ಭೂಮಿ ಖರೀದಿದಾರನಿಗೆ ಇರಬೇಕಾದ ಎಚ್ಚರ - ಪಿ.ಟಿ.ಸಿ.ಎಲ್ ಕಾಯ್ದೆ ಒಂದು ಚಿಂತನೆ
ಭೂಮಿ ಖರೀದಿದಾರನಿಗೆ ಇರಬೇಕಾದ ಎಚ್ಚರ - ಪಿ.ಟಿ.ಸಿ.ಎಲ್ ಕಾಯ್ದೆ ಒಂದು ಚಿಂತನೆ
ಕಾನೂನು ಮಹತ್ತರ ಉದ್ದೇಶಗಳಿಗೆ ಜಾರಿಯಾಗುತ್ತದೆ. ಅದರ ಸದ್ಬಳಕೆಯು ನಡೆಯಬೇಕಾದ್ದು, ಸರ್ಕಾರದ ಮತ್ತು ಅಧಿಕಾರಿಗಳ ಪ್ರಾಮಾಣಿಕತೆಯಿಂದ ಎಂಬುದು ಪ್ರಬುದ್ದರ ಅನಿಸಿಕೆಯಾಗಿರುವುದರಲ್ಲಿ ಸಂದೇಹವಿಲ್ಲ. ಆದರೆ ಅಧಿಕಾರಿಗಳು ಕಾನೂನು ಜಾರಿ ಮಾಡದೆ ಇದ್ದರೆ ಏನಂತೆ ಅದರ ಸದುಪಯೋಗ ನಾವು ಪಡೆಯೋಣ ಎಂದು ಅನೇಕ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಪರವಾಗಿ ಖಾಸಗಿ ಕಾನೂನು ಸಮರ ನಡೆಯುತ್ತಿರುವುದರ ಹಿನ್ನೆಲೆಯಲ್ಲಿ ಕಾನೂನು ಜಾರಿಗೆ ಸರ್ಕಾರಗಳು ಏಕೆ ತಾವಾಗೆ ಮುಂದಾಗಲಿಲ್ಲ ಎಂಬ ಚಿಂತನೆ ಮೂಡುತ್ತದೆ. ಇದಕ್ಕೆ ಅಧಿಕಾರಿಗಳು ತೋರಿರುವ ಅಸಡ್ಡೆ ಕುರುಡುತನವೋ ಅಥವ ಜಾಣ ಕುರುಡುತನವೋ ತಿಳಿಯದಾಗಿದೆ. ಆದರೆ ಅಂತಹ ಕಾನೂನು ಯಾವುದು? ನಮ್ಮಲ್ಲಿ ಅದರ ಬಗ್ಗೆ ಯಾವ ರೀತಿಯ ಪರಿಕಲ್ಪನೆ ಇದೆ ಎಂಬುದನ್ನು ಅರಿಯಲು ಮೊದಲಿಗೆ ಅದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಿರುತ್ತದೆ. ವಿಮರ್ಶಾತ್ಮಕ ಅರಿವು ಮೂಡಿಸಿಕೊಳ್ಳುವುದು ಅವಶ್ಯವಿರುತ್ತದೆ. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೆಲವು ಸ್ವತ್ತು ಪರಭಾರೆ ನಿಷೇದ ಕಾಯ್ದೆ ೧೯೭೮ (ಪಿ.ಟಿ.ಸಿ.ಎಲ್. ಕಾಯ್ದೆ) ವಿಚಾರವಾಗಿ ಅನೇಕ ಕೇಸುಗಳು ರಾಜ್ಯದಾದ್ಯಂತ ನೊಂದಾವಣಿಯಾಗಿ ಅನೇಕರು ಜಮೀನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಕೆಲವು ವಿಪರ್ಯಾಸವೇನೆಂದರೆ ಕೆಲವರು ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದು ಕೊಂಡಿರುತ್ತಾರೆ. ಅಲ್ಲಿಯೂ ಪಜೀತಿಗಳಾಗಿವೆ, ಇವೆಲ್ಲವುದಕ್ಕೆ ಮೂಲ ಕಾರಣ ಅನೇಕರಲ್ಲಿ ಈಗಲೂ ದ್ವಂದ್ವಗಳು, ಗೊಂದಲಕಾರಿ ತಪ್ಪು ಕಲ್ಪನೆಗಳು ಮತ್ತು ತಪ್ಪು ಅಂಶಗಳು ಇರುವುದು, ಕಾನೂನನ್ನು ಸರಿಯಾಗಿ ಅರ್ಥೈಸದೆ ಎಡವಿರುವುದು ಮುಖ್ಯವಾಗಿರುತ್ತದೆ. ಸದರಿ ಪಿ.ಟಿ.ಸಿ.ಎಲ್ ವ್ಯಾಪ್ತಿಗೆ ಯಾವ ಜಮೀನು ಬರುವುದು ಎಂದು ನಿರ್ದರಿಸಬೇಕಾದರೆ, ಸದರಿ ಜಮೀನಿನ ಮೂಲ ಮಾಲೀಕರು ಯಾರು ಎಂದು ಪರಿಶೀಲಿಸಬೇಕಿರುತ್ತದೆ. ಮೂಲದಲ್ಲಿ ಸದರಿ ಜಮೀನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಭೂ ಮಂಜೂರು ಆಗಿರುವ ಜಮೀನು ಆಗಿರಬೇಕಿರುತ್ತದೆ. ಸರ್ಕಾರದಿಂದ ಮಂಜೂರಾತಿಯಾಗಿಲ್ಲದ ಜಮೀನು ಪಿ.ಟಿ.ಸಿ.ಎಲ್ ವ್ಯಾಪ್ತಿಗೆ ಬರುವುದಿಲ್ಲ. ಪರಿಶಿಷ್ಟರು ಇತರರಿಂದ ಗ್ರಾಂಟ್ ಅಲ್ಲದ ಜಮೀನನ್ನು ಕೊಂಡುಕೊಂಡು ಅನುಭವಿಸುತ್ತಿರುವ ಜಮೀನುಗಳಿಗೆ ಪಿ.ಟಿ.ಸಿ.ಎಲ್ ಕಾಯ್ದೆ ಅನ್ವಯಿಸುವುದಿಲ್ಲ.
ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಮಂಜೂರಾತಿಯಾದ ಜಮೀನು ಪರಭಾರೆ ಮಾಡಲು ಸರ್ಕಾರದಿಂದ ೦೧-೦೧-೧೯೭೯ ರ ನಂತರದಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಅನುಮತಿ ಇಲ್ಲದೆ ಪರಭಾರೆ ಮಾಡಿದ್ದಲ್ಲಿ, ಅಂತಹ ಜಮೀನನ್ನು ಮತ್ತೆ ಮುಟ್ಟುಗೋಲು ಹಾಕಿಕೊಂಡು ಸದರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಮತ್ತೆ ವಾಪಸ್ ಕೊಡಿಸುವ ಪ್ರಕ್ರಿಯೆ ಪಿ.ಟಿ.ಸಿ.ಎಲ್ ಕಾಯ್ದೆಯ ಕೆಳಗೆ ಇರುತ್ತದೆ. ಮಂಜೂರಾತಿ ಪತ್ರದಲ್ಲಿ ಹದಿನೈದು ವರ್ಷ ಪರಭಾರೆ ಮಾಡಬಾರದು ಎಂದು ಇದ್ದರೂ ಕೂಡ ಸದರಿ ನಿಗದಿಯಾದ ೦೧-೦೧-೧೯೭೯ ರ ನಂತರ ನಡೆಯುವ ಎಲ್ಲಾ ಪರಭಾರೆಗಳು ಸರ್ಕಾರದ ಅನುಮತಿ ಪಡೆಯುವುದು ಕಲಂ ೪(೨) ರ ರೀತ್ಯ ಕಡ್ಡಾಯವಾಗಿರುತ್ತದೆ. ಸದರಿ ಕಾಯ್ದೆಯನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಅನೇಕ ತೀರ್ಪುಗಳಲ್ಲಿ ಬಹಳ ಸ್ವಷ್ಟವಾಗಿ ಅರ್ಥೈಸಿರುತ್ತೆ. ೦೧-೦೧-೧೯೭೯ ಕ್ಕಿಂತ ಮುಂಚೆ ಪರಭಾರೆ ಮಾಡಿರುವ ಜಮೀನುಗಳಿಗೆ ಅನೇಕ ವ್ಯಾಕ್ಯಾನಗಳು ಮತ್ತು ಕಾನೂನು ಅರ್ಥೈಸುವಿಕೆಯಲ್ಲಿ ವಿಭಿನ್ನ ರೀತಿಯ ತೀರ್ಪುಗಳು ಲಭ್ಯವಿರುತ್ತದೆ. ಸಂಧರ್ಬೋಚಿತವಾಗಿ ಸದರಿ ಕಾನೂನು ಅರ್ಥೈಸುವಿಕೆ ಅಳವಡಿಸಿಕೊಳ್ಳಬೇಕಿರುತ್ತದೆ.
