ಮಕ್ಕಳಿಗೆ ಡೈಪರ್ ಹಾಕುವ ಮುನ್ನ…

ಮಕ್ಕಳಿಗೆ ಡೈಪರ್ ಹಾಕುವ ಮುನ್ನ…

ಈಗೀಗ ಸಣ್ಣ ಮಕ್ಕಳಿಗೆ ಡೈಪರ್ ಹಾಕುವುದು ಒಂದು ರೀತಿಯಲ್ಲಿ ಫ್ಯಾಷನ್ ಆಗಿ ಹೋಗಿದೆ. ಮನೆಯಿಂದ ಹೊರಗಡೆ ಹೋದಾಗ ಮಕ್ಕಳು ಮಲ ಮೂತ್ರ ಮಾಡಿದಾಗ ಅದು ಹೊರ ಬಂದು ಹೋದ ಕಡೆಯಲ್ಲಿ ಮುಜುಗರ ಆಗದಿರಲಿ (ಮಕ್ಕಳ ಈ ಕ್ರಿಯೆ ಸಹಜವಾಗಿರುತ್ತದೆ) ಎಂದು ಆವಿಷ್ಕಾರ ಮಾಡಿದ ಡೈಪರ್ ಎಂಬ ಸಾಮಾಗ್ರಿ ಈಗ ಸರ್ವವ್ಯಾಪಿಯಾಗಿದೆ. ಮನೆಯೊಳಗಾದರೂ ಆರಾಮದಲ್ಲಿ ಮಕ್ಕಳ ತಿರುಗಾಡಿಕೊಂಡಿರಲಿ ಎಂದು ಯೋಚನೆ ಮಾಡಿದರೆ ಅಲ್ಲೂ ಡೈಪರ್ ಕಾಟ. ಮಲಗುವಾಗ ತಮ್ಮ ನಿದ್ರೆಗೆ ಭಂಗ ಬಾರದಿರಲಿ ಎಂದು ಹೆತ್ತವರು ಮಕ್ಕಳಿಗೆ ಡೈಪರ್ ತೊಡಿಸಿಯೇ ಮಲಗಿಸುತ್ತಾರೆ. ಇದು ಭವಿಷ್ಯದಲ್ಲಿ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. 

ಮಕ್ಕಳ ಚರ್ಮವು ವಯಸ್ಕರ ಚರ್ಮಕ್ಕಿಂತ ಮೃದು ಹಾಗೂ ಸೂಕ್ಷ್ಮವಾಗಿರುತ್ತದೆ. ನೈಲಾನ್ ಮುಂತಾದ ಸಾಮಾಗ್ರಿಗಳಿಂದ ತಯಾರಿಸಲಾಗುವ ಡೈಪರ್ ನ ದೀರ್ಘಕಾಲ ಬಳಕೆಯಿಂದ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ವಾಸ್ತವವಾಗಿ ಗಮನಿಸಿದರೆ ನಾವು ಬಳಸುವ ಡೈಪರ್ ನಲ್ಲಿ ಹಲವಾರು ರಾಸಾಯನಿಕ ವಸ್ತುಗಳು ಇರುತ್ತವೆ. ಇದರೊಂದಿಗೆ ಪ್ಲಾಸ್ಟಿಕ್ ಪದರವೂ ಇದೆ. ಇದು ಆರ್ದ್ರತೆಯನ್ನು ಹಿಡಿದಿಟ್ಟುಕೊಂಡರೂ ಗಾಳಿಯಾಡದೇ ಇರುವುದರಿಂದ ಸೋಂಕಿಗೆ ಮೂಲ ಕಾರಣವಾಗುತ್ತದೆ.

ಡೈಪರ್ ಗಳನ್ನು ತಯಾರಿಸುವ ಸಮಯದಲ್ಲಿ ರಾಸಾಯನಿಕಗಳುಮತ್ತು ಸಂಶ್ಲೇಷಿತ ವಸ್ತುಗಳನ್ನು ಬಳಸಲಾಗುತ್ತದೆ. ಇದರಿಂದಾಗಿ ಮಗುವನ್ನು ಬಹು ಸಮಯದವರೆಗೆ ಡೈಪರ್ ನಲ್ಲಿರಿಸುವುದು ಅಪಾಯಕಾರಿ. ಕೆಲವರು ದಿನವೊಂದಕ್ಕೆ ಎಂಟರಿಂದ ಹತ್ತು ಡೈಪರ್ ಗಳನ್ನು ಬಳಸುತ್ತಾರೆ. ಹಲವಾರು ಮಂದಿ ರಾತ್ರಿಯಿಡೀ ಡೈಪರ್ ತೊಡಿಸಿ ಮಗುವನ್ನು ಮಲಗಿಸುತ್ತಾರೆ. ಈ ಕಾರಣದಿಂದ ಮಗುವಿನ ಕೋಮಲ ಚರ್ಮವು ಬಹಳ ಕಾಲ ರಾಸಾಯನಿಕಗಳ ಸಂಪರ್ಕಕ್ಕೆ ಒಳಪಡುತ್ತದೆ. ಇದು ಮಕ್ಕಳ ಚರ್ಮಕ್ಕೆ ಹಾಗೂ ಆರೋಗ್ಯಕ್ಕೆ ಹಾನಿಕರವಾಗಿರುತ್ತದೆ.

