ಭೂಕಂಪ:ವಂತಿಗೆಗೆ ತಾಣಗಳು
ಜಪಾನ್ ಭೂಕಂಪ ಮತ್ತು ಸುನಾಮಿ ಅನಾಹುತಗಳನ್ನೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುವ ಅಂತರ್ಜಾಲ ತಾಣಗಳಿವೆ. ಜನರು ಜಪಾನಿಗೆ ಸಂಬಂಧಿಸಿದ ವಿಡಿಯೋ ತುಣುಕುಗಳಿಗಾಗಿ ಹುಡುಕಿದಾಗ,ಸಿಗುವ ವಿಡಿಯೋ ಕೊಂಡಿಗಳೆಲ್ಲಾ,ನೈಜವಾದುದ್ದಲ್ಲ.ಕೆಲವರು ತಂತ್ರಾಂಶಗಳ ಕೊಂಡಿಯನ್ನೂ ನೀಡಿ,ಇಂತಹ ಶೋಧದ ಫಲಿತಾಂಶದಲ್ಲಿ ತಮ್ಮ ಕೊಂಡಿಗಳನ್ನೂ ತೋರಿಸಲು ಯಶಸ್ವಿಯಾಗುವುದಿದೆ.ಈ ತಂತ್ರಾಂಶಗಳು,ಜನರ ಕಂಪ್ಯೂಟರುಗಳಿಂದ ಮಾಹಿತಿ ಕದಿಯುವ ಉದ್ದೇಶದಿಂದ ರಚಿಸಿದ್ದಗಿರುವುದೂ ಇದೆ.ಇವನ್ನು ಕ್ಲಿಕ್ಕಿಸಿ,ಇವನ್ನು ತಮ್ಮ ಕಂಪ್ಯೂಟರುಗಳಲ್ಲಿ ಅನುಸ್ಥಾಪಿಸಿದರೆ,ಅಪಾಯಕ್ಕೆ ಆಹ್ವಾನ ನೀಡಿದಂತೆಯೇ ಸರಿ.ಇನ್ನು ಜಪಾನ್ ಜನರಿಗೆ ಸಹಾಯ ಮಾಡಲು ನೆರವಾಗಲು ವಂತಿಗೆ ಕೇಳುವ ಉದ್ದೇಶದಿಂದಲೇ ಆರಂಭವಾಗಿರುವ ಅಂತರ್ಜಾಲ ತಾಣಗಳಿರುವುದರಿಂದ,ಆನ್ಲೈನ್ ಮೂಲಕ ವಂತಿಗೆ ನೀಡುವಾಗ,ಈಗಾಗಲೇ ಪ್ರಚಲಿತದಲ್ಲಿರುವ ತಾಣಗಳನ್ನು ಆಯ್ದು ವಂತಿಗೆ ನೀಡುವುದು ಸುರಕ್ಷಿತವೆಂದು,ಅಂತರ್ಜಾಲದ ಚಟುವಟಿಕೆಗಳ ಮೇಲೆ ಕಣ್ಣಿಟ್ಟ ತಜ್ಞರು ಎಚ್ಚರಿಕೆ ನೀಡಿದ್ದಾರೆ.ವೈರಸ್ ಹಬ್ಬಿಸುವ ತಾಣಗಳ ಕೊಂಡಿಯನ್ನು, ಜಪಾನೀ ಸುನಾಮಿ ದುರಂತ ವಿಡಿಯೋ ಎಂದು ಬರುವ ಮಿಂಚಂಚೆಗಳ ಬಗ್ಗೆಯೂ ಬಳಕೆದಾರರು ಎಚ್ಚರಿಕೆ ವಹಿಸಬೇಕಿದೆ.
