ಭೂಮಿಯ ವರದಾನ: ಆಹಾರ, ಔಷಧಿ

ಭೂಮಿಯ ವರದಾನ: ಆಹಾರ, ಔಷಧಿ

"ಮಕ್ಕಳಿಗೆ ಫಾರೆಕ್ಸ್, ಸೆರೆಲಾಕ್ ಇಂತಹ ಕೃತಕ ಆಹಾರ ಯಾಕೆ ಕೊಡ್ತೀರಿ? ಈ ಭೂಮಿ ಅದಕ್ಕಿಂತ ಆರೋಗ್ಯದಾಯಕವಾದ ಆಹಾರಗಳನ್ನು ನಮಗೆ ಕೊಟ್ಟಿದೆ. ಉದಾಹರಣೆಗೆ ಗರಿಕೆ ಹುಲ್ಲು ಮಕ್ಕಳಿಗೆ ಒಳ್ಳೆಯ ಪೌಷ್ಟಿಕ ಆಹಾರ. ಆ ಕೃತಕ ಆಹಾರ ಒಂದು ಕಪ್ ಕೊಡುವ ಬದಲಾಗಿ ಗರಿಕೆ ಹುಲ್ಲು ಅರ್ಧ ಚಮಚ ಕೊಟ್ಟರೆ ಸಾಕು. ಇದನ್ನು ಹುಡಿ ಮಾಡಿ, ಸ್ವಲ್ಪ ನೀರು ಸೇರಿಸಿ, ದಪ್ಪ ಪೇಸ್ಟ್ ಮಾಡಿ ದನದ ಹಾಲು ಸೇರಿಸಿ, ಮಕ್ಕಳಿಗೆ ಕುಡಿಸಿದರೆ, ಮಕ್ಕಳ ಬೆಳವಣಿಗೆಗೆ ಬಹಳ ಒಳ್ಳೆಯದು.”

ಹಾಗೆಯೇ ನಮಗೆ ಭೂಮಿಯ ಇನ್ನೊಂದು ವರದಾನ ಗಿಡಮರಬಳ್ಳಿಗಳಿಂದ ತಯಾರಿಸ ಬಹುದಾದ ಔಷಧಿಗಳು. ಉದಾಹರಣೆಗೆ, ಪಚರಂಗಿ (ಆಕಿರಿಕೆ) ಎಲೆ ಚರ್ಮಕ್ಕೆ ತಗಲಿದರೆ ಭಾರೀ ತುರಿಕೆ. ಈ ಕಾರಣಕ್ಕಾಗಿ ನಾವು ಅದರ ಹತ್ತಿರ ಸುಳಿಯೋದಿಲ್ಲ. ಆದರೆ ರಕ್ತಶುದ್ಧಿಗೆ ಅದರಷ್ಟು ಒಳ್ಳೆಯ ಔಷಧಿಸಸ್ಯ ಇನ್ನೊಂದಿಲ್ಲ. ಅದರ ವಿಶೇಷ ಗಮನಿಸಿದ್ದೀರಾ? ಅದರ ಎಲೆ ಅಂಗೈಗೆ ತಗಲಿದರೆ ತುರಿಕೆ ಇಲ್ಲ! ಆದ್ದರಿಂದ ಪಚರಂಗಿಯ ಎಲೆಗಳನ್ನು ಅಂಗೈಯಲ್ಲಿ ತಿಕ್ಕಿತಿಕ್ಕಿ ಅದರ “ತುರಿಕೆ" ತೆಗೆಯಿರಿ. ಅನಂತರ ಎರಡು ಬಟ್ಟಲು ತುಂಬ ಎಲೆಗಳನ್ನು ಸಣ್ಣಸಣ್ಣ ತುಂಡು ಮಾಡಿ. ಇದಕ್ಕೆ ತೆಂಗಿನಕಾಯಿ ತುರಿ, ಉಪ್ಪು, ಶುಂಠಿ ಬೆರಸಿ ರೊಟ್ಟಿ ಮಾಡಿ ತಿನ್ನಿ. ಹೀಗೆ ಮೂರು ದಿನ ಬೆಳಗ್ಗೆ ಹಸಿಹೊಟ್ಟೆಗೆ ತಿಂದರೆ, ಮೈಯಲ್ಲಿ "ಕುರ" ಏಳುವುದು ವಾಸಿ.”

