ಮಕರ ಸಂಕ್ರಾಂತಿಯು ಜನವರಿ ೧೪ ರಂದು ನಡೆಯುತ್ತದೆಯೆ?

ಮಕರ ಸಂಕ್ರಾಂತಿಯು ಜನವರಿ ೧೪ ರಂದು ನಡೆಯುತ್ತದೆಯೆ?

ಬರಹ

ಮಕರ ಸಂಕ್ರಾಂತಿಯು ಭಾರತೀಯ ಪ್ರಮುಖ ಹಬ್ಬ. ಸಾಮಾನ್ಯವಾಗಿ ಎಲ್ಲ ರಾಜ್ಯದ ಜನತೆಯು ಇದನ್ನು ಆಚರಿಸುತ್ತಾರೆ. ಅನಾದಿ ಕಾಲದಿಂದಲೂ ಇದನ್ನು ಜನವರಿ ೧೪ ರಂದು ಆಚರಿಸುವುದು ವಾಡಿಕೆ. ಕಾರಣ, ಈ ದಿನದಂದು ಸೂರ್ಯನು ಧನುರ್ ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಹಾಗಾಗಿ ಇದನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತೇವೆ.
ಸೂರ್ಯನು ಒಂದು ರಾಶಿಯಲ್ಲಿ ಒಂದು ತಿಂಗಳು ಇರುತ್ತಾನೆ. ಹಾಗಾಗಿ ಆತನು ಪ್ರತಿ ತಿಂಗಳು ಒಂದು ರಾಶಿಯಿಂದ, ಮತ್ತೊಂದು ರಾಶಿಯನ್ನು ಪ್ರವೇಶಿಸಬೇಕಾಗುತ್ತದೆ. ಹೀಗೆ ಒಂದು ರಾಶಿಯನ್ನು ಬಿಟ್ಟು ಮತ್ತೊಂದು ರಾಶಿಗೆ ಹೋಗುವುದು, ಅಂದರೆ ಸ್ಠಾನ ಪಲ್ಲಟವಾಗುವುದನ್ನು ಸಂಕ್ರಾಂತಿ ಎಂದು ಕರೆಯುವುದುಂಟು. ಹಾಗಾಗಿ ವರ್ಷದಲ್ಲಿ ೧೨ ಸಂಕ್ರಾಂತಿಗಳು ಸಂಭವಿಸುತ್ತವೆ. ಆದರೆ ನಾವು ಈ ಎಲ್ಲ ಸಂಕ್ರಾಂತಿಗಳನ್ನು ಹಬ್ಬವೆಂದು ಆಚರಿಸುವುದಿಲ್ಲ. ಮಕರ ಸಂಕ್ರಾಂತಿಯನ್ನು ಮಾತ್ರ ಹಬ್ಬವೆಂದು ಎಂದು ಭಾರತಾದ್ಯಂತ ಆಚರಿಸುತ್ತೇವೆ. (ಈ ದಿನಗಳಲ್ಲಿ ನದಿ ಸ್ನಾನ ಹಾಗೂ ಸಮುದ್ರ ಸ್ನಾನ ಪರಮ ಪುಣ್ಯದಾಯಕ. ಇದಕ್ಕೆ ನಾನಾ ಪುರಾಣ ಕಥೆಗಳ ಆಧಾರವಿದೆ. ಸಧ್ಯಕ್ಕೆ ನಾವು ಆ ಕಡೆ ಗಮನ ಹರಿಸುವುದು ಬೇಡ.) ಇದಕ್ಕೆ ಕಾರಣ ಉತ್ತರಾಯಣ ಪುಣ್ಯಕಾಲವೂ ಸಹಾ ಇದೇ ದಿನ ಬರುತ್ತದೆ.
ಉತ್ತರಾಯಣ ಪುಣ್ಯ ಕಾಲ ಎಂದರೆ ಏನು?

