ಭೂಕಂಪದ 3ಡಿ ಸಿನೇಮಾ
(ಇ-ಲೋಕ-34 )(13/8/2007)
ಭೂಕಂಪದ 3ಡಿ ಸಿನೇಮಾ
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಭೂಕಂಪ ಪದೇ ಪದೇ ಸಂಭವಿಸುತ್ತಿರುತ್ತದೆ. ಭೂಮಿಯು ಎಷ್ಟು ಕಂಪಿಸಿತು,ಅದರ ಕೇಂದ್ರ ಎಲ್ಲಿತ್ತು,ಅದು ಎಷ್ಟು ಆಳದಲ್ಲಿ ಸಂಭವಿಸಿತು ಮುಂತಾದ ವಿವರಗಳನ್ನು ಭೂಮಿಗೆ ಅಳವಡಿಸಿದ ಸಂವೇದಕಗಳು ದಾಖಲಿಸುತ್ತಿರುತ್ತವೆ. ಮುಂದೆ ಈ ಪ್ರದೇಶದಲ್ಲಿ ಭೂಕಂಪ ಮಾಪಕ ರಿಕ್ಟರ್ ಸ್ಕೇಲಿನಲ್ಲಿ ಮೂರುವರೆಗಿಂತ ಹೆಚ್ಚು ಪ್ರಮಾಣದ ಭೂಕಂಪ ಸಂಭವಿಸಿದ ಅರ್ಧ ಗಂಟೆಯ ಬಳಿಕ ಟಿವಿಯಂತಹ ಮಾಧ್ಯಮಗಳಲ್ಲಿ,ಭೂಕಂಪದಿಂದ ಭೂಮಿ ಅದುರಿದ ಬಗೆಯನ್ನು ಮೂರು ಆಯಾಮಗಳಲ್ಲಿ ತೋರಿಸುತ್ತಾರಂತೆ. ಭೂಕಂಪದ ಬಗೆಗಿನ ವಿವರಗಳು ಸೂಪರ್ ಕಂಪ್ಯೂಟರಿಗೆ ತಲುಪಿ,ಅದರಲ್ಲಿರುವ ತಂತ್ರಾಂಶವು ಭೂಕಂಪದ ಪರಿಣಾಮವನ್ನು ಅನಿಮೇಶನ್ ಚಲನಚಿತ್ರವಾಗಿ ವೀಕ್ಷಕರ ಕಣ್ಣ ಮುಂದಿಡುತ್ತದೆ.ಇದಕ್ಕೆ ಮೂವತ್ತು ನಿಮಿಷಗಳಷ್ಟೇ ಸಾಕು.ಹಿಂದೆ ಈ ಪ್ರದೇಶದಲ್ಲಿ ನಡೆದ ಭೂಕಂಪ ಉಂಟು ಮಾಡಿದ ಪರಿಣಾಮಗಳ ಮಾಹಿತಿಯನ್ನೂ ಕಂಪ್ಯೂಟರ್ ಬಳಸಿಕೊಂಡು ಈ ವಿಶ್ಲೇಷಣೆ ನಡೆಸುತ್ತದೆ."ಆನ್ ಡಿಮಾಂಡ್’ ಹೆಸರಿನ ಸೂಪರ್ ಕಂಪ್ಯೂಟರ್ ಇನ್ನೂರೈವತ್ತರು ಸಂಸ್ಕಾರಕಗಳನ್ನು ಹೊಂದಿದೆ. ಲಿನಕ್ಸ್ ಕಾರ್ಯನಿರ್ವಹಣ ವ್ಯವಸ್ಥೆ ತಂತ್ರಾಂಶ ಇದರಲ್ಲಿದೆ.
ಕಾರು ಕಳವಾದರೆ ಎಸ್ ಎಂ ಎಸ್ ಕಳುಹಿಸಿ,ಕಾರನ್ನು ಲಾಕ್ ಮಾಡಿ!