ನಿರಂತರ ಡೈಪರ್ ಬಳಕೆಯಿಂದ ಗಂಡು ಮಕ್ಕಳ ಭವಿಷ್ಯದಲ್ಲಿ ಬಂಜೆತನ ಮತ್ತು ವೃಷಣಗಳ ಕ್ಯಾನ್ಸರ್ ಕಾಣಿಸಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಡೈಪರ್ ಅನ್ನು ಸಾಮಾನ್ಯವಾಗಿ ೨-೩ ಗಂಟೆಗೊಮ್ಮೆ ಬದಲಾಯಿಸಬೇಕು. ಹಲವಾರು ಗಂಟೆಗಳ ಕಾಲ ಮಗುವನ್ನು ಡೈಪರ್ ನಲ್ಲೇ ಬಿಡುವುದು ಒಳ್ಳೆಯದಲ್ಲ. ಡೈಪರ್ ಒದ್ದೆಯಾಗಿದ್ದರೆ ಕೂಡಲೇ ಬದಲಾಯಿಸಿ ಮಗುವನ್ನು ಸ್ವಚ್ಛಗೊಳಿಸುವುದು ಅವಶ್ಯಕ. ಡೈಪರ್ ಗಳನ್ನು ತಯಾರಿಸುವ ಕಂಪೆನಿಗಳು ಅದರ ತಯಾರಿಕೆಯ ಸಮಯದಲ್ಲಿ ಸಿಂಥೆಟಿಕ್ ಫೈಬರ್ ಗಳು, ಡೈಗಳು (ಬಣ್ಣ ಬರಿಸಲು) ಮತ್ತು ಇತರೆ ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತಾರೆ. ಇದರಿಂದ ಮಗುವಿಗೆ ಅಲರ್ಜಿಯಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಡೈಪರ್ ಕೊಳ್ಳುವಾಗ ಆದಷ್ಟು ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ, ಮೃದುವಾದ ಡೈಪರ್ ಅನ್ನೇ ಖರೀದಿಸಿ.

ಒದ್ದೆಯಾದ ಡೈಪರ್ ಅನ್ನು ಬಹಳ ಸಮಯ ಮಗು ಹಾಕಿಕೊಂಡಿದ್ದರೆ ಅವುಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ಚರ್ಮದ ಮೇಲೆ ದದ್ದುಗಳು ಮತ್ತು ಗುಳ್ಳೆಗಳನ್ನು ಉಂಟು ಮಾಡಬಹುದು. ಈ ಕಾರಣದಿಂದ ಆಗಾಗ ಡೈಪರ್ ಬದಲಾವಣೆ ಮತ್ತು ಮಗುವನ್ನು ಚೆನ್ನಾಗಿ ಸ್ವಚ್ಛಗೊಳಿಸುವುದು ಅವಶ್ಯಕ. ಡೈಪರ್ ದದ್ದುಗಳ ನಿವಾರಣೆಗೆ ಈಗ ಕ್ರೀಂ ಮತ್ತು ಎಣ್ಣೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಹೇಗೆ ಎಂದರೆ ಸಿಗರೇಟು ಮತ್ತು ಮದ್ಯ ತಯಾರಿಸುವವನೇ ಕ್ಯಾನ್ಸರ್ ಆಸ್ಪತ್ರೆ ತೆರೆದಂತೆ. ಮತ್ತೊಂದು ರೀತಿಯಲ್ಲಿ ವೈರಸ್ ಗಳನ್ನು ಸೃಷ್ಟಿಸುವವನೇ ಆಂಟಿ ವೈರಸ್ ಹುಟ್ಟುಹಾಕಿದಂತೆ ಎಂದು ಹೇಳಬಹುದು. ಏನಾದರಾಗಲಿ ಮಗುವಿನ ಉತ್ತಮ ಆರೋಗ್ಯದ ದೃಷ್ಟಿಯಿಂದ ಡೈಪರ್ ಬಳಕೆಯನ್ನು ನಿಯಂತ್ರಿಸಿಕೊಳ್ಳುವುದು ಉತ್ತಮ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