ಭ್ರಷ್ಟರ ಬೇಟೆ ಹೆಚ್ಚುವುದರ ಜತೆಗೆ ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಬೇಕು.
ಭ್ರಷ್ಟಾಚಾರದ ಮೂಲಕ ಅಕ್ರಮವಾಗಿ ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಮಾಡಿದ ಆರೋಪದ ಮೇಲೆ ರಾಜ್ಯದ ೧೫ ಅಧಿಕಾರಿಗಳಿಗೆ ಲೋಕಾಯುಕ್ತರು ಬಿಸಿ ಮುಟ್ಟಿಸಿದ್ದಾರೆ. ಅವರಿಗೆ ಸೇರಿದ ೬೨ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿ ೨೮ ಕೋಟಿ ರೂ. ಗೂ ಅಧಿಕ ಆಸ್ತಿಯನ್ನು ಪತ್ತೆ ಮಾಡಿದ್ದಾರೆ. ಈ ಪೈಕಿ ಬೆಂಗಳೂರಿನ ಕೆ ಆರ್ ಪುರದ ತಹಶೀಲ್ದಾರ್ ಅಜಿತ್ ಕುಮಾರ್ ರೈ ಬಳಿ ಅಪಾರ ಆಸ್ತಿ, ಹಣ ಪತ್ತೆಯಾಗಿದೆ. ನೂರಾರು ಎಕರೆ ಜಮೀನನ್ನು ಅವರು ಖರೀದಿ ಮಾಡಿದ್ದಾರೆ. ೯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದಲ್ಲದೆ ಉಳಿದ ೧೪ ಅಧಿಕಾರಿಗಳ ಐಷಾರಾಮಿ ಬಂಗಲೆಗಳು, ಜಮೀನು, ರೆಸಾರ್ಟ್ ಎಲ್ಲವೂ ಪತ್ತೆಯಾಗಿದೆ. ಬಾಗಲಕೋಟೆಯ ಚೇತನಾ ಎಂಬ ಅಧಿಕಾರಿ ಬಳಿ ೨೦೦ಕ್ಕೂ ಅಧಿಕ ಬಗೆಯ ವ್ಯಾನಿಟಿ ಬ್ಯಾಗ್ ಗಳು ಸಿಕ್ಕಿವೆ ಎಂಬ ಮಾಹಿತಿ ಹೊರಬಿದ್ದಿದೆ. ಲೋಕಾಯುಕ್ತರು ಮೇ ೩೧ರಂದು ಕೂಡ ಒಂದು ದಾಳಿ ನಡೆಸಿ ೧೫ ಅಧಿಕಾರಿಗಳನ್ನು ಖೆಡ್ಡಾಕ್ಕೆ ಕೆಡವಿದ್ದರು. ಇತ್ತೀಚಿನ ದಿನಗಳಲ್ಲಿ ತಿಂಗಳಿಗೊಂದು ದಾಳಿಯನ್ನು ಅವರು ನಡೆಸುತ್ತಿರುವಂತಿದೆ. ಇದು ನಿಜಕ್ಕೂ ಹೆಚ್ಚಾಗಬೇಕು.
ಭ್ರಷ್ಟಾಚಾರ ಎಂಬುದು ಅಪರಾಧ ಎಂದು ಗೊತ್ತಿಲ್ಲದಷ್ಟು ದಡ್ದರು ದಾಳಿಗೆ ಒಳಗಾದ ಅಧಿಕಾರಿಗಳು ಅಲ್ಲ. ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸುವ ಅಧಿಕಾರಿಗಳ ಆಸ್ತಿಯನ್ನು ಗಮನಿಸಿದಾಗ, ಸರ್ಕಾರಿ ನೌಕರರಿಗೆ ಭ್ರಷ್ಟಾಚಾರದ ಬಗ್ಗೆ ಯಾವುದೇ ಭಯವೇ ಇಲ್ಲವೆಂಬಂತೆ ತೋರುತ್ತಿದೆ. ಅಧಿಕಾರಿಗಳು ಈ ಪರಿ ಆಸ್ತಿ ಮಾಡುತ್ತಾರೆಂದರೆ, ಅವರು ಆ ಸಂಪತ್ತನ್ನು ಗಳಿಸಲು ನ್ಯಾಯ-ನೀತಿಗೆ ವಿರುದ್ಧವಾಗಿ ಎಷ್ಟು ಕೆಲಸ ಮಾಡಿರಬಹುದು ಅಥವಾ ನಿಜಕ್ಕೂ ಸೇವೆ ಸಿಗಬೇಕಿದ್ದವರನ್ನು ಕಡೆಗಣಿಸಿ ಹಣ ಕೊಟ್ಟವರಿಗೆ ಯಾವ ರೀತಿ ಮಣೆ ಹಾಕಿರಬಹುದು ಎಂಬುದು ತಿಳಿಯುತ್ತದೆ. ಭ್ರಷ್ಟಾಚಾರ ಎಂದರೆ ಅಪರಾಧ ಎಂಬ ಭಯ ಅಧಿಕಾರಿಗಳ ವರ್ಗದಲ್ಲಿ ಮೂಡುವವರೆಗೂ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಖಯಾಲಿಗೆ ತೆರೆ ಬೀಳುವಂತೆ ಕಾಣುತ್ತಿಲ್ಲ. ವಿಚಿತ್ರವೆಂದರೆ ಭ್ರಷ್ಟರನ್ನು ಅವರು ಮಾಡಿದ ಕೃತ್ಯವನ್ನು ನೋಡಿ ನಿಕೃಷ್ಟವಾಗಿ ಕಾಣುವವರು ಸಮಾಜದಲ್ಲಿ ಹೆಚ್ಚಿಲ್ಲ. ಬದಲಿಗೆ ಅವರು ಗಳಿಸಿದ ಸಂಪತ್ತನ್ನು ನೋಡಿ ಗೌರವಿಸುವ ವಿಚಿತ್ರ ಸಂಪ್ರದಾಯವಿದೆ. ಇದು ಕೂಡ ಅವರಿಗೆ ಭ್ರಷ್ಟಾಚಾರದಲ್ಲಿ ತೊಡಗಲು ಪ್ರೇರಣೆಯಾಗಿರಬೇಕು. ಲೋಕಾಯುಕ್ತ ಈ ರೀತಿಯ ದಾಳಿಗಳನ್ನು ತೀವ್ರಗೊಳಿಸಬೇಕು. ದಾಳಿ ಮಾಡಿದರಷ್ಟೇ ಸಾಲದು, ತಾರ್ಕಿಕ ಘಟ್ಟಕ್ಕೆ ಒಯ್ದು ಸೂಕ್ತ ಸಾಕ್ಷ್ಯಾಧಾರಗಳ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಂಡರೆ, ಒಂದಷ್ಟು ಜನರಿಗಾದರೂ ಸಂದೇಶ ಸಿಗಬಹುದು.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೩೦-೦೬-೨೦೨೩
ಚಿತ್ರ ಕೃಪೆ: ಇಂಟರ್ನೆಟ್ ತಾಣ