ಇಂತಹ ಹತ್ತುಹಲವು ಉಪಯುಕ್ತ ಪ್ರಕೃತಿದತ್ತ ಪರಿಹಾರಗಳನ್ನು ಶ್ರೀಮತಿ ಭಾರತಿ ಭಟ್ ಹೇಳುತ್ತಲೇ ಇದ್ದರು. ಸಂದರ್ಭ: ಮಂಗಳೂರು ಆಕಾಶವಾಣಿಯಲ್ಲಿ “ನಿಸರ್ಗದತ್ತ ಆಹಾರ” ಮಾಹಿತಿ ಮಾಲಿಕೆಗಾಗಿ ೧೨ ಡಿಸೆಂಬರ್ ೨೦೦೫ರಂದು  ಧ್ವನಿಮುದ್ರಣ. ತನ್ನೆದುರು ವೃತ್ತಾಕಾರವಾಗಿ ಕುಳಿತಿದ್ದ ಅಂಗನವಾಡಿಯ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತೆಯರು ಕೇಳಿದ ಪ್ರಶ್ನೆಗಳಿಗೆ ಭಾರತಿ ಭಟ್ ಅವರಿಂದ ನಿರರ್ಗಳ ಉತ್ತರಗಳು.

ತನ್ನ ಚೀಲದಿಂದ ಒಂದೊಂದೇ ಸಸ್ಯ ಹೊರತೆಗೆದು ತೋರಿಸುತ್ತಾ, ಅದರ ಉಪಯೋಗಗಳನ್ನು ತಿಳಿಸುತ್ತಾ, ಭಾರತಿ ಭಟ್ ಆ ದಿನ ಹಲವಾರು ಸಸ್ಯಗಳನ್ನು ಪರಿಚಯಿಸಿದರು. ಅಲ್ಲಿಗೆ ಸಂವಾದಕ್ಕಾಗಿ ಬಂದಿದ್ದ ಕಾರ್ಯಕರ್ತೆಯರು ಯಾವುದೇ ಸಸ್ಯದ ಹೆಸರು ಹೇಳಿದರೂ ಸಾಕು; ಅದರಿಂದ ಏನು ಆಹಾರ ತಯಾರಿಸಬಹುದೆಂದು ಭಾರತಿ ಭಟ್ ಅವರ ಉತ್ತರ ಸಿದ್ಧ. ಚಕ್ರಮುನಿ (ವಿಟಮಿನ್ ಸೊಪ್ಪು) ಹಲವು ಜೀವಸತ್ವಗಳ ಆಕರ. ಅದರ ಚಟ್ನಿ ಮತ್ತು ತಂಬ್ಳಿ ರುಚಿರುಚಿ. ಕ್ರೋಟನ್ ಹರಿವೆಯಿಂದ ಪಲ್ಯ, ಸಾರು, ಸಾಂಬಾರು ಅಥವಾ ದೋಸೆ ಮಾಡಿ ತಿಂದು ನೋಡಿ ಎಂಬ ಸಲಹೆ. ನನ್ನರಿ (ಸುಗಂಧಿ ಬೇರು) ಸಿಪ್ಪೆ ತೆಗೆದು ಮಾಡಿದ ಕಷಾಯ ಕಾಫಿಗಿಂತಲೂ ರುಚಿ; ಇದು ರಕ್ತಚಲನೆ ವೃದ್ಧಿಗೆ ಮತ್ತು ನರದೌರ್ಬಲ್ಯ ಶಮನಕ್ಕೆ ಉತ್ತಮ ಔಷಧಿ ಎಂದು ಮಾಹಿತಿ.

ಸಸ್ಯಗಳಿಂದ ದೀರ್ಘಕಾಲ ಶೇಖರಿಸಿ ಇಡಬಹುದಾದ ಚಟ್ನಿ ಹುಡಿ ತಯಾರಿಸುವುದು ಹೇಗೆಂದು ಭಾರತಿ ಭಟ್ ವಿವರಿಸಿದರು. ಉದಾಹರಣೆಗೆ, ಐದಾರು ತಿಂಗಳು ಬಳಸಬಹುದಾದ ಕೇಪಳೆ ಎಲೆಗಳ ಚಟ್ನಿ ಹುಡಿ. ಎರಡು ಬಟ್ಟಲು ಕೇಪಳೆ ಎಲೆಗಳು (ಹೂ ಬೇಡ), ಹುರಿದ ಕೊಬ್ಬರಿ, ಒಂದು ಮುಷ್ಟಿ ಉದ್ದಿನ ಬೇಳೆ, ಒಂದು ಮುಷ್ಟು ಕರಿಬೇವಿನ ಎಲೆ, (ಅಡಿಕೆ ಗಾತ್ರದ) ಉಂಡೆಹುಳಿ ಮತ್ತು ಕೆತ್ತೆ ಹುಳಿ - ಇವನ್ನೆಲ್ಲ ಮಿಕ್ಸರಿನಲ್ಲಿ ಹಾಕಿ ಹುಡಿ ಮಾಡಿದರೆ ಚಟ್ನಿ ಹುಡಿ ತಯಾರು.