ಮುಂಬೈಯ ಮೈಕ್ರೋಟೆಕ್ನೋಲಾಜೀಸ್ ಕಂಪೆನಿ ಮನೆ ಮತ್ತು ವಾಹನಗಳ ಭದ್ರತಾ ವ್ಯವಸ್ಥೆಯನ್ನು ಒದಗಿಸುತ್ತಿದೆ. ಈಗ ಅದು ಹೊರ ತಂದಿರುವ ಸಾಧನವು ಕಾರು ಕಳವಾದರೆ ಪತ್ತೆ ಮಾಡಬಲ್ಲುದು. ಸಂವೇದಕಗಳ ಮೂಲಕ ಕಾರನ್ನು ಯಾರಾದರೂ ಅಕ್ರಮವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದರೆಯೋ ಎಂದು ಸಾಧನವು ಗ್ರಹಿಸುತ್ತದೆ.ಕೂಡಲೇ ವಾಹನದ ಮಾಲೀಕನ ಸೆಲ್ಪೋನಿಗೆ ಸಂದೇಶ ಹೋಗುತ್ತದೆ. ಆತ ಕಾರಿನ ಇಂಜಿನ್ ಬಂದು ಮಾಡಲು ಬಯಸಿದಲ್ಲಿ ಹಾಗೆ ಮಾಡುವುದು ಸುಲಭ. ನಿಗದಿತ ಸಂದೇಶವನ್ನು ನಿಶ್ಚಿತ ನಂಬರಿಗೆ ಕಳುಹಿಸಿದರೆ ಸಾಕು. ಕಾರಿನ ಇಂಜಿನ್ ಬಂದಾಗುತ್ತದೆ. ಈಗಾಗಲೇ ಎರಡು ಸಾವಿರ ಕಾರುಗಳಲ್ಲಿ ಇಂತಹ ವ್ಯವಸ್ಥೆಯನ್ನು ಅಳವಡಿಸಲಾಗಿದೆ.ಬೇಕೆಂದರೆ ಸೈರನ್ ಮೊಳಗಿಸಲೂ ಸಾಧ್ಯ. ಕಳೆದು ಹೋದ ಮೊಬೈಲ್ ಪೋನನ್ನು ’ಪತ್ತೆ’ ಹಚ್ಚುವಂತಹ ತಂತ್ರಜ್ಞಾನವನ್ನು ಕಂಪೆನಿ ಅಭಿವೃದ್ಧಿ ಪಡಿಸಿದೆ.ಮೊಬೈಲ್ ಕದ್ದವರು ಸಿಮ್ ಬದಲಾಯಿಸಿ, ಹೊಸ ಸಿಮ್ ಬಳಸಿದರೂ, ಪೋನಿನಲ್ಲಿ ಹೊಸದಾಗಿ ಬಳಕೆಯಾಗುತ್ತಿರುವ ನಂಬರನ್ನು ತಿಳಿಸುವ ತಂತ್ರಜ್ಞಾನವನ್ನು ಮೈಕ್ರೋಟೆಕ್ ಕಂಪೆನಿ ಕಂಡುಹಿಡಿದಿದೆ.
ಗಗನದಲ್ಲೂ ಕುಡುಕ ಚಾಲಕರು
ಬಸ್ ಕಾರುಗಳನ್ನು ಕುಡುಕರು ಚಲಾಯಿಸುವ ಸಮಸ್ಯೆ ಹೊಸದಲ್ಲ. ಅದರೆ ಬಾಹ್ಯಾಕಾಶ ವಾಹನವನ್ನೂ ಕುಡುಕ ಚಾಲಕರು ಚಲಾಯಿಸಿದರೆ? ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಇಂತಹ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ.ಪತ್ರಿಕೆಯ ಸಂದರ್ಶನವೊಂದರಲ್ಲಿ ಕೆಲವು ಬಾಹ್ಯಾಕಾಶಯಾನಿಗಳು ಸ್ಪೇಸ್ ಶಟಲ್ ಉಡಾವಣೆಯಾಗಬೇಕಿದ್ದ ವೇಳೆ ಓರ್ವ ಬಾಹ್ಯಾಕಾಶಯಾನಿ ಕುಡಿದ ಸ್ಥಿತಿಯಲ್ಲಿದ್ದನೆಂದು ಒಪ್ಪಿಕೊಂಡರು.ರಶ್ಯಾದ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಲಿದ್ದ ಬಾಹ್ಯಾಕಾಶ ಯಾನಿಯೂ ಕುಡಿದ ಸ್ಥಿತಿಯಲ್ಲಿದ್ದನಂತೆ! ಈಗ ನಾಸಾ ಈ ವರದಿಗಳ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲಿದೆ. ಬಾಹ್ಯಾಕಾಶ ಯಾನಿಗಳು ತಮ್ಮ ಪ್ರವಾಸಕ್ಕೆ ಹನ್ನೆರಡು ಗಂಟೆ ಮುನ್ನ ಕುಡಿಯಬಾರದು ಎನ್ನುವ ನಿಯಮ ಜಾರಿಗೆ ತರುವ ಜತೆಗೆ, ಬಾಹ್ಯಾಕಾಶಯಾನಿಗಳ ಆರೋಗ್ಯ ಕಾಪಾಡಲು ನಿಯಮಗಳನ್ನು ರೂಪಿಸಲು ನಾಸಾ ಉದ್ದೇಶಿಸಿದೆ. ಕುಡಿಯದೆ ಬಾಹ್ಯಾಕಾಶ ವಾಹನವನ್ನು ಚಲಾಯಿಸಲು ಧೈರ್ಯ ಬರುವುದಿಲ್ಲ ಎಂದು ಚಾಲಕರು ನೇರವಾಗಿ ಹೇಳದಿದ್ದರೆ ಸಾಕು!
