ಭಾವರೇಖೆ

ಭಾವರೇಖೆ

ಪುಸ್ತಕದ ಲೇಖಕ/ಕವಿಯ ಹೆಸರು
ನಂದನ ಕುಪ್ಪಳ್ಳಿ
ಪ್ರಕಾಶಕರು
ಸುವ್ವಿ ಪಬ್ಲಿಕೇಷನ್, ಶಿಕಾರಿಪುರ, ಶಿವಮೊಗ್ಗ
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೩

ಭಾವರೇಖೆ ( ಒಂದು ಅನಂತ ಭಾವ) ನಂಕು ( ನಂದನ ಕುಪ್ಪಳ್ಳಿ) ಅವರ ಕವನಸಂಕಲನವಾಗಿದೆ. ಇದಕ್ಕೆ ಡಾ. ಶಿವಲಿಂಗೇಗೌಡ ಡಿ. ಅವರ ಬೆನ್ನುಡಿ ಬರಹವಿದೆ; ಈ ಕವನಸಂಕಲನದ ಕವಿತೆಗಳು ಪ್ರೀತಿಯ ಧ್ಯಾನದಲ್ಲಿ ಹುಟ್ಟಿದಂತವು. ಪ್ರೀತಿ, ಪ್ರೇಮ, ವಿರಹಗಳ ಸುತ್ತ ಹೆಣೆದಿರುವ ಈ ಕವಿತೆಗಳು ಪ್ರೀತಿಯ ಹುಡುಕಾಟದಲ್ಲಿ ತೊಡಗಿವೆ. ಪ್ರೀತಿಗಾಗಿ ಹಂಬಲಿಸುವ ಕನವರಿಸುವ, ಕಾತರಿಸುವ ಕವಿ ಎಲ್ಲದರಲ್ಲಿಯೂ ಪ್ರೀತಿಯನ್ನಲ್ಲದೆ ಬೇರೇನನ್ನೂ ಕಾಣಲಾರ. ಕೊನೆಗೆ ಪ್ರೀತಿಯನ್ನಲ್ಲದೆ ಬೇರೇನನ್ನೂ ನೀಡಲಾರ. ಮೇಲ್ನೋಟಕ್ಕೆ ಹೆಣ್ಣಿನ ಪ್ರೀತಿಯ ಹಂಬಲದಿಂದ ಹುಟ್ಟಿದ ಕವಿತೆಗಳಂತೆ ಕಂಡರೂ ಆ ಸೀಮಿತ ನೆಲೆಗೆ ನಿಲ್ಲದೆ ವಿಶ್ವಪ್ರೀತಿಯ ನೆಲೆಗೆ ವಿಸ್ತಾರಗೊಳ್ಳುವುದು ಇಲ್ಲಿನ ಕವಿತೆಗಳ ವಿಶೇಷ. ಕವಿಗೆ ಪ್ರೀತಿ ಎಂದರೆ 'ಬೆಳಕು'. ಆ ಬೆಳಕಿನ ಹುಡುಕಾಟ, ಜೀವಪ್ರೀತಿಯ ಹುಡುಕಾಟವೂ ಆಗಿದೆ. ಪ್ರೀತಿ ಒಂದು ಅಗಾಧ ಚೈತನ್ಯ ಅದು ಮಾಗಿ, ಪರಿಪಕ್ವಗೊಂಡು ಅರಳಬೇಕು, ಎಲ್ಲರ ಹೃದಯವನ್ನೂ ಬೆಳಗಬೇಕು ಎಂಬುದು ಕವಿಯ ಆಶಯ. ಪ್ರೀತಿಯನ್ನು ಎಲ್ಲದರಲ್ಲೂ ಅರಸುವ, ಎಲ್ಲರಿಗೂ ಹಂಚುವ ಉತ್ಕಟ ಭಾವ ಇಲ್ಲಿನ ಕವಿತೆಗಳ ಆಂತರ್ಯದೊಳಗಿದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

ಕೃತಿಯ ಕವಿಯಾದ ‘ನಂಕು' ಅವರು ತಮ್ಮ ಮನಸ್ಸಿನ ಮಾತಿನಲ್ಲಿ “ಬದುಕು ಬೆಳಕಾಗಬೇಕು, ನಾವು ಯಾವಾಗ ಬೆಳಕಿನಡೆಗೆ ನಡೆಯಲು ಆರಂಭಿಸುತ್ತೇವೆಯೋ ನಮ್ಮಷ್ಟಕ್ಕೆ ನಾವು ಬೆಳಗಲು ಆರಂಭಿಸುತ್ತೇವೆ, ಬೆಳಕು ಸದಾ ಕ್ರಿಯಾಶೀಲ, ತಾನು ಬೆಳಗುವುದಲ್ಲದೆ, ತನ್ನನ್ನು ಬಯಸುವ ಎಲ್ಲವನ್ನು ಬೆಳಕಾಗಿಸುತ್ತದೆ. ಇಲ್ಲಿ ಒಂದರಿಂದ ಇನ್ನೊಂದು ಬೆಳಗಬೇಕಷ್ಟೆ ಪ್ರೀತಿ ಬೆಳಕಿನ ಹಾಗೆ. ಅನುಭವಿಸಿದರಷ್ಟೆ ಅರಿವಿಗೆ ಬರುವುದು. ಪ್ರೀತಿ ಅರಳಿದರೆ ಬದುಕು ತೆರೆದಂತೆ!. ಬದುಕು ಪ್ರೀತಿಸುವವನ ಸ್ವತ್ತು. ಪ್ರೀತಿ ಎಲ್ಲರೆದೆಯೊಳಗಿನ ಬದುಕಿನ ಬೆಳಕಿನ ಲೋಕ. ಬದುಕಿನಲ್ಲಿ ಎಲ್ಲವನ್ನೂ ಪ್ರೀತಿಸಬೇಕಷ್ಟೆ. ಪ್ರೀತಿಸಿದಷ್ಟೂ ನಮ್ಮೊಳಗಿನ ಚೇತನ ಅನಂತವಾಗುವುದು ಮತ್ತು ಸುಂದರವಾಗುವುದು.

