ಭೂಮಿಗೆ ವಿಷ ಉಣಿಸುವುದು ಸಾಕು (ರೈತರೇ ಬದುಕಲು ಕಲಿಯಿರಿ-೧)

ಭೂಮಿಗೆ ವಿಷ ಉಣಿಸುವುದು ಸಾಕು (ರೈತರೇ ಬದುಕಲು ಕಲಿಯಿರಿ-೧)

ಬರಹ

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ಇದನ್ನೊಮ್ಮೆ ಓದಿ ಬಿಡಿ!

ಇಂಥದೊಂದು ಪುಸ್ತಕವನ್ನು ಬರೆಯುವ ಆಸೆ ಬಹಳ ವರ್ಷಗಳ ಹಿಂದಿನದು.

ಗದಗ ಜಿಲ್ಲೆ  ನರೇಗಲ್‌ನಲ್ಲಿ ಪಿಯುಸಿ ಓದುತ್ತಿದ್ದ ದಿನಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿದ್ದ ನನ್ನೂರು ಅಳವಂಡಿಯ ಹೊಲಗಳಿಗೆ ಸುಗ್ಗಿ ಕಾಲದಲ್ಲಿ ಹೋಗುತ್ತಿದ್ದೆ. ಹೊಲ ಒಣಗಿ ನಿಂತಿರುತ್ತಿತ್ತು. ಅಳಿದುಳಿದ ಬೆಳೆಯನ್ನು ಉಳಿಸಿ ಊರಿಗೆ ತರುವ ಕನಸು ಅವ್ವನದು.

ಆ ಕನಸು ಪೂರ್ತಿಯಾಗಿ ನನಸಾಗಲಿಲ್ಲ.

ಆ ದಿನಗಳಲ್ಲಿ, ಒಣ ಹೊಲದಲ್ಲಿ ನಿಂತು, ಹಚ್ಚಹಸುರಿನಿಂದ ಕೂಡಿದ್ದ ಬದುಗಳನ್ನು ನೋಡುತ್ತಿದ್ದ ನನ್ನ ಮನಸ್ಸಿನಲ್ಲಿ ಪ್ರಶ್ನೆಯೊಂದು ಮೊಳೆಯುತ್ತಿತ್ತು. ’ಇಷ್ಟೊಂದು ಗೊಬ್ಬರ ಹಾಕಿ, ಎಣ್ಣೆ (ಕೀಟನಾಶಕ) ಹೊಡೆದರೂ ಹೊಲ ಒಣಗಿದೆ. ಅದೇನೂ ಇಲ್ಲದೇ ಬದು ಸಮೃದ್ಧವಾಗಿದೆ, ಏಕೆ?

ಈ ಪ್ರಶ್ನೆ ಇಟ್ಟುಕೊಂಡು ಹೊರಟ ನನಗೆ ಉತ್ತರ ಸಿಕ್ಕಿದ್ದು ಹದಿನೈದು ವರ್ಷಗಳ ನಂತರ. ಈ ನಡುವೆ ಅನ್ನದ ಚೀಲ ತುಂಬಿಸಲು ಹಲವಾರು ಊರುಗಳನ್ನು ಸುತ್ತಿದೆ. ಹತ್ತಾರು ಬಗೆಯ ಕೆಲಸಗಳನ್ನು ಮಾಡಿದೆ. ಕೊನೆಗೆ ಪತ್ರಿಕೋದ್ಯಮಕ್ಕೆ ಬಂದಾಗ ಸಾವಯವ ಕೃಷಿ ಸಿದ್ಧಾಂತ ಗಮನ ಸೆಳೆಯಿತು. ಅದರ ಪ್ರಯೋಗಗಳ ಬೆನ್ನು ಬಿದ್ದಾಗ ದೊರಕಿದ ಅತ್ಯುತ್ತಮ ಉತ್ತರ ಸುಭಾಷ ಪಾಳೇಕರ ಅವರ ನೈಸರ್ಗಿಕ ಕೃಷಿ ಪದ್ಧತಿ. ಪ್ರಕೃತಿಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿ ಅನ್ನ ಬೆಳೆಯುವ ವಿಧಾನವೇ ಕೃಷಿಯಾದರೆ ಅದನ್ನು ಪ್ರಕೃತಿಗೆ ಹತ್ತಿರವಾಗಿ ಉಳಿಸಿಕೊಂಡು ಮಾಡುವ ವಿಧಾನವೇ ನೈಸರ್ಗಿಕ ಕೃಷಿ. ಇದು ಸಾವಯವ ಕೃಷಿಯ ಸುಧಾರಿತ ರೂಪ. ಇದನ್ನು ಈ ರೀತಿ ನೋಡಿದರೇ ಚೆನ್ನ.

ಇದರ ಹೊರತಾಗಿ ಹೇಳುವುದು ಬೇಕಾದಷ್ಟಿದೆ.