ಸೂರ್ಯನು ದಕ್ಷೀಣಾಭಿಮುಖವಾಗಿ ಚಲಿಸುತ್ತಿದ್ದವನು, ಜನವರಿ ೧೪ ರಂದು ಉತ್ತರಾಭಿಮುಖವಾಗಿ ಚಲಿಸಲು ಆರಂಭಿಸುತ್ತತ್ತಾನೆ. ಸೂರ್ಯನು ದಕ್ಷಿಣಾಭಿಮುಖವಾಗಿ ಚಲಿಸುವಾಗ ಹಗಲಿನ ಅವಧಿ ಕಡಿಮೆಯಾಗುತ್ತಾ ಹೋಗುತ್ತದೆ. ಇರುಳಿನ ಅವಧಿ ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ಚಳಿಯೂ ತೀವ್ರವಾಗುತ್ತಾ ಹೋಗುತ್ತದೆ. ಸೂರ್ಯನ ಬೆಳಕಿನ ಕೊರತೆಯ ಕಾರಣ ದ್ಯುತಿ ಸಂಶ್ಲೇಷಣೆಯು ಕಡಿಮೆಯಾಗಿ ಪ್ರಕೃತಿಯಲ್ಲಿ ದೊರೆಯುವ ಆಹಾರ ಪದಾರ್ಥಗಳ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಗಿಡಮರಗಳು ಎಲೆಗಳನ್ನುದುರಿಸಿ, ಬೋಳು ಬೋಳಾಗಿರುತ್ತವೆ. ಹಾಗಾಗಿ ಉತ್ತರ ಗೋಳಾರ್ಧದಲ್ಲಿರುವ ನಮಗೆ ದಕ್ಷಿಣಾಯನ ಅಷ್ಟು ಒಳ್ಳೆಯದಲ್ಲ.
ಉತ್ತರಾಯಣ ಆರಂಭವಾದಾಗ ಸೂರ್ಯನು ಉತ್ತರಾಭಿಮುಖವಾಗಿ ಚಲಿಸುವ ಕಾರಣ, ವಾತಾವರಣದಲ್ಲಿ ಬದಲಾವಣೆಗಳಾಗುತ್ತವೆ. ಹಗಲಿನ ಅವಧಿ ಹೆಚ್ಚಿ, ಇರುಳಿನ ಅವಧಿ ಕಡಿಮೆಯಾಗುತ್ತಾ ಹೋಗುತ್ತದೆ. ಚಳಿಯೂ ಕಡಿಮೆಯಾಗುತ್ತಾ ಹೋಗಿ ವಾತಾವರಣ ಉಲ್ಲಾಸದಾಯಕವಾಗಿರುತ್ತದೆ. ಹಾಗಾಗಿ ಉತ್ತರಾಯಣವು ಪುಣ್ಯಕಾಲ! (ಭೀಷ್ಮನು ಈ ಉತ್ತರಾಯಣಕ್ಕಾಗಿಯೇ ಕಾದಿದ್ದ! ಆತನು ನೀಡುವ ಕಾರಣ ಬೇರೆ! ಮನುಷ್ಯರ ಒಂದು ವರ್ಷವು ದೇವತೆಗಳ ಒಂದು ದಿನಕ್ಕೆ ಸಮ. ಆ ದಿನ ಹಗಲು ಮತ್ತು ರಾತ್ರಿಯನ್ನು ಒಳಗೊಂಡಿರುತ್ತದೆ. ಭೂಮಿಯಲ್ಲಿ ದಕ್ಷಿಣಾಯನವಿದ್ದಾಗ ದೇವಲೋಕದಲ್ಲಿ ರಾತ್ರಿ. ದೇವತೆಗಳು ನಿದ್ರಿಸುತ್ತಿರುತ್ತಾರೆ. ಪಿತೃಗಳು ಜಾಗೃತರಾಗಿರುತ್ತಾರೆ. ಹಾಗಾಗಿ ಈ ಅವಧಿ ಪಿತೃಯಾನ! ನಮಗೆ ಉತ್ತರಾಯಣವಾದಾಗ ದೇವತೆಗಳಿಗೆ ಹಗಲು! ಅವರು ಜಾಗೃತವಾಗಿರುವ ಕಾಲ! ಹಾಗಾಗಿ ಇದು ದೇವಯಾನ! ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುವುದರಿಂದ, ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ. ಭೀಷ್ಮನಿಗೆ ಸ್ವರ್ಗಕ್ಕೆ ಹೋಗುವ ಆಸೆಯಿತ್ತು. ಹಾಗಾಗಿ ಆತ ಉತ್ತರಾಯಣ ಬರುವವರಿಗೂ ಜೀವ ಹಿಡಿದಿದ್ದ!)

ಸೂರ್ಯನು ಧನುರ್ ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವ ಖಗೋಳೀಯ ವಿದ್ಯಮಾನವು ಉತ್ತರಾಯಣದ ಆರಂಭವನ್ನು ಸೂಚಿಸುತ್ತದೆ. ಈ ಘಟನೆಯು ಜನವರಿ ೧೪ ರಂದು ಘಟಿಸುತ್ತದೆ ಎಂದು ನಮ್ಮ ನಂಬಿಕೆ! ಆದರೆ ಇಂದು ಬಾನಿನಲ್ಲಿ ಹೀಗೆ ನಡೆಯುವುದೇ ಇಲ್ಲ! ಮಕರ ಸಂಕ್ರಮಣವು ಜನವರಿ ೧೪ ರ ಬದಲು ಡಿಸೆಂಬರ್ ೨೧ ರಂದು ನಡೆಯುತ್ತದೆ! ಇದು ಸತ್ಯ!! ಆದರೂ ಸಹಾ ನಾವು ಮಕರ ಸಂಕ್ರಾಂತಿ ಹಾಗೂ ಉತ್ತರಾಯಣ ಪುಣ್ಯಕಾಲವನ್ನು ಜನವರಿ ೧೪ ರಂದು ಆಚರಿಸುತ್ತಿದ್ದೇವೆ.
ಮಕರ ಸಂಕ್ರಮಣವು ಡಿಸೆಂಬರ್ ೨೧ ರಂದು ನಡೆಯುತ್ತದೆ ಎಂದರೆ, ನಮ್ಮ ಪೂರ್ವೀಕರು ಜನವರಿ ೧೪ ರಂದು ಏಕೆ ಆಚರಿಸುತ್ತಾ ಬಂದಿದ್ದಾರೆ? ಅವರು ಈ ಖಗೋಲ ವಿದ್ಯಮಾನದ ಬಗ್ಗೆ ಅನಭಿಜ್ಞರಾಗಿದ್ದರೆ?
ಹಾಗೇನಿಲ್ಲ! ಅದು ಅವರಿಗೆ ತಿಳಿದಿತ್ತು!

