ಭೂಗರ್ಭ ಯಾತ್ರೆ

ಭೂಗರ್ಭ ಯಾತ್ರೆ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಜೂಲ್ಸ್ ವೆರ್ನ್, ಕನ್ನಡಕ್ಕೆ: ಎಂ. ಗೋಪಾಲಕೃಷ್ಣ ಅಡಿಗ
ಪ್ರಕಾಶಕರು
ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಜೆ ಸಿ ರಸ್ತೆ, ಬೆಂಗಳೂರು ೫೬೦೦೦೨
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ: ೨೦೦೭

ಜೂಲ್ಸ್ ವೆರ್ನ್, ಫ್ರೆಂಚ್ ಭಾಷೆಯಲ್ಲಿ ವೈಜ್ಞಾನಿಕ ಲೇಖನಗಳನ್ನು ಬರೆಯುವವರಲ್ಲಿ ಪ್ರಮುಖರು. ಇವರ ’ಎ ಜರ್ನಿ ಟು ದ ಸೆಂಟರ್ ಆಫ್ ದ ಅರ್ತ್’ ಎಂಬ ರೋಚಕವಾದ ಕೃತಿಯ ಸಂಗ್ರಹಾನುವಾಗಿದೆ ಈ ಕೃತಿ. ಇದನ್ನು ಎಂ. ಗೋಪಾಲಕೃಷ್ಣ ಅಡಿಗರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕೃತಿ ಮೊದಲು ಪ್ರಕಟವಾದದ್ದು ೧೯೭೯ರಲ್ಲಿ. ಆಗ ಅದನ್ನು ಪ್ರಕಾಶಿಸಿದ್ದು ಬೆಂಗಳೂರಿನ ಜಗತ್ ಸಾಹಿತ್ಯ ಮಾಲೆ ಇವರು. ಈಗ ಕನ್ನಡ ಅನುವಾದ ಸಾಹಿತ್ಯ ಅಕಾಡೆಮಿಯವರು ಮರು ಮುದ್ರಣ ಮಾಡಿದ್ದಾರೆ.

ಈ ಬಗ್ಗೆ ಈ ಮಾಲಿಕೆಯ ಪ್ರಧಾನ ಸಂಪಾದಕರಾದ ಪ್ರಧಾನ್ ಗುರುದತ್ತ ಇವರು ಈ ಕೃತಿಯ ಬಗ್ಗೆ ತಮ್ಮ ಮುನ್ನುಡಿಯಲ್ಲಿ ಬರೆಯುತ್ತಾ “ ವೈಜ್ಞಾನಿಕ ಕಥೆ ಕಾದಂಬರಿಗಳನ್ನು ಬರೆದವರಲ್ಲಿ ಮುಖ್ಯರೆಂದು ಪರಿಗಣಿತರಾಗಿರುವ ಜೂಲ್ಸ್ ವರ್ನ್ (೧೮೨೮-೧೯೦೫) ಫ್ರೆಂಚ್ ಲೇಖಕರು. ಅವರ ಈ ಕೃತಿ ಜಗತ್ತಿನ ಹಲವಾರು ಭಾಷೆಗಳಿಗೆ ಅನುವಾದಗೊಂಡಿದೆ. ಈ ಕೃತಿಯ ಮಹತ್ವ ಮತ್ತು ಜನಪ್ರಿಯತೆಯನ್ನು ಅರಿತಿದ್ದ ಕನ್ನಡದ ನವ್ಯಪಂಥದ ಪ್ರವರ್ತಕರಲ್ಲಿ ಒಬ್ಬರೂ, ಖ್ಯಾತ ಚಿಂತಕರೂ ಆದ ಪ್ರೊ. ಗೋಪಾಲಕೃಷ್ಣ ಅಡಿಗರು ಈ ಕೃತಿಯ ಸಂಗ್ರಹಾನುವಾದವನ್ನು ಸಿದ್ಧಪಡಿಸಿದ್ದು, ಅದರ ಪರಿಷ್ಕೃತ ಆವೃತ್ತಿಯನ್ನೂ ಪ್ರಕಟಿಸಿದ್ದರು. ಈ ಕೃತಿಯನ್ನು ಸುವರ್ಣ ಕರ್ನಾಟಕ ಮಾಲೆಯಲ್ಲಿ ಪುನರ್ ಮುದ್ರಿಸಲು ಅವಕಾಶ ಮಾಡಿಕೊಟ್ಟಿರುವ ಶ್ರೀ ಗೋಪಾಲಕೃಷ್ಣ ಅಡಿಗರ ಬಂಧು ವರ್ಗದವರಿಗೆ ವಂದನೆಗಳು ಸಲ್ಲುತ್ತವೆ. ವೈಜ್ಞಾನಿಕ ಕಥೆ-ಕಾದಂಬರಿಗಳ ಕ್ಷೇತ್ರ ಇನ್ನೂ ಸಮೃದ್ಧವಾಗಿ ಬೆಳೆಯದೆ ಇರುವ ಹಿನ್ನಲೆಯಲ್ಲಿ ‘ಭೂಗರ್ಭ ಯಾತ್ರೆ'ಯಂಥ ಪುಸ್ತಕಗಳು ವಿಶೇಷ ಮಹತ್ವವನ್ನು ಪಡೆದುಕೊಳ್ಳುತ್ತವೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪುಸ್ತಕದಲ್ಲಿ ವಿಜ್ಞಾನಿಯೊಬ್ಬ ತನಗೆ ಸಿಕ್ಕಿದ ಒಂದು ಸಣ್ಣ ಸೂಚನೆಯ ಮೇರೆಗೆ ಭೂಗರ್ಭದತ್ತ ಯಾತ್ರೆಮಾಡಲು ಜೊತೆಗಾರರೊಡನೆ ಹೊರಡುತ್ತಾನೆ. ಎಲ್ಲಾ ಕಷ್ಟಗಳನ್ನೂ ಸಹಿಸಿಕೊಂಡು ಅಗ್ನಿಪರ್ವತದ ಗುಂಡಿಯೊಳಕ್ಕೆ ಇಳಿದು ಅವರೆಲ್ಲರೂ ಹೋಗುತ್ತಾರೆ. ಆದರೂ ಅವರು ನೈಸರ್ಗಿಕ ಕಾರಣಗಳಿಂದಾಗಿ ಭೂ ಗರ್ಭವನ್ನು ತಲುಪಲು ಸಾಧ್ಯವಾಗದೆ  ಊರಿಗೆ ಹಿಂತಿರುಗುತ್ತಾರೆ. ಹಿಂದಕ್ಕೆ ಬಂದ ವಿಜ್ಞಾನಿ ಅತಿಯಾದ ಕೀರ್ತಿಯನ್ನು ಗಳಿಸುತ್ತಾನೆ. ಈ ಸಂಗತಿಗಳ ಕುರಿತು ಲೇಖಕರು ವಿವರವಾದ ಮಾಹಿತಿಯನ್ನು ಈ ಕೃತಿಯಲ್ಲಿ ನೀಡಿದ್ದಾರೆ. ಸುಮಾರು ೧೨೦ ಪುಟಗಳ ಈ ರೋಚಕ ಕಾದಂಬರಿಯನ್ನು ಸರಾಗವಾಗಿ ಓದಿ ಮುಗಿಸಬಹುದಾಗಿದೆ.