ಭೂಮಿಗೆ ಬಂದಿದೆ ಗ್ರಹಚಾರ (ಭಾಗ ೨)

ಮನುಷ್ಯ ಇತ್ತೀಚೆಗೆ ನಡೆಸುತ್ತಿರುವ ಪರಮಾಣು ಪ್ರಯೋಗಗಳು, ಅಣುಸ್ಥಾವರಗಳ ಸ್ಫೋಟಗಳು, ಭೌತವಿಜ್ಞಾನದಲ್ಲಿ ನ್ಯೂಟ್ರಿನೊ ಕಣಗಳಂತಹ ಭಾರಿ ಪ್ರಯೋಗಗಳು, ಬಳಸುತ್ತಿರುವ ಜೈವಿಕ ತಂತ್ರಜ್ಞಾನ, ಅಪಾಯಕಾರಿ ರಾಸಾಯನಿಕಗಳು ಇಡೀ ಜೀವಸಂಕುಲವನ್ನೇ ವಿನಾಶದ ಅಂಚಿಗೆ ನೂಕುತ್ತಿವೆ.
ಮನುಷ್ಯನ ನಿರ್ಮಾಣಗಳಾದ ದೊಡ್ಡ ಕಟ್ಟಡಗಳು, ದೊಡ್ಡ ಕಾರ್ಖಾನೆಗಳು, ಕಬ್ಬಿಣದ ಗೋಪುರಗಳು, ದೊಡ್ಡ ಅಣೆಕಟ್ಟುಗಳು, ಕಾಲುವೆಗಳು, ಬೃಹತ್ ಸಾರಿಗೆ ರಸ್ತೆಗಳು, ಭಾರಿ ಹಡಗುಗಳು, ದೊಡ್ಡ ಗಣಿಗಳು, ಅಣುಸ್ಥಾವರಗಳು, ಕಲ್ಲಿನ ಕಟ್ಟಡಗಳು, ಸೇತುವೆಗಳು, ದೊಡ್ಡ ಮಾಲ್ ಗಳು, ಅಪಾಯಕಾರಿ ಅಣ್ವಸ್ತ್ರಗಳು ಭೂಮಿಯ ಮೇಲೆ ತುಂಬಿತುಳುಕುತ್ತಿವೆ. ನಿಮಗೆ ಗೊತ್ತಿರಲಿ, ಮನುಷ್ಯ ಸೃಷ್ಟಿಸುತ್ತಿರುವ ಈ ವಸ್ತುಗಳ ಆಯಸ್ಸು ಕೇವಲ ೧೦೦೦ ವರ್ಷಕ್ಕಿಂತಲೂ ಕಮ್ಮಿ. ನಂತರ ಈ ಎಲ್ಲಾ ವಸ್ತುಗಳು ಅನುಪಯುಕ್ತವಾಗಿ ಭೂಮಿಯ ಮೇಲೆಲ್ಲಾ ಪಳೆಯುಳಿಕೆಗಳಾಗಿ ಬಿಡುತ್ತವೆ. ಬಹುಶಃ ಸಾವಿರ ವರ್ಷಗಳ ನಂತರ ಭೂಮಿಯ ಮೇಲೆ ತಾನೆಲ್ಲಿ ನಿಲ್ಲಬೇಕು ಎಂಬ ಪ್ರಶ್ನೆ ಎದುರಾಗುವುದಂತೂ ಸತ್ಯ! ಇನ್ನು ಕೇವಲ ೫೦ ದಶಲಕ್ಷ ವರ್ಷಗಳಲ್ಲಿ (೧ ದಶಲಕ್ಷ ವರ್ಷಕ್ಕೆ ೧೦ ಲಕ್ಷ ವರ್ಷಗಳು) ಈ ಭೂಮಿಯ ಮೇಲೆ ಜೀವಸಂಕುಲ ನಿರ್ನಾಮವಾಗಲಿದೆ.