ಮಾನ್ಯ ಉಚ್ಚ ನ್ಯಾಯಾಲಯದ ದ್ವಿಸದಸ್ಯತ್ವದ ಪೀಠದಿಂದ ಆದೇಶಿಸಲ್ಪಟ್ಟಿರುವ (೧೯೯೩ ರಲ್ಲಿ ಪ್ರಕಟವಾಗಿರುವ) ತೀರ್ಪಿನ ಪ್ರಕಾರ ಕಾನೂನು ಜಾರಿಯಾದ ೩೦ ವರ್ಷದ ಹಿಂದೆ ಅಂದರೆ ೦೧-೦೧-೧೯೪೯ ಕ್ಕಿಂತ ಮುಂಚೆ ಪರಭಾರೆ ಆಗಿರುವ ಸದರಿ ಅಂತಹ ಜಮೀನುಗಳ ಬಗ್ಗೆ ಯಾವ ಕ್ರಮವು ಜರುಗಿಸಲಾಗದು ಎನ್ನುತ್ತದೆ. ಇಲ್ಲಿ ೧೮೮೮ ರಿಂದಲೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಜಮೀನು ಮಂಜೂರಾತಿಯಾಗುತ್ತಿತ್ತು ಎನ್ನುವುದು ವಾಸ್ತವಿಕ ಸಂಗತಿಯಾಗಿರುತ್ತದೆ. ಸದರಿ ಜಮೀನು ಮಾರುವವರಿಗೆ ಯಾವಾಗ ಪ್ರಾಪ್ತಿಯಾಯಿತು? ಅವರು ಹೊಂದಿರುವ ಸ್ವಾಧೀನದ ವರ್ಷಗಳು ಎಷ್ಟು? ಅವರ ಹಿಂದಿನ ಮಾರಾಟಗಾರರಿಗೆ ಹೇಗೆ ಪ್ರಾಪ್ತವಾಯಿತು? ೧೮೮೮ ರಿಂದ ೦೧-೦೧-೧೯೪೯ ರವರೆಗೆ ಯಾರ ಸ್ವಾಧೀನದಲ್ಲಿ ಸದರಿ ಜಮೀನು ಇತ್ತು? ಸದರಿ ಭೂ ಮಂಜೂರಾತಿ ನಿಬಂದನೆಗಳನ್ನು ಉಲ್ಲಂಘನೆ ಮಾಡಲಾಗಿದೆಯೇ? ಗ್ರಾಂಟ್ (ಮಂಜೂರಾತಿ) ಆದ ತಾರೀಖಿನಲ್ಲಿ ಯಾವ ಕಾನೂನು ಜಾರಿಯಲ್ಲಿ ಇತ್ತು? ಗ್ರಾಂಟ್ ಯಾವ ನಿಬಂದನೆಗಳನ್ನು ಒಡ್ಡಿ ನೀಡಾಲಾಗಿದೆ? ಗ್ರಾಂಟ್ ಉಚಿತವಾಗಿ ನೀಡಲಾಗಿತ್ತೆ, ಅಪ್ಸೆಟ್ ಪ್ರೈಸ್ ಫಿಕ್ಸ್ ಮಾಡಲಾಗಿತ್ತೆ? ಹರಾಜು ಮೂಲಕ ಮಂಜೂರಾತಿ ಆಗಿರುತ್ತದೆಯೇ? ಎಷ್ಟು ವರ್ಷಗಳ ವರೆಗೆ ಪರಬಾರೆ ಮಾಡಬಾರದು ಎಂಬ ನಿರ್ಬಂದವಿರುತ್ತದೆ ? ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರವನ್ನು ಸದರಿ ಜಮೀನಿನ ಬಗ್ಗೆ ಇರುವ ದಾಖಲಾತಿಗಳನ್ನು ಪರಿಶೀಲಿಸಿ ನೋಡಿ ಕಂಡುಕೊಳ್ಳಬೇಕಿರುತ್ತದೆ. ಅಂತಹ ಮೂಲದಾಖಲಾತಿಗಳು ಲಭ್ಯವಿಲ್ಲದೆ ಹೋದಲ್ಲಿ ಆ ದಿನದ ಇತರೆ ದಾಖಲಾತಿಗಳನ್ನೂ ಪರಿಶೀಲಿಸಿ ನಿರ್ದರಿಸಬೇಕಿರುತ್ತದೆ.
ಜಮೀನಿಗೆ ಸಾಮಾನ್ಯವಾಗಿ ಅತ್ಯವಶ್ಯವಾಗಿ ಈ ಬಗ್ಗೆ ಪರಿಶೀಲನೆಗೆ ನೋಡಬೇಕಾದ ದಾಖಲಾತಿಗಳು ಯಾವುದು? ಕರ್ನಾಟಕದಲ್ಲಿ ೧೯೬೮ ರಿಂದ ಆರ್.ಟಿ.ಸಿ (ಗೇಣಿ ಮತ್ತು ಪಹಣಿ ಪತ್ರಿಕೆ) ಹಾಲಿ ಇರುವ ರೂಪದಲ್ಲಿ ನಿರ್ವಹಿಸಲಾಗಿದೆ, ಇದರಲ್ಲಿ ೧೯೬೮ ರಿಂದ ೨೦೦೦ ನೇ ಇಸವಿಯವರೆಗೆ ಕೈ ಬರಹದ ಪಹಣಿ ಬರುತ್ತೆ, ೨೦೦೦ ದ ನಂತರ ಕಂಪ್ಯೂಟರ್ ಪಹಣಿ ಬರುತ್ತೆ. ಇದರಲ್ಲಿ ಯಾವ ರೀತಿಯಲ್ಲಿ ಹಾಲಿ ಮಾಲೀಕ ಮತ್ತು ಸ್ವಾಧೀನವಿರುವ ಉಳಿಮೆದಾರನು ಸ್ವಾಧೀನಕ್ಕೆ ಬಂದಿರುವನೆಂಬ ಮಾಹಿತಿ ಇರುತ್ತದೆ. ಅನೇಕ ಆರ್.ಆರ್. ನಂಬರ್ ಉಲ್ಲೇಖಗಳು, ಐ.ಸಿ.ಆರ್ ನಂಬರ್ ಉಲ್ಲೇಖಗಳು, ಎಂ.ಆರ್. ಅಥವ ಎಂ.ಟಿ ಉಲ್ಲೇಖಗಳು ಪಹಣಿಯ ೧೦ ಮತ್ತು ೧೧ ನೇ ಕಾಲಂ ನಲ್ಲಿ ನಮೂದಿರುತ್ತದೆ. ಸದರಿ ಅಂತಹ ದಾಖಲೆಗಳನ್ನು ತೆಗೆಸಬೇಕಿರುತ್ತದೆ ಮತ್ತು ದಾಖಲೆಯಲ್ಲಿರುವ ಉಲ್ಲೇಖಿತ ವಿವರಗಳನ್ನು ಪರಿಶೀಲಿಸಬೇಕಿರುತ್ತದೆ. ಸದರಿ ಜಮೀನುಗಳ ಬಗ್ಗೆ ತಾಲೂಕು ಕಚೇರಿಯಲ್ಲಿ ದರಖಾಸ್ತು ರಿಜಿಸ್ಟರ್ ನಿರ್ವಹಿಸಲಾಗಿರುತ್ತದೆ, ಅಂತಹ ರಿಜಿಸ್ಟರ್ ಅನ್ನು ಪರಿಶೀಲಿಸಿ ಸದರಿ ಜಮೀನು ಪರಿಶಿಷ್ಟರಿಗೆ ಗ್ರಾಂಟ್ ಮಾಡಿರುವ ಹಿನ್ನೆಲೆ ಉಳ್ಳದ್ದೆ ಎಂದು ಪರಿಶೀಲಿಸಬಹುದಿರುತ್ತದೆ. ೧೯೬೮ ಕ್ಕಿಂತ ಮುಂಚೆ ಮತ್ತು ನಂತರದಲ್ಲಿ ಕರ್ನಾಟಕದ ವಿವಿದಕಡೆ ವಿವಿದ ರೀತಿಯಲ್ಲಿ ಕಂದಾಯ ದಾಖಲೆಗಳ ನಿರ್ವಹಣೆಯಾಗಿರುತ್ತದೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಪ್ರಚಲಿತ ಕೆಲವು ಕಂದಾಯ ದಾಖಲೆಗಳ ಹೆಸರು ’ಇಂಡೆಕ್ಸ್ ಆಫ್ ಲ್ಯಾಂಡ್ ರೆಕಾರ್ಡ್ (ಐ.ಎಲ್.ಆರ್), ನಮೂನೆ-೧, ನಮೂನೆ-೫, ಖೇತುವಾರು ನಕಲು, ಖರಾಬು ಉತ್ತಾರು, ಅಕಾರ್ ಬಂದ್, ಸರ್ವೆ ಟಿಪ್ಪಣಿ ನಕಲು, ಆರ್.ಆರ್ (ರೆಕಾರ್ಡ್ ಆಫ್ ರೈಟ್ಸ್), ಐ.ಸಿ.ಆರ್ (ಇನ್ ಹೆರಿಟೆನ್ಸ್ ಕೇಸ್ ರಿಜಿಸ್ಟರ್) ಎಂ.ಆರ್. (ಮ್ಯುಟೇಷನ್ ರಿಜಿಸ್ಟರ್) ಎಂ.ಟಿ (ಮುಟೇಷನ್ ಟ್ರ್ಯಾನ್ಸ್ಯಾಕ್ಶನ್).