---------------------------------------
ಸುನಾಮಿ,ಭೂಕಂಪ:ಕೇಬಲ್ ಕಟ್
ಅಣು ವಿಕಿರಣ,ವಿದ್ಯುತ್ ಪೂರೈಕೆಯಿಲ್ಲ್ಲದೆ ಜನರು ಪಡುತ್ತಿರುವ ಪಾಡು ಎಲ್ಲರಿಗೂ ತಿಳಿದಿದೆ.ಇದರ ನಡುವೆಯೇ ಭೂಕಂಪ ಮತ್ತು ನಂತರದ ಸುನಾಮಿಗಳು ಸಮುದ್ರ ತಳದಲ್ಲಿ ದೇಶ ದೇಶಗಳ ನಡುವಣ ಅಂತರ್ಜಾಲ ಸಂಪರ್ಕ ಕೇಬಲುಗಳಿಗೆ ಬಹಳ ಹಾನಿ ಮಾಡಿದೆ.ಭೂಕಂಪದ ನಂತರ ಹಲವೆಡೆ,ಅಂತರ್ಜಾಲ ಬಾಧಿತವಾಗಿದೆ.ಸಮುದ್ರ ತಳದ ಕೇಬಲುಗಳು,ಸಾಮಾನ್ಯ ಸ್ಥಿತಿಯಲ್ಲೂ ಹಾನಿಗೀಡಾಗಿ ತುಂಡಾಗುವುದಿದೆ.ಇನ್ನು ಇಂತಹ ಅನಾಹುತದ ನಂತರ ಕೇಳಬೇಕೇ?ಈಗ ಜಪಾನ್ ಸರಕಾರ ಇವನ್ನು ದುರಸ್ತಿ ಮಾಡುವತ್ತಲೂ ಗಮನಹರಿಸ ಬೇಕಿದೆ.ಕೇಬಲ್ಗಳ ಕಡಿತದಿಂದ ಜಪಾನಿನ ಟೆಲೆಕಾಂಕಂಪೆನಿಗಳ ಸೇವೆಯಲ್ಲಿ ವ್ಯಾಪಕ ವ್ಯತ್ಯಯ ಕಂಡು ಬಂದಿದೆ.ಕೇಬಲುಗಳನ್ನು ದುರಸ್ಥಿ ಪಡಿಸಲು ರೊಬೋಟುಗಳನ್ನೂ ಬಳಸಬೇಕಾಗುತ್ತದೆ.ಎರಡೂವರೆ ಕಿಲೋಮೀಟರ್ ಆಳಕ್ಕಿಳಿದು,ನೀರಲ್ಲಿ ಕೇಬಲುಗಳನ್ನು ಹುಡುಕಿ,ಜೋಡಿಸುವುದರಲ್ಲಿ ಯಾಂತ್ರಿಕ ಸಹಾಯ ಇಲ್ಲವಾದರೆ ನಡೆದೀತು ಹೇಗೆ?