ಆಕಾಶಕಾಯಗಳ ಅನಿರ್ದಿಷ್ಟ ಘಟನೆಗಳು: ಇನ್ನು ಕೆಲವೇ ದಶಲಕ್ಷ ವರ್ಷಗಳಲ್ಲಿ ಆಕಾಶ ಗೋಳದಲ್ಲಿ ಅನೇಕ ಆಶ್ಚರ್ಯಕರ ಘಟನೆಗಳು ನಡೆಯಲಿದ್ದು, ಭೂ ಗ್ರಹಕ್ಕೆ ಅಪಾಯವನ್ನು ತಂದೊಡ್ಡಲಿವೆ. ೫ ರಿಂದ ೧೦ ಕಿಲೋಮೀಟರ್ ವ್ಯಾಸವುಳ್ಳ ಕ್ಷುದ್ರ ಗ್ರಹಗಳು, ಇಲ್ಲವೇ ಧೂಮಕೇತುಗಳು ಭೂಮಿಗೆ ಅಪ್ಪಳಿಸುವ ಸಾಧ್ಯತೆಗಳಿವೆ. ಅಲ್ಲದೆ ಭೂಮಿಯ ಸುತ್ತಲಿನ ಸುಮಾರು. ೧೦೦ ಜ್ಯೋತಿರ್ವರ್ಷಗಳ ( ಬೆಳಕು ೧ ವರ್ಷ ಸತತವಾಗಿ ಚಲಿಸಿ ಕ್ರಮಿಸುವ ದೂರವನ್ನು ಒಂದು ಜ್ಯೋತಿರ್ವರ್ಷ ಎನ್ನುತ್ತಾರೆ. ಒಂದು ಜ್ಯೋತಿವರ್ಷ = ೩೦,೦೦,೦೦೬೦,೬೦,೨೪,೩೬೫ ಕಿಲೋಮೀಟರ್ ಗಳು) ಪರಿಮಿತಿಯಲ್ಲಿ ನಕ್ಷತ್ರಗಳ 'ಸೂಪರ್ನೋವಾ' ಮಹಾಸ್ಪೋಟಗಳೇ ಸಂಭವಿಸಬಹುದು. ಆಗ ಇಡೀ ಸೌರಮಂಡಲವೇ ಅಪಾಯಕ್ಕೊಳಗಾಗುತ್ತದೆ.
ಭೂಮಿಯ ತಾಪಮಾನ: ಇದೇ ರೀತಿ ಭೂಗೋಳದ ತಾಪಮಾನ ಹೆಚ್ಚುತ್ತಾ ಹೋದರೆ, ಧ್ರುವ ಪ್ರದೇಶಗಳ ಹಿಮ ಬಂಡೆಗಳು ಸಂಪೂರ್ಣ ಕರಗಿ ಭೂಮಿಯ ಬಹುಭಾಗ ನೀರಿನಲ್ಲಿ ಮುಳುಗಲಿದೆ. ಅಂಟಾರ್ಟಿಕಾ ಒಂದೇ ಸಂಪೂರ್ಣವಾಗಿ ಕರಗಿದರೆ ಸಮುದ್ರದ ನೀರಿನ ಮಟ್ಟ ೬೨ ಮೀಟರ್ ಗಳಷ್ಟು ಹೆಚ್ಚಲಿದೆ. ಇದಲ್ಲದೆ ಭೂಮಿ ಅನು ಸುತ್ತುವ ಅಕ್ಷದ ನೇರವನ್ನು ೪೦ ಸಾವಿರ ವರ್ಷಗಳಲ್ಲಿ ೩.೬ ಡಿಗ್ರಿಗಳಷ್ಟು ಹೆಚ್ಚಿಸಿಕೊಳ್ಳಲಿದೆ. ಇದರಿಂದಾಗಿ ಭೂಮಿ ಇನ್ನು ೪೫ ಲಕ್ಷ ವರ್ಷಗಳಲ್ಲಿ ೯೦ ಡಿಗ್ರಿಗಳಷ್ಟು ಸಂಪೂರ್ಣವಾಗಿ ವಾಲಿ ಬಿಡಬಹುದು ಅಂದರೆ ನೆಲದ ಮೇಲೆ ಚೆಂಡು ಉರುಳಿದಂತೆ ಭೂಮಿ ಚಲಿಸಲಿದೆ. ಇದರಿಂದ ಭೂಮಿಯ ಕಕ್ಷಾಪಥದಲ್ಲಿ ಏರುಪೇರುಗಳಾಗಿ ಭೂಮಿಗೆ ಅಪಾಯ ಕಟ್ಟಿಟ್ಟ ಬುತ್ತಿ.
