ಮಂಗಲ ದ್ರವ್ಯಗಳ ಪಾವಿತ್ರ್ಯ

ಮಂಗಲ ದ್ರವ್ಯಗಳ ಪಾವಿತ್ರ್ಯ

ಬರಹ

ನಮ್ಮಲ್ಲೆಲ್ಲಾ ಒಂದು ಸಂಪ್ರದಾಯ ಬೆಳೆದು ಬಂದಿದೆ. ಮನೆಗೆ ಮುತ್ತೈದೆ ಬಂದರೆ ಅವರಿಗೆ ಒಂದು ರವಿಕೆ ಪೀಸ್, ಹೂವು, ಅರಿಶಿನ-ಕುಂಕುಮದ ಒಂದು ಪ್ಯಾಕೆಟ್, ಕೆಂಪು ಅಥವಾ ಹಸಿರು ಬಣ್ಣದ ಗಾಜಿನ ಬಳೆಗಳನ್ನು ಕೊಡುವ ಪದ್ದತಿ.ಆದರೆ ತುಂಬಾ ಜನ ಮುತ್ತೈದೆಯರಿಗೆ ಇದು ವೇಸ್ಟ್. ಮನೆಗೆ ತೆಗೆದುಕೊಂಡು ಹೋಗಿ ಒಂದುಕಡೆ ಇಡದೆ ಗತ್ಯಂತರವಿಲ್ಲ. ಅದೇರೀತಿ ದೇವಾಲಯಗಳ ಪ್ರಸಾದದಗತಿ ಕೂಡ. ಯಾವುದನ್ನು ಅತ್ಯಂತ ಪವಿತ್ರವೆಂದು ನಾವು ಭಾವಿಸುತ್ತೇವೋ ಅದಕ್ಕೆ ನಾವು ಕೊಡುತ್ತಿರುವ ಮಹತ್ವ ವೆಷ್ಟು? ಈ ಬಗೆಗೆ ಒಂದು ಚಿಂತನೆ. ಮನೆಯಲ್ಲಿ ಎಲ್ಲೆಂದರಲ್ಲಿ ಅರಿಶಿನ ಕುಂಕುಮದ ಪ್ಯಾಕೆಟ್ ಗಳು, ಗಾಜಿನ ಬಳೆಗಳು, ರವಿಕೆಪೀಸ್ ಗಳು,ದೇವಾಲಯಗಳಿಂದ ತಂದ ಹೂವು-ಕುಂಕುಮ ಪ್ರಸಾದಗಳು ಎಲ್ಲೆಂದರಲ್ಲಿ ಚಲ್ಲಾಟ. ಯಾವುದಾದರೂ ಪುಣ್ಯಕ್ಷೇತ್ರಗಳಿಂದಲೋ ದೇವಾಲಯಗಳಿಂದಲೋ ಬಂದರೆ ತೆಂಗಿನಕಾಯಿಗಳ ಹೋಳುಗಳು, ಬಾಳೆಹಣ್ಣುಗಳು, ಧರ್ಮಸ್ಥಳ, ಹೊರನಾಡು ಗಳಿಗೆ ಹೋಗಿಬಂದರೆ ಸಾಕು, ಅಲ್ಲಿಯ ಪ್ರಸಾದಗಳು!! ಅಬ್ಭಾ!! ಯಾಕಾದರೂ ಇಷ್ಟೊಂದು ಪ್ರಸಾದ ಕೊಡುತ್ತಾರೆಯೋ!! ಇನ್ನು ನಮ್ಮ ಬಂಧುಗಳಲ್ಲಿ ಕಾಶಿಯಾತ್ರೆ ಮಾಡಿಬಂದರೆ ಸಾಕು ಅವರು ಯಾವುದಾದರೊಂದು ದೇವರ ವಿಗ್ರಹ ಕೊಡುವುದು ಗ್ಯಾರಂಟಿ. ಎಷ್ಟು ಅಂತಾ ದೇವರವಿಗ್ರಹ ಇಟ್ಟುಕೊಳ್ಳುವುದು? ಇನ್ನು ದೇವರ ಚಿತ್ರವಿರುವ ಪ್ಲಾಸ್ಟಿಕ್ ಕವರ್ ಗಳು, ಇನ್ವಿಟೇಶನ್ ಗಳು!!ಅಕ್ಕಿ ಚೀಲದ ಮೇಲೆ ಗಣಪತಿ, ದುರ್ಗಿ,ಓಂಕಾರ ಚಿತ್ರಗಳು.ಇವುಗಳ ವಿಲೇವಾರಿ ಮಾಡುವುದಾದರೂ ಹೇಗೆ? ನಮ್ಮ ಶ್ರದ್ಧೆಯ ಕೆಲವು ಅಂಶಗಳನ್ನು ಅವುಗಳ ಪಾವಿತ್ರ್ಯದ ಕಡೆ ಗಮನ ಹರಿಸದೆ ಎಲ್ಲೆಂದರಲ್ಲಿ ಕಂಡಾಗ ನನಗೆ ನಿಜವಾಗಿ ಮನಸ್ಸಿಗೆ ಖೇದ ಉಂಟಾಗುತ್ತದೆ.