ಇವುಗಳ ಜೊತೆಯಲ್ಲಿ ೧೮೫೦ ರಿಂದಲೂ ಹಲವು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಾಖಲೆಗಳು ಲಭ್ಯವಿರುತ್ತವೆ. ಸದರಿ ಕಚೇರಿಯಲ್ಲಿ ಎನ್ಕಂಬರೆನ್ಸ್ ಪ್ರತಿಯನ್ನು ತೆಗೆಸಬೇಕು ಇದರಲ್ಲಿ ಗ್ರಾಂಟ್ ಆಗಿರುವ ಬಗ್ಗೆ ಉಲ್ಲೇಖವಿರುವುದಿಲ್ಲ, ಯಾವ ತಾರೀಖಿನಲ್ಲಿ ಮೂಲ ಕ್ರಯ ಆಗಿದೆ ಎಂಬ ಮಾಹಿತಿ ದೊರೆಯುತ್ತದೆ. ಸದರಿ ಕ್ರಯ ಪತ್ರಗಳಲ್ಲಿ ಕ್ರಯದಾರನಿಗೆ ಯಾವ ರೀತಿಯಲ್ಲಿ ಪ್ರಾಪ್ತವಾಗಿತ್ತು ಎಂಬ ಉಲ್ಲೇಖಗಳನ್ನು ಪರಿಶೀಲಿಸಬೇಕಿರುತ್ತದೆ. ಅಲ್ಲಿ ಲಭ್ಯವಿಲ್ಲದೆ ಹೋದರೆ ಕಂದಾಯ ದಾಖಲೆಗಳಲ್ಲಿನ ಉಲ್ಲೇಖಗಳನ್ನು ಪರಿಶೀಲಿಸಿ ನಿರ್ದಿಷ್ಟವಾದ ಅಭಿಪ್ರಾಯಕ್ಕೆ ಬರಬೇಕಿರುತ್ತದೆ. ಈ ಎಲ್ಲಾ ಅಭಿಪ್ರಾಯಕ್ಕೆ ಬರಲು ನುರಿತ ಸ್ಥಳೀಯ ವಕೀಲರಿಂದ ಮಾತ್ರ ಸಾಧ್ಯಾವಾದ ಕೆಲಸವಾಗಿದ್ದು. ಸದರಿ ಸ್ಥಳೀಯ ವಕೀಲರು ಮಾನ್ಯ ಉಚ್ಚ ನ್ಯಾಯಾಲಯದ ಹಲವಾರು ತೀರ್ಪಿನ ಅಂಶ ಏನು ಹೇಳುತ್ತದೆ, ಕಾಲಮಿತಿ ಕಾನೂನಿನ ಅನ್ವಯ ಅನುಕೂಲವುಂಟೆ, ಸ್ಥಳೀಯ ರೂಡಿಯಂತೆ ಇನ್ನು ಹೆಚ್ಚುವರಿ ದಾಖಲೆ ಎಲ್ಲಿ ಲಭ್ಯ ಮತ್ತು ಅವಶ್ಯ ಎಂಬ ಬಗ್ಗೆ ವಿಮರ್ಶೆ ಮಾಡಿ ಸಲಹೆ ನೀಡುತ್ತಾರೆ. ಕೇವಲ ರಿಯಲ್ ಎಸ್ಟೇಟ್ ಬ್ರೋಕರ್ ಗಳಿಂದ ಆಗಲೀ, ಸಬ್ ರಿಜಿಸ್ಟ್ರಾರ್ ಕಚೇರಿಯ ಮುಂದೆ ಕುಳಿತಿರುವ ಪತ್ರ ಬರಹಗಾರರಿಂದ ಆಗಲೀ ನಿಮ್ಮ ದಾಖಲೆಗಳ ಬಗ್ಗೆ ಪೂರ್ಣ ತನಿಖೆ ಸಾಧ್ಯವಲ್ಲದ ಪರಿಸ್ಥಿತಿ ಇರುತ್ತದೆ. ಈ ಬಗ್ಗೆ ಹಲವು ವಕೀಲರಲ್ಲದ ಪರಿಣಿತರು ಇರುತ್ತಾರೆ ಅಂತಹ ಅನುಭವ ಮಂಟಪವನ್ನು ಹುಡುಕಬೇಕಷ್ಟೆ.