ವೇಗದಲ್ಲಿ ಬೆಳೆಯುವ ಮರದ ತಳಿಗಳು
ದಕ್ಷಿಣ ಕ್ಯಾರೊಲಿನಾದ ಬಯೋಟೆಕ್ ಕಂಪೆನಿ ಸೂಪರ್ ತಳಿಗಳನ್ನು ಬೆಳೆದಿದೆ. ನೀಲಗಿರಿ,ಪೈನ್ ಜಾತಿಯ ವೃಕ್ಷಗಳು ತೀವ್ರ್ಅ ಬೇಳವಣಿಗೆ ತೋರುವಂತೆ ಮಾಡಲು ಕಂಪೆನಿ ಶಕ್ತವಾಗಿದೆ.ನೀಲಗಿರಿಯ ಮರಗಳ ತೊಗಟೆಯಲ್ಲಿ ಕಂಡುಬರುವ ರಾಸಾಯಿನಿಕದ ಅಂಶವನ್ನು ಕಡಿಮೆ ಮಾಡಲೂ ಅದು ಶಕ್ತವಾಗಿದೆ. ನೀಲಗಿರಿಯನ್ನು ಕಾಗದ ತಯಾರಿಸಲು ಬಳಸಿದಾಗ,ಅದರಲ್ಲಿನ ರಾಸಾಯಿನಿಕವನ್ನು ತೆಗೆಯಲು ಶ್ರಮ ಪಡಬೇಕಾಗುತ್ತದೆ. ಈಗ ಈ ರಾಸಾಯಿನಿಕ ಅಂಶವೇ ಇರುವುದಿಲ್ಲವಾದ್ದರಿಂದ, ಆ ಕೆಲಸ ಉಳಿಯುತ್ತದೆ. ನೀಲಗಿರಿ ಮರವನ್ನು ಜೈವಿಕ ಇಂಧನ ಇಥೆನಾಲ್ ತಯಾರಿಸಲೂ ಬಳಸಬಹುದು.ಬೇಗನೆ ಬೆಳೆವ ನೀಲಗಿರಿ ಮರಗಳಿದ್ದರೆ,ಅರಣ್ಯನಾಶ ಕಡಿಮೆಯಾಗುತ್ತದಾದ ಕಾರಣ ಪರಿಸರ ಉಳಿಸಲು ಹೊಸ ತಳಿ ಸಹಕಾರಿ ಎನ್ನುವುದು ಸ್ಪಷ್ಟ. ಉತ್ತಮ ತಳಿಯ ಆಯ್ಕೆ ಮತ್ತು ತದ್ರೂಪಿ ಸಸ್ಯಗಳ ಅಭಿವೃದ್ಧಿ ಮೂಲಕ ಈ ಬೇಗನೇ ಬೆಳೆವ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆಯೇ ವಿನ: ಜೆನೆಟಿಕ್ ವಿಧಾನದಿಂದ ಅಲ್ಲ ಎಂದು ಕಂಪೆನಿ ಅಬೋರ್ಜೆನ್ ಹೇಳಿಕೊಂಡಿದೆ.
ಭಾರತದಲ್ಲೇ ತಯಾರಾಗಲಿರುವ ಡೆಲ್ ಕಂಪ್ಯೂಟರುಗಳು
ಇನ್ನು ಮುಂದೆ ಡೆಲ್ ಕಂಪೆನಿ ಭಾರತದಲ್ಲೇ ಕಂಪ್ಯೂಟರುಗಳನ್ನು ತಯಾರಿಸಲಿದೆ. ಶ್ರೀಪೆರಂಬದೂರಿನಲ್ಲಿ ಕಂಪೆನಿಯ ಘಟಕ ಈಗ ಕಾರ್ಯಾರಂಭ ಮಾಡಿದೆ.ಇದು ವರೆಗೆ ಡೆಲ್ ಕಂಪೆನಿ ವಿದೇಶದಿಂದ ಕಂಪ್ಯೂಟರ್ ಆಮದು ಮಾಡಿಕೊಂಡು ಇಲ್ಲಿ ಮಾರುತ್ತಿತ್ತು. ಹಾಗಾಗಿ ಕಂಪ್ಯೂಟರ್ ಬೆಲೆ ದುಬಾರಿಯಾಗುತ್ತಿತ್ತು. ಬಳಕೆದಾರರಿಗೆ ಬೇಕಾದ ಸಾಮರ್ಥ್ಯದ ಕಂಪ್ಯೂಟರ್ ಪೂರೈಸುವುದು ಡೆಲ್ ವೈಶಿಷ್ಟ್ಯ.ಕಂಪೆನಿಯ ಲ್ಯಾಪ್ಟಾಪ್ಗಳು ಗುಲಾಬಿ,ಹಳದಿ ಬಣ್ಣದಲ್ಲೂ ಲಭ್ಯವಾಗಲಿವೆ. *ಅಶೋಕ್ಕುಮಾರ್ ಎ