-------------------------------------------
ಇಲೆಕ್ಟ್ರಾನಿಕ್ ಭಾಗಗಳು ಅಲಭ್ಯ
ಜಪಾನಿನ ಭೂಕಂಪದಿಂದ,ಅಲ್ಲಿನ ಕಂಪೆನಿಗಳು ಕಾರ್ಯಸ್ಥಗಿತಗೊಳಿಸ ಬೇಕಾಗಿ ಬಂದಿವೆ.ಇದರಿಂದ ವಿಶ್ವದ ಹಲವು ಕಂಪೆನಿಗಳು ಬಾಧಿತವಾಗಲಿವೆ.ಆಪಲ್ ಕಂಪೆನಿಯೂ ಅವುಗಳಲ್ಲೊಂದು.ಆಪಲ್ ಕಂಪೆನಿಯ ಐಪ್ಯಾಡ್ ಮತ್ತು ಐಫೋನಿನಲ್ಲಿ ಕಂಪಾಸ್ ಅಂತಹ ಯಂತ್ರಾಂಶ ಭಾಗವನ್ನು ಜಪಾನೀ ಕಂಪೆನಿಗಳು ಪೂರೈಸುತ್ತಿವೆ.ಅವುಗಳ ಪೂರೈಕೆ ಬಾಧಿತವಾದರೆ,ಐಫೋನ್ ತಯಾರಿಯೂ ನಿಲ್ಲ ಬೇಕಾದೀತು.ಈ ಜಾಗತಿಕ ಮಾರುಕಟ್ಟೆಯಲ್ಲಿ ವಿಶ್ವದ ಒಂದು ಮೂಲೆಯ ವಿದ್ಯಮಾನ,ಮತ್ತೊಂದು ಮೂಲೆಯ ಕಂಪೆನಿಯ ಮೇಲೂ ಆಗಬಹುದೆನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕೇ?ಇದನ್ನು ತಡೆಯಲು ಹಲವು ಕಂಪೆನಿಗಳ ಭಾಗಗಳನ್ನು ಬಳಸುವ ಕಂಪೆನಿಗಳು,ಇಂತಹ ಸಮಸ್ಯೆಯನ್ನು ಹೆಚ್ಚಿನ ತಾಪತ್ರಯವಿಲ್ಲದೇ ಕಳೆಯಬಲ್ಲುವು.ಹಿಟಾಚಿ,ಟೊಷಿಬಾ ಕಂಪೆನಿಗಳೂ ಸದ್ಯಕ್ಕೆ ಕಾರ್ಯ ಸ್ಥಗಿತಗೊಳಿಸಿದ ಕಂಪೆನಿಗಳಲ್ಲಿ ಸೇರಿವೆ.ಇದರಿಂದ ಎಲ್ಸಿಡಿ ತೆರೆ,ಕಂಪ್ಯೂಟರ್ ಬಿಡಿಭಾಗಗಳ ಅಭಾವ ಸಂಭವನೀಯ.ನಿಸಾನ್,ಜನರಲ್ ಮೋಟರ್ಸ್ ಮತ್ತು ರಿನಾಲ್ಟ್ ಮುಂತಾದ ಅಟೊಮೊಬೈಲ್ ಕಂಪೆನಿಗಳೂ ಒಂದಿಲ್ಲ ಒಂದು ರೀತಿಯಿಂದ ಬಾಧಿತವಾಗುವ ಸಾಧ್ಯತೆಯಿದೆ.
----------------------------------
ಬ್ರೌಸರುಗಳ ನಡುವೆ ಮೇಲಾಟ
ಮೊಜಿಲ್ಲಾ ಫೈರ್ಫಾಕ್ಸ್,ಕ್ರೋಮ್,ಇಂಟರ್ನೆಟ್ ಎಕ್ಸ್ಪ್ಲೋರರ್,ಸಫಾರಿ ಬ್ರೌಸರುಗಳು ಕಂಪ್ಯೂಟರಿನ ಅತಿ ಮುಖ್ಯ ತಂತ್ರಾಂಶವಾಗಿ ಬಿಟ್ಟಿವೆ.ಈ ಸಾಫ್ಟ್ವೇರುಗಳು ಆಮೂಲಾಗ್ರವಾಗಿ ಬದಲಾಗಿರುವುದು,ಕಂಪ್ಯೂಟರ್ ಬಳಕೆದಾರರ ಗಮನಕ್ಕೆ ಬಾರದೇ ಹೋಗದು.