ಪಿ.ಟಿ.ಸಿ.ಎಲ್ ಕಾಯ್ದೆಯ ರೀತ್ಯ ಸಕ್ಷಮ ಪ್ರಾಧಿಕಾರಿಯಾದ ಉಪವಿಭಾಗಾದಿಕಾರಿಯು ತನ್ನ ವಿಚಾರಣೆಯಲ್ಲಿ ಸದರಿ ಜಮೀನಿನ ಮೂಲ ಮಾಲೀಕನು (ಗ್ರಾಂಟಿದಾರನು) ಪರಿಶಿಷ್ಟ ಜಾತಿ ಅಥವ ಪರಿಶಿಷ್ಟ ಪಂಗಡಕ್ಕೆ ಸೇರಿದವರೆ ಎಂದು ಪರಿಶೀಲಿಸಬೇಕಿರುತ್ತದೆ, ಮತ್ತು ದೃಡ ನಿರ್ದಾರಕ್ಕೆ ಬರಬೇಕಿರುತ್ತದೆ. ಸದರಿ ಮೂಲ ಗ್ರಾಂಟಿದಾರನು ಪರಿಶಿಷ್ಟನೆ ಇಲ್ಲವೆ ಎಂದು ತಿಳಿಸುವುದು ಹಾಲಿ ಬರೆಸಿಕೊಂಡು ಬಂದಿರುವ ವಂಶವೃಕ್ಷದಿಂದ ಆಗಲೀ ಅರ್ಜಿದಾರನು ತಾನು ಸದರಿ ಜಾತಿಯವನೆಂದು ತೋರಿ ಗ್ರಾಂಟಿಯ ವಂಶವೃಕ್ಷ ಹಾಜರು ಪಡಿಸಿದರೆ ಮಾತ್ರ ಸಾಲದು. ವಂಶವೃಕ್ಷವನ್ನು ಯಾವರೀತಿಯಲ್ಲಿ ಪರಿಗಣಿಸಬೇಕು ಎಂಬ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಸ್ಟೇಟ್ ಆಫ್ ಬಿಹಾರ್ ವರ್ಸಸ್ ರಾಧಕೃಷ್ಣಸಿಂಗ್ ಮತ್ತು ಇತರರು (ಎ.ಐ.ಆರ್. ೧೯೮೩ ಎಸ್.ಸಿ. ೬೮೪) ಕೇಸಿನಲ್ಲಿ ವಂಶವೃಕ್ಷದ ರುಜುವಾತಿನ ಬಗ್ಗೆ ಮತ್ತು ಅದನ್ನು ಪರಿಗಣಿಸುವ ಬಗ್ಗೆ ಮಾರ್ಗದರ್ಶನವಿರುತ್ತದೆ. ಗ್ರಾಂಟಿಯು ಸದರಿ ಪರಿಶಿಷ್ಟನೆ ಎಂದು ತಿಳಿಸಲು ನೇರ ದಾಖಲಾತಿ ಇರಬೇಕು. ಕಂದಾಯ ದಾಖಲೆಗಳಲ್ಲಿ ಈ ಬಗ್ಗೆ ಹಿಂದೆಯೇ ಅಂತಹ ಜಾತಿ ವಿಚಾರವು ಮಂಜೂರಾತಿ ಅರ್ಜಿಯಲ್ಲಿ ಜಾತಿ ಪ್ರಮಾಣಪತ್ರದೊಂದಿಗೆ ಇರಬೇಕು ಮತ್ತು ದರಖಾಸ್ತು ರಿಜಿಸ್ಟರ್ ನಲ್ಲಿ ಉಲ್ಲೇಖವಿರಬೇಕು. ಸದರಿ ಜಮೀನು ಸರ್ಕಾರದಿಂದ ಮಂಜೂರು ಆಗಿರುವುದೆ ಎಂದು ಪರಿಶೀಲಿಸಬೇಕಿರುತ್ತದೆ. ೦೧-೦೧-೧೯೭೯ ರ ಹಿಂದೆ ಕ್ರಯ ಆಗಿರುವ ಜಮೀನುಗಳ ಬಗ್ಗೆ ಪರಿಶೀಲಿಸುವ ವೇಳೆಯಲ್ಲಿ ಸದರಿ ಗ್ರಾಂಟ್ ನಿಬಂದನೆ ಉಲ್ಲಂಘನೆ ಆಗಿದೆಯೇ ? ಉಚಿತವಾಗಿ ಗ್ರಾಂಟ್ ನೀಡಲಾಗಿತ್ತೆ ? ಅಪ್ಸೆಟ್ ಪ್ರೈಸ್ ಪಡೆಯಲಾಗಿತ್ತೆ ? ಕ್ರಯ ಆದ ದಿನದಿಂದ ೦೧-೦೧-೧೯೭೯ ರವೇಳೆಗೆ ಯಾವುದೇ ತೊಂದರೆ ಇಲ್ಲದೆ ಕ್ರಯದಾರನು ೩೦ ವರ್ಷಗಳ ವರೆಗೆ ಸ್ವಾಧೀನದಲ್ಲಿ ಇದ್ದನೆ ? ಎಂಬುದನ್ನು ಪರಿಶೀಲಿಸಬೇಕಿರುತ್ತದೆ. ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪೊಂದರಲ್ಲಿ (೨೦೦೯) ಎರೇಗೌಡರ ಕೇಸಿನಲ್ಲಿ ಮಾನ್ಯ ಜಸ್ಟೀಸ್ ರಾಮ ಮೋಹನ ರೆಡ್ಡಿ ರವರು ನೀಡಿರುವ ತೀರ್ಪಿನಂತೆ - ಗ್ರಾಂಟಿದಾರನು ಪರಿಶಿಷ್ಟನೆ, ಜಮೀನು ಆತನಿಗೆ ಗ್ರಾಂಟ್ ಆಗಿತ್ತೆ ಎಂಬ ಬಗ್ಗೆ ಯಾವುದೇ ನಿರ್ವಿವಾದವಿಲ್ಲದೆ ಹೋದಲ್ಲಿ ಪಿ.ಟಿ.ಸಿ.ಎಲ್ ವ್ಯಾಪ್ತಿಗೆ ಬರುವುದಿಲ್ಲ ಎಂಬ ಬೇರೆ ಅಂಶಗಳನ್ನು ಖರೀದಿಸಿರುವವನು ರುಜುವಾತುಪಡಿಸಲು ಬದ್ದನಾಗಿರುತ್ತಾನೆ ಎಂದು ಹೇಳಿರುತ್ತದೆ.
ಭೂ ಮಂಜೂರಾತಿ ಪಡೆದವರು ಪರಿಶಿಷ್ಟರೆ ಅಲ್ಲವೆ ಎಂಬುದು ಪ್ರಮುಖ ವಿಚಾರವಾಗಿರುತ್ತದೆ. ಉದಾಹರಣೆಗೆ ’ಎ’ ಎಂಬ ಭೂ ಮಂಜೂರಾತಿದಾರನು ಮೇಲ್ಜಾತಿಯವನಾಗಿದ್ದು ಸರ್ಕಾರಕ್ಕೆ ತನ್ನ ಜಾತಿಯನ್ನು ಮಂಜೂರಾತಿಗಾಗಿ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿ ಅದಕ್ಕೆ ಪೂರಕವಾಗಿ ಜಾತಿ ಪ್ರಮಾಣ ಪತ್ರವನ್ನು ಲಗತ್ತಿಸಿರುತ್ತಾನೆ. ನಂತರ ಪರಿಶಿಷ್ಟ ಜಾತಿಯ ಮಹಿಳೆಯನ್ನು ಮದುವೆಯಾಗಿತ್ತಾನೆ ಎಂದು ಅಂದಾಜಿಸೋಣ. ಅವನಿಗೆ ಹುಟ್ಟುವ ಮಗನು ಹಿಂದು ಕಾನೂನಿನಂತೆ ಅವನ ಜಾತಿಗೆ ಸೇರುತ್ತಾನೆ. ಆದರೆ ಸದರಿ ಅಂತಹ ಮಗನು ತನ್ನ ತಾಯಿ ಜಾತಿ ಪ್ರಮಾಣ ಪತ್ರದ ಆಧಾರದಲ್ಲಿ ತನ್ನ ಜಾತಿಯನ್ನು ಪರಿಶಿಷ್ಟನು ಎಂದು ಪಡೆದು ತನ್ನ ತಂದೆಯ ಜಾತಿಯನ್ನು ಪರಿಶಿಷ್ಟನು ಎಂದು ತೋರಲು ಸಾಧ್ಯವೆ ? ಖಂಡಿತ ಆಗಲಾರದು. ಸದರಿ ಕಾರಣಕ್ಕೆ ಭೂ ಮಂಜೂರಿದಾರನ ಭೂ ಮಂಜೂರಾತಿ ದಿನದಲ್ಲಿ ಇದ್ದ ಜಾತಿ ಅಂದಿನ ದಾಖಲಾತಿ ಆಧಾರದಲ್ಲಿ ನಿರ್ದರಿಸಬೇಕಿರುತ್ತದೆ. ಅಂತಹ ಪ್ರಮುಖ ದಾಖಲಾತಿಗಳ ಪೈಕಿ, ಹಳೆಯ ರೇಷನ್ ಕಾರ್ಡ, (ಜಾತಿ ಮತ್ತು ಸಂಬಂದ ಉಲ್ಲೇಖಗಳು) ಹಳೆಯ ಜಾತಿ ಪ್ರಮಾಣ ಪತ್ರ, ಗ್ರಾಂಟ್ ಸರ್ಟಿಫಿಕೇಟಿನಲ್ಲಿ ಜಾತಿ ಉಲ್ಲೇಖ, ಅಥವ ಇತರೆ ಹಳೆ ದಾಖಲಾತಿಗಳಲ್ಲಿ ಜಾತಿ ಉಲ್ಲೇಖ ಇರುವುದನ್ನು ಅರ್ಜಿದಾರನು ಹಾಜರು ಪಡಿಸುವ ಅವಶ್ಯಕತೆ ಇರುತ್ತದೆ. ಇಲ್ಲವೆ ಅಂತಹ ಲಭ್ಯ ದಾಕಲಾತಿಯಿಂದ ಸಕ್ಷಮ ಪ್ರಾಧಿಕಾರಿಯು ಪರಿಶೀಲಿಸುವ ಅವಶ್ಯಕತೆ ಇರುತ್ತದೆ. ಈ ರೀತಿಯ ದಾಖಲಾತಿಗಳೇ ಇಲ್ಲದೆ ಮತ್ತು ಅಂತಹವು ಇದ್ದರೂ ಹಾಜರು ಪಡಿಸದೆ ವಿಷಯವನ್ನು ಮುಚ್ಚಿಟ್ಟಿರುವ ಅರ್ಜಿದಾರನಿಗೆ ಕೋರಿರುವ ಪರಿಹಾರವನ್ನು ನೀಡುವುದು ಕಾನೂನು ಭಾಹಿರವಾಗಿರುತ್ತದೆ. ಈ ಬಗ್ಗೆ ಕೆಲವು ಅರ್ಜಿದಾರರು ಕೆಲವು ದಾಖಲಾತಿಗಳನ್ನು ಬೇಕೆಂದೇ ನ್ಯಾಯಾಲಯದ ಮುಂದೆ ಮುಚ್ಚಿಟ್ಟಿರುವುದು ಕಾನೂನು ಭಾಹಿರವೆಂದು ತೋರಲು ಮಾನ್ಯ ಸುಪ್ರೀಂ ಕೋರ್ಟಿನ ತೀರ್ಪು ಇದೆ (೨೦೦೫(೬) ಎಸ್.ಸಿ.ಸಿ. ೧೪೯).
