ಮಂಗಳೂರಿನಲ್ಲಿ ನಡೆದ ಘಟನೆ-ನನ್ನ ಅನಿಸಿಕೆ.

ಮಂಗಳೂರಿನಲ್ಲಿ ನಡೆದ ಘಟನೆ-ನನ್ನ ಅನಿಸಿಕೆ.

ಬರಹ

ಮನಸ್ಸು ಎಷ್ಟೆ ವಿರೋಧ ಮಾಡಿದರೂ ಪೂರ್ವಗ್ರಹ ಪೀಡಿತವಾದ ಈ ಲೇಖನವನ್ನು ಓದಿ ಬಂದ ಕೋಪವನ್ನು ಹತ್ತಿಕ್ಕಿ ಈ ಲೇಖನವನ್ನು ಬರೆಯುತ್ತಿದ್ದೇನೆ. ಯಾರಿಗೂ ನೋವು ಮಾಡುವ ಇರಾದೆಯಿಲ್ಲ. ಯಾರಿಗಾದರೂ ಇದರಿಂದ ನೋವಾದರೆ ದಯವಿಟ್ಟು ತಿಳಿಸಿ. ಮುಕ್ತವಾಗಿ ಚರ್ಚಿಸೋಣ.

"ಮಹಿಳೆಗೆ ದುಡಿಯುವ ಹಕ್ಕು, ಸಮಾಜದ ಎಲ್ಲ ಸ್ತರಗಳಲ್ಲಿಯೂ ಪುರುಷನ ಸಮಾನವಾಗಿ ಅವರನ್ನು ನೋಡುತ್ತಿರುವುದು ಇಂದು ಸಮಾಜದ ವಿಘಟನೆಗೆ ಕಾರಣವಾಗುತ್ತಿರುವುದು ಸುಳ್ಳಲ್ಲ".

ನಮ್ಮ ಭಾರತದಲ್ಲಿ ನಾವೆಲ್ಲರೂ ಉತ್ತಮ ಸ್ತರಗಳಲ್ಲಿ ನಡೆಯುವ ಘಟನೆಗಳನ್ನು, ಮಾಧ್ಯಮಗಳು ತಮ್ಮ TRP ಹೆಚ್ಚಿಸಿಕೊಳ್ಳಲು ಹೆಡ್ ಲ್ಯೆನ್ಸ್ ಗಳಲ್ಲಿ ಪ್ರಕಟಿಸುವುದನ್ನು ನೋಡಿ ಈ ಮೇಲ್ಕಂಡ ಅಭಿಪ್ರಾಯಕ್ಕೆ ಬರುತ್ತಿದ್ದೇವೆ. ನಿಜವಾಗಲೂ ನಾವು ಮಧ್ಯಮ ವರ್ಗ ಅಥವಾ ಲೋಯರ್ ವರ್ಗಗಳನ್ನು ಹತ್ತಿರದಲ್ಲಿ ನೋಡಿದರೆ ಇಂದು ಎಷ್ಟೋ ಮಹಿಳೆಯರು ಓದಿಲ್ಲದ ಕಾರಣ, ಕೆಲಸವಿಲ್ಲದ ಕಾರಣ ಬೀದಿಗೆ ಬಿದ್ದಿದ್ದಾರೆ. ಅವರೆಲ್ಲರ ಹತ್ತಿರ ಹೋಗಿ ಕೇಳಿ ನೋಡಿ "ನಮಗೆ ವಿದ್ಯೆ ಇದ್ದಿದ್ದರೆ ನಾವು ಹೀಗೆ ಮನೆಕೆಲಸಕ್ಕೆ ಬರುತ್ತಿರಲಿಲ್ಲ" ಎನ್ನುತ್ತಾರೆ. ಸರ್ಕಾರ ಎಷ್ಟೇ ಕಾನೂನುಗಳನ್ನು ತರಲಿ, ಅವರ ಮಕ್ಕಳೆಲ್ಲಾ ಶಾಲೆಗೆ ಹೋಗದೆ ಹೋಟೆಲ್ ಕೆಲಸಕ್ಕೆ, ಮನೆಕೆಲಸಕ್ಕೆ ಹೋಗುತ್ತಾರೆ. ಇದು ಚಿಂತನೆ ಮಾಡಬೇಕಾದ ವಿಷಯ. ಯಾಕೆಂದರೆ ಅವರ ಸಂಗಾತಿಗಳೆಲ್ಲಾ ದುಶ್ಚಟಗಳಿಗೆ ದಾಸಾನುದಾಸರಾಗಿ, ಮಕ್ಕಳನ್ನು ಹುಟ್ಟಿಸುವುದು ಅಷ್ಟೇ ನಮ್ಮ ಕೆಲಸ, ಬೇರೆ ಎಲ್ಲಾ ಜವಾಬ್ದಾರಿಯನ್ನು ಹೆಂಗಸರಿಗೆ ಬಿಟ್ಟಿರುತ್ತಾರೆ. ಈ ಸಂದರ್ಭದಲ್ಲಿ ಒಂದು ಮಾತು ನೆನಪಿಗೆ ಬರುತ್ತಿದೆ. ಒಬ್ಬ ಗಂಡಸಿಗೆ ವಿದ್ಯೆ ಕಲಿಸಿದರೆ ಅವನಷ್ಟೇ ಮುಂದೆ ಬರುತ್ತಾನೆ. ಆದರೆ ಅದೇ ಒಂದು ಹೆಣ್ಣಿಗೆ ವಿದ್ಯೆ ಕಲಿಸಿದರೆ ಅವಳ ಸಂಸಾರವೇ ಮುಂದೆ ಬರುತ್ತದೆ. ಎಷ್ಟು ನಿಜವಲ್ಲವೇ.