ಇಡೀ ತೆರೆಯನ್ನು ಸಂಪೂರ್ಣವಾಗಿ ಬಳಕೆ ಮಾಡುವತ್ತ ಹೆಚ್ಚಿನ ಬ್ರೌಸರುಗಳು ಗಮನಹರಿಸಿವೆ.ವ್ಯಕ್ತಿಯ ಕಂಪ್ಯೂಟರ್ ಬಳಕೆಯ ಬಗ್ಗೆ ಮಾಹಿತಿ ಒಟ್ಟು ಮಾಡುವ ಜಾಹೀರಾತುದಾರ ಕಂಪೆನಿಗಳನ್ನು ನಿಯಂತ್ರಿಸುವ ಸವಲತ್ತನ್ನು ಬ್ರೌಸರುಗಳೆಲ್ಲಾ ನೀಡಲಾರಂಭಿಸಿರುವುದು ವಿಶೇಷ.ನನ್ನನ್ನು ಹಿಂಬಾಲಿಸದಿರಿ ಎಂದು ಬಳಕೆದಾರನು ಜಾಹೀರಾತುದಾರ ಕಂಪೆನಿಗಳನ್ನು ತಡೆಯಲು ಬರುವ ವ್ಯವಸ್ಥೆಯನ್ನು ಬ್ರೌಸರುಗಳು ನೀಡಿವೆ.ಮೊಬೈಲ್ ಮೂಲಕವೂ ಜನರು ಅಂತರ್ಜಾಲ ಜಾಲಾಡುವುದು,ಸಾಮಾನ್ಯವಾಗಿರುವ ಈ ದಿನಗಳಲ್ಲಿ ಕ್ರೋಂ ಬ್ರೌಸರ್,ಯಾವುದೇ ತಂತ್ರಾಂಶವನ್ನು ಅನುಸ್ಥಾಪಿಸುವಾಗ,ಅದರ ಆಂಡ್ರಾಯಿಡ್ ಆವೃತ್ತಿಯನ್ನು ಮೊಬೈಲಿಗಾಗಿ ಅನುಸ್ಥಾಪಿಸಿ,ಅದರ ಕೊಂಡಿಯನ್ನು ಮೊಬೈಲಿಗೆ ಕಳುಹಿಸಿ,ಡೆಸ್ಕ್ಟಾಪಿನಲ್ಲಿ ಕಂಡದ್ದೆಲ್ಲವನ್ನೂ ಮೊಬೈಲಿನಲ್ಲೂ ಕಾಣುವಂತೆ ನಿಗದಿಪಡಿಸಬಹುದು.ಫೈರ್ಫಾಕ್ಸ್ ಬಳಕೆದಾರರು ತಮ್ಮ ಡೆಸ್ಕ್ಟಾಪ್ ಅಥವಾ ಲ್ಯಾಪ್ಟಾಪಿನಲ್ಲಿಕಂಡದ್ದನ್ನು ಮೊಬೈಲಿನಲ್ಲೂ ಕಾಣಿಸುವಂತೆ ಮಾಡುವ ಆಡಾನ್ ತಂತ್ರಾಂಶ ಬಳಸಬಹುದು.
-------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಉಡುಪಿ ಬ್ರಹ್ಮಗಿರಿಯ ಡಾ.ಶ್ರೀನಿವಾಸ್ ರಾವ್,ಪ್ರೊಫೆಸರ್,ನಿಟ್ಟೆ.
*ಆಂಡ್ರಾಯಿಡ್ ಫೋನ್ಗಳಲ್ಲಿ ಕನ್ನಡ ಅಂತರ್ಜಾಲ ತಾಣಗಳನ್ನು ಜಾಲಾಡಲು ಬಳಸಬಹುದಾದ ಬ್ರೌಸರ್ ಯಾವುದು?
*ನೋವೆಲ್ ಕಂಪೆನಿಯ ಲೀನಕ್ಸ್ ವಿತರಣೆ ಯಾವುದು?
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ,ವಿಷಯ:NS23 ನಮೂದಿಸಿ.)
ಕಳೆದ ವಾರದ ಸರಿಯುತ್ತರಗಳು:
*ಕಂಪ್ಯೂಟರ್ ಕೀಬೋರ್ಡ್,ಮೌಸ್ ತಪ್ಪು ಬಳಕೆಯಿಂದ ಬರುವ ಆರೋಗ್ಯ ಸಮಸ್ಯೆ RSI ಅಥವಾ ಕಾರ್ಪಲ್ ಟನಲ್ ಸಿಂಡ್ರೊಂ.
