ಸರಿ ಬಡ್ಡಿ ಚಕ್ರಬಡ್ಡಿ, ಪ್ರೀತಿಗೆ ಪ್ರೀತಿ ಇರುವಾಗೇನಡ್ಡಿ ?
ಮತ್ತೆ ಮತ್ತೆ ಮಾಡುವೆ ಕೈಸಾಲ, ಮುಗಿಯದಂತೆ ಸಾಲದ ಶೂಲ ! || ಭಾವದ ನೂಲೇಣಿಯನೇರಿ ||

ಸಾಕು ಮಾಡು ಒಣ ವೇದಾಂತ, ಪ್ರೀತಿಗಲ್ಲ ಬದುಕಿನ ಕಹಿ ಗಣಿತ 
ಇದ್ದಷ್ಟು ದಿನ ಕನಸಿನದೆ ತೋಟ, ನೆರೆ ಬಂದರು ನೆನಪುಗಳ ಕಾಟ  
ಜಿಗುಟುತನ ಮಾಡದೆ ಬಾ ನಲ್ಲೆ, ಮಳೆಯಾಗಿ ಪ್ರವಹಿಸು ಹೊಳೆ 
ಹೊಳೆದೀತು ಬಾಳಿನೊಲುಮೆ ಎಳೆ, ನೂಲೇಣಿಗಾಗುತ ಹೊಸತ ಸೆಲೆ || ಭಾವದ ನೂಲೇಣಿಯನೇರಿ ||

Comments

Submitted by kavinagaraj Sat, 02/20/2016 - 19:23

ಬಾಳಪಯಣದಲೊಂದು ಮಧ್ಯದ ತಂಗುದಾಣವಿದು! ನಂತರದಲ್ಲೂ ದೀರ್ಘ ಪಯಣವಿದೆ, ನಾಗೇಶರೇ. ಭಾವದ ಏಣಿಯನೇರಿ ಸಾಗುತಲಿದ್ದರೆ, ತನ್ಮಯತೆ ಜೊತೆಗಿದ್ದರೆ ಆಗಸದಲ್ಲೂ ನಡೆಯಬಹುದು, ನೀರಿನ ಮೇಲೂ ಸಾಗಬಹುದು! ಏಕೆಂದರೆ ಅಂತಿಮ ಪಯಣದಲ್ಲಿ ಬೇಕೆಂಬುದಿರದು! 'ಬೇಕು' ಇಲ್ಲದಿದ್ದಾಗ ಇರುವುದೆಲ್ಲವೂ ಸಾಕೇ ಸಾಕು!! ಸಾಗಲಿ, ಸುಮಧುರ ಪಯಣ!!

Submitted by nageshamysore Sat, 02/20/2016 - 19:37

In reply to by kavinagaraj

ನಮಸ್ಕಾರ ಕವಿಗಳೇ , ಅಂತು 'ದೋಣಿ ಸಾಗಲಿ, ಮುಂದೆ ಹೋಗಲಿ ದೂರ ತೀರವ ಸೇರಲಿ ' ಅಂತೀರ ! ಹಾಗೆ ಸಾಗಿದೆ ನೋಡಿ ಪಯಣ - 'ಎಲ್ಲಿಗೆ ಪಯಣ ? ಯಾವುದೋ ದಾರಿ?..ಏಕಾಂಗಿ ಸಂಚಾರಿ ' ಅಂತನ್ನೊ ತರಲೆ ಪ್ರಶ್ನೆ ಕೇಳದೆ ! :-)