ಆಲೋಚಿಸಿದಂತೆ ಬದುಕು. ಬದುಕು ಭಾವತೆರೆಯ ಮೇಲಿನ ತಾವರೆ, ಪ್ರತಿಯೊಂದು ಭಾವದಲೆಗೂ ಬದುಕು ಕಂಪಿಸುತ್ತದೆ. ಬದುಕಿನಲಿ ಕಾಡಿದ ಪ್ರೇಮ, ವಿರಹ, ಸುಖ, ದುಃಖ, ಸಿಟ್ಟು ಮತ್ತು ಒಂದಿಷ್ಟು ದ್ವೇಷ ಬಹಳ ಮುಖ್ಯ. ಇವೆಲ್ಲವೂ ಬದುಕಿನ ಅಲೆಗಳು. ಇದೆಲ್ಲದರ ಭಾವ ಹಿಡಿದಿಡಲು ಪ್ರಯತ್ನಿಸಿದ್ದೇನೆ. ಬರೆದ ಕವಿತೆಗಳೆಲ್ಲ ಅನುಭಾವದ ಅಲೆಗಳಷ್ಟೆ. ಈ ಭಾವರೇಖೆಯನ್ನು ಬೆಳಕಿಗೆ ಇಟ್ಟು ನಿಮಗೆ ತೋರಿಸಲು ಪ್ರಯತ್ನಿಸಿದ್ದು ಅಷ್ಟೆ. ನಿಮ್ಮೊಳಗಿನ ಪ್ರೇಮದ ಭಾವ ಒಂಚೂರು ಜಾಗೃತಗೊಳಿಸಿದರೂ ಈ ಕವಿತೆಗಳು ಸಾರ್ಥಕವೆನಿಸುವವು.

ಮೊದಮೊದಲು ಸುಮ್ಮನೆ ಬರೆದಿದ್ದಷ್ಟೆ. ಬರೆದ್ದೆಲ್ಲ ಕವಿತೆಗಳಲ್ಲಎಂದು ಆಮೇಲೆ ಅರಿವಾದದ್ದು. ಒಂದಿಷ್ಟು ಸಾಹಿತ್ಯ ಓದು ಬಹಳ ಮುಖ್ಯ ಓದಿಗೆ ಮಾರ್ಗದರ್ಶನ ಮಾಡಿ. ಬರೆಯಲು ಪ್ರೋತ್ಸಾಹಿಸಿ ನಂತರದಲ್ಲಿ ಅದನ್ನು ತಿದ್ದಿ ನನ್ನ ಬರವಣಿಗೆಗೆ ಹೊಸ ರೂಪ ನೀಡಿದ್ದು ಗುರುಗಳು. ಇದು ನನ್ನಲ್ಲಿ ಬರೆಯುವ ವಿಶ್ವಾಸ ಮೂಡಿಸಿತು ಮತ್ತು ಭಾವಗಳನ್ನು ವ್ಯಕ್ತಪಡಿಸಲು ಮಾರ್ಗವಾಯಿತು. ಅನಿಸಿದ ಭಾವಗಳಿಗೆಲ್ಲ ಒಂದು ರೂಪ ಕೊಟ್ಟಿದ್ದೇನೆ ಅಷ್ಟೆ. ಅವು ಕವಿತೆಗಳಾದವು. ಮೊಗ್ಗು ಹೂವಾಗುವ ಹಾಗೆ. ಭಾವ ಕವಿತೆಗಳಾಗುವ ತನಕ ಕಾದು ಈಗ ಅದನ್ನೆಲ್ಲ ಒಂದು ಪುಸ್ತಕ ಮಾಡಲೇಬೇಕು ಎಂದು ಇಲ್ಲಿಯ ತನಕ ತಂದು ನಿಲ್ಲಿಸಿದ್ದಾರೆ. ನನ್ನೊಳಗಿನ ಕವಿಗೆ ಒಂದು ಜೀವಕೊಟ್ಟು ಬೆಳೆಸಿ ಮತ್ತು ಬದುಕಿನ ಏರಿಳಿತಗಳಲ್ಲಿ ಜೊತೆಗಿದ್ದು, ಬದುಕಿನ ದಾರಿ ರೂಪಿಸಿದ್ದಲ್ಲದೆ ನನ್ನಲ್ಲಿ ಬದುಕಿನ ಪ್ರೀತಿ ಹುಟ್ಟಿಸಿದ ನನ್ನ ಗುರುಗಳಾದ ಡಾ.ಶಿವಲಿಂಗೇಗೌಡ, ಇವರಿಗೆ ನಾನು ಸದಾ ಋಣಿಯಾಗಿದ್ದೇನೆ.”

ನಂಕು ಅವರು ತಮ್ಮ ಅಮ್ಮನನ್ನು ನೆನಪು ಮಾಡಿಕೊಳ್ಳುತ್ತಾ ೧೫೬ ಪುಟಗಳ ಈ ಕವನ ಸಂಕಲನವನ್ನು ಓದುಗ ಮಹಾ ಪ್ರಭುಗಳ ಮಡಿಲಿಗೆ ಅರ್ಪಣೆ ಮಾಡಿದ್ದಾರೆ.