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೇ ಅಂತಹ ಗ್ರಾಂಟ್ ಜಮೀನನ್ನು ಕೊಳ್ಳಬಾರಾದು ಎಂಬ ನಿರ್ಬಂದವೂ ಒಳಗೊಂಡಿದೆ, ಇಲ್ಲಿ ಗ್ರಾಂಟಿದಾರರ ಅಸಹಾಯಕತೆ ಮತ್ತು ಬಡತನದ ದುರುಪಯೋಗ ಆಗದಂತೆ ತಡೆಯಲು ರೂಪಿಸಿರುವ ಕಾನೂನು ಇದಾದ್ದರಿಂದ ಇದು ಜಾತಿ ದ್ವೇಶವನ್ನು ಬಿತ್ತುವ ಅಸ್ತ್ರವಲ್ಲ ಎಂಬುದು ತಿಳಿಯಬೇಕಿರುತ್ತದೆ. ಅನೇಕ ಕಡೆಗಳಲ್ಲಿ ಜಮೀನನ್ನು ಪರಭಾರೆ ಮಾಡಿ ಬಡತನದಲ್ಲಿ ಜಮೀನನ್ನು ಕಳೆದುಕೊಳ್ಳುತ್ತಿರುವವರ ಪರಿಸ್ಥಿತಿಯನ್ನು ತಡೆಗಟ್ಟಲು ಮಾಡಿದ ಕಾನೂನು ಇದಾಗಿರುತ್ತದೆ. ಪರಬಾರೆಯಲ್ಲಿ ಭೋಗ್ಯ (ಸ್ವಾಧೀನ ಪಡೆಯಲಿ ಬಿಡಲಿ), ದಾನ, ಬದಲಿ ಮಾಡಿಕೊಳ್ಳುವಿಕೆ, ಕ್ರಯ, ಬಾಡಿಗೆ, ಸ್ವತ್ತು ಆಧಾರ ಮಾಡುವಿಕೆ, ಕ್ರಯಕ್ಕಾಗಿ ಕರಾರು ಮಾಡಿಕೊಳ್ಳುವಿಕೆ ಅಥವ ಇನ್ನಾವುದೇ ರೀತಿಯ ವ್ಯವಹಾರಗಳು ಮಾಡಲು ಬರುವುದಿಲ್ಲ. ಅಂತಹ ವ್ಯವಹಾರಗಳಿಗೆ ಪಿ.ಟಿ.ಸಿ.ಎಲ್ ಕಾಯ್ದೆ ಅನ್ವಯವಾಗುತ್ತೆ. ಆದರೆ ಕುಟುಂಬಸ್ಥರ ಮಧ್ಯೆ ವಿಭಾಗದ ಮುಖೇನ ಹಸ್ತಾಂತರ ಅಥವ ವಿಲ್ ಮುಖೇನ ಹಸ್ತಾಂತರ ಇದರಲ್ಲಿ ಬರುವುದಿಲ್ಲ.
ಗ್ರಾಂಟ್ ಜಮೀನು ಅಂದರೆ ಯಾವುದು ಎಂದು ಉದ್ಬವವಾಗುವ ಪ್ರಶ್ನೆಗಳಿಗೆ ಅನೇಕ ವ್ಯಾಕ್ಯಾನಗಳು ಮಾಡಲಾಗುತ್ತದೆ. ಆದರೆ ಈ ವಿಚಾರದಲ್ಲಿ ಕಾಯ್ದೆಯಲ್ಲಿನ ಕಲಂ ೩(೧)(ಬಿ) ಅಡಿಯಲ್ಲಿ ನೋಡಿದಾಗ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ, ವಿವಿದ ಜಾರಿಯಲ್ಲಿದ್ದ ಕಾನೂನಿನ ಅಡಿಯಲ್ಲಿ ಮಂಜೂರಾತಿಯಾದ ಅಥವ ಅಲಾಟ್ ಮೆಂಟ್ ಆದ ಜಮೀನು ಗ್ರಾಂಟ್ ಜಮೀನು ಆಗಿರುತ್ತದೆ. ಸದರಿ ಜಾರಿಯಲಿದ್ದ ಕಾನೂನಿನ ಬಗ್ಗೆ ಹೇಳುವಾಗ್ಗೆ ವ್ಯವಸಾಯ ಕ್ಷೇತ್ರದ ಸುಧಾರಣೆ (ಅಗ್ರೇರಿಯನ್ ರಿಫಾರ್ಮ್ಸ್) ಬಗ್ಗೆ ಇರುವ ಕಾನೂನು, ಲ್ಯಾಂಡ್ ಸೀಲಿಂಗ್ ನಲ್ಲಿ ಇರುವ ಕಾನೂನು, ಇನಾಂ ರದ್ದತಿ ಯಲ್ಲಿನ ಕಾನೂನು ಅಡಿಯಲ್ಲಿ ಪರಿಶಿಷ್ಟರಿಗೆ ಮಂಜೂರಾತಿ ಅಥವ ಅಲಾಟ್ ಮೆಂಟ್ ಆಗಿರುವ ಜಮೀನಿಗೆ ಪಿ.ಟಿ.ಸಿ.ಎಲ್ ಅನ್ವಯವಾಗುತ್ತದೆ. ಆದರೆ ಅಂತಹ ಕಾನೂನಿನ ಅಡಿಯಲ್ಲಿ ಅನುವಂಶೀಯ ಹಕ್ಕಿನಿಂದ ಗ್ರಾಂಟ್ ಆಗಿದ್ದಲ್ಲಿ ಇತರೆ ಹಕ್ಕುಗಳಿಂದ ಗ್ರಾಂಟ್ ಆಗಿದ್ದಲ್ಲಿ ಈ ಪಿ.ಟಿ.ಸಿ.ಎಲ್ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಸ್ವಷ್ಟತೆ ಇದೆ.
ಕರ್ನಾಟಕದ ಉಚ್ಚ ನ್ಯಾಯಾಲಯದ ಪೂರ್ಣ ಪೀಠದ ಮುಂದೆ ಬಂದಂತಹ ಮೊಹಮದ್ ಜಾಫರ್ ಎಂಬ ಕೇಸಿನ (೨೦೦೨) ತೀರ್ಪಿನ ಅನುಸಾರ ಕರ್ನಾಟಕ ಭೂಸುದಾರಣೆ ಕಾನೂನಿನ ಅನ್ವಯ ಮಂಜೂರಾದ ಜಮೀನು ಪಿ.ಟಿ.ಸಿ.ಎಲ್ ವ್ಯಾಪ್ತಿಗೆ ಬರುವುದಿಲ್ಲ ಎಂದು ವ್ಯಾಖ್ಯಾನಿಸಿರುತ್ತೆ. ಇಲ್ಲಿ ಸರ್ಕಾರ ಸದರಿ ಅನುಭವದಲ್ಲಿ / ಸ್ವಾಧೀನದಲ್ಲಿ ಇರುವ ವ್ಯಕ್ತಿಗೆ ಮಾಲೀಕತ್ವವನ್ನು ಕೊಡುತ್ತದೆ, ಸದರಿ ಆ ರೀತಿಯ ಗ್ರಾಂಟ್ ಆಗುವುದು ಹಿಂದಿನ ಅನುಭವ ಮತ್ತು ಆತನ ಹಕ್ಕಿನಿಂದಲೇ ಹೊರತು ಸರ್ಕಾರ ಹೊಸದಾಗಿ ಗ್ರಾಂಟ್ ಮತ್ತು ಸ್ವಾಧೀನ ಹಸ್ತಾಂತರಿಸಿರುವುದಿಲ್ಲ ಎಂಬ ಸಿದ್ದಾಂತದೊಂದಿಗೆ ತೀರ್ಪನ್ನು ನೀಡಲಾಗಿದೆ. ಸದರಿ ವಿಚಾರದಂತೆಯೇ ಇನಾಂ ರದ್ದತಿ ಅನ್ವಯ ಗ್ರಾಂಟ್ ಆಗಿರುವ ಜಮೀನು ಸದರಿ ಪಿ.ಟಿ.ಸಿ.ಎಲ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಮುನಿಕೆಂಚಪ್ಪ ನವರ (೨೦೦೪) ಕೇಸಿನಲ್ಲಿ ಮಾನ್ಯ ಜಸ್ಟೀಸ್ ಡಿ.ವಿ. ಶೈಲೇಂದ್ರ ಕುಮಾರ್ ರವರು ತೀರ್ಪಿತ್ತಿದ್ದಾರೆ.