ಇವತ್ತು ನಮ್ಮ ರೈತ ತನ್ನ ಅಳಿವಿಗೆ ಸರ್ಕಾರದ ಮರ್ಜಿಯನ್ನೇ ಅವಲಂಬಿಸಿದ್ದಾನೆ. ಬಿತ್ತಲು ಅವನಿಗೆ ಸರ್ಕಾರವೇ ಬೀಜ ಕೊಡಬೇಕು, ಗೊಬ್ಬರ, ಕೀಟನಾಶಕ ನೀಡಬೇಕು. ಅಣೆಕಟ್ಟುಗಳ ಮೂಲಕ ಸರಿಯಾದ ಸಮಯಕ್ಕೆ ನೀರು ಬಿಡಬೇಕು. ಒಂದು ವೇಳೆ ಸರಿಯಾದ ಸಮಯದಲ್ಲಿ ಮಳೆ ಬಾರದಿದ್ದರೆ ಸರ್ಕಾರ ಮೋಡ ಬಿತ್ತನೆ ಮಾಡಿಸಿ ಮಳೆ ತರಬೇಕು. ಕಾಲಕಾಲಕ್ಕೆ ಆಕಾಶವಾಣಿ ಹಾಗೂ ಪತ್ರಿಕೆಗಳ ಮೂಲಕ ಸಲಹೆಗಳನ್ನು ನೀಡುತ್ತಿರಬೇಕು. ಬೆಳೆ ಕಟಾವಿಗೆ ಬಂದಾಗ ಬೆಂಬಲ ಬೆಲೆ ಘೋಷಿಸಬೇಕು. ಈ ಸರಣಿಯಲ್ಲಿ ಯಾವುದೇ ಒಂದು ಅಂಶ ಏರುಪೇರಾದರೂ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆಗ ಅವನ ಕುಟುಂಬಕ್ಕೆ ಸರ್ಕಾರವೇ ಪರಿಹಾರ ಕೊಡಬೇಕು. ಇಲ್ಲದಿದ್ದರೆ ಅದು ರೈತ ವಿರೋಧಿ ಸರ್ಕಾರವಾಗುತ್ತದೆ.

ರೈತರ ಈ ಪರಿಯ ಅವಲಂಬನೆಗೆ ಒಂದೆಡೆ ಸರ್ಕಾರ ಕಾರಣವಾಗಿದ್ದರೆ ಇನ್ನೊಂದೆಡೆ ನಮ್ಮ ರೈತರೂ ಅದಕ್ಕೆ ಮುಖ್ಯ ಕಾರಣಕರ್ತರು.

ಒಂದಾನೊಂದು ಕಾಲದಲ್ಲಿ ಸ್ವಾವಲಂಬಿಯಾಗಿಯಾಗಿದ್ದ ರೈತ ಇಂತಹ ವ್ಯವಸ್ಥೆಯಿಂದಾಗಿ ಪೂರ್ತಿ ಅವಲಂಬಿತನಾದ. ಬೀಜ, ಗೊಬ್ಬರ, ಕೀಟನಾಶಕಗಳ ವ್ಯಾಪಾರಿಯಿಂದ ಹಿಡಿದು ಲೇವಾದೇವಿಗಾರರು, ಧಾನ್ಯ ವರ್ತಕರು, ಕಮಿಷನ್ ಏಜೆಂಟರು, ಬ್ಯಾಂಕ್‌ಗಳು, ವಿದ್ಯುಚ್ಛಕ್ತಿ ಕಂಪನಿಗಳು, ಕೊನೆಗೆ ಸರ್ಕಾರ- ಹೀಗೆ ಪ್ರತಿಯೊಬ್ಬರ ಮೇಲೆಯೂ ಅವನ ಅವಲಂಬನೆ ಬೆಳೆಯಿತು. ಪ್ರತಿಯೊಂದು ಅವಲಂಬನೆಗೂ ಆತ ಸಮರ್ಥನೆಗಳನ್ನು ಹುಡುಕಿಕೊಂಡ. ತನ್ನೆಲ್ಲ ಸಮಸ್ಯೆಗಳನ್ನು ಒಮ್ಮೆಲೇ ನಿವಾರಿಸಿಕೊಳ್ಳಬೇಕು ಎಂಬ ಆತುರ ಬೆಳೆಸಿಕೊಂಡ. ಏನಾದರೂ ಸರಿ, ಭೂಮಿಗೆ ವಿಷ ಹಾಕಿದರೂ ಸರಿ, ಹೆಚ್ಚು ಬೆಳೆದು ಎಲ್ಲರ ಸಾಲಗಳನ್ನು ತೀರಿಸಬೇಕೆಂದು ಹೊರಟ.

ಅದರ ಪರಿಣಾಮ ಏನೆಂಬುದನ್ನು ನಾವೆಲ್ಲರೂ ಈಗ ಮನಗಾಣುತ್ತಿದ್ದೇವೆ.

ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದಾಗಿ ನಮ್ಮ ಭೂಮಿ ವಿಷಪೂರಿತವಾಗಿದೆ. ನಮ್ಮ ಬೆಳೆಗಳಲ್ಲಿ ಸತ್ವಕ್ಕಿಂತ ಹೆಚ್ಚು ವಿಷ ತುಂಬಿಕೊಂಡಿದೆ. ಇಂತಹ ಆಹಾರ ಸೇವಿಸಿ ನಮ್ಮ ಮಕ್ಕಳು ಬುದ್ಧಿಮಾಂದ್ಯವಾಗುತ್ತಿವೆ. ಎಳೆಯ ವಯಸ್ಸಿನಲ್ಲಿಯೇ ಡಯಾಬಿಟೀಸ್, ಹೃದಯರೋಗಗಳಿಗೆ ತುತ್ತಾಗತೊಡಗಿವೆ. ಅನಾರೋಗ್ಯ ಎಲ್ಲ ವಯಸ್ಸಿನವರನ್ನೂ ಕಾಡತೊಡಗಿದೆ. ಕಂಡು ಕೇಳರಿಯದ ಭೀಕರ ರೋಗಗಳು ಎಲ್ಲೆಡೆ ಆವರಿಸುತ್ತಿವೆ. ಒಂದೆಡೆ ಕಲುಷಿತಗೊಂಡ ಭೂಮಿ, ನೀರು ಹಾಗೂ ವಾಯು, ಇನ್ನೊಂದೆಡೆ ಅದಕ್ಕಿಂತ ಹೆಚ್ಚು ಕಲುಷಿತಗೊಂಡ ನಮ್ಮ ರೈತ-

ಇವಕ್ಕೆಲ್ಲ ಒಂದೇ ಉತ್ತರ ನೈಸರ್ಗಿಕ ಕೃಷಿ.

ಭೂಮಿ ತಾಯಿಗೆ ಮತ್ತೆ ಶರಣಾಗುವ ತತ್ವ ಇಲ್ಲಿದೆ. ಹಳೆಯದನ್ನೇ ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿ ಬಳಸಿಕೊಳ್ಳುವ ಜ್ಞಾನವಿದೆ. ರಾಸಾಯನಿಕಗಳನ್ನು ಸುರಿಯದೇ, ಪರಿಸರದಲ್ಲಿ ದೊರೆಯುವ ವಸ್ತುಗಳನ್ನೇ ಗೊಬ್ಬರ ಮತ್ತು ಕೀಟ ನಿಯಂತ್ರಕಗಳನ್ನಾಗಿ ಬಳಸುವ ಜಾಣ್ಮೆಯಿದೆ. ಭೂಮಿಯ ಮೇಲಿರುವ ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ ಹಾಗೂ ಪ್ರತಿಯೊಂದು ಜೀವಿಯೂ ಇನ್ನೊಂದರ ಬೆಳವಣಿಗೆಗೆ ಪೂರಕ ಎಂಬ ಪ್ರಕೃತಿ ನಿಯಮವನ್ನು ಮನ್ನಿಸುವ ವಿನಯವಿದೆ. ಇಂತಹ ಉದಾತ್ತ ಕಲ್ಪನೆಯನ್ನು ಹೊಂದಿರುವ ನೈಸರ್ಗಿಕ ಕೃಷಿ ನಮ್ಮೆಲ್ಲ ನೋವುಗಳಿಗೆ ಉತ್ತರವಾಗಲಿದೆ.

ಅಂತಹ ಸಾಧ್ಯತೆಗಳನ್ನು ನಿಮ್ಮ ಮುಂದೆ ತೆರೆದಿಡುವ ಸಣ್ಣ ಪ್ರಯತ್ನ ಈ ಲೇಖನಮಾಲೆ. ಇದನ್ನೋದಿದ ನಿಮ್ಮೆದೆಯಲ್ಲಿ ನಿಸರ್ಗ ಕುರಿತ ಪ್ರೀತಿ, ಗೌರವ, ಸುತ್ತಲಿನ ಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕಾದ ಮಹತ್ವದ ಅರಿವಾದರೆ ಪ್ರಯತ್ನ ಸಾರ್ಥಕ. ಅಂಥ ಕಾಳಜಿ ನಿಮ್ಮಲ್ಲಿ ಹುಟ್ಟಲಿ, ಎಲ್ಲರಿಗೂ ನೆಮ್ಮದಿಯ ಬದುಕು ದಕ್ಕಲಿ ಎಂಬ ಆಶಯದೊಂದಿಗೆ ಈ ಲೇಖನಮಾಲೆಯನ್ನು ಶುರು ಮಾಡುತ್ತಿದ್ದೇನೆ.

ಇದನ್ನೋದಿದ ನಿಮ್ಮೆದೆಯೊಳಗೆ ಒಬ್ಬ ನಿಜವಾದ ರೈತ ಕಣ್ತೆರೆಯುವಂತಾಗಲಿ!

(ಮುಂದುವರಿಯುವುದು)
- ಚಾಮರಾಜ ಸವಡಿ