ನಮ್ಮ ಮನೆಯಲ್ಲಂತೂ ಇದೇ ವಿಚಾರಕ್ಕೆ ಪತ್ನಿಯೊಡನೆ ಮುನಿಸು. ಪತ್ನಿಗಂತೂ ಅತಿಯಾದ ಭಕ್ತಿ. ಧಾರ್ಮಿಕ ಆಚರಣೆಗೆ ತುಂಬಾ ಮಹತ್ವ ಕೊಡುವ ಆಕೆ , ಅವಳಿಂದಾದ ಪಾವಿತ್ರ್ಯದ ಲೋಪದ ಬಗೆಗೆ ತಲೆ ಕೆಡಸಿಕೊಳ್ಳುವುದೇ ಇಲ್ಲ. ಯಾವುದೂ ಅತಿಯಾದಾಗ ನನ್ನ ದೃಷ್ಟಿಯಲ್ಲಿ ಅದು ಕೊಳಕಿಗೆ ದಾರಿ ಮಾಡುತ್ತದೆ. ದೇವರ ಪ್ರಸಾದವಾದರೇನು, ಅದರ ಸಮಯ ಮೀರಿದರೆ ಅದು ಕೆಡಲೇ ಬೇಕಲ್ಲವೇ?
ಪುಣ್ಯಕ್ಶೇತ್ರಗಳಿಂದ ತಂದ ಪ್ರಸಾದವೆಂದು ಮುಗ್ಗಲು ವಾಸನೆ ಬರುತ್ತಿರುವ ಪ್ರಸಾದ ಕೈಗಿತ್ತಾಗ ಏನು ಮಾಡಬೇಕು?! ಕಣ್ಣು ಮುಚ್ಚಿ ಬಾಯಿಗೆ ಹಾಕಿಕೊಳ್ಳಬೇಕಂತೆ! ಇಂತಹ ಅಂಧಶ್ರದ್ಧೆಗೆ ಏನೆನ್ನ ಬೇಕು?                 ಕೆಲವರ ಮನೆಯಲ್ಲಿರುವ ಪೂಜಾಗೃಹದಲ್ಲಿರುವ ಫೋಟೋ ಮತ್ತು ವಿಗ್ರಹಗಳಮೇಲೆ ಕುಂಕುಮ -ಅರಿಶಿನ ಮುಚ್ಚಿ ಹೋಗಿರುವುದನ್ನು ನೋಡಿದ್ದೇನೆ. ಪೂಜಾಗೃಹದಲ್ಲಿ ಅಗರಬತ್ತಿಯ ಹೊಗೆಯಿಂದ, ದೀಪದ ಎಣ್ಣೆಯು ಚೆಲ್ಲಿರುವುದರಿಂದ,
ಮಂಗಳದ್ರವ್ಯಗಳ ಚೆಲ್ಲಾಟದಿಂದ, ಕರ್ಪೂರದ ಹೊಗೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನೂ ಗಮನಿಸಬೇಕು.
ನಿಮ್ಮ ಮನೆಯಲ್ಲಿ ಹೀಗಾಗಿಲ್ಲವೇ?