ಗ್ರಾಂಟ್ ಕಂಡೀಷನ್ ಭೂಸುದಾರಣೆ ಕಾನೂನಿನ ಅಡಿಯಲ್ಲಿ ಉಲ್ಲಂಘನೆಯಾಗಿದ್ದಲ್ಲಿ ಅಂತಹ ಉಲ್ಲಂಘಿತರ ವಿರುದ್ದ ಪಿ.ಟಿ.ಸಿ.ಎಲ್ ಕಾಯ್ದೆಯಲ್ಲಿ ಕ್ರಮ ಜರುಗಿಸಲು ಬರುವುದಿಲ್ಲ ಎಂದು ಅಬ್ದುಲ್ ಹಕ್ ರವರ ಕೇಸಿನಲ್ಲಿ (೨೦೦೨) ಕರ್ನಾಟಕ ಉಚ್ಚ ನ್ಯಾಯಾಲಯ ತೀರ್ಪಿತ್ತಿದೆ. ಗ್ರಾಂಟ್ ಆಗಿರುವ ತಾರೀಖು ಮುಖ್ಯವಲ್ಲ ಸಾಗುವಳಿ ಪತ್ರ ನೀಡಿದ ತಾರೀಖು ಮುಖ್ಯವಾಗಿರುತ್ತದೆ ಎಂದು ಸದರಿ ಗ್ರಾಂಟ್ ನಿಬಂದನೆ ಉಲ್ಲಂಘನೆ ಆಗಿದೆಯೇ ಇಲ್ಲವೆ ಎಂದು ಪರಿಶೀಲಿಸಲು ಮುಖ್ಯವಾಗಿರುತ್ತದೆ ಎಂದು ೧೯೯೦ ರಲ್ಲಿ ಯೇ ಜಸ್ಟೀಸ್ ರಾಮಾಜೋಯಿಸ್ ಮತ್ತು ಜಸ್ಟೀಸ್ ಮಿರ್ದಾ ರವರ ದ್ವಿಸದಸ್ಯತ್ವ ಪೀಠ ತೀರ್ಪು ನೀಡಿದೆ. ಕಾಯ್ದೆಯ ಕಲಂ ೧೧ ಲ್ಲಿ ಹೇಳಿರುವಂತೆ ಬೇರೆ ಜಾರಿಯಲ್ಲಿರುವ ಕಾನೂನು, ಸಿವಿಲ್ ಕೋರ್ಟ್ ತೀರ್ಪು, ಕರಾರು, ನಡವಳಿಕೆ, ಸಂಸ್ಕಾರ ಮತ್ತು ಇತರೆ ಟ್ರೈಭ್ಯೂನಲ್ ಮತ್ತು ಪ್ರಾಧಿಕಾರದ ತೀರ್ಪುಗಳು ಏನೇ ಇದ್ದರೂ ಪಿ.ಟಿ.ಸಿ.ಎಲ್ ಕಾಯ್ದೆಯು ಅವುಗಳೆಲ್ಲವನ್ನೂ ಮೀರಿ ಅನ್ವಯವಾಗುತ್ತದೆ. ಇದನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಸದರಿ ಕಾಯ್ದೆಯ ಸಾರ್ವಭೌಮತೆಯನ್ನು ಒಪ್ಪಿದೆ. ಸದರಿ ಕಾಯ್ದೆಯ ಸಂವಿದಾನ ಬದ್ದತೆಯನ್ನೂ ಎತ್ತಿ ಹಿಡಿಯಲಾಗಿದೆ. ಹೀಗೆ ಕಾರ್ಯಾಂಗ ನಿದ್ದೆ ಹೋದರೂ ನ್ಯಾಯಾಂಗ ಈ ಕಾನೂನು ಜಾರಿಯಲ್ಲಿ ಮುಂಚೂಣಿಯಲ್ಲಿದೆ.
ಕೆಲವು ಕೇಸಿನಲ್ಲಿ ಹೆಚ್ಚುವರಿ ಆಹಾರ ಬೆಳೆಯುವ ಉದ್ದೇಶದಿಂದ (ಗ್ರೋ ಮೋರ್ ಫುಡ್ ಸ್ಕೀಂ) ಅಡಿಯಲ್ಲಿ ಗ್ರಾಂಟ್ ಆಗಿರುವ ಜಮೀನು ಪಿ.ಟಿ.ಸಿ.ಎಲ್ ವ್ಯಾಪ್ತಿಗೆ ಬರುವುದಿಲ್ಲ ಎಂಬ ತೀರ್ಪು ಆಗಿದ್ದರೆ, ಇನ್ನೊಂದು ಕೇಸಿನಲ್ಲಿ ಪ್ರಾಜೆಕ್ಟ್ ಡಿಸ್ಪ್ಲೇಸ್ ಮೆಂಟ್ ಅರ್ಥಾತ್ ಯಾವುದಾದರೂ ಘಟಕ ಸ್ಥಾಪನೆಯಿಂದ ಉಂಟಾಗುವ ಜಮೀನು ಕಳೆದುಕೊಳ್ಳುವಿಕೆಯಲ್ಲಿ ಬೇರೆ ಜಮೀನು ಕೊಟ್ಟರೆ ಅದು ಪಿ.ಟಿ.ಸಿ.ಎಲ್ ವ್ಯಾಪ್ತಿಗೆ ಬರುವುದಿಲ್ಲ ಎಂದು ತೀರ್ಪು ನೀಡಿರುವ ಜಸ್ಟೀಸ್ ಎಸ್.ಆರ್. ಬಾನೂರ್ ಮಠ್ ರವರು (೨೦೦೨) ಮುಂದುವರಿದು ಸರ್ಕಾರದಿಂದ ಭೂಮಿಯನ್ನು ಮಂಜೂರು ಪಡೆದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗ್ರಾಂಟಿಯು ತಾನು ಪರಿಶಿಷ್ಟನು ಎಂಬ ಕಾರಣಕ್ಕೆ ಸದರಿ ಜಮೀನು ಮಂಜೂರಿಯಾಗಿದೆ ಎನ್ನುವುದು ಮುಖ್ಯವಾಗಿರುತ್ತದೆ ಎಂದು ಹೇಳುತ್ತಾರೆ. ಅಂತಹ ಜಮೀನು ಗ್ರಾಂಟ್ ಮಾತ್ರ ಪಿ.ಟಿ.ಸಿ.ಎಲ್ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿರುತ್ತಾರೆ.