*ಭಾರತೀಯ ಭಾಷೆಗಳನ್ನು ಬಳಸಲು ಲೀನಕ್ಸ್ ಆಪರೇಟಿಂಗ್ ವ್ಯವಸ್ಥೆಯಲ್ಲಿ ಬಳಸಬಹುದಾದ ವ್ಯವಸ್ಥೆ ಸ್ಕಿಮ್ ಅಥವಾ ಐಬಸ್. ಬಹುಮಾನ ಗೆದ್ದವರು ಶ್ರೀಕಾಂತ್ ಮಿಶ್ರಿಕೋಟಿ,ಮುಂಬೈ. ಅಭಿನಂದನೆಗಳು.
-----------------------------------------
ಮಿಶ್ರಿಕೋಟಿಯವರ ಸಾಹಿತ್ಯ ಕೃಷಿ
(photo:hpn)
ಸಂಪದ ತಾಣದ ಬ್ಲಾಗ್ http://sampada.net/blog/shreekant_mishrikoti_0 ಶ್ರೀಕಾಂತರ ಮಿಶ್ರಿಕೋಟಿಯವರದ್ದು.ತಾನು ಓದಿದ ವಿಷಯಗಳು,ಪುಸ್ತಕಗಳು ಮತ್ತು ಇತರರ ಬ್ಲಾಗುಗಳನ್ನು ಸಂಪದ ಸಮುದಾಯದವರಿಗೂ ಪರಿಚಯಿಸುವ ಕೆಲಸವನ್ನವರು ಆಸ್ಥೆಯಿಂದ ಮಾಡುತ್ತಿದ್ದಾರೆ,ಬ್ಯಾಂಕ್ ಉದ್ಯೋಗಿಯಾಗಿ,ಕಂಪ್ಯೂಟರೀಕರಣದಲ್ಲಿ ತೊಡಗಿಸಿಕೊಂಡಿರುವ ಶ್ರೀಕಾಂತ್ ಮುಂಬೈವಾಸಿ.ಪುರಂದರದಾಸರ ಕೀರ್ತನೆಗಳನ್ನು http://haridasa.sampada.netಗೆ ಸೇರಿಸುವುದರಲ್ಲಿ ಗಂಭೀರವಾಗಿ ತೊಡಗಿ ಕೊಂಡವರಲ್ಲೋರ್ವರು.
-----------------------------------------------------
ಟ್ವಿಟರ್ ಚಿಲಿಪಿಲಿ
*ಭಾರತದ ಭ್ರಷ್ಟಾಚಾರದ ವಿಶ್ವರೂಪ ತಿಳಿದುಕೊಳ್ಳಲು http://www.truthaboutindiacorruption.org/ ನೋಡಿ.
*ಹೋಲಿ ಆಡುವ ಪೋಲಿಗಳ ಬಗ್ಗೆ ಗಮನವಿರಲಿ.
*ಭೂಕಂಪ,ಚಂಡಮಾರುತ,ನೆರೆ ಇತ್ಯಾದಿಗಳೇ,ಇನ್ನೂ 2012 ಬಂದಿಲ್ಲ,ನಿಮ್ಮ ಕ್ಯಾಲೆಂಡರ್ ನೋಡಿಕೊಳ್ಳಿ...
*ಚಿತ್ರ ನೋಡಲು ಚಿತ್ರಮಂದಿರಕ್ಕೆ ಹೋದವ,ಅಲ್ಲಿದ್ದ ಚಿತ್ರದ "ಹೌಸ್ಫುಲ್" ಪೋಸ್ಟರ್ ನೋಡಿ ವಾಪಸ್ಸು ಬಂದ!
Udayavani
*ಅಶೋಕ್ಕುಮಾರ್ ಎ