ಔಷಧಿಯಾಗಿ ಸಸ್ಯಗಳ ಬಳಕೆ ಬಗ್ಗೆ ಭಾರತಿ ಭಟ್ ಅಧಿಕಾರವಾಣಿಯಿಂದ ತಿಳಿಸಿದ ಮಾಹಿತಿ:
-ರಕ್ತದ ಕೆಂಪುಕಣಗಳ ವೃದ್ಧಿಗೆ ಕೆಂಪುಕೇಪಳೆ ಎಲೆಯ ಚಟ್ನಿ ಒಳ್ಳೆಯದು.
-ಬಾಯಿಹುಣ್ಣು ಗುಣವಾಗಲು ಕೇಪಳೆ ಅಥವಾ ಕುಂಟಲ ಅಥವಾ ಪೇರಳೆಯ ೨-೩ ಎಲೆ ಜಗಿದು, ರಸವನ್ನು ಐದು ನಿಮಿಷ ಬಾಯಲ್ಲಿಟ್ಟುಕೊಂಡು, ಮತ್ತೆ ಉಗುಳಬೇಕು.
-ತೊದಲುನುಡಿ ಸರಿಯಾಗಲು ಮತ್ತು ನೆನಪಿನ ಶಕ್ತಿ ವೃದ್ಧಿಗೆ ಒಂದೆಲಗ (ತಿಮರೆ) ಸೇವನೆ ಸಹಕಾರಿ. ಆದರೆ ಇದನ್ನು ಬೇರುಸಹಿತ ತಿನ್ನಬೇಕು.
-ಒಂದೆಲಗವನ್ನು ಜಜ್ಜಿ, ಮಜ್ಜಿಗೆ ಬೆರಸಿ ಕುಡಿಯುವುದು ಸಕ್ಕರೆಕಾಯಿಲೆ ನಿಯಂತ್ರಣಕ್ಕೆ ಸಹಕಾರಿ.
-ಕರಿಬೇವಿನ ಸೊಪ್ಪು ಕಫನಿವಾರಕ. ಇದರ ಎಲೆ ಒಣಗಿಸಿ, ಪುಡಿ ಮಾಡಿ, ನೀರಿಗೆ ಬೆರಸಿ ಕುಡಿಯಬೇಕು.
-ಶತಾವರಿ (ಶತಮೂಲಿ) ರಕ್ತನ್ಯೂನತೆ ಪರಿಹಾರಕ್ಕೆ ಒಳ್ಳೆಯದು. ಇದರ ಬೇರು ಹುಡಿ ಮಾಡಿ, ನೀರಿಗೆ ಬೆರಸಿ, ಒಂದು ವಾರ ಕುಡಿದರೆ ಸಾಕು.

“ಈಗ ಹಲವರಿಗೆ ಗೋಬಿಮಂಚೂರಿ ತಿನ್ನುವ ಚಪಲ. ವಿಷ ರಾಸಾಯನಿಕ ಸುರಿದ ಹೂಕೋಸಿನ ಗೋಬಿಮಂಚೂರಿ ತಿಂದರೆ ಆರೋಗ್ಯ ಹಾಳು. ಅದರ ಬದಲಾಗಿ, ಹಲಸಿನಕಾಯಿಯ ಸೊಳೆ ಅಥವಾ ಅಡಿಕೆಸಿಂಗಾರದ ಬುಡದ ತುಂಡುಗಳಿಂದ ಗೋಬಿಮಂಚೂರಿ ಮಾಡಿ ತಿಂದರೆ ನಾಲಗೆಗೂ ರುಚಿ, ಆರೋಗ್ಯಕ್ಕೂ ಹಿತ" ಎಂದ ಭಾರತಿ ಭಟ್ ಭೂಮಿಯ ವರದಾನಗಳ ಬಗ್ಗೆ ಮಾಹಿತಿ ನೀಡುತ್ತಾ, ನಮ್ಮೆಲ್ಲರನ್ನೂ ಎಚ್ಚರಿಸಿದ್ದರು. ಅವರ ಅನುಭವದ ಮಾತಿಗೆ ಕಿವಿಗೊಡೋಣ - ನಮ್ಮ ಆರೋಗ್ಯ ರಕ್ಷಣೆಗಾಗಿ.

ಫೋಟೋ ೧: ಕೆಂಪುಕೇಪಳ - ಹೂಗಳು, ಎಲೆಗಳು
ಫೋಟೋ ೨: ಚಕ್ರಮುನಿ ಎಲೆಗಳು (ವಿಟಮಿನ್ ಸೊಪ್ಪು)
ಫೋಟೋ ೩: ಒಂದೆಲಗ (ತಿಮರೆ) ಎಲೆಗಳು
ಫೋಟೋ ೪: ಕರಿಬೇವಿನ ಎಲೆಗಳು