ಇಂದಿಗೆ ಸಾವಿರಾರು ವರ್ಷಗಳ ಹಿಂದೆ, ಸೂರ್ಯನು ಜನವರಿ ೧೪ ರಂದು ಮಕರ ರಾಶಿಯನ್ನು ಪ್ರವೇಶಿಸುತ್ತಿದ್ದನು. ಈಗ ಅವನ ಚಲನೆಯಲ್ಲಿ ಬದಲಾವಣೆಯಾಗಿದೆ. ಅವನು ಡಿಸೆಂಬರ್ ೨೧ ರಂದು ಮಕರ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಬಾನಿನಲ್ಲಿ ನಡೆಯುತ್ತಿರುವ ಈ ವ್ಯತ್ಯಾಸಗಳಿಗೆ ಅನುಗುಣವಾಗಿ ನಾವು ನಮ್ಮ ಹಬ್ಬದ ಆಚರಣೆಯನ್ನು ಬದಲಿಸಿಕೊಂಡಿಲ್ಲ!! ತಪ್ಪು ನಮ್ಮದು!

ಸೂರ್ಯನ ಚಲನೆಯಲ್ಲಿ ಆಗಿರುವ ಬದಲಾವಣೆಯು ಕೇವಲ ಮಕರ ಸಂಕ್ರಾಂತಿಗೆ ಮಾತ್ರ ಸೀಮಿತವಾಗಿಲ್ಲ!
ಹಲವು ಸಾವಿರ ವರ್ಷಗಳ ಹಿಂದೆ ಜನವರಿ ೧೪ ರಂದು ನಡೆಯುತ್ತಿದ್ದ ಮಕರ ಸಂಕ್ರಾಂತಿಯು ಈಗ ಡಿಸೆಂಬರ್ ೨೧ ರಂದು ನಡೆಯುತ್ತಿದೆ.
ಹಲವು ಸಾವಿರ ವರ್ಷಗಳ ಹಿಂದೆ ಏಪ್ರಿಲ್ ೧೪ ರಂದು ನಡೆಯುತ್ತಿದ್ದ ಮೇಷ ಸಂಕ್ರಾಂತಿಯು ಈಗ ಮಾರ್ಚ್ ೨೧ ರಂದು ನಡೆಯುತ್ತಿದೆ.
ಹಲವು ಸಾವಿರ ವರ್ಷಗಳ ಹಿಂದೆ ಜುಲೈ ೧೫ ರಂದು ನಡೆಯುತ್ತಿದ್ದ ಕರ್ಕಾಟಕ ಸಂಕ್ರಾಂತಿಯು ಈಗ ಜೂನ್ ೨೨ ರಂದು ನಡೆಯುತ್ತಿದೆ.
ಹಲವು ಸಾವಿರ ವರ್ಷಗಳ ಹಿಂದೆ ಅಕ್ಟೋಬರ್ ೧೬ ರಂದು ನಡೆಯುತ್ತಿದ್ದ ತುಲಾ ಸಂಕ್ರಾಂತಿಯು ಈಗ ಸೆಪ್ಟೆಂಬರ್ ೨೩ ರಂದು ನಡೆಯುತ್ತಿದೆ.
ಸೂರ್ಯನು ತನ್ನ ಕೆಲಸವನ್ನು ತಾನು ಮಾಡಿಕೊಂಡು ಹೋಗುತ್ತಿದ್ದಾನೆ. ಆದರೆ ನಮ್ಮ ಕೆಲಸವನ್ನು ನಾವು ಮಾಡುತ್ತಿಲ್ಲ.
ಇಂತಹ ತಪ್ಪನ್ನು ನಾವು ಯುಗಾದಿ ಹಬ್ಬದ ವಿಷಯದಲ್ಲೂ ಮಾಡುತ್ತಿದ್ದೇವೆ!
ಮಕರ ಸಂಕ್ರಾಂತಿಯನ್ನು ಜನವರಿ ೧೪ ರ ಬದಲು, ಡಿಸೆಂಬರ್ ೨೧ ರಂದು ಆಚರಿಸುವಂತೆ ಮಾಡಲು ನಾವೇನು ಮಾಡಬೇಕು?

- ಡಾ.ನಾ.ಸೋಮೇಶ್ವರ