ಮಂಗಳೂರಿನಲ್ಲಿ ನಡೆದ ಘಟನೆಯನ್ನು ತೆಗೆದುಕೊಂಡಾಗ, ಈಗಿನ ಕಾಲದಲ್ಲಿ ಮಹಿಳೆಯರು ಸಿಗರೇಟ್ ಸೇದುವುದು, ಪಬ್‍ನಲ್ಲಿ ಕುಳಿತು ಬಿಯರ್, ವಿಸ್ಕಿ ಹೀರುವುದು, ಬಾರ್‍ಗಳಲ್ಲಿ ಅರೆನಗ್ನವಾಗಿ ನೃತ್ಯ ಮಾಡುವುದೇ ಸಮಾಜದಲ್ಲಿ ಕ್ರೌರ್ಯ, ಅತ್ಯಾಚಾರ, ಕೊಲೆ, ಸುಲಿಗೆಗಳು ಮುಂತಾದ ಕೃತ್ಯಗಳಿಗೆ ಕಾರಣ ಎನ್ನುವುದಾದರೆ ಅದಕ್ಕೆ ನನ್ನ ಧಿಕ್ಕಾರ. ಇದಕ್ಕೆಲ್ಲ ಪ್ರೇರಪಣೆ ಏನೂ ಮಾನ್ಯರೇ. ಬಡತನ. ನಾವೆಲ್ಲರೂ ಬುದ್ದಿಜೀವಿಗಳು ಅನಿಸಿಕೊಂಡಿರುವವರು ದುಡ್ಡಿಗೆ ಕೊಡುತ್ತಿರುವ ಬೆಲೆ ಕಾರಣ. ನಮ್ಮ ಭಾರತದಲ್ಲಿ ಭ್ರಷ್ಟಾಚರ, ಮೋಸ, ಸುಲಿಗೆ ಇದೆ ಎಂದು ಬೊಬ್ಬೆ ಹೊಡೆಯುತ್ತೇವೆ. ಆದರೆ ನಾವೇನು ಮಾಡುತ್ತಿದ್ದೇವೆ. ಅದೇ ರಾಜಕಾರಣಿಗಳಿಗೆ ಡೊಗ್ಗು ಸಲಾಂ ಹೊಡೆಯುತ್ತೇವೆ.

ಈ ಎಲ್ಲಾ ಘಟನೆಗಳಿಗೆ ನಾವು ನೀವೆಲ್ಲರೂ ಕಾರಣ ಮಾನ್ಯರೇ. ಮಾಧ್ಯಮಗಳ ಬೇಜವಾಬ್ದರಿತನ ಕಾರಣ. ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕೆಂಬುದರ ಅರಿವಿನ ಕೊರತೆ ಕಾರಣ. ಶ್ರೀ ಅಬ್ದುಲ್ ಕಲಾಂರವರು ಹಿಂದೆ ಒಮ್ಮೆ ಹೇಳಿದ್ದರು. ಬೇರೆ ರಾಷ್ಟ್ರಗಳಲ್ಲಿ ಮಾಧ್ಯಮಗಳು ಎಷ್ಟು ಜವಾಬ್ದಾರಿಯಿಂದ ವರ್ತಿಸುತ್ತವೆ ಎಂದರೆ ಅವರೆಲ್ಲರೂ ಪ್ರಮುಖ ವಾರ್ತೆಗಳನ್ನಾಗಿ ಸಮಾಜದ ಸಾಧನೆಗಳನ್ನು ಪ್ರಕಟಿಸುತ್ತವೆ. ಅಲ್ಲೆಲ್ಲೂ ಭ್ರಷ್ಟಚಾರವಿಲ್ಲವೆಂದಲ್ಲ. ಅದನ್ನು ಅವರು ಹೆಡ್ ಲ್ಯೆನ್ಸ್ ಮಾಡುವುದಿಲ್ಲ. ನಮ್ಮ ಮಕ್ಕಳಿಗೆ ಯಾರ ಆದರ್ಶಗಳನ್ನು ಮುಂದಿಡುತ್ತಿದ್ದೇವೆ. ರಕ್ಷಣಾ ಸೇನೆ, ಆ ಸೇನೆ, ಈ ಸೇನೆಯವರ ವರ್ತನೆಗಳನ್ನೆ? ಈ ಪರಿಸರದಲ್ಲಿ ಕಲಿತ ನಮ್ಮ ಮಕ್ಕಳು ಮುಂದೇನು ಕಲಿಯುತ್ತಾರೆ. ನಮ್ಮ ಹಿಂದಿನವರು ಬಹಳ ತ್ಯಾಗ ಮಾಡಿ ನಮಗೆ ಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ. ಅದರ ಸದ್ಬಳಕೆಯನ್ನು ಮಾಡಿಕೊಳ್ಳೋಣ. blaming the other party ಎಂದು ಇಂಗ್ಲೀಷಿನಲ್ಲಿ ಹೇಳುತ್ತಾರೆ. ಹಾಗೆ ಗಂಡಸರು ಹೆಂಗಸರನ್ನು, ಹೆಂಗಸರು ಗಂಡಸರನ್ನು ಹೊಣೆ ಮಾಡುವುದನ್ನು ಬಿಡೋಣ. ನಾವೆಲ್ಲರೂ ಭವ್ಯ ಭಾರತದ ಕನಸನ್ನು ನಮ್ಮ ಮಕ್ಕಳಲ್ಲಿ ಬಿತ್ತೋಣ. ರಾಮರಾಜ್ಯವನ್ನಾಗಿ ಮಾಡೋಣ.

ತಪ್ಪಿದ್ದರೆ ಕ್ಷಮೆಯಿರಲಿ.