ಸೂರ್ಯನ ದೀಪ್ತತೆ (Luminosity): ಸೂರ್ಯನ ದೀಪ್ತತೆ ಎಂದರೆ ಸೂರ್ಯ ಒಂದು ಸೆಕೆಂಡಿನಲ್ಲಿ ಹೊರಹೊಮ್ಮಿಸುವ ಶಕ್ತಿ ( ಈಗಿನ ಸೂರ್ಯನ ದೀಪ್ತತೆ ೩.೯ ೧೦ ರ ಘಾತ ೨೬ ವ್ಯಾಟ್ ಗಳು). ಇದು ಮುಂದಿನ ೪೦ ಲಕ್ಷ ವರ್ಷಗಳಲ್ಲಿ ಅನೇಕಪಟ್ಟು ಹೆಚ್ಚಾಗಲಿದ್ದು, ಅನೇಕ ಅಪಾಯಕಾರಿ ಕಿರಣಗಳು, ಶಾಖ ಭೂಮಿಯನ್ನು ಅಪ್ಪಳಿಸಲಿವೆ. ಇದರಿಂದಾಗಿ ಭೂಮಿಯ ಮೇಲಿನ ಶಿಲಾ ಪದರಗಳು ಸಿಡಿದು ಪುಡಿಪುಡಿಯಾಗಲಿವೆ. ಇದರಿಂದ ಇಡೀ ಭೂ ಪದರ ಭೂ ಖನಿಜಗಳಿಂದ ತುಂಬಿ ಹೋಗಲಿದೆ. ಇದರಿಂದ ಭೂ ವಾತಾವರಣದ ಮೇಲಿನ ಇಂಗಾಲದ ಡೈಯಾಕ್ಸೈಡ್ ಪ್ರಮಾಣ ತುಂಬಾ ಕಡಿಮೆ ಆಗಲಿದೆ. ಇದರಿಂದ ಗಿಡ-ಮರಗಳಲ್ಲಿ ನಡೆಯುವ ದ್ಯುತಿ ಸಂಶ್ಲೇಷಣ ಕ್ರಿಯೆ ಕ್ರಮೇಣ ನಿಂತು ಹೋಗಲಿದೆ. ಇದರಿಂದ ಆಮ್ಲಜನಕದ ಉತ್ಪಾದನೆ ನಿಂತು ಇಡೀ ಭೂಮಂಡಲ ಭಯಾನಕ ಬೆಂಗಾಡು. ಒಂದು ನಿರ್ಜೀವ ಚೆಂಡು! ನಂತರ ಸೂರ್ಯನ ದೀಪ್ತತೆ ಇನ್ನೂ ಹೆಚ್ಚಾದಾಗ ಉಷ್ಣತೆಯ ಏರಿಕೆಯಿಂದಲೇ ಎಲ್ಲಾ ಸಾಗರಗಳ ನೀರೂ ಆವಿಯಾಗಿ ಭೂಮಿ ಬರಡು ಮರಳುಗಾಡಿನ ಗೋಳವಾಗಿ ಬಿಡುತ್ತದೆ. ಇದರಿಂದ ಭೂಮಿಯ ಒಳಭಾಗದಲ್ಲಿ ಅಯಸ್ಕಾಂತೀಯ ಚಲನೆಗಳು ನಿಂತು ಹೋಗಿಬಿಡಬಹುದು. ಇದರಿಂದ ಭೂಕಾಂತೀಯ ಪ್ರಭಾವಲಯ ನಾಶವಾಗಿ ಬಿಡುತ್ತದೆ. ಆಗ ಸೂರ್ಯನ ಅಪಾಯಕಾರಿ ವಿದ್ಯುತ್ ಕಣಗಳು ಭೂಮಿಯನ್ನು ಅಪ್ಪಳಿಸಿ ಭೂ ವಾತಾವರಣವನ್ನು ಸಂಪೂರ್ಣ ನಾಶ ಮಾಡಿಬಿಡುತ್ತದೆ.
ಇನ್ನು ೭೫ ಲಕ್ಷ ವರ್ಷಗಳಲ್ಲಿ ನಮ್ಮ ಸೂರ್ಯ ಕೆಂಪು ದೈತ್ಯ ಸ್ಥಿತಿಯನ್ನು ತಲುಪಲಿದ್ದಾನೆ. ಅಂದರೆ ಈ ಸ್ಥಿತಿಯಲ್ಲಿ ಸೂರ್ಯ ತನ್ನ ಗಾತ್ರವನ್ನು ೨೦೦ ಪಟ್ಟು ಹೆಚ್ಚಿಸಿಕೊಳ್ಳಲಿದ್ದಾನೆ. ಅಂದರೆ ಈ ಸ್ಥಿತಿಯಲ್ಲಿ ಬುಧ, ಶುಕ್ರ ಮತ್ತು ಭೂಮಿ ಕೂಡ ಸೂರ್ಯನ ಪ್ರಭಾವಳಿಯಿಂದ ನಾಶವಾಗಿ ಬಿಡಬಹುದು!
(ಮುಗಿಯಿತು)
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