ಇತ್ತೀಚೆಗೆ ಮಾನ್ಯ ಜಸ್ಟೀಸ್ ಅಶೋಕ್ ಬಿ. ಹಿಂಚಗೇರಿ ರವರು ೨೦೧೦ ರಲ್ಲಿ ರಾಮಚಂದ್ರ ರವರ ಕೇಸಿನಲ್ಲಿ ಪಿ.ಟಿ.ಸಿ.ಎಲ್ ಕಾಯ್ದೆಯ ಅನುಷ್ಟಾನದಲ್ಲಿ ಸ್ವಾಧೀನತೆಯನ್ನು ಪಡೆಯುವ ರೀತಿಯ ಬಗ್ಗೆ ವಿವರಿಸಿ ಹೇಳಿರುತ್ತಾರೆ. ಆದೇಶವಾದ ಬಳಿಕ ಪಾರ್ಟಿಗಳಿಗೆ ಅಪೀಲು ಸಲ್ಲಿಸುವ ಕಾಲಾವದಿಯ ನಂತರವಷ್ಟೆ ನಿಯಮಾನುಸಾರ ನೋಟೀಸು ನೀಡಿ ಕಾಲಾವಕಾಶ ನೀಡಿ ಸ್ವಾಧೀನ ಪಡೆಯ ಬೇಕಿರುತ್ತದೆ, ಎಂಬುದನ್ನು ಅಧಿಕಾರಿ ವಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೂ ಈ ಅಧಿಕಾರಿ ವಲಯದಲ್ಲಿ ಯಾವ ಅಹಂ ಇರುತ್ತದೆ ಎಂದರೆ ನೋಡ್ರೀ ಆಕೇಸಿನಲ್ಲಿ ನಾವೇನು ಪಾರ್ಟಿ ಅಲ್ಲವಲ್ಲ ನಮಗೆ ಅದು ಬರಲ್ರೀ ಅನ್ನುವ ಉಡಾಫೆ ಮಾತಿನವರೇ ಹೆಚ್ಚಿಗೆ ಇದ್ದಾರೆ. ಒಮ್ಮೆ ಕಾನೂನು ಸಿದ್ದಾಂತವನ್ನು ಮಾನ್ಯ ರಾಜ್ಯದ ಉಚ್ಚ ನ್ಯಾಯಾಲಯ ಮತ್ತು ಭಾರತದ ಶ್ರೇಷ್ಠ ನ್ಯಾಯಾಲಯ ಯಾವುದೇ ಕೇಸಿನಲ್ಲಿ ಉಲ್ಲೇಖಿಸಿರಲಿ ಅದು ಸರ್ವದಾ ಸರ್ವ ರೀತಿಯಲ್ಲಿಯೂ ಅಂತದ್ದೇ ಸಂಧರ್ಬಗಳಲ್ಲಿ ಎಲ್ಲರಿಗೂ ಅನ್ವಯವಾಗುತ್ತೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿರುತ್ತದೆ.
ಗ್ರಾಂಟ್ ಆದ ತಾರೀಖಿನಲ್ಲಿ ಯಾವ ಕಾನೂನು ಜಾರಿಯಲ್ಲಿ ಇತ್ತು ಎಂಬುದು ಬಹಳ ಹಿಂದಿನ ಗ್ರಾಂಟ್ ಗಳಲ್ಲಿ ಮುಖ್ಯವಾಗಿರುತ್ತದೆ. ಮರಿಯಪ್ಪ (೨೦೦೪) ನವರ ಕೇಸಿನಲ್ಲಿ ೧೯೨೯ ರಲ್ಲಿ ಇದ್ದ ಸರ್ಕಾರಿ ಆದೇಶವನ್ನು ಕಾನೂನು ಎಂದು ಪರಿಗಣಿಸಿರುವುದಿಲ್ಲ ಹಾಗಾಗಿ ಆ ಸರ್ಕಾರಿ ಆದೇಶದ ಅವದಿಯಲ್ಲಿ ನೋ ರೂಲ್ ಫೀರಿಯೆಡ್ (ಕಾನೂನು ಇಲ್ಲದ ಅವದಿ) ಬರುವುದರಿಂದ ಗ್ರಾಂಟ್ ಯಾವುದೇ ಕಂಡೀಷನ್ ಉಲ್ಲಂಘನೆ ಮಾಡಿರುವುದಿಲ್ಲ ಎಂದು ತೀರ್ಪು ನೀಡಲಾಗಿರುತ್ತೆ. ಸದರಿ ಅಂತದ್ದೇ ಗೋವಿಂದರಾಜು ರವರ ಕೇಸಿನಲ್ಲಿ (೨೦೧೦) ಜಸ್ಟೀಸ್ ಅನಂದ ಬೈರರೆಡ್ಡಿ ರವರು ನೀಡಿರುವ ತೀರ್ಪಿನಲ್ಲಿ ಈ ಅಂಶವನ್ನು ಎತ್ತಿ ತೋರಿದ್ದಾರೆ. ಇಲ್ಲಿ ಸದರಿ ಗ್ರಾಂಟ್ ಕಂಡೀಷನ್ ಉಲ್ಲಂಘನೆ ವಿಚಾರಕ್ಕೆ ಬಂದರೆ ೦೧-೦೧-೧೯೭೯ ರ ನಂತರ ಮಾಡುವ ಪರಭಾರೆಗಳಿಗೆ ಇದು ಮುಖ್ಯವಾಗಿರುವುದಿಲ್ಲ. ಇಲ್ಲಿ ಸರ್ಕಾರಿ ಪೂರ್ವಾನುಮತಿ ಪಡೆಯದೆ ಮಾಡುವ ವ್ಯವಹಾರವು ಅನೂರ್ಜಿತವಾಗುತ್ತದೆ.
ಭಾರತೀಯ ಸರ್ವೋಚ್ಚ ನ್ಯಾಯಾಲಯದ ಮುಂದೆ ಬಂದಿದ್ದಂತಹ ಬಿ.ಕೆ ಮುನಿರಾಜು ಕೇಸಿನಲ್ಲಿ (೨೦೦೮) ಸಾರ್ವಜನಿಕ ಹರಾಜಿನಲ್ಲಿ ಕಿಮ್ಮತ್ತಿಗೆ ಕೊಂಡುಕೊಂಡಿರುವ ಜಮೀನು ಪಿ.ಟಿ.ಸಿ.ಎಲ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಮಹತ್ತರ ವಿಚಾರವನ್ನು ಎತ್ತಿ ಹಿಡಿಯಲಾಗಿದೆ. ಗ್ರಾಂಟ್ ಆದ ಜಮೀನಿನ ವಿಚಾರದಲ್ಲಿ ಸಾಗುವಳಿ ಪತ್ರದಲ್ಲಿನ ನಿಬಂದನೆಗಳು ಕಾನೂನು ಬದ್ದವಾಗಿ ವಿದಿಸಿಲ್ಲ ಎಂದು ಗ್ರಾಂಟಿದಾರನು ಸೂಕ್ತ ಸಮಯದಲ್ಲಿ ಪ್ರಶ್ನಿಸಬೇಕಿರುತ್ತದೆ ಹೊರತು ಗ್ರಾಂಟಿಯಿಂದ ಖರೀದಿಸಿದವರು ಸದರಿ ಗ್ರಾಂಟ್ ಕಂಡೀಷನ್ ನಿಯಮ ಭಾಹಿರವಾಗಿದೆ ಎಂದು ಪ್ರಶ್ನಿಸುವ ಹಕ್ಕು ಇಲ್ಲ ಎಂದು ಬದ್ರಪ್ಪನವರ ಕೇಸಿನಲ್ಲಿ (೨೦೦೮) ಮಾನ್ಯ ಶ್ರೇಷ್ಠ ನ್ಯಾಯಾಲಯ ಆದೇಶಿಸಿರುತ್ತದೆ.
ಪಿ.ಟಿ.ಸಿ.ಎಲ್ ವ್ಯಾಪ್ತಿಗೆ ಬರುವ ಯಾವುದೇ ಜಮೀನಿನಲ್ಲಿ ಖರೀದಿದಾರನು ಹೂಡಿರುವ ಬಂಡವಾಳವನ್ನಾಗಲೀ ಮಾರಾಟಗಾರನಿಗೆ ನೀಡಿರುವ ಮಾರಾಟ ಮೌಲ್ಯವಾಗಲೀ, ಕ್ರಯ ಕರಾರಿಗೆ ನೀಡಿರುವ ಮುಂಗಡವಾಗಲೀ ವಾಪಸ್ ಪಡೆಯಲು ಬರುವುದಿಲ್ಲ. ಇದಕ್ಕೆ ಕಾನೂನು ರೀತ್ಯ ಪರಿಹಾರವೇ ಇಲ್ಲ. ಸದರಿ ಆ ರೀತಿಯ ವ್ಯವಹಾರವನ್ನು ಮತ್ತು ಕರಾರುಗಳನ್ನು ಕಾನೂನು ಭಾಹಿರವೆಂದು ಪಿ.ಟಿ.ಸಿ.ಎಲ್ ಕಾಯ್ದೆ ಹೇಳಿರುವಾಗ್ಗೆ ಕಾನೂನು ಭಾಹಿರ ಚಟುವಟಿಕೆಯಲ್ಲಿ ಹಣವನ್ನು ವಿನಿಯೋಗಿಸುವುದು ಕಾನೂನು ಭಾಹಿರವಾಗಿರುತ್ತದೆ. ಆದ ಕಾರಣ ಕಾನೂನು ರೀತಿಯಲ್ಲಿ ವಸೂಲಿಯೂ ಆಗುವುದಿಲ್ಲ, ಇದಕ್ಕೆ ಪರಿಹಾರವೂ ದೊರೆಯುವುದಿಲ್ಲ. ಆದ್ದರಿಂದಲೇ ಜಮೀನು ಕೊಂಡುಕೊಳ್ಳುವವನು ಜಾಗ್ರತೆ ವಹಿಸಬೇಕಿರುತ್ತದೆ.
