ಮಂಗರಬಳ್ಳಿ

ಮಂಗರಬಳ್ಳಿ

ಬರಹ

ಮಂಗರಬಳ್ಳಿ ಉಳಿಸೊಪ್ಪು-ಭೂಷಣ್ ಮಿಡಿಗೇಶಿ
ಪ್ರತಿವರ್ಷ ಉಗಾದಿ ಹಬ್ಬದ ಮಾರನೆಯ ದಿನ ನಮ್ಮೂರ ಬಳಿಯಿರುವ ತಾಡಿ ನಾಗಮ್ಮನ ಜಾತ್ರೆಗೆ ನಮ್ಮ ಕುಟುಂಬ ಸಮೇತ ಹೋಗುವುದು ವಾಡಿಕೆ.ನಾಗಮ್ಮ ನನ್ನ ಮನೆದೇವರು .ವಿಶೇಷ ಜಾತ್ರೆಯದಲ್ಲ.ಅಂದು ನಮ್ಮಮ್ಮ ಮಾಡುವ ಮಂಗರಬಳ್ಳಿ ಉಳಿಸೊಪ್ಪು ಎಂಬ ಸಾರಿನದ್ದು.

ಏನಿದು ಮಂಗರಬಳ್ಳಿ?

ಬಯಲುಸೀಮೆಯ ಒಣ ನೆಲದಲ್ಲಿ ಯುಗಾದಿಯ ಸಮಯದಲ್ಲಿ ಕಾರೆಕುದುರು,ಬಂದಗಳ್ಳಿ ಗಿಡ,ಕತ್ತಾಳೆಯ ಮಗ್ಗುಲಿನಲ್ಲಿ,ಮಂಗರಬಳ್ಳಿ ಚಿಗುರುತ್ತದೆ.ಮೇಕೆಗಳು ಮಾತ್ರ ಕೆಳಗೆ ಎಟುಕುವ ಬಳ್ಳಿಯನ್ನು ಮೂತಿಗೆ ತಗುಲಿಸಿಕೊಳ್ಳದ ಹಾಗೆ ತಿನ್ನುತ್ತವೆ.ವರ್ಷಪೂರ್ತಿ ಒರಟೊರಟಾಗಿ ಹುತ್ತಗಳ ಮೇಲೆ,ಬಳ್ಲಿಯಾಕಾರದಲ್ಲಿ ಸತ್ತಂತೆ ಬಿದ್ದುಕೊಂಡ ಈ ಬಳ್ಳಿಗೆ ವಸಂತಕಾಲದಲ್ಲಿ ಚಿಗುರುವ ಅದೃಷ್ಟ.ಬಲಿತ ಬಳ್ಳಿ ಔಷಧೀಯ ಗುಣವುಳ್ಳದ್ದು.ಅಂಗೈ ಬಿಟ್ಟು ದೇಹದ ಬೇರೆಯಾವುದೇ ಭಾಗಕ್ಕೆ ಇದರ ರಸ ತಗುಲಿದರೆ ಅಪಾರ ನವೆ,ಕಡಿತ.ಹಾಗಾಗಿ ಯಾರು ಇದರ ಸುದ್ದಿಗೆ ಹೋಗುವುದಿಲ್ಲ.ಅಂತಹ ಬಳ್ಳಿಯಲ್ಲಿ ಹೊಟ್ಟೆಗೆ ತಿನ್ನುವ ಸೊಗಸಾದ ,ರುಚಿಯಾದ ಸಾರು(ಉಳ್ಸೊಫ್ಪು) ತಯಾರಾಗುತ್ತದೆಯೆಂದರೆ, ಅಚ್ಚರಿಯಲ್ಲವೇ?

ಸಾರಿಗೆ ಹದವಾದ ಬಳ್ಳಿಯ ಚಿಗುರು ಆರಿಸುವುದು ಜಾಣ್ಮೆಯ ಕೆಲಸ.ಇದರಲ್ಲಿ ನಮ್ಮ ತಾಯಿಯವರದು ಎತ್ತಿದ ಕೈ.ಅವರ ಉಸ್ತುವಾರಿಯಲ್ಲಿ ನಾವೆಲ್ಲಾ ಮಂಗರಬಳ್ಲಿಯನ್ನು ಮುಳ್ಳಿನ ಗಿಡಗಳ ಮೇಲಿದ್ದರೂ ಬಿಡದೆ ಕೀಳುತ್ತೇವೆ.ಉರಿಬಿಸಿಲಿನಲ್ಲಿ ,ಕಳ್ಳಿಗಿಡದ ಮುಳ್ಳುಗಳನ್ನು ಚುಚ್ಹಿಸಿಕೊಂಡು,ಚಿಗುರು ಆರಿಸುವುದು ತ್ರಾಸದಾಯಕವೇ ಆದರೂ,ಅದರ ರುಚಿಯನ್ನು ಅರಿತಿರುವ ನಮಗೆ ಆ ಸಮಯದಲ್ಲಿ ಬಿಸಿಲಿನ ತಾಪ ಲೆಕ್ಕಕ್ಕೆ ಬಾರದು.
ಉದ್ದನೆಯ ಎಳೆ ಚಿಗುರಿನ ಸುತ್ತ ಇರುವ ನಾರನ್ನು ತೆಗೆದು,ಸ್ವಚ್ಛ್ಹಗೊಳಿಸಿ ಹುಣಿಸೇ ಚಿಗುರು ಮತ್ತು ಹಿಚುಕಿದ ಅವರೆಯ ಒಣಬೇಳೆಯನ್ನು ಹಾಕಿ ಮಂಗರಬಳ್ಳಿ ಸಾರನ್ನು ಮಾಡುತ್ತಾರೆ.ಹುಣಿಸೇ ಹೂವು ಈ ಸಾರಿಗೆ ಉತ್ತಮ ರುಚಿ ನೀಡುತ್ತದೆ.ಸಾರು ಸರಿಯಾಗಿ ಮಾಡಲು ಬಾರದಿದ್ದರೆ,ತಿಂದ ಕೂಡಲೇ ಗಂಟಲು ಕೆರೆತ ಶುರುವಾಗುತ್ತದೆ.ಆದರಿಂದಲೇ ನುರಿತವರು ಮಾತ್ರ ಈ ಸಾರನ್ನು ತಯಾರು ಮಾಡುತ್ತಾರೆ.ಇದು ದೇಹಕ್ಕೆ ಬಹಳ ತಂಪು ಎನ್ನುತ್ತಾರೆ.ಗೊಲ್ಲರು ಹಾಗೂ ಕುರುಬ ಜನಾಂಗದವರು(ಬಯಲಿನಲ್ಲಿ ಕುರಿಮೇಕೆ ಮೇಯಿಸುವ ಪರಿಪಾಟ ಇರುವ ಜನ) ಇದನ್ನು ಬಹಳ ಹಿಂದಿನಿದಲೂ ನಮ್ಮ ಗಡಿಭಾಗದ ತಾಲ್ಲೂಕುಗಳಲ್ಲಿ ಬಳಸುತ್ತಿರುವ ಪದ್ದತಿಯಿದೆ.
+-