ಪಿ.ಟಿ.ಸಿ.ಎಲ್ ಕಾಯ್ದೆಯ ಕಲಂ ೫(೩) ರಲ್ಲಿ ಹೇಳಿರುವಂತೆ ಯಾವ ಗ್ರಾಂಟ್ ಜಮೀನು ಗ್ರಾಂಟಿಯ ಸ್ವಾಧೀನದಲ್ಲಿ ಅಥವ ಅವನ ವಾರಸ್ಸುದಾರರ ಸ್ವಾಧೀನದಲ್ಲಿ ಇರುವುದಿಲ್ಲವೋ ಅಂತಹ ಪರಬಾರೆಯು ಬೇರೆ ಅನ್ಯತಾ ರುಜುವಾತು ಪಡಿಸುವವರೆಗೆ ಕಾನೂನು ಬಾಹಿರವೆಂದು ತಿಳಿಯುವುದು ಎಂದು ಹೇಳಿರುತ್ತದೆ. ಇಲ್ಲಿ ಗ್ರಾಂಟಿ ಜಮೀನು ಎಂದು ನಿರ್ದರಿಸುವಲ್ಲಿ ಇನಾಂ ರದ್ದತಿ, ಭೂಸುದಾರಣೆ ಟೆನೆನ್ಸಿ ರೀತ್ಯ, ಮತ್ತು ಇನ್ನಿತರೆ ರೀತ್ಯ ಬಂದಿರುವ ಜಮೀನುಗಳು ಯಾವುದಾದರೂ ಅನುವಂಶಿಕ ಹಕ್ಕಿನಿಂದ ಅಥವ ಇತರೆ ಹಕ್ಕಿನಿಂದ ಪ್ರಾಪ್ತವಾಗಿರುವುದೇ ಎಂದು ರುಜುವಾತು ಪಡಿಸುವ ಜವಾಬ್ದಾರಿ ಖರೀದಿದಾರನದ್ದಾಗಿರುತ್ತದೆ. ಈ ರೀತಿಯ ಪ್ರಿಸಮ್ಶನ್ ಕಾನೂನು ಇರುವುದಕ್ಕೇ ಇದೂ ಸ್ವಲ್ಪ ಕಠಿಣವಾದ ಕಾನೂನು ಆಗಿರುವುದು ಎಂದರೆ ತಪ್ಪಾಗಲಾರದು. ಕಾನೂನಿನ ಅರಿವು ಇಲ್ಲದ ಮತ್ತು ಕಾನೂನು ತಿಳುವಳಿಕೆ ಪಡೆಯಲೂ ಎಚ್ಚರವಿಲ್ಲದ ವ್ಯವಸಾಯ ಭೂಮಿ ಖರೀದಿದಾರ ಸಂಕಷ್ಟಕ್ಕೆ ಸಿಲುಕಿಯಾನು ಎಂಬುದು ಅಕ್ಷರ ಸಹ ಸತ್ಯವಾಗಿರುತ್ತದೆ.
ಪಿ.ಟಿ.ಸಿ.ಎಲ್ ಕಾಯ್ದೆಯಲ್ಲಿ ಪರಬಾರೆಯೊಂದೇ ನಿರ್ಬಂದವಿದಿಸಿರುವುದಿಲ್ಲ. ಆ ರೀತಿಯ ಖರೀದಿದಾರನ ಕೃತ್ಯವನ್ನು ಕಲಂ ೮ ರಲ್ಲಿ ಕಾಗ್ನಿಸಿಬಲ್ ಅಪರಾಧವನ್ನಾಗಿಸಿದೆ ಆರು ತಿಂಗಳು ಶಿಕ್ಷೆ ಅಥವ ಎರಡುಸಾವಿರದವರೆಗೆ ಜುಲ್ಮಾನೆ ಅಥವ ಎರಡನ್ನೂ ವಿದಿಸಬಹುದಿರುತ್ತದೆ. ನೊಂದಾವಣಾಧಿಕಾರಿಗಳು ಸದರಿ ಪಿ.ಟಿ.ಸಿ.ಎಲ್ ವ್ಯಾಪ್ತಿಗೆ ಬರುವ ಜಮೀನುಗಳನ್ನು ನೊಂದಾಯಿಸಬಾರದು ಎಂದು ಕಲಂ ೭ ರಲ್ಲಿ ಹೇಳಿದೆ. ಬಹಳ ಹಿಂದಿನಿಂದಲೂ ಸರ್ಕಾರಿ ಸುತ್ತೋಲೆಗಳಲ್ಲಿ ಕಂದಾಯ ಇಲಾಖೆಗೆ ಅಂತಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ನೀಡಿರುವ ಮಂಜೂರಾದ ಜಮೀನಿನ ಬಗ್ಗೆ ಪಹಣಿಯಲ್ಲಿ ಉಲ್ಲೇಖಿಸುವಂತೆ ಮತ್ತು ನೊಂದಾವಣಿ ಕಚೇರಿಗೆ ಲಿಸ್ಟ್ ನೀಡುವಂತೆ ಆದೇಶಗಳು ಆಗುತ್ತಲೇ ಇವೆ ಆದರೆ ಅದು ಸಮರ್ಪಕವಾಗಿ ಜಾರಿಯಾಗಿಲ್ಲ. ಇತ್ತೀಚೆಗೆ ಬಂದಿರುವ ಆದೇಶದಲ್ಲಿ ಸದರಿ ಅಂತಹ ಜಮೀನುಗಳ ಪಹಣಿಯಲ್ಲಿ ಸೀಲನ್ನು ಹಾಕಲು ಆದೇಸವಾಗಿದೆ ವೆಂದು ತಿಳಿದು ಬರುತ್ತದೆ. ಸೀಲು ಏಕೆ ಬೇಕು ಶಾಶ್ವತವಾಗಿ ನಮೂದಿಸಲು ಇರುವ ಅಡಚಣೆ ಏನು ? ಎಷ್ಟೋ ಜನ ಘಟಭದ್ರರು ಇಂತಹ ಜಮೀನು ಕೊಂಡಿದ್ದಾರೆ ? ಅವರನ್ನು ಸರ್ಕಾರ ರಕ್ಷಿಸುತ್ತಿದೆಯೇ ? ಆಕಸ್ಮಿಕ ಸೀಲು ಹಾಕುವವರ ತಪ್ಪಿನಿಂದ ಉಂಟಾಗುವ ಪಜೀತಿಗೆ ಸರ್ಕಾರ ಹೊಣೆಯಾಗುವುದೆ ? ಭ್ರಷ್ಟತೆಯಲ್ಲಿ ಸೀಲು ಹಾಕುವುದು ತಪ್ಪಿದರೆ ಕಾನೂನು ಜಾರಿಯನ್ನು ಸರ್ಕಾರ ಮೊಟಕುಗೊಳಿಸುವುದೆ ? ಕಾನೂನು ಜಾರಿಯಾಗುವುದು ಮಹತ್ತರ ಉದ್ದೇಶಗಳಿಗೆ ಆದರೆ ಅದನ್ನು ನಿರ್ವಹಿಸುವ ಅಧಿಕಾರಸ್ಥರು ಅದರಿಂದ ನಮಗೇನು ಲಾಭ ಎಂದು ಎಂಬ ಆಲೋಚನಾ ನಿರತರಾದರೆ ಇಂತಹ ಕುರುಡು ಪದ್ದತಿಗಳು ಜಾರಿಯಾಗುತ್ತವೆ.
ಬರೆದವರು
ಎನ್. ಶ್ರೀಧರಬಾಬು
ವಕೀಲರು, ತುಮಕೂರು
http://sridharababu.blogspot.com/
email: sridharababu1234@gmail.com